Tuesday, 17 June 2014

6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ



ಕೊಪ್ಪಳ ಜೂ.17(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ದಾಖಲಿಸಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾಶ್ರೀ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಕನೂರು. ಎಸ್.ಎಫ್.ಎಸ್. ಪ್ರೌಢಶಾಲೆ, ಹೊಸಪೇಟೆ ರಸ್ತೆ, ಕೊಪ್ಪಳ. ಲಾಯಿನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕೊಪ್ಪಳ., ಬೇಥಲ್ ಪ್ರೌಢಶಾಲೆ, ವಿರುಪಾಪುರ ನಗರ, ಗಂಗಾವತಿ ಶಾಲೆಗಳಿಗೆ ಪ.ಜಾತಿ ಮತ್ತು ಪ.ವರ್ಗದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ದಾಖಲಿಸಲು ಉದ್ದೇಶಿಸಲಾಗಿದೆ.
ಅರ್ಹತೆಗಳು : ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದರಾಗಿರಬೇಕು. ತಹಶೀಲ್ದಾರರವರಿಂದ ಪಡೆದ ಜಾತಿ, ಆದಾಯ ಪ್ರಮಾಣ ಪತ್ರದ ಧೃಡೀಕೃತ ನಕಲು ಪ್ರತಿ ಲಗತ್ತಿಸಿ ಸಲ್ಲಿಸಬೇಕು. ವಿದ್ಯಾರ್ಥಿಯು 5ನೇ ತರಗತಿಯಲ್ಲಿ ಶೇ.60 ಅಂಕ ಪಡೆದಿರಬೇಕು. ಅರ್ಹ ವಿದ್ಯಾರ್ಥಿಗಳ ಆಯ್ಕೆಯನ್ನು ಲಾಟರಿ ಮುಖಾಂತರ  ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿಗಳಲ್ಲಿ ಬಾಲಕಿಯರಿಗೆ ಶೇ.50 ರಷ್ಟು ಮೀಸಲಾತಿ ಇದ್ದು, ಒಟ್ಟು ಆಯ್ಕೆಯಾಗುವ ವಿದ್ಯಾರ್ಥಿಗಳಲ್ಲಿ ಶೇ.50 ರಷ್ಟು ಗ್ರಾಮೀಣ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು. ಇದರಲ್ಲಿ ವಸತಿ ಸೌಲಭ್ಯ ಇರುವುದಿಲ್ಲ. ಪರಿಶಿಷ್ಟ ಜಾತಿ-40 ಹಾಗೂ ಪರಿಶಿಷ್ಟ ವರ್ಗದ-15 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಕೊಪ್ಪಳ ಜಿಲ್ಲೆಗೆ ಗುರಿ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂ.28 ಕೊನೆಯ ದಿನಾಂಕವಾಗಿದ್ದು, ಅರ್ಜಿ ನಮೂನೆಗಳನ್ನು ಆಯಾ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಂದ ಪಡೆದು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಆಯಾ ತಾಲೂಕಿನ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗ್ರಾಹಕ ಚಟುವಟಿಕೆ ನಡೆಸುತ್ತಿರುವ ಎನ್.ಜಿ.ಓ ಗಳಿಂದ ಅರ್ಜಿ ಆಹ್ವಾನ



ಕೊಪ್ಪಳ ಜೂ.17(ಕರ್ನಾಟಕ ವಾರ್ತೆ): ಗ್ರಾಹಕ ಮಾಹಿತಿ ಕೇಂದ್ರ ಪ್ರಾರಂಭ ಮತ್ತು ನಿರ್ವಹಣೆಗೆ ಆಸಕ್ತ ಎನ್.ಜಿ.ಓ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
          ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರ ಅನ್ವಯ ಗ್ರಾಹಕರಿಗೆ ಹೆಚ್ಚಿನ ತಿಳುವಳಿಕೆ ನೀಡುವ ಸಲುವಾಗಿ ಗ್ರಾಹಕ ಸಂಬಂಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರತಿ ಜಿಲ್ಲೆಯಲ್ಲಿ ಗ್ರಾಹಕ ಚಟುವಟಿಕೆ ನಡೆಸುತ್ತಿರುವ ಎನ್.ಜಿ.ಓ./ವಿಸಿಓಯಿಂದ ಒಂದು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ರಾಹಕ ಚಟುವಟಿಕೆ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಎನ್.ಜಿ.ಓ./ವಿಸಿಓಗಳು ನಿಗದಿತ ನಮೂನೆ  rule2 (c) of state consumer Welfare Fund Rule 2005  ಅರ್ಜಿ ನಲ್ಲಿ ಪೂರ್ಣ ಮಾಹಿತಿಗಳನ್ನು ಭರ್ತಿ ಮಾಡಿ ಜೂ.30 ರೊಳಗಾಗಿ ಸಲ್ಲಿಸಬಹುದಾಗಿದೆ.
          ಅರ್ಜಿ ಸಲ್ಲಿಸಿದ ಅರ್ಜಿದಾರರ ಪೈಕಿ ಅರ್ಹ ಒಂದು ಎನ್.ಜಿ.ಓ./ವಿಸಿಓಗಳು ಅರ್ಜಿಗಳನ್ನು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವನ್ನು ತೆರೆಯಲು ಆಯ್ಕೆ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಕೇಂದ್ರ ತೆರೆಯುವ ಆಸಕ್ತಿಯುಳ್ಳ ಎನ್.ಜಿ.ಓ./ವಿಸಿಓಗಳು ನಿಗದಿತ ಅವಧಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ತಿಳಿಸಿದ್ದಾರೆ.

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ : ಜುಲೈ-17 ರವರೆಗೆ ವಿಸ್ತರಣೆ



ಕೊಪ್ಪಳ ಜೂ.17(ಕರ್ನಾಟಕ ವಾರ್ತೆ): ಸಹಕಾರ ಇಲಾಖೆಯಿಂದ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಗಾಗಿ ನವೀಕರಿಸುವ, ನೋಂದಾಯಿಸುವ ಕೊನೆಯ ದಿನಾಂಕವನ್ನು ಜುಲೈ-17 ರವರೆಗೆ ವಿಸ್ತರಿಸಲಾಗಿದೆ.
ಯಶಸ್ವಿನಿ ಯೋಜನೆಯನ್ನು ಪ್ರಸಕ್ತ ಸಾಲಿಗೆ ಮುಂದುವರೆಸಲಾಗಿದ್ದು, ಹೊಸದಾಗಿ ನೋಂದಾಯಿಸುವ, ನವೀಕರಿಸುವ ಪ್ರಕ್ರಿಯೆಯು ಸಹಕಾರ ಸಂಸ್ಥೆಗಳಲ್ಲಿ ಪ್ರಾರಂಭವಾಗಿದೆ. ಇದಕ್ಕಾಗಿ ಆಸಕ್ತ ಗ್ರಾಮೀಣ ಹಾಗೂ ನಗರ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಯಶಸ್ವಿನಿ ವಾರ್ಷಿಕ ವಂತಿಗೆ ರೂ.250, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಾರ್ಷಿಕ ವಂತಿಗೆ ಮೊತ್ತ ರೂ.50/- ನಿಗದಿಪಡಿಸಲಾಗಿದೆ. ಯಶಸ್ವಿನಿ ಯೋಜನೆಯಡಿ ದಿನಾಂಕ: 28-2-2014 ಕ್ಕೆ ಮೊದಲು ಗ್ರಾಮೀಣ ಸಹಕಾರ ಸಂಸ್ಥೆಗಳಲ್ಲಿ ಸದಸ್ಯತ್ವ ಹೊಂದಿರುವ ವ್ಯಕ್ತಿಗಳು, ಗ್ರಾಮೀಣ ಪ್ರದೇಶದಲ್ಲಿರುವ ಸ್ವಸಹಾಯ ಗುಂಪು ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಅರ್ಹ ಸದಸ್ಯರು ಪ್ರತ್ಯೇಕವಾಗಿ ವಂತಿಗೆ ಹಣ ಪಾವತಿ ಮಾಡುವ ಮೂಲಕ ಯೋಜನೆಯ ವ್ಯಾಪ್ತಿಗೆ ಒಳಪಡಬಹುದಾಗಿರುತ್ತದೆ.
          ಪ್ರಸಕ್ತ ಸಾಲಿಗೆ ಯಶಸ್ವಿನಿ ಯೋಜನೆಯನ್ನು ನಗರ ಸಹಕಾರಿಗಳಿಗೂ ಮತ್ತು ಅವರ ಕುಟುಂಬವರ್ಗದವರಿಗೂ ಜಾರಿಗೊಳಿಸಿದ್ದು, ವಾರ್ಷಿಕ ವಂತಿಗೆ ಮೊತ್ತ ರೂ.710/- ನಿಗದಿಪಡಿಸಿದೆ. ಹಾಗೂ   ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಾರ್ಷಿಕ ವಂತಿಗೆ ಮೊತ್ತ ರೂ.510/- ನಿಗದಿಪಡಿಸಲಾಗಿದೆ. ನಗರ ಪ್ರದೇಶದ ಯಾವುದೇ ತರಹದ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ದಿನಾಂಕ: 01-06-2014 ಕ್ಕೆ 3 ತಿಂಗಳು ಕಳೆದಿದ್ದರೆ ಅಂತಹ ಸಹಕಾರ ಸಂಘದ ಸದಸ್ಯರು ಮತ್ತು ಅವರ ಕುಟುಂಬವರ್ಗದವರು ಪ್ರತ್ಯೇಕವಾಗಿ ಸರ್ಕಾರವು ನಿಗದಿಪಡಿಸಿದ ವಂತಿಗೆಯನ್ನು ಪಾವತಿಸಿ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು. ನವಜಾತು ಶಿಶುವಿನಿಂದ ಹಿಡಿದು ಜೀವಿತಾವಧಿಯವರೆಗೆ ಯೋಜನೆ ಸೌಲಭ್ಯವನ್ನು ಪಡೆಯಲು ಯಶಸ್ವಿನಿ ಸದಸ್ಯರು ಅರ್ಹರಿರುತ್ತಾರೆ.
          ಗ್ರಾಮೀಣ ಸಹಕಾರಿಗಳು ಹಾಗೂ ನಗರ ಸಹಕಾರಿಗಳು ಯೋಜನೆಯ ಸೌಲಭ್ಯವನ್ನು ಪಡೆಯಲು, ಆಯಾ ಸಹಕಾರ ಸಂಸ್ಥೆಯಲ್ಲಿ ನಿಗದಿತ ವಂತಿಗೆಯನ್ನು ಪಾವತಿ ಮಾಡುವ ಮೂಲಕ ಯಶಸ್ವಿನಿ ಯೋಜನೆಯ ವ್ಯಾಪ್ತಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆ ಅಥವಾ ಸಮೀಪದ ಸಹಕಾರ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರಾದ ಕೆ.ಮುನಿಯಪ್ಪ ಅವರು ತಿಳಿಸಿದ್ದಾರೆ.

ನಿವೃತ್ತ ತಾಂತ್ರಿಕ ಸಿಬ್ಬಂದಿಗಳ ನೇಮಕ : ಅರ್ಜಿ ಆಹ್ವಾನ



ಕೊಪ್ಪಳ ಜೂ.17(ಕರ್ನಾಟಕ ವಾರ್ತೆ): ಪಂಚಾಯತ್‍ರಾಜ್ ಇಂಜಿನಿಯರಿಂಗ್ ಇಲಾಖೆಯ ಉಪವಿಭಾಗಗಳಲ್ಲಿ ಖಾಲಿ ಇರುವ ತಾಂತ್ರಿಕ ಹುದ್ದೆಗಳಿಗೆ, ನಿವೃತ್ತ ತಾಂತ್ರಿಕ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 
            ಸಹಾಯಕ ಇಂಜಿನಿಯರ್ ಹುದ್ದೆಗೆ ಮಾಸಿಕ ರೂ.20,000/- ಹಾಗೂ ಕಿರಿಯ ಇಂಜಿನಿಯರ್ ಹುದ್ದೆಗೆ ಮಾಸಿಕ ರೂ.15,000/- ಗಳನ್ನು ನಿಗಧಿಪಡಿಸಲಾಗಿದೆ. ಈ ಹುದ್ದೆಗಳು ಭರ್ತಿಯಾಗುವವರೆಗೂ ನಿವೃತ್ತ ತಾಂತ್ರಿಕ ಸಿಬ್ಬಂದಿಗಳನ್ನು ಮಾನವ ಸಂಪನ್ಮೂಲ ಏಜೆನ್ಸಿ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು.  ಜೂ.26 ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ನೇರ ಸಂದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಆಸಕ್ತ ನಿವೃತ್ತ ತಾಂತ್ರಿಕ ಸಿಬ್ಬಂದಿಗಳು ತಮ್ಮ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೃಶ್ಯಕಲಾ ಕಾಲೇಜಿನಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ



ಕೊಪ್ಪಳ ಜೂ.17(ಕರ್ನಾಟಕ ವಾರ್ತೆ): ಮೈಸೂರಿನಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿಗೆ ಶೈಕ್ಷಣಿಕ ವರ್ಷಕ್ಕೆ ಪ್ರಥಮ ಎಂ.ಎಫ್.ಎ. ತರಗತಿಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
         ಪ್ರಥಮ ಎಂ.ಎಫ್.ಎ. ತರಗತಿಯಲ್ಲಿ ಚಿತ್ರಕಲಾ, ಶಿಲ್ಪಕಲೆ ಹಾಗೂ ಗ್ರಾಫೀಕ್ಸ್ ವಿಭಾಗಗಳಿದ್ದು, ವಿದ್ಯಾರ್ಹತೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದ ಬಿ.ಎಫ್.ಎ. ಅಥವಾ ತತ್ಸಮಾನ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪ್ರವೇಶದ ಬಗ್ಗೆ ಅರ್ಜಿ ಮತ್ತು ವಿವರಣ ಪತ್ರಿಕೆಯನ್ನು ಪಡೆಯಲು ರೂ.250/- ಪಾವತಿಸಿ  ಖುದ್ದಾಗಿ ಅಥವಾ ರೂ.275/- ಗಳ ಡಿ.ಡಿ.ಯನ್ನು ಡೀನ್, ಕಾವಾ, ಮೈಸೂರು ಇವರ ಹೆಸರಿನಲ್ಲಿ ಪಡೆದು ಡೀನ್ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿಟಿಐ ಕಟ್ಟಡ ಸಯ್ಯಾಜೀರಾವ್ ರಸ್ತೆ, ಮೈಸೂರು-570001 ಈ ವಿಳಾಸಕ್ಕೆ ಕಳುಹಿಸಿ ಪಡೆಯಬಹುದಾಗಿದೆ. ಸಯ್ಯಾಜಿರಾವ್ ರಸ್ತೆಯಲ್ಲಿ ಸಿಟಿಐ ಕಟ್ಟಡದಲ್ಲಿ  4-07-2014 ರಂದು ಬೆಳಿಗ್ಗೆ 11ಕ್ಕೆ ಆಯಾ ವಿಭಾಗಗಳಲ್ಲಿ ಅರ್ಹತಾ ಪರೀಕ್ಷೆ, ಶುಲ್ಕ ಪಾವತಿಸಲು ಜುಲೈ-10 ಕೊನೆಯ ದಿನವಾಗಿದ್ದು, ಜುಲೈ-14 ರಂದು ತರಗತಿಗಳು ಪ್ರಾರಂಭವಾಗಲಿವೆ. ಅರ್ಜಿ ಸಲ್ಲಿಸಲು ಜೂ.30 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 0821-2438930/2438931 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತರಕಾರಿ ಮತ್ತು ಪುಷ್ಪಬೆಳೆಗಳ ಸಂರಕ್ಷಿತ ಬೇಸಾಯ ಕ್ರಮಗಳ ಬಗ್ಗೆ ರಾಜ್ಯ ಮಟ್ಟದ ತರಬೇತಿ ಶಿಬಿರ



ಕೊಪ್ಪಳ ಜೂ.17(ಕರ್ನಾಟಕ ವಾರ್ತೆ): ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರ ಬಾಗಲಕೋಟ ಇವರು ತರಕಾರಿ ಮತ್ತು ಪುಷ್ಪಬೆಳೆಗಳ ಸಂರಕ್ಷಿತ ಬೇಸಾಯ ಕ್ರಮಗಳ ಬಗ್ಗೆ ಇದೇ ತಿಂಗಳಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.
ಶಿಬಿರದಲ್ಲಿ  ವಿವಿಧ ತರಕಾರಿ ಮತ್ತು ಪುಷ್ಪಬೆಳೆಗಳಲ್ಲಿ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಕೊಯ್ಲೋತ್ತರ ಹಾಗೂ ಸಂರಕ್ಷಣಾ ಕ್ರಮಗಳು, ಮಾರುಕಟ್ಟಡ ವಿಧಾನಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಆಸಕ್ತ ರೈತರು, ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಇತ್ಯಾದಿ ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಜೂ.21 ರೊಳಗಾಗಿ ನೊಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ.ಸಂಘದ ಸ್ಪಿನ್ನಿಂಗ್‍ಮಿಲ್ ಆವರಣ, ಗದ್ದನಕೇರಿ ರೋಡ, ಬಾಗಲಕೋಟ-587103 ದೂರವಾಣಿ ಸಂಖ್ಯೆ: 08354-244028-244048, ಮೊ.8050502990 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ರಾಜ್ಯ ಕೃಷಿಕರ ಸಂಪನ್ಮೂಲ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರ ಕೊಪ್ಪಳ ಜಿಲ್ಲಾ ಪ್ರವಾಸ



ಕೊಪ್ಪಳ,ಜೂ.17(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಹೆಚ್.ಆಂಜನೇಯ ಅವರು ಜೂ.21 ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
          ಸಚಿವರು ಜೂ.21 ರಂದು ಬೆಳಿಗ್ಗೆ 10.30 ಕ್ಕೆ ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮಕ್ಕೆ ಆಗಮಿಸಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 12.30 ಕ್ಕೆ ಲಿಂಗನಬಂಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ, ಮಧ್ಯಾಹ್ನ 3.00 ಗಂಟೆಗೆ ಬಳೂಟಗಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಉದ್ಘಾಟನೆ ನೆರವೇರಿಸುವರು. ಸಚಿವರು ಅದೇ ದಿನ ಸಂಜೆ 5.00 ಗಂಟೆಗೆ ಚಿತ್ರದುರ್ಗ ಜಿಲ್ಲೆಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ವಕ್ಫ್ ಇಲಾಖೆಯಿಂದ ಗೌರವಧನ : ಅರ್ಜಿ ಆಹ್ವಾನ



ಕೊಪ್ಪಳ,ಜೂ.17(ಕರ್ನಾಟಕ ವಾರ್ತೆ): ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಜಿಲ್ಲೆಯ ವಕ್ಫ್ ಸಂಸ್ಥೆಯ ಮಸೂತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇಶ್‍ಇಮಾಮ್ ಮತ್ತು ಮೌಜ್ಜನಗಳಿಗೆ ಗೌರವಧನ ಮಂಜೂರಾತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
          ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿರುವ ಸರ್ಕಾರಿ ವಕ್ಫ್ ಸಂಸ್ಥೆಗಳು, ವಾರ್ಷಿಕ ಆದಾಯ 1 ಲಕ್ಷ ಒಳಗಾಗಿ ಹೊಂದಿರುವ, ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ, ಅಧಿಸೂಚಿತಗೊಂಡಂತಹ (ಗೆಜೆಟ್), ಎಲ್ಲಾ ಮಸೂತಿಗಳು, ರಾಜ್ಯ ವಕ್ಫ ಮಂಡಳಿಯಿಂದ ಅನುಮೋದನೆಗೊಂಡ ಹಾಗೂ ಆದೇಶ ಪ್ರತಿಯನ್ನು ಹೊಂದಿರುವ ಮುತವಲ್ಲಿಗಳು, ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಅಧಿಕಾರಿಗಳು ಆಯಾ ಮಸೂತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್ ಮತ್ತು ಮೌಜ್ಜನಗಳ ಬಗ್ಗೆ ಸ್ವ ವಿವರವಾಗಿ ದಾಖಲೆಗಳನ್ನು ಜಿಲ್ಲಾ ವಕ್ಫ್ ಅಧಿಕಾರಿಗಳು, ವಕ್ಫ್ ಸಲಹಾ ಸಮಿತಿ ಕೊಪ್ಪಳ ಇವರಿಗೆ ಜೂ.30 ರೊಳಗಾಗಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ಭಾವಚಿತ್ರ, ಕರ್ನಾಟಕದಲ್ಲಿ ಸುಮಾರು 3 ವರ್ಷಗಳಿಂದ ವಾಸವಾಗಿರುವಂತಹ ವಾಸಸ್ಥಳದ ದೃಢೀಕರಣದ ದಾಖಲೆಗಳಾದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ವಕ್ಫ್ ಸಂಸ್ಥೆಯಾದ ಮಸೂತಿಗಳಿಗೆ ಸಂಬಂಧಪಟ್ಟವರಾದ ಮುತವಲ್ಲಿಗಳು, ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಅಧಿಕಾರಿಗಳವರು ನೀಡಿದ ದೃಢೀಕೃತ ನಕಲು, ಅರ್ಜಿದಾರನು ಹೊಂದಿರುವ ಗಣಕೀಕೃತ ಬ್ಯಾಂಕಿನ ಖಾತೆ ಸಂಖ್ಯೆ ಮತ್ತು ಸಿಎಸ್‍ಟಿ ಚೆಕ್ ಪುಸ್ತಕದ ದಾಖಲೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಕ್ಫ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ನೂರ ಅಹ್ಮದ್ ಹಣಜಗೇರಿ ಅವರು ತಿಳಿಸಿದ್ದಾರೆ.

ಬಿಸಿಎಂ ಇಲಾಖೆಯಿಂದ ವಸತಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ



ಕೊಪ್ಪಳ,ಜೂ.17(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಹಿಂದುಳಿದ ವರ್ಗಗಳ ವಿಸ್ತಣಾಧಿಕಾರಿಗಳ ಕಛೇರಿಯಿಂದ ಪ್ರಸಕ್ತ ಸಾಲಿಗೆ ಕೊಪ್ಪಳ ತಾಲೂಕಿನ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ/ಬಾಲಕಿಯರ ವಸತಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬಿಸಿಎಂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ, ಕೊಪ್ಪಳ-1, ಕೊಪ್ಪಳ-2, ಬಿಸಿಎಂ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಕೊಪ್ಪಳ-1, ಕೊಪ್ಪಳ-2, ಬಿಸಿಎಂ ಮೆಟ್ರಿಕ್ ನಂತರದ (ವೃತ್ತಿಪರ) ಬಾಲಕಿಯರ ವಿದ್ಯಾರ್ಥಿ ನಿಲಯ ಕೊಪ್ಪಳ, ಬಿಸಿಎಂ ಮೆಟ್ರಿಕ್ ನಂತರದ ಮಹಿಳೆಯರ ವಿದ್ಯಾರ್ಥಿ ನಿಲಯ ಕೊಪ್ಪಳ, ಬಿಸಿಎಂ ಮೆಟ್ರಿಕ್ ನಂತರ ಪುರುಷರ ವಿದ್ಯಾರ್ಥಿ ನಿಲಯ ಅಳವಂಡಿ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಕೊಪ್ಪಳ, ಮೆಟ್ರಿಕ್ ನಂತರ ಬಾಲಕರ ಮಾದರಿ ವಿದ್ಯಾರ್ಥಿ ನಿಲಯ ಕಲ್ಯಾಣ ನಗರ ಕೊಪ್ಪಳ ಈ ವಸತಿ ನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಕೊಪ್ಪಳ ತಾಲೂಕ ಹಿಂದುಳಿದ ವರ್ಗಗಳ ವಿಸ್ತಣಾಧಿಕಾರಿ ಕಛೇರಿಯಲ್ಲಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ-10 ಕೊನೆಯ ದಿನವಾಗಿರುತ್ತದೆ.
ಸರಕಾರ ನಡೆಸುತ್ತಿರುವ ಅಥವಾ ಸರಕಾರದಿಂದ ಅಂಗೀಕೃತವಾದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪಿ.ಯು.ಸಿ. ಯಿಂದ ಮೇಲಿನ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಅರ್ಜಿಯನ್ನು ಸಲ್ಲಿಸಬಹುದು. ಅನುತ್ತೀರ್ಣರಾದ ವಿದ್ಯಾರ್ಥಿಗಳು ಅರ್ಹರಿರುವುದಿಲ್ಲ. ಹಿಂದುಳಿದ ವರ್ಗಗಳ 2ಎ, 2ಬಿ, 3ಎ ಮತ್ತು 3ಬಿ. ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 44,500/- ದೊಳಗೆ ಇರಬೇಕು. ಪ್ರವರ್ಗ-1 ಮತ್ತು ಪರಿಶಿಷ್ಟ ಜಾತಿ ಪಂಗಡದ ಗುಂಪಿಗೆ ಸೇರಿದ ವಿದ್ಯಾರ್ಥಿಗಳಿಗೆ ಆದಾಯಮಿತಿ ರೂ. 1.00.000/- ಮೀರಿರಬಾರದು, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ನಿಲಯಕ್ಕೆ ಸೇರ ಬಯಸುವ ವಿದ್ಯಾರ್ಥಿಗಳು ಮತೀಯ ಅಲ್ಪಸಂಖ್ಯಾತರಾಗಿರಬೇಕು, ಮುಸ್ಲಿಂ, ಕ್ರಿಶ್ಚಿಯನ್, ಬುದ್ದರು, ಜೈನ್, ಶಿಖ್ಕರು ಹಾಗೂ ಆಂಗ್ಲೊ ಇಂಡಿಯನ್ ಮಾತ್ರ ಅರ್ಹರಿರುತ್ತಾರೆ. 2014-15ನೇ ಸಾಲಿನಲ್ಲಿ ಕಾಲೇಜುಗಳಲ್ಲಿ ಪ್ರವೇಶ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ನಿಲಯಗಳ ಪ್ರವೇಶದ ಅರ್ಜಿ ನಮೂನೆಗಳನ್ನು ಕೊಪ್ಪಳ ತಾಲೂಕ ಹಿಂದುಳಿದ ವರ್ಗಗಳ ವಿಸ್ತರ್ಣಾಧಿಕಾರಿಗಳ ಕಾರ್ಯಾಲಯ ಅಥವಾ ಸಂಬಂಧಪಟ್ಟ ವಸತಿ ನಿಲಯಗಳ ನಿಲಯ ಪಾಲಕರಿಂದ ಪಡೆಯಬಹುದಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿ ನಿಲಯಗಳಿಗೆ ತೆರವಾದ ಸ್ಥಾನಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ



ಕೊಪ್ಪಳ,ಜೂ.17(ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯಲಬುರ್ಗಾ ಪಟ್ಟಣದಲ್ಲಿ ಬಾಲಕ/ಬಾಲಕಿಯರಿಗಾಗಿ ಹಾಗೂ ಇಟಗಿ ಗ್ರಾಮದಲ್ಲಿ ಬಾಲಕಿಯರಿಗಾಗಿ ಬಿಸಿಎಂ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳಿಗೆ ತೆರವಾದ ಸ್ಥಾನಗಳಿಗೆ ಮಾತ್ರ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಿಲಯಗಳ ಪ್ರವೇಶದ ಅರ್ಜಿ ನಮೂನೆಗಳನ್ನು ಎಂದು ಯಲಬುರ್ಗಾ ತಾಲೂಕ ಹಿಂದುಳಿದ ವರ್ಗಗಳ ವಿಸ್ತಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಾಗೂ ಸಂಬಂಧಪಟ್ಟ ವಸತಿ ನಿಲಯಗಳ ನಿಲಯ ಪಾಲಕರಿಂದ ಪಡೆಯಬಹುದಾಗಿರುತ್ತದೆ.  ಅರ್ಹರು ಅರ್ಜಿಯ ಜೊತೆಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಜುಲೈ-11 ರೊಳಗಾಗಿ  ಸಲ್ಲಿಸಬೇಕು.  ನವೀಕರಣ ವಿದ್ಯಾರ್ಥಿಗಳು ಸಹ ಕಳೆದ ಸಾಲಿನಲ್ಲಿ ಪಾಸಾದ ತರಗತಿಯ ಅಂಕಪಟ್ಟಿ, ಜಾತಿ ಹಾಗೂ ಆದಾಯ ಧೃಡಿಕರಣ ಪತ್ರದಲ್ಲಿ ಲಗತ್ತಿಸಿ ಸಂಬಂಧಪಟ್ಟ ನಿಲಯ ಪಾಲಕರಿಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಅರ್ಜಿಯ ಜೊತೆಗೆ ದೃಢೀಕೃತ ಜಾತಿ ಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ, ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಪ್ರಾಚಾರ್ಯರಿಂದ ಪಡೆದ ಪ್ರವೇಶ ಧೃಢೀಕರಣ ಪತ್ರ, ವಿದ್ಯಾರ್ಥಿ ನಿಲಯಕ್ಕೂ ಗ್ರಾಮಕ್ಕೂ ಇರುವ ಅಂತರದ ಸರ್ಟಿಫೀಕೇಟನ್ನು ಗ್ರಾ.ಪಂ.ಅಭಿವೃದ್ದಿ ಅಧಿಕಾರಿಗಳು/ಕಾರ್ಯದರ್ಶಿಗಳಿಂದ ಪಡೆದ ನಮೂನೆಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಮೆಟ್ರಿಕ್ ನಂತರ ಪಿ.ಯು.ಸಿ., ಡಿಗ್ರಿ, ಡಿ.ಇಡಿ,, ಬಿ.ಇಡಿ, ಡಿಪ್ಲೋಮಾ, ಐಟಿಐ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಜೊತೆಯಲ್ಲಿ ಕಳೆದ ಸಾಲಿನಲ್ಲಿ ಪಾಸಾದ ಅಂಕಪಟ್ಟಿಯನ್ನು ಪ್ರಾಚಾರ್ಯರಿಂದ ಧೃಢೀಕರಿಸಿ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕ ಹಿಂದುಳಿದ ವರ್ಗಗಳ ವಿಸ್ತರ್ಣಾಧಿಕಾರಿಗಳ ಕಾರ್ಯಾಲಯ ಯಲಬುರ್ಗಾ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬ್ಲಾಗ್ ಹಾಗೂ ಫೇಸ್ ಬುಕ್ ಮೂಲಕ ಕೊಪ್ಪಳ ವಾರ್ತಾ ಇಲಾಖೆಯ ಸುದ್ದಿಗಳು ಲಭ್ಯ



ಕೊಪ್ಪಳ ಜೂ. 17(ಕ.ವಾ): ವಾರ್ತಾ ಇಲಾಖೆ ಮೂಲಕ ಪ್ರಕಟವಾಗುತ್ತಿದ್ದ ವಿವಿಧ ಸಭೆ, ಸಮಾರಂಭಗಳು, ಇಲಾಖೆಯ ಪ್ರಕಟಣೆಗಳು, ಸುದ್ದಿಗಳನ್ನು ಇನ್ನು ಮುಂದೆ ಕೊಪ್ಪಳ ವಾರ್ತಾ ಇಲಾಖೆಯ ಫೇಸ್‌ಬುಕ್ ಹಾಗೂ ಬ್ಲಾಗ್ ನಲ್ಲಿ ಸಾರ್ವಜನಿಕರಿಗೂ ಲಭ್ಯವಾಗಲಿದೆ.
            ಇತ್ತೀಚೆಗೆ ಅಂತರ್ಜಾಲ ವ್ಯವಸ್ಥೆಯಲ್ಲಿನ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವೀಟರ್, ಬ್ಲಾಗ್ ಗಳಿಗೆ ಯುವಕರು ಮಾರುಹೋಗಿದ್ದು, ಪ್ರತಿಯೊಬ್ಬರ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಸಾಮಾಜಿಕ ಜಾಲತಾಣಗಳು ಅತಿ ಹೆಚ್ಚು ಬಳಕೆಯಾಗುತ್ತಿವೆ.  ಕೊಪ್ಪಳ ವಾರ್ತಾ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತಿದ್ದ ಸುದ್ದಿಗಳು, ಇದುವರೆಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.  ಇವು ಕೇವಲ ಈ ಭಾಗದ ಆವೃತ್ತಿಗಷ್ಟೇ ಸೀಮಿತವಾಗಿ ಪ್ರಕಟವಾಗುತ್ತಿತ್ತು.  ಇದೀಗ ಕೊಪ್ಪಳ ವಾರ್ತಾ ಇಲಾಖೆಯು  information dept koppal ಮತ್ತು  vaarthekoppal ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹಾಗೂ  koppal varthe ಹೆಸರಿನಲ್ಲಿ ಪ್ರಾರಂಭವಾಗಿದೆ.  ಅಲ್ಲದೆ ಇಲಾಖೆಯಿಂದ ಬ್ಲಾಗ್ ಅನ್ನು ಪ್ರಾರಂಭಿಸಿದ್ದು, ಇದರ ವಿಳಾಸ  http:/koppalvarthe.blogspot.in ಆಗಿರುತ್ತದೆ.  ಫೇಸ್ ಬುಕ್ ಖಾತೆ ಪ್ರಾರಂಭವಾದ ಕೇವಲ ಒಂದು ವಾರದಲ್ಲಿಯೇ ಸುಮಾರು ೩೫೦ ಕ್ಕೂ ಹೆಚ್ಚು ಜನರು ಫ್ರೆಂಡ್ಸ್ ವೃತ್ತದಲ್ಲಿ ಸೇರಿದ್ದಾರೆ.  ವಾರ್ತಾ ಇಲಾಖೆಯಿಂದ ಬಿಡುಗಡೆ ಮಾಡಲಾಗುವ ಸುದ್ದಿಗಳನ್ನು ಯೂನಿಕ್ ಕೋಡ್‌ನಲ್ಲಿ ಫೇಸ್ ಬುಕ್ ಮತ್ತು ಬ್ಲಾಗ್ ನಲ್ಲಿ ಅಪ್‌ಲೋಡ್ ಮಾಡುತ್ತಿರುವುದರಿಂದ, ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೂ ಸುದ್ದಿಯನ್ನು ಓದಬಹುದಾಗಿದೆ.  ಅಲ್ಲದೆ ಸುದ್ದಿ ಮತ್ತು ಫೋಟೋಗಳನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ.  ವಾರ್ತಾ ಇಲಾಖೆಯಿಂದ ಸಾಮಾನ್ಯವಾಗಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಪ್ರಕಟಣೆಗಳು, ನೇಮಕಾತಿಗಳು, ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಆಹ್ವಾನ, ವಸತಿ ಯೋಜನೆಗಳು, ಹಾಸ್ಟೆಲ್‌ಗಳಿಗೆ ಅರ್ಜಿ ಆಹ್ವಾನ, ವಿವಿಧ ಪ್ರಮುಖ ಸಭೆಗಳಿಗೆ ಸಂಬಂಧಿಸಿದ ಸುದ್ದಿಗಳು, ಸಚಿವರು, ಪ್ರಮುಖ ಗಣ್ಯರ ಪ್ರವಾಸದ ಮಾಹಿತಿ, ಸಮಾರಂಭಗಳ ಸುದ್ದಿಗಳನ್ನು ಒಳಗೊಂಡಿದ್ದು, ಫೇಸ್ ಬುಕ್ ಮತ್ತು ಬ್ಲಾಗ್ ಮೂಲಕ ಅಂದಿನ ಸುದ್ದಿಗಳು ಆಯಾ ದಿನದಂದೇ ಲಭ್ಯವಾಗುತ್ತದೆ.  ಯುವಜನರು ಹೆಚ್ಚಾಗಿ ಫೇಸ್‌ಬುಕ್ ಮತ್ತು ಬ್ಲಾಗ್ ಗಳನ್ನು ಬಳಸುತ್ತಿರುವುದರಿಂದ, ವಾರ್ತಾ ಇಲಾಖೆಯ ಸುದ್ದಿಗಳು ಬಹುಬೇಗ ಸಾರ್ವಜನಿಕರಿಗೆ ತಲುಪಿ, ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ ಎನ್ನುತ್ತಾರೆ ವಾರ್ತಾಧಿಕಾರಿ ತುಕಾರಾಂರಾವ್ ಅವರು.

Monday, 16 June 2014

ಸಿಂಗಟಾಲೂರು ಏತ ನೀರಾವರಿ ಯೋಜನೆ 2015 ರ ಮಾರ್ಚ್ ಒಳಗೆ ಪೂರ್ಣ- ಶಿವರಾಜ್ ತಂಗಡಗಿ



ಕೊಪ್ಪಳ ಜೂ.16 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನ ಸುಮಾರು 30 ಗ್ರಾಮಗಳ 41000 ಎಕರೆ ಜಮೀನಿಗೆ ನೀರಾವರಿ ಒದಗಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು 2015 ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
            ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಬಳಿ ಸೋಮವಾರ, ಸಿಂಗಟಾಲೂರು ಏತ ನೀರಾವರಿ ಯೋಜನೆ ಎಡದಂಡೆ ಕಾಲುವೆ ಕಾಮಗಾರಿಯ ಪರಿಶೀಲನೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
            ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಮಗಾರಿಯ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳೊಂದಿಗೆ ಖುದ್ದಾಗಿ  ಮುಂಡರಗಿ ತಾಲೂಕು ಹಮ್ಮಿಗೆ ಗ್ರಾಮದ ಬಳಿಯ ಅಣೆಕಟ್ಟಿನ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಲಾಗಿದೆ. ಕೊಪ್ಪಳ ತಾಲೂಕಿನತ್ತ ಬರುವ ಎಡದಂಡೆ ಕಾಲುವೆಯ ಕಾಮಗಾರಿ ಇದೀಗ ವೇಗವನ್ನು ಪಡೆದುಕೊಂಡಿದ್ದು, ಭರದಿಂದ ಸಾಗುತ್ತಿದೆ.  ಅಣೆಕಟ್ಟಿನಿಂದ 33 ಕಿ.ಮೀ. ಕಾಲುವೆ ವರೆಗಿನ 64 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೆ 277 ಎಕರೆ ಭೂ-ಸ್ವಾಧೀನ ಪೂರ್ಣಗೊಂಡಿದ್ದು, ಇದೇ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ.  33 ರಿಂದ 42 ಕಿ.ಮೀ. ವರೆಗಿನ ಕಾಮಗಾರಿಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪ್ರಾರಂಭಗೊಂಡಿದೆ.  ಅದೇ ರೀತಿ 42 ರಿಂದ 50 ಕಿ.ಮೀ. ವರೆಗಿನ 14. 97 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆಗಿದೆ.  50 ರಿಂದ 51 ಕಿ.ಮೀ. ವರೆಗಿನ 5. 65 ಕೋಟಿ ರೂ. ವೆಚ್ಚದ ಕಾಮಗಾರಿ ಹಾಗೂ 52 ರಿಂದ 72 ಕಿ.ಮೀ. ವರೆಗಿನ 39 ಕೋಟಿ ರೂ. ವೆಚ್ಚದ ಕಾಮಗಾರಿಗೆ ಇದೇ ಜೂ. 18 ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ.  ಕಾಮಗಾರಿ ತ್ವರಿತವಾಗಿ ಕೈಗೊಳ್ಳಲು ಇರುವ ಎಲ್ಲ ಅಡ್ಡಿ-ಆತಂಕಗಳನ್ನು ನಿವಾರಿಸಲಾಗಿದ್ದು,  ಅನುದಾನಕ್ಕೂ ಸಹ ಯಾವುದೇ ಕೊರತೆ ಬಾರದಂತೆ ಕ್ರಮ ಕೈಗೊಳ್ಳಲಾಗಿದೆ.  ಒಟ್ಟಾರೆ 2015 ರ ಮಾರ್ಚ್ ಮಾಸಾಂತ್ಯದ ವೇಳೆಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಲ್ಲ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ.  ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಹೊಸದಾಗಿ ಕೆರೆಗಳನ್ನು ಸಹ ತುಂಬುವ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು,  ಈ ಭಾಗದ ಸುಮಾರು 4 ರಿಂದ 5 ಕೆರೆಗಳನ್ನು ತುಂಬಬಹುದಾಗಿದೆ.  ಈ ಪ್ರದೇಶದಲ್ಲಿ ಒಣ ಬೇಸಾಯ ಇರುವುದರಿಂದ ರೈತರಿಗೆ ಅನುಕೂಲವಾಗಲಿದ್ದು, ಅಂತರ್ಜಲವೂ ಹೆಚ್ಚಳವಾಗಲು ಸಹಾಯಕಾರಿ ಆಗಲಿದೆ ಎಂದರು.
ಜನಸಂಪರ್ಕ ಕಾರ್ಯಕ್ರಮ : ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಜನಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಬೇಕೆನ್ನುವುದು ಬಹುದಿನಗಳ ಬೇಡಿಕೆಯಾಗಿದ್ದು, ಲೋಕಸಭೆ ಚುನಾವಣೆ, ಇದೀಗ ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆಯ ಕಾರಣದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ.  ನೀತಿ ಸಂಹಿತೆ ತೆರವಾದ ಕೂಡಲೆ, ಜಿಲ್ಲಾ ಕೇಂದ್ರದಲ್ಲಿ ಜನಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಎಲ್ಲ ಕ್ರಮ ಕೈಗೊಳ್ಳಲಾಗುವುದು.  ಅನ್ನಭಾಗ್ಯ ಯೋಜನೆಯ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಸಣ್ಣ ಪುಟ್ಟ ಲೋಪದೋಷಗಳನ್ನು ನಿವಾರಿಸಿ, ಅಕ್ರಮಗಳಿಗೆ ಕಡಿವಾಣ ಹಾಕಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
            ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ರೈತರಿಗೆ ನೀರು ಒದಗಿಸಬೇಕೆನ್ನುವುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದರು.
            ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತರ ಗಂಗಪ್ಪ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



Sunday, 15 June 2014

ಕೊಪ್ಪಳ ಏತನೀರಾವರಿ ಯೋಜನೆ 4 ವರ್ಷದೊಳಗೆ ಪೂರ್ಣ- ಶಿವರಾಜ್ ತಂಗಡಗಿ

ಕೊಪ್ಪಳ ಜೂ. 15 (ಕ.ವಾ): ಕೃಷ್ಣಾ ಮೇಲ್ದಂಡೆ ಯೋಜನೆ ಹಂತ- 3 ರ ಕೊಪ್ಪಳ ಏತ ನೀರಾವರಿ ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು, ನಾಲ್ಕು ವರ್ಷದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
  ಕುಷ್ಟಗಿ ತಾಲೂಕು ಮುದಟಗಿ ಗ್ರಾಮದ ಬಳಿ ಕೊಪ್ಪಳ ಏತ ನೀರಾವರಿ ಯೋಜನೆ ಕಾಮಗಾರಿಯ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
  ಕೊಪ್ಪಳ ಜಿಲ್ಲೆಗೆ ವರದಾನವಾಗಲಿರುವ ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಒಂದು ಪ್ರಮುಖ ಉಪಯೋಜನೆಯಾಗಿದ್ದು, ಯೋಜನೆಯಡಿ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಕನಕಗಿರಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದೆ.  ಯೋಜನೆಯಡಿ 12. 815 ಟಿ.ಎಂ.ಸಿ ನೀರನ್ನು ಸಮರ್ಪಕವಾಗಿ ಬಳಸಿ, ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಯ ಬದಲಿಗೆ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿ 2. 85 ಲಕ್ಷ ಎಕರೆ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರು ಪೂರೈಸಲಾಗುವುದು.  ಯೋಜನೆಗೆ 3 ವರ್ಷಗಳ ಕಾಲಮಿತಿ ನಿಗದಿಪಡಿಸಲಾಗಿದ್ದು,  ಕಾಮಗಾರಿ ಪ್ರಾರಂಭಗೊಂಡು 7 ತಿಂಗಳುಗಳು ಮಾತ್ರ ಆಗಿದೆ.  ಈಗಾಗಲೆ ಶೇ. 60 ರಷ್ಟು ಪೈಪ್‍ಲೈನ್ ಮುಗಿದಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಯುವ ವಿಶ್ವಾಸವಿದೆ.  ಕುಷ್ಟಗಿ, ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ಕಾಮಗಾರಿಗೆ ಸರ್ವೆ ಕಾರ್ಯ 2015 ರ ಫೆಬ್ರವರಿ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ.  ನಂತರ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ತರುವಾಯ ಶೀಘ್ರ ಟೆಂಡರ್ ಕರೆದು, ಕಾಮಗಾರಿ ಪ್ರಾರಂಭಿಸಲಾಗುವುದು.  ಹುನಗುಂದಾದಿಂದ ಬಲಕುಂದಿ ತಾಂಡಾ ವರೆಗೆ ಸುಮಾರು 10 ಕಿ.ಮೀ. ಇನ್‍ಟೇಕ್ ಪೀಡರ್ ಕಾಲುವೆ ನಿರ್ಮಾಣವಾಗುತ್ತಿದ್ದು, ಈ 10 ಕಿ.ಮೀ. ಕಾಲುವೆಯ ಮೇಲ್ಭಾಗದಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸುವ ಯೋಜನೆಗೆ ಈಗಾಗಲೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.   ಈ ಮೂಲಕ ಸುಮಾರು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವಂತಹ 115 ಕೋಟಿ ರೂ. ವೆಚ್ಚದ ಮಹತ್ವದ ಯೋಜನೆ ರೂಪಿಸಲಾಗಿದೆ.  ಒಟ್ಟಾರೆ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ನಾಲ್ಕು ವರ್ಷದೊಳಗೆ ಪೂರ್ಣಗೊಳಿಸಿ, ರೈತರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಅನುದಾನದ ಯಾವುದೇ ಕೊರತೆ ಉಂಟಾಗದಂತೆ ಕ್ರಮ ವಹಿಸಲಾಗುವುದು.  ಜಿಲ್ಲೆಯ ನೆಲಜೇರಿ ಮತ್ತು ನಿಡಶೇಸಿ ಕೆರೆಯ ದುರಸ್ತಿ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದು, ಈಗಾಗಲೆ ಉಭಯ ಕೆರೆಗಳ ದುರಸ್ತಿಗಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿದ್ದು, ಶೀಘ್ರದಲ್ಲಿ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
  ಇದಕ್ಕೂ ಮುನ್ನ ಸಚಿವರು ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳೊಂದಿಗೆ ಮುದಗಟಗಿ ಗ್ರಾಮದಿಂದ ಹನುಮಸಾಗರ ಗ್ರಾಮದ ವರೆಗಿನ ರೈಸಿಂಗ್ ಮೇನ್ ಕಾಮಗಾರಿಯ ಸಮಗ್ರ ಮಾಹಿತಿ ಪಡೆಯುವುದರ ಜೊತೆಗೆ, ಕಾಮಗಾರಿಯ ಸ್ಥಳಗಳಿಗೆ ಭೇಟಿ ನೀಡಿ, ಗುಣಮಟ್ಟದ ಪರಿಶೀಲನೆ ನಡೆಸಿದರು.
  ಕೃಷ್ಣಾ ಭಾಗ್ಯ ಜಲನಿಗಮದ ಕಾರ್ಯಪಾಲಕ ಇಂಜಿನಿಯರ್ ಮೃತ್ಯುಂಜಯ ಎನ್.,  ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಡಿ.ಎಸ್. ಹರೀಶ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






Saturday, 14 June 2014

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ



ಕೊಪ್ಪಳ ಜೂ.14(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಜೂ.15 ರಿಂದ ಜೂ.17 ರವರೆಗೆ ಮೂರು ದಿನಗಳ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
          ಸಚಿವರು ಜೂ.15 ರಂದು ಇಳಕಲ್ ಮೂಲಕ ಕುಷ್ಟಗಿ ತಾಲೂಕಿನ ಮುದುಟಗಿ ಗ್ರಾಮಕ್ಕೆ ಬೆಳಿಗ್ಗೆ 10.15 ಕ್ಕೆ ಆಗಮಿಸುವರು.  ನಂತರ ಇಲ್ಲಿನ ಕೊಪ್ಪಳ ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ನಂತರ ಸಂಜೆ 4.00 ಗಂಟೆಗೆ ಕಾರಟಗಿ ಮೂಲಕ ಕನಕಗಿರಿಗೆ ಆಗಮಿಸಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸಿ ವಾಸ್ತವ್ಯ ನಡೆಸುವರು. ಜೂ.16 ರಂದು ಸಚಿವರು ಬೆಳಿಗ್ಗೆ 11.00 ಗಂಟೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಹತ್ತಿರವಿರುವ ಸಿಂಗಟಾಲೂರು ಆಣೆಕಟ್ಟು ಏತ ನೀರಾವರಿ ಹಾಗೂ ಕಾಲುವೆ ಕಾಮಗಾರಿಗಳ ಪರಿವೀಕ್ಷಣೆ ನಡೆಸುವರು. ನಂತರ ಮುಂಡರಗಿ ಮೂಲಕ ಕನಕಗಿರಿಗೆ ಆಗಮಿಸಿ ಸಾರ್ವಜನಿಕರ ಕುಂದುಕೊರತೆಗಳ ವಿಚಾರಣೆ ನಡೆಸಿ ವಾಸ್ತವ್ಯ ನಡೆಸುವರು. ಜೂ.17 ರಂದು ಸಚಿವರು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ಜಿಲ್ಲೆಯ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು.  ಸಚಿವರು ಅದೇ ದಿನ ಸಂಜೆ 5 ಗಂಟೆಗೆ ಕೊಪ್ಪಳ ರಸ್ತೆ ಮೂಲಕ ಹೊಸಪೇಟೆ, ಚಿತ್ರದುರ್ಗ, ತುಮಕೂರ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ : ನಿಷೇಧಾಜ್ಞೆ ಜಾರಿ



ಕೊಪ್ಪಳ ಜೂ.14(ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜೂ.16 ರಿಂದ 24 ರವರೆಗೆ ಒಟ್ಟು ಏಳು ದಿನಗಳ ಕಾಲ ನಡೆಯುವ ಎಸ್.ಎಸ್.ಎಲ್.ಸಿ. ಪೂರಕ  ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರು ಆದೇಶ ಹೊರಡಿಸಿದ್ದಾರೆ.
           ಜಿಲ್ಲೆಯಲ್ಲಿ ಜೂ.16 ರಿಂದ 24 ರವರೆಗೆ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 01.00 ರವರೆಗೆ ಯಾವುದೇ ರೀತಿಯ ಅಕ್ರಮ, ಅವ್ಯವಹಾರ ನಡೆಯದಂತೆ ನಿಷೇಧಿಸಲಾಗಿದೆ,   ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಗೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973 ರ ಕಲಂ 144ನೇ ಕಲಂ ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ನಿಷೇಧಿತ ವ್ಯಾಪ್ತಿಯಲ್ಲಿ ಯಾವುದೇ ಎಸ್.ಟಿ.ಡಿ., ಮೊಬೈಲ್, ಪೇಜರ್, ಜೆರಾಕ್ಸ್, ಟೈಪಿಂಗ್ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೂಕನಪಳ್ಳಿ ಹಾಗೂ ಬೂದಗುಂಪಾ ಕ್ರಾಸ್ ಎರಡೂ ಕಡೆ ಸಂತೆಗೆ ನಿರ್ಧಾರ- ಶಿವರಾಜ್ ತಂಗಡಗಿ



ಕೊಪ್ಪಳ ಜೂ.14 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಕೂಕನಪಳ್ಳಿ ಹಾಗೂ ಬೂದಗುಂಪಾ ಕ್ರಾಸ್ ಸೇರಿದಂತೆ ಎರಡೂ ಕಡೆಗಳಲ್ಲಿ ಕುರಿ ಸಂತೆ ನಡೆಸಲು ನಿರ್ಧರಿಸಲಾಗಿದ್ದು, ಎರಡೂ ಸಂತೆಗಳನ್ನು ಯಾವ ವಾರದಂದು ನಡೆಸಬೇಕು ಎನ್ನುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎರಡು ದಿನಗಳ ಒಳಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
          ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ನಡೆಯುವ ಕುರಿ ಹಾಗೂ ದನದ ಸಂತೆ ನಿಷೇಧ ನಂತರದ ಪರಿಸ್ಥಿತಿ ಅವಲೋಕಿಸಿ ಸಂತೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
          ಕಳೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ನಂತರ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ   ಕೂಕನಪಳ್ಳಿ ಹಾಗೂ ವಣಬಳ್ಳಾರಿ ಗ್ರಾಮಸ್ಥರ ನಡುವೆ ನಡೆದ ಗಲಭೆಯ ನಂತರ, ಉಭಯ ಗ್ರಾಮಗಳ ನಡುವೆ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.  ಗಲಭೆ ನಡೆದಿದ್ದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದ್ದು, ಉಭಯ ಗ್ರಾಮಸ್ಥರ ನಡುವೆ ಸೌಹಾರ್ದ ವಾತಾವರಣ ನಿರ್ಮಾಣವಾಗಬೇಕು. ಪರಿಸ್ಥಿತಿ ತಿಳಿಗೊಳ್ಳುವವರೆಗೂ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೂಕನಪಳ್ಳಿಯಲ್ಲಿ ಸಂತೆ ನಡೆಸುವುದು ಸೂಕ್ತವಲ್ಲ ಎಂಬ ಅಧಿಕಾರಿಗಳ ವರದಿಯ ಹಿನ್ನೆಲೆಯಲ್ಲಿ, ಪ್ರತಿ ಶುಕ್ರವಾರ ನಡೆಯುತ್ತಿದ್ದ ಕುರಿ ಮತ್ತು ದನದ ಸಂತೆಯನ್ನು ನಿಷೇಧಿಸಲಾಗಿತ್ತು.  ಇದೀಗ ಸಂತೆಯನ್ನು ಮುಂದುವರೆಸುವ ಕುರಿತಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದ್ದು, ಗ್ರಾಮಸ್ಥರು, ರೈತರು, ಕುರಿಗಾರರು ಹಾಗೂ ಖರೀದಿದಾರರ ಹಿತದೃಷ್ಠಿಯನ್ನು ಗಮನದಲ್ಲಿರಿಸಿಕೊಂಡು, ಕೂಕನಪಳ್ಳಿ ಮತ್ತು ಬೂದಗುಂಪಾ ಕ್ರಾಸ್ ನಲ್ಲಿ ಎರಡೂ ಕಡೆ ಸಂತೆ ನಡೆಸಲು ನಿರ್ಧರಿಸಲಾಗಿದೆ.  ಬೂದಗುಂಪಾ ಕ್ರಾಸ್ ಬಳಿ ಸಂತೆಗಾಗಿ ಸೂಕ್ತ ಸ್ಥಳ ಗುರುತಿಸಿ, ಎರಡೂ ಕಡೆ ವ್ಯವಸ್ಥಿತವಾಗಿ ಸಂತೆ ನಡೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಕೂಕನಪಳ್ಳಿಯಲ್ಲಿ ಸದ್ಯ ಪ್ರತಿ ಶುಕ್ರವಾರ ನಡೆಸಲಾಗುತ್ತಿದ್ದು, ಬೂದಗುಂಪಾ ಕ್ರಾಸ್‍ನಲ್ಲಿಯೂ ಶುಕ್ರವಾರದಂದೇ ನಡೆಸಬೇಕೆ? ಅಥವಾ ಬೇರೆ ವಾರದಂದು ನಡೆಸಬೇಕೆ ಎನ್ನುವ ಕುರಿತು ಒಮ್ಮತಕ್ಕೆ ಬರಲು ಸಭೆಯಲ್ಲಿ ಸಾಧ್ಯವಾಗದೇ ಇರುವುದರಿಂದ, ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡು ದಿನಗಳ ಒಳಗೆ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
          ಸಭೆಯಲ್ಲಿ ಪಾಲ್ಗೊಂಡಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಕೂಕನಪಳ್ಳಿ ಮತ್ತು ಬೂದಗುಂಪಾ ಕ್ರಾಸ್ ಬಳಿ ಎರಡೂ ಕಡೆ ಶುಕ್ರವಾರದಂದೇ ಸಂತೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
          ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿ, ಕೂಕನಪಳ್ಳಿಯಲ್ಲಿ ಕಳೆದ 35 ವರ್ಷದಿಂದಲೂ ಪ್ರತಿ ಶುಕ್ರವಾರ ಕುರಿ ಮತ್ತು ದನಗಳ ಸಂತೆ ನಡೆಯುತ್ತಿದ್ದು, ಯಾವುದೇ ಅಹಿತಕರ ಘಟನೆ ಜರುಗಿರಲಿಲ್ಲ.  ಆದರೆ ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆ ಜರುಗಿದ್ದು ದುರದೃಷ್ಟಕರ.  ಈಗಲೂ ಉಭಯ ಗ್ರಾಮಸ್ಥರ ನಡುವೆ ಶಾಂತಿ ಹಾಗೂ ಸಾಮರಸ್ಯವಿದ್ದು, ಸೌಹಾರ್ದ ವಾತಾವರಣವನ್ನು ಪುನರ್ ಸ್ಥಾಪಿಸಬೇಕಿದೆ.  ರೈತರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದು ತಮ್ಮ ಆಶಯವಾಗಿದ್ದು, ಕೂಕನಪಳ್ಳಿ ಹಾಗೂ ಬೂದಗುಂಪಾ ಕ್ರಾಸ್ ಬಳಿ ಎರಡೂ ಕಡೆ ಸಂತೆ ನಡೆಸಲು ಯಾವುದೇ ವಿರೋಧವಿಲ್ಲ.  ಕೂಕನಪಳ್ಳಿಯಲ್ಲಿ ಹಿಂದಿನಿಂದಲೂ ಶುಕ್ರವಾರದಂದೇ ಸಂತೆ ನಡೆಯುತ್ತಿದ್ದು, ಬೂದಗುಂಪಾ ಕ್ರಾಸ್‍ನಲ್ಲಿ ಬೇರೆ ವಾರದಂದು ಸಂತೆ ನಡೆಸುವುದು ಸೂಕ್ತ.  ಆದರೆ ಎರಡೂ ಕಡೆ ಶುಕ್ರವಾರದಂದೇ ಸಂತೆ ನಡೆಸಲು ತಮ್ಮ ವಿರೋಧವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಸಂಸದ ಸಂಗಣ್ಣ ಕರಡಿ ಅವರ ಅಭಿಪ್ರಾಯಕ್ಕೆ ತಮ್ಮ ಸಮ್ಮತಿ ವ್ಯಕ್ತಪಡಿಸಿದರು.
          ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ನಿಯಮಗಳ ಅನುಸಾರ ಉಭಯ ಗ್ರಾಮಗಳಲ್ಲಿ ಸಂತೆ ನಡೆಸುವ ಕುರಿತು ಪರಿಶೀಲಿಸಲಾಗುವುದು ಎಂದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸೆಪಟ್, ಡಿವೈಎಸ್‍ಪಿ ರಾಜಿವ್ ಹಾಗೂ ಸಹಾಯಕ ಆಯುಕ್ತ ಪಿ.ಎಸ್. ಮಂಜುನಾಥ್ ಅವರು ಕೂಕನಪಳ್ಳಿ ಗ್ರಾಮದಲ್ಲಿ ನಡೆದ ಗಲಭೆ ಹಾಗೂ ನಂತರದ ಸ್ಥಿತಿ ಗತಿಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
          ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ, ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Friday, 13 June 2014

ರಕ್ತದಾನ ಶ್ರೇಷ್ಠದಾನ : ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಿ



ಕೊಪ್ಪಳ ಜೂ.13 (ಕರ್ನಾಟಕ ವಾರ್ತೆ): ದಾನಗಳಲ್ಲಿ ಶ್ರೇಷ್ಠವಾದದ್ದು, ವಿದ್ಯಾದಾನ, ಅನ್ನದಾನ ಆದರೆ ಅದಕ್ಕಿಂತ ಶ್ರೇಷ್ಠವಾದುದು ರಕ್ತದಾನ.  ರಕ್ತದ ಅವಶ್ಯಕತೆ ಇದ್ದವರಿಗೆ ರಕ್ತವನ್ನು ದಾನವಾಗಿ ನೀಡುವುದು, ಆತನ ಜೀವ ಉಳಿಸಿದ ಕೃಪೆಗೆ ಪಾತ್ರನಾಗುತ್ತಾನೆಂದರೆ, ರಕ್ತದ ಮಹತ್ವ ಎಷ್ಟು ಎಂಬುದನ್ನು ಅರ್ಥೈಸಿಕೊಳ್ಳಬಹುದಾಗಿದೆ.  ಜೂ. 14 ರಂದು ವಿಶ್ವ ರಕ್ತದಾನಿಗಳ   ದಿನಾಚರಣೆ ಇದ್ದು, ಅಂದು ಬೆಳಿಗ್ಗೆ 10-30 ಗಂಟೆಗೆ ನಗರದ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ರಕ್ತದಾನ : ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು, ಸ್ವಯಂ ಪ್ರೇರಿತನಾಗಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೊಡುವುದಕ್ಕೆ ರಕ್ತದಾನ ಎನ್ನುವರು. ಕೇವಲ ಮಾನವ ಮಾತ್ರ ಇನ್ನೊಬ್ಬ ಮಾನವನಿಗೆ ರಕ್ತ ನೀಡಲು ಸಾಧ್ಯ. ರಕ್ತಕ್ಕೆ ವರ್ಷವಿಡೀ ನಿರಂತರವಾಗಿ ಬೇಡಿಕೆ ಇರುತ್ತದೆ. ಯಾಕೆಂದರೆ ಅಪಘಾತಗಳು, ತುರ್ತು ಶಸ್ತ್ರ ಚಿಕಿತ್ಸೆಗಳ ಸಂದರ್ಭಗಳಲ್ಲಿ ಅಲ್ಲದೇ ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಮಹಿಳೆಯರು, ಥ್ಯಾಲಸೀಮಿಯಾ ಹಿಮೋಫೀಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ, ನಮ್ಮ ರಾಜ್ಯದಲ್ಲಿ ಒಂದು ದಿನಕ್ಕೆ 800 ರಿಂದ 1100 ಯುನಿಟ್‍ಗಳಷ್ಟು ರಕ್ತದ ಬೇಡಿಕೆ ಇದೆ, ಒಮ್ಮೆ ದಾನಿಗಳಿಂದ ಶೇಖರಿಸಿದ ರಕ್ತ 35 ದಿನಗಳವರೆಗೆ ಮಾತ್ರ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. 35 ದಿನಗಳ ನಂತರ, ಅದು ಉಪಯೋಗಕ್ಕೆ ಬರುವುದಿಲ್ಲ.
ಯಾರು ರಕ್ತದಾನ ಮಾಡಬಹುದು ? : ಹೆಣ್ಣು ಗಂಡೆಂಬ ಭೇದವಿಲ್ಲದೇ 18 ರಿಂದ 60 ವರ್ಷದ ಒಳಗಿರುವ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು, ರಕ್ತದಾನಿಯ ದೇಹದ ತೂಕ 45 ಕೆ.ಜಿ.ಗಿಂತ ಹೆಚ್ಚಿರಬೇಕು, ಗಂಡಸರು 3 ತಿಂಗಳಿಗೆ ಒಮ್ಮೆ, ಹೆಂಗಸರು 4 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕನಿಷ್ಠ 12.5 ಗ್ರಾಂ ಗಿಂತ ಹೆಚ್ಚಿರಬೇಕು.
ಯಾರು ರಕ್ತದಾನ ಮಾಡಬಾರದು ? : ಮಧ್ಯಪಾನ ಹಾಗೂ ಮಾದಕದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು, ಮಹಿಳೆಯರು, ತಿಂಗಳ ಮುಟ್ಟಿನ ಸಮಯದಲ್ಲಿ, ರಕ್ತದಾನ ಮಾಡಬಾರದು, ಗರ್ಭಪಾತವಾದ 8 ತಿಂಗಳು ರಕ್ತದಾನ ಮಾಡಬಾರದು, ಯಾವುದೇ ವ್ಯಕ್ತಿ ಕಾಯಿಲೆ ವಿರುದ್ದ ಲಸಿಕೆ ಪಡೆದಿದ್ದರೆ ಅಂತಹವರು ಲಸಿಕೆ ಪಡೆದ 4 ವಾರಗಳವರೆಗೆ ರಕ್ತದಾನ ಮಾಡಬಾರದು, ಯಾವುದೇ ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಅಂತಹವರು ಮುಂದಿನ 12 ತಿಂಗಳು ರಕ್ತದಾನ ಮಾಡಬಾರದು, ತೀವ್ರ ರಕ್ತದ ಒತ್ತಡ ಇರುವವರು ರಕ್ತದಾನ ಮಾಡಬಾರದು.
ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳು : ಹೃದಯಘಾತದ ಸಂಭವ ಕಡಿಮೆಯಾಗುವುದು, ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆಯಾಗುವುದು, ಇತರರು ಜೀವ ಉಳಿಸಿದಂತಾಗುವುದು, ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಉತ್ತೇಜಿಸುತ್ತದೆ, ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಚುರುಕುತನ, ನೆನಪಿನ ಶಕ್ತಿ ಹೆಚ್ಚಾಗುತ್ತದೆ, ರಕ್ತದಾನ ಮಾಡುವುದರಿಂದ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ. ಬದಲಾಗಿ ಇದರಿಂದ ದೇಹಕ್ಕೆ ಅನುಕೂಲ ಪರಿಣಾಮಗಳಾಗುತ್ತವೆ.
            ರಕ್ತದಾನಿಗಳು  ತಮ್ಮ ಹೆಸರನ್ನು ನೋಂದಾಯಿಸಲು ಮಲ್ಲಿಕಾರ್ಜುನ ಡ್ಯಾಪ್ಕು ಕಛೇರಿ ಕೊಪ್ಪಳ ಮೊ.9632672278, ಎನ್‍ಎಸ್‍ಎಸ್ ಅಧಿಕಾರಿ ಡಾ.ಸಿದ್ದಲಿಂಗಯ್ಯ ಕೊಟ್ರೇಕಲ್ ಕೊಪ್ಪಳ ಮೊ.9448570340, ಸಿ.ಏಸ್.ಸಿ. ಸಂರಕ್ಷ ಪರಮೇಶ ಮೊ.9880248291, ಶ್ರೀ ಗವಿಸಿದ್ದೇಶ್ವ ಆಯುರ್ವೇದ ಮಹಾವಿದ್ಯಾಲಯದ ಶಿರೂರಮಠ ಮೊ.9845394735 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಜೂ.14 ರಂದು ಕೊಪ್ಪಳದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ



ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಇವರ ಆಶ್ರಯದಲ್ಲಿ ಜೂ.14 ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಜಾಥಾವನ್ನು ಬೆಳಿಗ್ಗೆ 8.45 ಕ್ಕೆ ಹಮ್ಮಿಕೊಳ್ಳಲಾಗಿದ್ದು, ಅದೇ ದಿನದಂದು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
            ರಕ್ತದಾನದ ಮಹತ್ವ ಸಾರುವ ಜಾಥಾವು ಕೊಪ್ಪಳ ನಗರದ ಹಳೆ ಜಿಲ್ಲಾಸ್ಪತ್ರೆಯಿಂದ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬ ಮೂಲಕ ಸಾಗಿ ಬರಲಿದೆ. ನಂತರ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಈ ಶಿಬಿರದಲ್ಲಿ ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಗುವುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಬಾಲಕಾರ್ಮಿಕರ ಪತ್ತೆ



ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದಿಂದ ಕೊಪ್ಪಳ ತಾಲೂಕಿನ ಚಿಲವಾಡಗಿ ಗ್ರಾಮದಲ್ಲಿ ಚಿಂದಿ ಆಯುತ್ತಿದ್ದ ಕು.ಮಾರೆಪ್ಪ ತಂ. ರಾಹುಳ ಸ್ವಾಮಿ ಕೋಸಗಿ (12) ಹಾಗೂ ಕು.ತಿಮ್ಮಾರೆಡ್ಡಿ ತಂ. ಭೀಮಪ್ಪ ಯಲಬುರ್ಗಿ (12) ಈ ಮಕ್ಕಳನ್ನು ಪತ್ತೆಮಾಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದ್ದಾರೆ.
              ಪಾಲಕರಿಗೆ ಮಕ್ಕಳನ್ನು ಮರಳಿ ಇಂತಹ ಕೆಲಸಗಳಿಗೆ ಕಳುಹಿಸಬಾರದೆಂದು ಅವರ ಮನೆಗಳಿಗೆ ತೆರಳಿ ಸೂಚನೆ ನೀಡಲಾಗಿದ್ದು ದಾಳಿ ತಂಡದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡರ್, ಕ್ಷೇತ್ರಾಧಿಕಾರಿಗಳಾದ ವೀರಣ್ಣ. ವ್ಹಿ. ಕುಂಬಾರ, ಮಾರುತಿ ನಾಯ್ಕರ್ ಇವರು ಭಾಗವಹಿಸಿದ್ದರು.

ಜೂ.16 ರಂದು ಕೊಪ್ಪಳ ಸಂಸದರ ಕಛೇರಿ ಪ್ರಾರಂಭೋತ್ಸವ



ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಕೊಪ್ಪಳ ನೂತನ ಸಂಸದ ಸಂಗಣ್ಣ ಕರಡಿ ಅವರು ಜಿಲ್ಲಾಡಳಿತ ಭವನದಲ್ಲಿರುವ ಲೋಕಸಭಾ  ಸದಸ್ಯರ ಕಾರ್ಯಾಲಯದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜೂ.16 ರಂದು ಏರ್ಪಡಿಸಿದ್ದಾರೆ.
            ಕಛೇರಿ ಪ್ರಾರಂಭೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 10.30 ರಿಂದ 12 ಗಂಟೆಯವರೆಗೆ ವಿಶೇಷ ಪೂಜೆಯೊಂದಿಗೆ ಜರುಗಲಿದೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ನಗರಸಭೆಯಿಂದ ಸಹಾಯಧನ : ಅರ್ಜಿ ಆಹ್ವಾನ



ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಿಂದ 2012-13ನೇ ಸಾಲಿನ ನಗರಸಭೆ ನಿಧಿ ಶೇ.3 ರ ಅನುದಾನದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಅಂಗವಿಕಲರಿಗೆ ಸ್ವಂತ ಮನೆ ಇದ್ದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಸಹಾಯಧನ ಒದಗಿಸಲು  ರೂ.80,000 ಗಳಿಗೆ ಒಟ್ಟು 4 ಫಲಾನುಭವಿಗಳಿಗಾಗಿ ಕ್ರಿಯಾ ಯೋಜನೆಗೆ ಮಂಜೂರಾತಿ ಪಡೆದಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
             ಅರ್ಜಿದಾರರು ನಗರವಾಸಿಯಾಗಿರಬೇಕು, ಅರ್ಜಿದಾರರ ಹೆಸರಿನಲ್ಲಿರುವ ಆಸ್ತಿಯ ಚಾಲ್ತಿ ಸಾಲಿನ ಫಾರಂ ನಂ.3, ರೇಷನ್ ಕಾರ್ಡ್, ಆಧಾರ ಕಾರ್ಡ್, ಓಟರ್ ಐಡಿ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನವೀಕರಿಸಿದ ಅಂಗವೈಕಲ್ಯ ದೃಢೀಕರಣ ಪ್ರಮಾಣ ಪತ್ರ, ಈ ಎಲ್ಲಾ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಜೂ.23 ರೊಳಗಾಗಿ ನಗರಸಭೆ ಕಾರ್ಯಾಲಯ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 08539-230192  ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯುವಕ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ



ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕು ಹಿರೇಮುಕರ್ತಿನಾಳ ಗ್ರಾಮದ ಗಿರಿಯಪ್ಪ ತಂದೆ ಹನುಮಂತ ಕೊಂಡಿಕಾರ (25) ಎಂಬ ಯುವಕ ಕೆಲಸದ ನಿಮಿತ್ಯ ಹೊರಗಡೆ ಹೋದವನು ಕಾಣೆಯಾಗಿದ್ದು,  ಯುವಕನ ಪತ್ತೆಗೆ ಸಹಕರಿಸುವಂತೆ ತಾವರಗೇರಾ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
 ಯುವಕನು ಕಳೆದ ಮಾ.01 ರಂದು ಅದೇ ಗ್ರಾಮದ ಶರಣಮ್ಮ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದು, ಮಾ.15 ರಂದು ದುಡಿದುಕೊಂಡು ಬರುತ್ತೇನೆಂದು ಮನೆಯಿಂದ ಹೋದವನು ವಾಪಸ್ ಮನೆಗೆ ಬಾರದೇ   ಕಾಣೆಯಾಗಿರುತ್ತಾನೆ.  ಕಾಣೆಯಾದ ಯುವಕನ ವಿವರ ಇಂತಿದೆ ಜಾತಿ: ವಾಲ್ಮೀಕಿ, ಕನ್ನಡ ಭಾಷೆ ಮಾತನಾಡುತ್ತಾನೆ, ಎತ್ತರ 5’ 5’, 5ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದಾನೆ. ಕೋಲು ಮುಖ, ಸಾದಾ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ.  ಬಿಳಿ ಮತ್ತು ಬೂದು ಬಣ್ಣಗಳ ಚೆಕ್ಸ್ ತುಂಬು ತೋಳಿನ ಶರ್ಟು, ಬೂದು ಬಣ್ಣದ ಪ್ಯಾಂಟ್‍ನ್ನು ಧರಿಸಿದ್ದಾನೆ.  ಈ ಚಹರೆಯುಳ್ಳ ಯುವಕನ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ತಾವರಗೇರಾ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಎಸ್.ಪಿ. ಕಛೇರಿ ಕೊಪ್ಪಳ 9480803701, 08539-230111, ಡಿ.ಎಸ್.ಪಿ. ಗಂಗಾವತಿ 9480803721, 08536-230853, ಸಿ.ಪಿ.ಐ ಕುಷ್ಟಗಿ 9480803732, 08536-267033 ಹಾಗೂ ಪಿ.ಎಸ್.ಐ. ತಾವರಗೇರಾ 9480803758, 08536-275322 ಈ ದೂರವಾಣಿಗಳಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಹವಾ ಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿ



ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಜಂಟಿ ಕೃಷಿ ನಿರ್ದೇಶಕರ ಕಛೇರಿಯಿಂದ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ವಿವರಗಳು ಇಂತಿವೆ.
ಗಂಗಾವತಿ ತಾಲೂಕಿನ ಹೋಬಳಿಗಳಾದ ಗಂಗಾವತಿ-ಹತ್ತಿ, ಬಾಳೆ, ಹುಲಿಹೈದರ್-ಹತ್ತಿ,  ಕನಕಗಿರಿ-ಹತ್ತಿ, ಕಾರಟಗಿ-ಹತ್ತಿ, ಮರಳಿ-ಹತ್ತಿ, (ಮ.ಆ), ನವಲಿ-ಹತ್ತಿ (ಮ.ಆ.) (ನೀ), ಸಿದ್ದಾಪೂರ-ಹತ್ತಿ, ವೆಂಕಟಗಿರಿ-ಹತ್ತಿ ಈ ಹೋಬಳಿಗಳಿಗೆ ಮಳೆ ಆಶ್ರಿತ ಪ್ರದೇಶವಾಗಿದೆ, ಕೊಪ್ಪಳ ತಾಲೂಕಿನ ಹೋಬಳಿಗಳಾದ ಅಳವಂಡಿ-ಹತ್ತಿ (ಮ.ಆ.) ಹತ್ತಿ (ನೀ), ಮೆಣಸಿನಕಾಯಿ (ನೀ), ಈರುಳ್ಳಿ (ನೀ), ಹಿಟ್ನಾಳ-ಹತ್ತಿ (ಮ.ಆ.), ಇರಕಲ್‍ಗಡ-ಹತ್ತಿ (ಮ.ಆ.), ಕೊಪ್ಪಳ-ಹತ್ತಿ (ಮ.ಆ.) (ನೀ), ಕುಷ್ಟಗಿ ತಾಲೂಕಿನ ತಾವರಗೇರಾ-ಈರುಳ್ಳಿ (ನೀ), ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ-ಹತ್ತಿ (ಮ.ಆ.), ಕುಕನೂರು-ಹತ್ತಿ (ಮ.ಆ.), ಮಂಗಳೂರು-ಹತ್ತಿ (ಮ.ಆ.), ಯಲಬುರ್ಗಾ-ಹತ್ತಿ (ಮ.ಆ.)
2014 ರ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೆಳೆವಾರು ರೈತರು ಪಾವತಿಸಬೇಕಾದ ವಿಮಾ ಕಂತಿನ ವಿವರಗಳು : ಹತ್ತಿ (ಮ.ಆ.) ಪ್ರತಿ ಹೆಕ್ಟೆರಿಗೆ ರೈತರು ಪಾವತಿಸಬೇಕಾಗಿರುವ ವಿಮಾಕಂತು 2400, ಅದರಂತೆ ಹತ್ತಿ (ನೀ)-3000, ಮೆಣಸಿನಕಾಯಿ (ನೀ)-5880, ಈರುಳ್ಳಿ (ನೀ)-5160, ಬಾಳೆ-6000 ರೂ.ಗಳಷ್ಟು ವಿಮಾ ಕಂತನ್ನು ನಿಗದಿಪಡಿಸಲಾಗಿದೆ.
ಕೊಪ್ಪಳ ಜಿಲ್ಲೆಗೆ ಚೋಳಮಂಡಲಮ್ ಎಂ.ಎಸ್.ಜನರಲ್ ಇನ್ಸೂರೆನ್ಸ್ ಕಂಪನಿ ಲಿ., ವಿಮಾ ಸಂಸ್ಥೆಯನ್ನು ನಿಗದಿಪಡಿಸಲಾಗಿದ್ದು, ಈ ಯೋಜನೆಯಲ್ಲಿ ಒಳಪಡಿಸಲಾಗುವ ಎಲ್ಲಾ ಬೆಳೆಗಳಿಗೆ ಬೆಳೆಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಒಳಪಡಿಸಲು ತೀರ್ಮಾನಿಸಲಾಗಿದೆ ಹಾಗೂ ಬೆಳೆಸಾಲ ಪಡೆಯದ ರೈತರಿಗೆ ಐಚ್ಚಿಕ, 2014 ರ ಮುಂಗಾರು ಹಂಗಾಮಿಗೆ ಬೆಳೆಸಾಲ ಪಡೆದ ರೈತರಿಗೆ ಜೂ.30 ರೊಳಗಾಗಿ ಬೆಳೆಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ಯೋಜನೆಯಡಿಯಲ್ಲಿ ಒಳಪಡಿಸತಕ್ಕದ್ದು, ಇಚ್ಚೆಯುಳ್ಳ ಬೆಳೆಸಾಲ ಪಡೆಯದ ರೈತರು ಪಾಲ್ಗೊಳ್ಳಲು ಜೂ.30 ಕೊನೆಯ ದಿನವಾಗಿರುತ್ತದೆ. ಬೆಳೆಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ, ಪಾಸ್ ಪುಸ್ತಕ, ಕಂದಾಯ ರಶೀದಿಯನ್ನು ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಸ್ಥಳೀಯ ವಾಣಿಜ್ಯ ಗ್ರಾಮೀಣ, ಸಹಕಾರಿ ಬ್ಯಾಂಕ್ (ಸಾಲ ಸಂಸ್ಥೆ) ಗಳ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ವಿಮೆ ಯೋಜನೆ : ವಿಮಾ ಕಂತು ವಿವರ



ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ವಿವಿಧ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ನಿಗದಿಪಡಿಸಲಾದ ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರ ಇಂತಿದೆ.
        ಮುಸುಕಿನ ಜೋಳ (ನೀರಾವರಿ), ಸಾಲ ಪಡೆಯದ ರೈತರಿಗೆ ಪ್ರತಿ ಹೆಕ್ಟರಿಗೆ ವಿಮಾ ಮೊತ್ತ 33203 ರೂ.ಗಳಲ್ಲಿ 664.06 ರೂ. ಪ್ರತಿ ಹೆಕ್ಟರಿಗೆ ರೈತರು ವಿಮಾ ಕಂತು ಪಾವತಿಸಬೇಕು, ಮುಸುಕಿನ ಜೋಳ (ಮಳೆ ಆಶ್ರಿತ) ವಿಮಾ ಮೊತ್ತ 11574, ವಿಮಾ ಕಂತು- 694.44 ಜೋಳ (ನೀ) 20273, 405.46.  ಜೋಳ (ಮ.ಆ.) 11034, 540.66, ಸಜ್ಜೆ (ನೀ) 13138, 262.76, ಸಜ್ಜೆ (ಮ.ಆ) 8842, 176.84, ತೊಗರಿ (ನೀ) 19340, 870.30, ತೊಗರಿ (ಮ.ಆ) 13046, 652.30, ಹೆಸರು (ಮ.ಆ.) 4908, 278.77, ಎಳ್ಳು (ಮ.ಆ.) 8504, 510.24, ಸೂರ್ಯಕಾಂತಿ (ನೀ) 23603, 472.06, ಸೂರ್ಯಕಾಂತಿ (ಮ.ಆ.) 9010, 180.20, ನೆಲಗಡಲೆ (ಶೇಂಗಾ) (ನೀ.) 38426, 1460.18, ನೆಲಗಡಲೆ (ಶೇಂಗಾ) (ಮ.ಆ.) 16186, 809.30, ಭತ್ತ (ನೀ) 41627, 1248.81, ಹರಳು (ಮ.ಆ.) 17563, 1011.63, ನವಣೆ (ಮ.ಆ.) 3953, 183.82, ಹುರುಳಿ (ಮ.ಆ.) 5276, 216.32 ಈ ರೀತಿಯ ವಿಮಾ ಮೊತ್ತ ಮತ್ತು ವಿಮಾ ಕಂತುಗಳನ್ನು ನಿಗದಿಪಡಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ವಿಮಾ ಯೋಜನೆ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೆಳೆ ನಿಗದಿ



ಕೊಪ್ಪಳ ಜೂ.13(ಕರ್ನಾಟಕ ವಾರ್ತೆ): ಪ್ರಸಕ್ತ ಮುಂಗಾರು ಹಂಗಾಮಿನ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಕೆಲವು ಬೆಳೆಗಳನ್ನು ನಿಗದಿಪಡಿಸಲಾಗಿದ್ದು, ರೈತರು ವಿಮಾ ಯೋಜನೆಗೆ ಘೋಷಣೆಗಳನ್ನು ಸಲ್ಲಿಸಬಹುದಾಗಿದೆ.
             ಗಂಗಾವತಿ ತಾಲೂಕಿನ ಗಂಗಾವತಿ ಹೋಬಳಿಯ ಆನೆಗುಂದಿ, ಸಂಗಾಪುರ, ಮರಳಿ, ಚಿಕ್ಕಜಂತಕಲ್, ಗಂಗಾವತಿ ಮತ್ತು ನವಲಿ ಹೋಬಳಿಯ ಮಲ್ಲಾಪುರ, ಹುಲಿಹೈದರ ಹೋಬಳಿಯ ಹುಲಿಹೈದರ್ (ಗೌರಿಪುರ), ಕಾರಟಗಿ ಹೋಬಳಿಯ ಕಾರಟಗಿ, ಚೆಳ್ಳೂರು, ಬೂದಗುಂಪಾ, ಬೇವಿನಾಳ, ಮರ್ಲಾನಹಳ್ಳಿ, ಹುಳ್ಕಿಹಾಳ, ಯರಡೋಣ, ಮರಳಿ ಹೋಬಳಿಯ ಢಣಾಪುರ, ಶ್ರೀರಾಂಪುರ, ಹಣವಾಳ, ಹೇರೂರು, ಹೊಸಕೇರಾ, ನವಲಿ ಹೋಬಳಿಯ ನವಲಿ (ಕರಡೋಣ), ಚಿಕ್ಕಡಂಕನಕಲ್, ಸಿದ್ದಾಪುರ ಹೋಬಳಿಯ ಸಿದ್ದಾಪುರ, ಉಳೇನೂರು, ಗುಂಡೂರು, ಬೆನ್ನೂರು, ಮೂಷ್ಟೂರು, ವೆಂಕಟಗಿರಿ ಹೋಬಳಿಯ ವೆಂಕಟಗಿರಿ, ಆಗೋಲಿ, ಕೆಸರಹಟ್ಟಿ, ಚಿಕ್ಕಬೆಣಕಲ್, ಬಸಾಪಟ್ಟಣ, ವಡ್ಡರಹಟ್ಟಿ, ಕನಕಗಿರಿ ಹೋಬಳಿಯ ಕನಕಗಿರಿ (ಹಿರೇಖೇಡ, ಸುಳೇಕಲ್, ಚಿಕ್ಕಮಾದಿನಾಳ, ಮುಸಲಾಪುರ) ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಭತ್ತ (ನೀರಾವರಿ) ಪ್ರದೇಶವಾಗಿರುತ್ತದೆ.
ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯ ಅಳವಂಡಿ, ಕವಲೂರು, ಹಟ್ಟಿ, ಬೆಟಗೇರಿ, ಮತ್ತೂರು, ಕಾತರಕಿ-ಗುಡ್ಲಾನೂರು, ಬಿಸರಳ್ಳಿ, ಹಲಗೇರಿ, ಬೋಚನಹಳ್ಳಿ, ಕೋಳೂರು, ಅಳವಂಡಿ ಮತ್ತು ಕೊಪ್ಪಳ ಹೋಬಳಿಯ ಹಿರೇಸಿಂದೋಗಿ, ಹಿಟ್ನಾಳ ಹೋಬಳಿಯ ಹೊಸಳ್ಳಿ, ಇರಕಲ್‍ಗಡ ಹೋಬಳಿಯ ಇರಕಲ್‍ಗಡ, ಕಿನ್ನಾಳ, ಹಾಸಗಲ್, ಕಲ್‍ತಾವರಗೇರಾ, ಇಂದರಗಿ, ಬೂದಗುಂಪಾ, ಚಿಕ್ಕಬೊಮ್ಮನಾಳ, ಇರಕಲ್‍ಗಡ ಮತ್ತು ಕೊಪ್ಪಳ ಹೋಬಳಿಯ ಲೇಬಗೇರಿ, ಕೊಪ್ಪಳ ಹೋಬಳಿಯ ಭಾಗ್ಯನಗರ, ಓಜನಹಳ್ಳಿ, ಗೊಂಡಬಾಳ, ಹಿರೇಬಗನಾಳ, ಕುಣಿಕೇರಿ, ಬಹದ್ದೂರಬಂಡಿ, ಕೊಪ್ಪಳ ಮತ್ತು ಇರಕಲ್‍ಗಡ ಹೋಬಳಿಯ ಮಾದಿನೂರು, ಕೊಪ್ಪಳ ಮತ್ತು ಹಿಟ್ನಾಳ ಹೋಬಳಿಯ ಗಿಣಗೇರಾ ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಸುಕಿನಜೋಳ (ಮಳೆಆಶ್ರಿತ) ಪ್ರದೇಶವಾಗಿರುತ್ತದೆ.
ಕುಷ್ಟಗಿ ತಾಲೂಕಿನ ಹನುಮನಾಳ ಹೋಬಳಿಯ ಹನುಮನಾಳ, ನಿಲೋಗಲ್, ತುಗ್ಗಲದೋಣಿ, ಮಾಲಗಿತ್ತಿ, ಜಾಗೀರಗುಡದೂರು, ಹಿರೇಗೊಣ್ಣಾಗರ, ಹನುಮನಾಳ ಮತ್ತು ಹನುಮಸಾಗರ ಹೋಬಳಿಯ ಯರಗೇರಾ, ಬೆನಕನಾಳ, ಹನುಮಸಾಗರ ಹೋಬಳಿಯ ಹನುಮಸಾಗರ, ಕಬ್ಬರಗಿ, ಕಾಟಾಪೂರ, ಹೂಲಗೇರಿ, ಅಡವಿಭಾವಿ, ಚಳಗೇರಾ, ಹಿರೇಬನ್ನಿಗೋಳ, ಹನುಮಸಾಗರ ಮತ್ತು ಕುಷ್ಟಗಿ ಹೋಬಳಿಯ ಕೊರಡಕೇರಾ, ಕ್ಯಾದಿಗುಪ್ಪ, ತಳವಗೇರಾ, ಕುಷ್ಟಗಿ ಹೋಬಳಿಯ ಬಿಜಕಲ್, ದೋಟಿಹಾಳ, ಮುದೇನೂರು, ಕಂದಕೂರು, ಮೇಣದಾಳ, ಸಂಗನಾಳ, ಹಿರೇಮನ್ನಾಪೂರ, ತಾವರಗೇರಾ ಹೋಬಳಿಯ ತಾವರಗೇರಾ, ಕಿಲ್ಲಾರಹಟ್ಟಿ ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಜ್ಜೆ (ಮಳೆಆಶ್ರಿತ) ಪ್ರದೇಶವಾಗಿರುತ್ತದೆ.
 ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಹೋಬಳಿಯ ಮಾಟಲದಿನ್ನಿ, ಗುನ್ನಾಳ, ಹಿರೇಹರಳಿಹಳ್ಳಿ, ಹಿರೇವೆಂಕಲಕುಂಟ, ಗಾಣದಾಳ, ತಾಳಕೇರಿ, ಕುಕನೂರು ಹೋಬಳಿಯ ಕುಕನೂರು, ಮಂಡಲಗೇರಿ, ಭಾನಾಪುರ, ತಳಕಲ್, ರಾಜೂರು, ಇಟಗಿ, ಬನ್ನಿಕೊಪ್ಪ, ಯರೆಹಂಚಿನಾಳ, ಬೆಣಕಲ್, ವಣಗೇರಿ, ಕುಕನೂರು ಮತ್ತು ಮಂಗಳೂರು ಹೋಬಳಿಯ ಬಳಗೇರಿ, ಮಂಗಳೂರು ಹೋಬಳಿಯ ಮಂಗಳೂರು, ಕುದ್ರಿಮೋತಿ, ಹಿರೇಬಿಡನಾಳ, ಶಿರೂರು, ಚಿಕ್ಕಮ್ಯಾಗೇರಿ, ಮಂಗಳೂರು, ಹಿರೇವಂಕಲಕುಂಟ ಮತ್ತು ಯಲಬುರ್ಗಾ ಹೋಬಳಿಯ ಮುರಡಿ, ಬೇವೂರು, ಗೆದಗೇರಿ, ಯಲಬುರ್ಗಾ ಹೋಬಳಿಯ ಮುದೋಳ, ಹಿರೇಮ್ಯಾಗೇರಿ, ಬಂಡಿ, ಬಳೂಟಗಿ, ಕರಮುಡಿ, ಸಂಗನಹಾಳ, ಕಲ್ಲೂರು, ವಜ್ರಬಂಡಿ ಈ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮುಸುಕಿನ ಜೋಳ (ಮಳೆಆಶ್ರಿತ) ಬೆಳೆ ನಿಗದಿಪಡಿಸಿದೆ.
            ಮುಂಗಾರು ಹಂಗಾಮಿಗೆ ಜೂ.30 ರೊಳಗಾಗಿ ಅಥವಾ ಬೆಳೆ ಬಿತ್ತಿದ 30 ದಿವಸದೊಳಗಾಗಿ ಯಾವುದು ಮುಂಚೆಯೋ ಅದರೊಳಗಾಗಿ ಪ್ರೀಮಿಯಂ ಮೊತ್ತ ಪಾವತಿಸುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.