Friday, 30 August 2019
2017; ಮೋಟಾರ ವಾಹನ ಅಪಘಾತ ಪ್ರಕರಣ : ಮಾ.11 ರಂದು ರಾಜೀ ಸಂಧಾನ
***************************
ಕೊಪ್ಪಳ, ಫೆ. 28 (ಕರ್ನಾಟಕ ವಾರ್ತೆ): ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ಮೋಟಾರ ವಾಹನ ಅಪಘಾತದ ಪ್ರಕರಣಗಳನ್ನು ಜನತಾ ನ್ಯಾಯಾಲಯ ಮುಖಾಂತರ ರಾಜೀ ಸಂಧಾನದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಜನತಾ ನ್ಯಾಯಾಲಯ ಕಾರ್ಯಕ್ರಮವನ್ನು ಮಾ.11 ರಂದು ಬೆಳಿಗ್ಗೆ 10-00 ಗಂಟೆಗೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನ ಮೇರೆಗೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮೋಟಾರು ವಾಹನ ಪ್ರಕರಣಗಳನ್ನು ರಾಜೀ ಸಂಧಾನದಲ್ಲಿ ಇತ್ಯರ್ಥಪಡಿಸಿಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗುವುದು. ಸಂಬಂಧಪಟ್ಟವರು ಆಯಾ ವಕೀಲರೊಂದಿಗೆ ಹಾಜರಾಗಿ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ವ್ಯಾಜ್ಯವನ್ನು ಜನತಾ ನ್ಯಾಯಾಲಯದ ಮೂಲಕ ಶ್ರೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಜನತಾ ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಲಾಗುವುದು. ಸೌಹಾರ್ದಯುತವಾಗಿ ಪ್ರಕರಣವು ಇತ್ಯರ್ಥಪಡಿಸಿಕೊಳ್ಳವುದರಿಂದ ಬಾಂಧವ್ಯವು ಉಳಿದು ವಿವಾದವು ಇತ್ಯರ್ಥಗೊಳ್ಳುತ್ತದೆ. ಜನತಾ ನ್ಯಾಯಾಲದಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ತಿಯಾಗಿ ಮರುಪಾವತಿಸಲಾಗುವುದು. ಕಡಿಮೆ ಖರ್ಚು, ಶೀಘ್ರ ವಿಲೇವಾರಿಗಾಗಿ ಇದೊಂದು ಅವಕಾಶ ಎಂದು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
2017; ಸ್ವ-ಉದ್ಯೋಗ ತರಬೇತಿ : ಅರ್ಜಿ ಆಹ್ವಾನ
*******************
ಕೊಪ್ಪಳ, ಫೆ. 28 (ಕರ್ನಾಟಕ ವಾರ್ತೆ): ಉತ್ತರಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಇವರ ವತಿಯಿಂದ ವಿವಿಧ ವಿನ್ಯಾಸದ ಚಿನ್ನಾಭರಣಗಳ ತಯಾರಿಕೆಯ ತರಬೇತಿ ಹಾಗೂ ಲಘು ವಾಹನ ಚಾಲನಾ ತರಬೇತಿ ಹಮ್ಮಿಕೊಳ್ಳಲಾಗಿದ್ದು. ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಸಿಲಾಗಿದೆ.
ತರಬೇತಿ ಪಡೆಯಲಿಚ್ಚಿಸುವವರು ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ (ಉತ್ತರ ಕರ್ನಾಟಕ ಜಿಲ್ಲೆ), ಈ ವಿಳಾಸಕ್ಕೆ ಕೂಡಲೇ ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ 08284-220807, 9483485489, 9482188780 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
2017; ಜನರ ಮನಸೂರೆಗೊಂಡ ಭಾರತ ಭಾಗ್ಯ ವಿಧಾತ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಕೊಪ್ಪಳದ ಜನತೆ
**********************************
ಕೊಪ್ಪಳ, ಫೆ. 27 (ಕರ್ನಾಟಕ ವಾರ್ತೆ): ಮೈದಾನದ ತುಂಬೆಲ್ಲಾ ‘ಜೈ-ಭೀಮ್’ ಎನ್ನುವ ಜೈಕಾರದ ಉದ್ಘಾರ. ಭಾರತ ಭಾಗ್ಯ ವಿಧಾತ. . . ನೀ ಸಮತೆಯ ಸಾರಿದ ಧೂತ. . . ಈ ನೆಲದ ನಿಜಾವಧೂತ. . . ಹಾಡಿನ ಮಾರ್ಧನಿ ಇಡೀ ಮೈದಾನದುದ್ದಕ್ಕೂ ಪಸರಿಸಿತು.
ಇದು ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತ ಭಾಗ್ಯ ವಿಧಾತ’ ಕಾರ್ಯಕ್ರಮದ ನಂತರ ಕೇಳಿ ಬಂದ ಮಾರ್ಧನಿಯಾಗಿತ್ತು.
ಬಿರುಸಿನ ಪ್ರದರ್ಶನ, ಬೆರಗುಗೊಳಿಸುವ ನಟನೆ, ಕಣ್ತುಬಿಂಬಿಸುವ ಬೆಳಕಿನ ಲೋಕ, ಕಿವಿದುಂಬಿಸುವ ಹಿನ್ನೆಲೆ ಸಂಗೀತ, ದೇಶಿ ಜಾನಪದ ಕಲೆಗಳ ವೈಭವದಲ್ಲಿ ಅನಾವರಣಗೊಂಡ ವೈಚಾರಿಕ ಕಥಾ ಹಂದರದ ಭಾರತ ಭಾಗ್ಯವಿಧಾತಾ ಸಾವಿರಾರು ಜನರ ಮನೆಗೆದ್ದಿತು. ಜನಪದ ಸೊಗಡಿನೊಂದಿಗೆ ಮೈ ರೋಮಾಂಚನಗೊಳಿಸುವ ಜನಪದ ನೃತ್ಯ, ಗೀತೆ, ಆಧುನಿಕ ರಂಗಭೂಮಿಯ ನವಿರಾದ ಪರಿಕಲ್ಪನೆಗಳನ್ನು ಮೇಳೈಸಿದ ಅಪರೂಪದ ಪ್ರಯೋಗಕ್ಕೆ ಕೊಪ್ಪಳ ನಗರದ ಸಾವಿರಾರು ಮನಸ್ಮ್ಸಗಳು ಸಾಕ್ಷಿಯಾದವು. ಕಲಾವಿದರ ಮನೋಜ್ಞ ಅಭಿನಯಕ್ಕೆ ಇಲ್ಲಿನ ಜನತೆ ಮನಸೋತರು. ಭಾರತ ತಳಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ವರ 125ನೇ ಜಯಂತಿಯ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ ಭಾರತ ಭಾಗ್ಯವಿಧಾತಾ ಧ್ವನಿ ಬೆಳಕು ಕಾರ್ಯಕ್ರಮ ಕಿಕ್ಕಿರಿದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಯಿತು. ಅತ್ಯಂತ ಆಕರ್ಷಕವಾದ ಧ್ವನಿ ಬೆಳಕಿನ ವೈಭವದಲ್ಲಿ ಪಾತ್ರಧಾರಿಗಳ ನೃತ್ಯ, ಅಭಿನಯ, ದೃಶ್ಯದಿಂದ ದೃಶ್ಯಕ್ಕೆ ಪಡೆದುಕೊಳ್ಳುತ್ತಿರುವ ವೇಗ ನೋಡುಗರ ಮನಸ್ಸನ್ನು ಪುಳಕಗೊಳಿಸಿತು.
ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಒಂದೊಂದು ಕಲಾಪ್ರಕಾರಗಳನ್ನು ಆಯ್ಕೆ ಮಾಡಿಕೊಂಡು, ನವಿರಾದ ಸಮ್ಮಿಶ್ರಣದಲ್ಲಿ ಅಳವಡಿಸಿಕೊಂಡಿದ್ದು, ಪ್ರೇಕ್ಷಕರಿಗೆ ಇಷ್ಟವಾಯಿತು. ಒಟ್ಟಾರೆ ಪ್ರದರ್ಶನದಲ್ಲಿ ಅಂಬೇಡ್ಕರ್ ಅವರನ್ನು ಎಲ್ಲ ಸಮುದಾಯದ ಒಳಿತಿಗಾಗಿ ಶ್ರಮಿಸಿದ ಮಹಾನ್ ಮಾನವತಾವಾದಿಯಾಗಿ ಪ್ರದರ್ಶನ ಬಿಂಬಿಸುವಲ್ಲಿ ಯಶಸ್ವಿಯಾಯಿತು.
ಬೃಹತ್ತಾದ ವೇದಿಕೆಯಲ್ಲಿ ಪಾದರಸದಂತೆ ಚಲನಶೀಲತೆ ಪಡೆದ 80 ಕಲಾವಿದರ ವಿಭಿನ್ನ ಅಭಿನಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತು. ಬಿಗಿಯಾದ ಕಥಾಹಂದರ, ಬಿರುಸಿನ ಸಂಭಾಷಣೆ, ವೈಭಯುತ ದೃಶ್ಯಗಳ ಸಂಯೋಜನೆ, ಶ್ರೀಮಂತ ಜನಪದ ಕಲೆಗಳ ಚಿತ್ತಾರ, ನೆರಳು ಬೆಳಕಿನ ದೃಶ್ಯ ವೈಭವದಲ್ಲಿ ಹಾಡು ನೃತ್ಯ, ಸಿನಿಮಿಯ ಶೈಲಿ ಹೀಗೆ ಎಲ್ಲವೂ ಒಳಗೊಂಡ ರಂಜನೀಯ ಅಂಶಗಳ ಜಾನಪದ ಕಲೆಗಳ ಹಂದರದಲ್ಲಿ ನಡೆದ ಅಂಬೇಡ್ಕರ್ ಅವರ ಜೀವನ ಗಾಥೆಯ ಮೆರವಣಿಗೆ ಅಬಾಲವೃದ್ಧರ ಮನಸ್ಸಿನ ಕದತಟ್ಟಿತು.
ಭಾರತ ಭಾಗ್ಯ ವಿಧಾತ- ಬೆಳಕು ಮತ್ತು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮ ಇಬ್ಬರು ಗೊರವಪ್ಪಗಳ ಸ್ವಾಗತದೊಂದಿಗೆ ತೆರೆದುಕೊಂಡು, ನಂತರ, ಹಂತ, ಹಂತವ ಹಂತವಾಗಿ ಕಥಾ ಹಂದರ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.
ಇದು ಸಾಪ್ಟವೇರ್ ಇಂಜನಿಯರ್ ಕಥೆಯಲ್ಲ. ಸೋಶಿಯಲ್ ಇಂಜಿನಿಯರ್ ಕಥೆ ಎಂದು ಪಾತ್ರವೊಂದು ನುಡಿಯುತ್ತಿದ್ದಂತೆ ಅಂಬೇಡ್ಕರ ಅವರ ಜೀವನದ ಸಂಕಷ್ಟಗಳ ಸರಮಾಲೆ, ಸ್ವಾಭಿಮಾನದ ಬದುಕಿನ ನಡೆ, ಲೋಕೋದ್ಧಾರದ ಹಾದಿ, ಸೈದ್ಧಾಂತಿಕ ಚರ್ಚೆಗಳು, ರಾಜಕೀಯ ನಾಯಕರ ಭಿನ್ನಾಭಿಪ್ರಾಯ, ರಾಜಿಸಂಧಾನ, ದಲಿತರ, ಶೋಷಿತರ, ಮಹಿಳೆಯರ, ಅಸ್ಪøಶ್ಯರ, ಕಾರ್ಮಿಕರ ಹೀಗೆ ನೋಂದವರ ನೋವಿಗೆ ಸ್ಪಂದಿಸುವ ಚಾರಿತ್ರಿಕ ಹಿನ್ನೋಟಗಳು, ಗೊರವರ ಕುಣಿತ, ಕಂಸಾಳೆ, ವೀರಭದ್ರಕುಣಿತ, ಭೂತಕೊಲ, ಯಕ್ಷಗಾನ, ಬಯಲಾಟ, ಗೀಗೀಪದ, ಡೊಳ್ಳುಕುಣಿತ, ಮರಾಠಿ ನೆಲದ ಮಂಜರಾ ಜನಪದ ನೃತ್ಯ ಮಾಧ್ಯಮದಲ್ಲಿ ಹೊರಹೊಮ್ಮುತ್ತ ನೋಡುಗರ ಮನ, ಮನಸ್ಸನ್ನು ಕಲಕುತ್ತ ಸಾಗಿತು. ಸಿರಿವಂತೆ ಭೂಮಿತಾಯಿ. . . ಮಳೆಯಲ್ಲಿ ತೋಯುತ್ತಾ. . . .ಅಂಟಿದಾ ಶಾಪದಾ ಕೊಳೆಯನ್ನು ತೊಳೆಯುತ್ತಾ. . . ಎನ್ನುವ ಹಿನ್ನೆಲೆಯಲ್ಲಿ ಬರುವ ಹಾಡು ಕಾರ್ಯಕ್ರಮದ ಗಟ್ಟಿತನವನ್ನು ತೋರಿಸಿದೆ. ಹಂತ ಹಂತವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಾಲ್ಯ, ತುಂಟತನ, ಪಾಠ ಕಲಿಸಿದ ಗುರುಗಳು, ಮದುವೆ, ಬ್ಯಾರಿಸ್ಟರ್ ಪದವಿ ಪಡೆದದ್ದು, ತಮಗೆ ಆಶ್ರಯ ನೀಡಿದ ಬರೋಡಾದ ಸಯ್ಯಾಜಿ ಮಹಾರಾಜ, ಸಾಹು ಮಹಾರಾಜ್, ಅಂಬೇಡ್ಕರ್ ಸಿದ್ದಾಂತಗಳನ್ನು ಜಾರಿಗೆ ತಂದ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್, ಅಂಬೇಡ್ಕರ್ ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರು, ವೇದಿಕೆಯಲ್ಲಿ ಕಾಣಿಸಿಕೊಂಡು, ಗತ ಇತಿಹಾಸವನ್ನು ಕಣ್ಣಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಯಿತು.
ಭಾರತೀಯ ಸಾಮಾಜದ ಜಾತಿ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ರಾಜಕೀಯ ಒಳನೋಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಸರಳ ರೀತಿಯಲ್ಲಿ ಜನರಿಗೆ ಅರ್ಥಮಾಡಿಸುತ್ತಾ ಅಂಬೇಡ್ಕರ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತ ಸಾಗುವ ಭಾರತ ಭಾಗ್ಯವಿಧಾತಾ ಎಲ್ಲರ ಮನ ಗೆದ್ದಿತು. ಶೋಷಿತ ಸಮುದಾಯದ ಬದುಕು, ಊರು ಅಥವಾ ಕಚೇರಿಯಲ್ಲಿ ಕುಡಿಯುವ ನೀರಿಗೂ ಅಡ್ಡಿಪಡಿಸುತ್ತಿದ್ದ ಮೇಲ್ವರ್ಗದ ಜನರನ್ನು ಪ್ರತಿಭಟಿಸಿ, ಅಂಬೇಡ್ಕರ್ ಕಲ್ಲೇಟಿಗೆ ಗುರಿಯಾಗಿದ್ದು, ಬಾಡಿಗೆ ಮನೆ ಸಿಗದೆ ಪರಿತಪಿಸಿದ್ದು, ದೌರ್ಜನ್ಯ, ಅವಮಾನ, ದಬ್ಬಾಳಿಕೆಯ ಪ್ರಸಂಗಗಳು, ಸಮಾಜ ಸುಧಾರಣೆಗಾಗಿ ಅಂಬೇಡ್ಕರ್ ಹಾಕಿಕೊಟ್ಟ ಸೂತ್ರಗಳನ್ನು ಮನಮುಟ್ಟುವಂತೆ ನಿರೂಪಿಸುವಲ್ಲಿ ಪ್ರದರ್ಶನ ಯಶಸ್ವಿಯಾಯಿತು. ಅಂಬೇಡ್ಕರ ಅವರು ಬುದ್ಧ ಧರ್ಮದ ಅನುಯಾಯಿಯಾಗಿ ವೇದಿಕೆಯಲ್ಲಿ ಶಾಂತಿಮಂತ್ರ ಪಠಣವಾಗುತ್ತಿದ್ದಂತೆ ಜನ ಧನ್ಯತಾಭಾವದತ್ತ ಮುಖ ಮಾಡಿದಂತಿತ್ತು.
ಅಂಬೇಡ್ಕರ್ ಅವರ ಜೀವನದ ಕೆಲ ನಿಜ ಚಿತ್ರಗಳ ವಿಡಿಯೋ ತುಣುಕುಗಳನ್ನು ವೇದಿಕೆಯ ಎತ್ತರದ ಭಾಗದಲ್ಲಿ ಪ್ರದರ್ಶಿಸಿದ್ದು, ಕಾರ್ಯಕ್ರಮ ಅರ್ಥಪೂರ್ಣಗೊಳಿಸಲು ಪೂರಕವಾಯಿತು. ಸಂವಿಧಾನದ ಪುಸ್ತಕ ಅನಾವರಣಗೊಳಿಸುವ ಅಂಬೇಡ್ಕರ್ ಪಾತ್ರಧಾರಿ, ಇದಕ್ಕೆ ಜೊತೆಗೂಡಿದ ರಾಷ್ಟ್ರ ಮಹಾನ್ ನಾಯಕರ ಪಾತ್ರಧಾರಿಗಳು ವೇದಿಕೆಯ ಮುಂಭಾಗಕ್ಕೆ ಬರುತ್ತಿದ್ದಂತೆಯೇ ಜನರಿಂದ ಹರ್ಷೋಲ್ಲಾಸದ ಉದ್ಘಾರ ಕೇಳಿಬಂದಿತು. ಬೌದ್ಧ ಬಿಕ್ಕುವಾಗಿ ದೀಕ್ಷೆ ಸ್ವೀಕರಿಸುವ ಸನ್ನಿವೇಶದೊಂದಿಗೆ ಪ್ರದರ್ಶನಕ್ಕೆ ಅದ್ಧೂರಿ ತೆರೆಕಂಡಿತು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಗಾಥೆಯನ್ನು ನಾವೆಲ್ಲ ಅರ್ಥಮಾಡಿಕೊಂಡು, ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ನಿರೂಪಿಸಿದರು.
ಖ್ಯಾತ ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ ಅವರ ನಿರ್ದೇಶನದಲ್ಲಿ ಭಾರತ ಭಾಗ್ಯವಿಧಾತ ಧ್ವನಿ ಬೆಳಕು ಕಾರ್ಯಕ್ರಮ ಮೂಡಿಬಂದಿದ್ದು, ಇದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಾಗಿದೆ. ಸಂಗೀತ ನಿರ್ದೇಶನವನ್ನು ಖ್ಯಾತ ಚಲನಚಿತ್ರ ಯುವ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ನೀಡಿದ್ದರೆ. ಶಶಿಧರ ಅಡಪ ರಂಗವಿನ್ಯಾಸ, ಪದ್ಮಿನಿ ಅಚ್ಚಿ ಅವರ ನೃತ್ಯ ಸಂಯೋಜನೆ, ನಂದಕಿಶೋರ ಅವರ ಬೆಳಕು, ಪ್ರಮೋದ ಶಿಗ್ಗಾಂವಿ ಅವರಿಂದ ವಸ್ತ್ರಾಲಂಕಾರ, ಎಂಪಿಎಂ ವೀರೇಶ್ ಅವರ ಸಹನಿರ್ದೇಶನದಲ್ಲಿ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು.
2017; ಕೃಷಿಗೆ ಕಡಿಮೆ ನೀರು ಬಳಕೆಯಾಗುವ ಪದ್ಧತಿಗೆ ಆದ್ಯತೆ ನೀಡಿ - ಕೃಷ್ಣ ಭೈರೇಗೌಡ
*************************
ಕೊಪ್ಪಳ, ಫೆ. 27 (ಕರ್ನಾಟಕ ವಾರ್ತೆ): ಕೃಷಿಯಲ್ಲಿ ಕಡಿಮೆ ನೀರು ಬಳಕೆಯಾಗುವ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಬೇಸಾಯ ಕ್ರಮಕ್ಕೆ ರೈತರು ಹೆಚ್ಚಿನ ಆದ್ಯತೆ ನೀಡುವಂತೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ರೈತರಲ್ಲಿ ಮನವಿ ಮಾಡಿದರು.
ಯಲಬುರ್ಗಾ ತಾಲೂಕು ಮ್ಯಾದನೇರಿ ಗ್ರಾಮದ ಬಸವರಾಜ ದ್ಯಾಮಣ್ಣ ಪೂಜಾರ ಅವರ ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆಗೆ ತುಂತುರು ನೀರಾವರಿ ಘಟಕ ಅಳವಡಿಕೆ ವೀಕ್ಷಣೆ ಹಾಗೂ ರೈತರೊಂದಿಗೆ ಸೂಕ್ಷ್ಮ ನೀರಾವರಿ ಅಳವಡಿಕೆ ಕುರಿತು ಸಂವಾದ ನಡೆಸಿ, ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆ ಕಾಡುವುದು ಸಾಮಾನ್ಯವಾಗಿದೆ. ಇದರಿಂದಾಗಿ ಪದೇ ಪದೇ ಬರ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ರೈತರು ಇಂತಹ ಪರಿಸ್ಥಿತಿಯ ನಡುವೆಯೂ, ನೂತನ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ, ಆರ್ಥಿಕವಾಗಿ ಲಾಭ ಕಂಡುಕೊಳ್ಳಬೇಕಿದೆ. ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನು, ಹೊಲಗಳಲ್ಲಿ ಹಾಯಿಸುವ ಪದ್ಧತಿಯಲ್ಲಿ ಕೃಷಿ ಮಾಡಿದರೆ, ನೀರು ಹೆಚ್ಚು ವ್ಯರ್ಥವಾಗಿ ಹರಿಯುವುದಲ್ಲದೆ, ಬೆಳೆಯ ಇಳುವರಿಯೂ ಅಷ್ಟಕ್ಕಷ್ಟೇ ಆಗಿರುತ್ತದೆ. ಅದರ ಬದಲಿಗೆ ಹನಿ ನೀರಾವರಿ ಅಳವಡಿಕೆ ಅಥವಾ ತುಂತುರು ನೀರಾವರಿ ವ್ಯವಸ್ಥೆಯನ್ನು ಅಳವಡಿಸಿದರೆ, ಬೆಳೆಯೂ ಚೆನ್ನಾಗಿ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಬೆಳೆಗಳಾದ ಶೇಂಗಾ, ಜೋಳ, ಮುಸುಕಿನಜೋಳ, ತೊಗರಿ, ಕಡಲೆ, ರಾಗಿ ಹೀಗೆ ಯಾವುದೇ ಬೆಳೆಯಾದರೂ ತುಂತುರು ನೀರಾವರಿಯಿಂದ ಬೆಳೆಯನ್ನು ಉತ್ತಮವಾಗಿ ಪಡೆಯಬಹುದು ಎಂಬುದು ಸಾಬೀತಾಗಿದೆ. ಈ ಕುರಿತಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡುವ ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಿದೆ. ಕೃಷಿಹೊಂಡ, ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಯೋಜನೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಇಲಾಖೆ ವತಿಯಿಂದ ಸುಮಾರು 01 ಲಕ್ಷ ರೈತರಿಗೆ 320 ಕೋಟಿ ರೂ. ಅನುದಾನವನ್ನು ಹನಿ ನೀರಾವರಿ ವ್ಯವಸ್ಥೆ ಅಳವಡಿಕೆಗಾಗಿಯೇ ಬಿಡುಗಡೆ ಮಾಡಿದ್ದೇವೆ. ಬರುವ ಮಾರ್ಚ್ ವೇಳೆಗೆ ರಾಜ್ಯದಲ್ಲಿ 50 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಗುರಿ ಸಾಧನೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರೇ ಕೃಷಿ ಹೊಂಡಗಳನ್ನು ನಿರ್ಮಿಸಲು ಹೆಚ್ಚಿನ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಮಳೆಯ ಪ್ರಮಾಣ ನಿರೀಕ್ಷಿತ ಪ್ರಮಾಣ ಹಾಗೂ ಕಾಲಕ್ಕೆ ತಕ್ಕಂತ ಆಗದಿದ್ದಲ್ಲಿ, ಕೃಷಿ ಹೊಂಡದಲ್ಲಿ ಲಭ್ಯವಿರುವ ನೀರನ್ನು, ಹನಿ ನೀರಾವರಿ ಅಥವಾ ತುಂತುರು ನೀರಾವರಿ ವ್ಯವಸ್ಥೆಗೆ ಬಳಕೆ ಮಾಡಿಕೊಂಡು, ಬೆಳೆ ರಕ್ಷಿಸಿಕೊಳ್ಳುವ ಜೊತೆಗೆ, ಉತ್ತುಮ ಇಳುವರಿ ಪಡೆಯಬಹುದಾಗಿದೆ. ಇಂತಹ ಜನಪ್ರಿಯ ಹಾಗೂ ಅತ್ಯುಪಯುಕ್ತ ಯೋಜನೆಯ ಬಗ್ಗೆ ರೈತರೇ ತಮ್ಮ ತಮ್ಮ ಅನುಭವವನ್ನು ಇತರೆ ರೈತರೊಂದಿಗೆ ಹಂಚಿಕೊಳ್ಳಬೇಕು. ಇತರೆ ರೈತರಿಗೆ ಉತ್ತೇಜನ ನೀಡುವಂತಾಗಬೇಕು ಎಂದು ಕೃಷಿ ಸಚಿವ ಭೈರೇಗೌಡ ಅವರು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಸಚಿವ ಕೃಷ್ಣ ಭೈರೇಗೌಡ ಅವರು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಬೀರಪ್ಪ ಅಂಗಡಿ ಅವರ ಕೃಷಿ ಭೂಮಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕೃಷಿ ಹೊಂಡದ ವೀಕ್ಷಣೆ ಹಾಗೂ ಇದೇ ಗ್ರಾಮದ ದೇವಪ್ಪ ನೀಲನಗೌಡ ಅವರ ಕೃಷಿ ಭೂಮಿಯಲ್ಲಿ ಉತ್ತಮವಾಗಿ ನಿರ್ಮಿಸಲಾಗಿರುವ ಕೃಷಿ ಹೊಂಡದ ವೀಕ್ಷಣೆ ಮಾಡಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿ.ಪಂ. ಸದಸ್ಯ ಗವಿಸಿದ್ದಪ್ಪ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ ಸೇರಿದಂತೆ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು, ಪ್ರಗತಿಪರ ರೈತರು ಉಪಸ್ಥಿತರಿದ್ದರು.
2017; ಪ್ರಧಾನಮಂತ್ರಿ ಉಜ್ವಲ ಯೋಜನೆ : ಅನಿಲ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ
***************************
ಕೊಪ್ಪಳ, ಫೆ.25(ಕರ್ನಾಟಕ ವಾರ್ತೆ): ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯದ ಸಾಮಾಜಿಕ, ಆರ್ಥಿಕ, ಜಾತಿ, ಗಣತಿ-2011ರ ದತ್ತಾಂಶದ (ಎನ್.ಐ.ಸಿ) ಅಡಿಯಲ್ಲಿ ಅಡುಗೆ ಅನಿಲ ಸಂಪರ್ಕ ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೆ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹೆಸರಿದ್ದು, ಇದುವರೆಗೂ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಕುಟುಂಬದವರು ಉಜ್ಜಲ ಯೋಜನೆಯಡಿ ಅನಿಲ ಸಂಪರ್ಕ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆಯಡಿ ಅನಿಲ ಸಂಪರ್ಕವನ್ನು ಕುಟುಂಬದ ವಯಸ್ಕ ಮಹಿಳೆಯ ಹೆಸರಿನಲ್ಲಿ ಮಾತ್ರ ನೀಡಲು ಅವಕಾಶವಿರುತ್ತದೆ. ಅರ್ಹ ಫಲಾನುಭವಿಗಳು ಸಮೀಪದ ಅಡುಗೆ ಅನಿಲ ವಿತರಣಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅಗತ್ಯವಾದ ಆಧಾರ ಕಾರ್ಡ ಇತರೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಅನಿಲ ಸಂಪರ್ಕವನ್ನು ಪಡೆಯಬಹುದು. ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2017; ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲ- ಎಂ. ಕನಗವಲ್ಲಿ
*****************************
ಕೊಪ್ಪಳ ಫೆ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆಯುವ ಗುರಿಯನ್ನಿಟ್ಟುಕೊಂಡು, ಅದಕ್ಕೆ ತಕ್ಕಂತೆ ಕಾರ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮುಖ್ಯೋಪಾಧ್ಯಾಯರಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗುರುವಾರದಂದು ಏರ್ಪಡಿಸಲಾದ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಸ್ಎಸ್ಎಲ್ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಶೈಕ್ಷಣಿಕ ಜೀವನದ ಮಹತ್ವದ ಮೈಲಿಗಲ್ಲಾಗಿದೆ. ಕೊಪ್ಪಳ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳು ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶವನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡು, ನಿಗದಿತ ಗುರಿ ಸಾಧನೆಗೆ ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಶಾಲಾ ಶಿಕ್ಷಕರು ಶ್ರಮ ವಹಿಸಿ, ತಮ್ಮ ತಮ್ಮ ಶಾಲಾ ಮಕ್ಕಳನ್ನು ಎಸ್ಎಸ್ಎಲ್ಸಿ ಪರೀಕ್ಷೆಗೆ ಸೂಕ್ತ ರೀತಿಯಲ್ಲಿ ಸಿದ್ಧಗೊಳಿಸಬೇಕು. ಕಳೆದ ವರ್ಷ ಫಲಿತಾಂಶದಲ್ಲಿ ಸ್ಪಲ್ಪಮಟ್ಟಿಗೆ ಸುಧಾರಣೆಯಾಗಿ ಜಿಲ್ಲೆ 25ನೇ ಸ್ಥಾನ ಪಡೆದಿತ್ತು. ಈ ವರ್ಷದ ಪರೀಕ್ಷಾ ಫಲಿತಾಂಶದಲ್ಲಿ ಶೇಕಡಾ 100 ಕ್ಕೆ 100 ರಷ್ಟು ತರುವುದು ಎಲ್ಲಾ ಮುಖ್ಯ ಶಿಕ್ಷಕರ ಜವಾಬ್ದಾರಿಯಾಗಿದ್ದು, ಈ ವರ್ಷ ಕನಿಷ್ಟ 10 ರೊಳಗೆ ಕೊಪ್ಪಳ ಜಿಲ್ಲೆ ಸ್ಥಾನ ಪಡೆದುಕೊಳ್ಳಬೇಕು. ತಮ್ಮ ವಿದ್ಯಾಭ್ಯಾಸದ ಅನುಭವಗಳನ್ನು ತಿಳಿಸಿದ ಜಿಲ್ಲಾಧಿಕಾರಿಗಳು ಸರಕಾರಿ ಶಾಲೆಯಲ್ಲಿಯೇ ಅಭ್ಯಾಸ ಮಾಡಿ ಗುಣಮಟ್ಟದ ಶಿಕ್ಷಣ ಪಡೆದು ಇದೀಗ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ತಂದೆಯವರು ಶಿಕ್ಷಕರಾಗಿದ್ದರು. ಅವರು ಸರಕಾರಿ ಶಾಲೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅವರ 33 ವರ್ಷಗಳ ಸೇವಾ ಅನುಭವದಲ್ಲಿ ಹಲವಾರು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದಿದ್ದಾರೆ. ಅವರು ಮಾಡಿರುವ ಸೇವೆಯಿಂದಾಗಿ ನಮಗೆ ಉತ್ತಮ ಶಿಕ್ಷಣವನ್ನು ಆ ದೇವರು ಕರುಣಿಸಿದ್ದಾರೆ ಎಂದು ಹೇಳಬಹುದು. ಅದೇ ರೀತಿ ಎಲ್ಲ ಶಿಕ್ಷಕರು, ತಮ್ಮ ಶಾಲೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಅವರು ಉತ್ತಮ ಪ್ರಜೆಗಳಾಗಿ, ಭವಿಷ್ಯ ಉಜ್ವಲಗೊಳ್ಳಲಿದೆ. ವರ್ಷ ಪೂರ್ತಿ ಮಕ್ಕಳಿಗೆ ಪಾಠ ಬೋಧನೆ ಮಾಡಿದ್ದರೂ, ಈಗ ಕೊನೆಯ ಹಂತದಲ್ಲಿ ಎಲ್ಲಾ ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ ವಹಿಸಿ ಪರೀಕ್ಷಾ ತಯಾರಿಯನ್ನು ಮಾಡಿಸಿವುದು ಉತ್ತಮ. ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚಿಸುವಂತಹ ಕಾರ್ಯಗಳನ್ನು ಶಿಕ್ಷಕರು ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಪ್ರಾಥಮಿಕ ಶಾಲಾ ಹಂತದಿಂದಲ್ಲೇ ಮಕ್ಕಳಿಗೆ ಉತ್ತಮ ಕಲಿಕೆ ನೀಡುತ್ತಾ ಬಂದರೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸುಲಭವಾಗುವುದು ಇದರಿಂದ ಮಕ್ಕಳಿಗೆ ನೀಡುವ ಶಿಕ್ಷಣ ಸರಿಯಾದ ನಿಟ್ಟಿನಲ್ಲಿ ಪ್ರಾರಂಭಿಸಿ ಜಿಲ್ಲೆಯ ಫಲಿತಾಂಶ ಸುಧಾರಿಸಬೇಕು. ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಶಾಲೆಗಳಿಗೆ ಬಹುಮಾನ ನೀಡಲಾಗುವುದು. ಶಿಕ್ಷಕರು ತಮ್ಮ ಜ್ಞಾನದ ಅನುಭವಗಳನ್ನು ಮಕ್ಕಳಿಗೆ ವರ್ಗಾವಣೆ ಮಾಡಿ ಉತ್ತಮ ಕಲಿಕೆಯಾಗಿ ಮಾರ್ಪಾಡಾಗುವಂತೆ ಮಾಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿಯವರು ಮಾತನಾಡಿ, ಸರಕಾರಿ ಶಾಲೆಗೆ ನೇಮಕ ಆಗುವ ಶಿಕ್ಷಕರು ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಮೇರಿಟ್ ಇರುವ ಪ್ರತಿಭಾವಂತರು ಆಯ್ಕೆ ಆಗಿರುತ್ತಾರೆ. ಅಂತಹವರು ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾದ ರೀತಿಯಲ್ಲಿ ಅಬ್ಯಾಸ ಮಾಡಿಸಿ, ಸುಲಭವಾಗಿ ನೆನಪಿನಲ್ಲಿಟ್ಟುಕೊಂಡು ಪರೀಕ್ಷಾ ಭಯವಿಲ್ಲದೇ ಉತ್ತಮ ಅಂಕ ಗಳಿಸಲು ಅನುಕೂಲವಾಗುವ ರೀತಿ ಮಾರ್ಗದರ್ಶನ ಮಾಡಬೇಕು ಎಂದರು.
ಡಿಡಿಪಿಐ ಶ್ಯಾಮಸುಂದರ್ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ವಿವರಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆ ನೋಡಲ್ ಅಧಿಕಾರಿ ರಾಹತ್ ನವಾಜ್ ಖಾನಂ, ಎಂ.ಎಸ್.ಬಡದಾನಿ, ಅಶೋಕ ಕುಲಕರ್ಣಿ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
2017; ಕೊಪ್ಪಳ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಪರಿಷ್ಕರಣೆ: ಆಕ್ಷೇಪಣೆಗೆ ಆಹ್ವಾನ
**************************
ಕೊಪ್ಪಳ, ಫೆ.23(ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿನ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಪಟ್ಟಿ ಪ್ರಕಟಣೆಗೊಂಡಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಕೊಪ್ಪಳ ಹಿರಿಯ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದಿಂದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿಯನ್ನು 2017-18 ನೇ ಸಾಲಿಗೆ ಪರಿಷ್ಕರಿಸಲು ಕೇಂದ್ರೀಯ ಮೌಲ್ಯ ಮಾಪನ ಸಮಿತಿಯ ಉಪಸಮಿತಿ ವತಿಯಿಂದ, ಫೆ.22 ರಂದು ತಹಶಿಲ್ದಾರರ ಕಛೇರಿಯಲ್ಲಿ ಜರುಗಿದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಚಾಲ್ತಿಯಲ್ಲಿರುವ ದರಗಳನ್ನು ಆಧಾರವಾಗಿಟ್ಟುಕೊಂಡು ವಾಸ್ತವಿಕ ದರಗಳನ್ನು ಪರಿಶೀಲಿಸಿ, ಅವಶ್ಯವಿರುವ ಪ್ರದೇಶಗಳಿಗೆ ಮಾರ್ಗಸೂಚಿ ದರವನ್ನು ಪರಿಷ್ಕರಿಸಲು ನಿರ್ಧರಿಸಲಾಗಿದೆ.
ಕೊಪ್ಪಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಪಟ್ಟಿಯನ್ನು ಸಾರ್ವಜನಿಕರಿಗೆ ಮಾಹಿತಿಗಾಗಿ ಉಪನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಕಟಿಸಿದ್ದು, ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ರೂಪದಲ್ಲಿ 15 ದಿನದೊಳಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿ, ತಹಶಿಲ್ದಾರರ ಕಛೇರಿ ಆವರಣ, ಕೊಪ್ಪಳ ಇವರಿಗೆ ಸಲ್ಲಿಸಲು ಸದಸ್ಯ ಕಾರ್ಯದರ್ಶಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯನಿರ್ಧಾರಣಾ ಉಪಸಮಿತಿ ಹಾಗೂ ಉಪನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2017; ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮ
***************************
ಕೊಪ್ಪಳ, ಫೆ.23(ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮವನ್ನು ತಾಲೂಕಿನ ಕಾತರಕಿ-ಗುಡ್ಲಾನೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾರ್ಚ್.01 ರಂದು ಬೆಳಿಗ್ಗೆ 9.30 ಗಂಟೆಗೆ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾವಗೀತೆ, ಜಾನಪದ ಗೀತೆ, ರಂಗಗೀತೆ, ಜಾನಪದ ನೃತ್ಯ, ಗೀಗಿ ಪದಗಳು, ಲಾವಣಿ, ಕೋಲಾಟ, ಭಜನೆ, ಜೋಳ-ರಾಗಿ ಬೀಸುವ ಪದ, ಸೋಬಾನ ಪದಗಳು, ಏಕಪಾತ್ರಾಭಿನಯ, ವೀರಗಾಸೆ ಪುರವಂತಿಕೆ, ಡೋಳ್ಳು ಕುಣಿತ, ದೊಡ್ಡಾಟ, ಸಣ್ಣಾಟ, ಚರ್ಮವಾದ್ಯ ಮೇಳ, ಯಕ್ಷಗಾನ ಸೇರಿದಂತೆ ಒಟ್ಟು 17 ಸ್ಪರ್ಧೆಗಳನ್ನು ನಡೆಸಲಾಗುವುದು.
ಕೊಪ್ಪಳ ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ದೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಹಾಗೂ ಗುಂಪು ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಯುವಕ-ಯುವತಿಯರು ಮಾತ್ರ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಬಹುದು. ಸ್ಪರ್ದಾಳುಗಳು ತಮ್ಮ ವೇಶ ಭೂಷಣ, ವಾದ್ಯ ಮೇಳಗಳೊಂದಿಗೆ ಮಾ.01 ರಂದು ಬೆಳಿಗ್ಗೆ 9.00 ಗಂಟೆಯೊಳಗೆ ಸಂಘಟಕರಲ್ಲಿ ವರದಿ ಮಾಡಿಕೊಂಡು ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ವಯೋಮಿತಿ 15 ರಿಂದ 35 ವರ್ಷದೊಳಗಿರಬೇಕು.
ಭಾಗವಹಿಸುವ ಅರ್ಹ ಸ್ಪರ್ಧಾಳುಗಳಿಗೆ, ಆಯಾ ತಾಲ್ಲೂಕು ಕೇಂದ್ರ ಸ್ಥಾನದಿಂದ ಸಂಘಟನೆ ನಡೆಯುವ ಕೇಂದ್ರ ಸ್ಥಾನಕ್ಕೆ ಬಂದು ಹೋಗುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಘಟಕರ ಮೊಬೈಲ್ ಸಂಖ್ಯೆ 9731918176, 9980675209 ಅಥವಾ ಕೊಪ್ಪಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
2017; ಬರ ಪರಿಸ್ಥಿತಿಗೆ ಪರಿಸರ ಅಸಮತೋಲನ ಕಾರಣ- ಗುರುದತ್ ಹೆಗಡೆ
***************************
ಕೊಪ್ಪಳ, ಫೆ.22(ಕರ್ನಾಟಕ ವಾರ್ತೆ): ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡದ ಕಾರಣ, ಪರಿಸರ ಅಸಮತೋಲನದಿಂದಾಗಿ ಪದೇ ಪದೇ ಬರ ಪರಿಸ್ಥಿತಿ ತಲೆದೋರುತ್ತಿದೆ ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಗುರುದತ್ ಹೆಗಡೆ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಬೇವೂರಿನ ಕೂಡಲಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ವತಿಯಿಂದ ಜಿಲ್ಲಾಡಳಿತ ಭವನ ಆಡಿಟೋರಿಯಂ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾದ ಜಿಲ್ಲಾ ಪರಿಸರ ಮಿತ್ರ ಶಾಲೆ 2016-17 ರ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನೈಸರ್ಗಿಕ ಸಂಪನ್ಮೂಲಗಳ ಬಳಕೆ, ರಕ್ಷಣೆ, ಅಭಿವೃದ್ಧಿ ಮುಂತಾದ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ನಮ್ಮ ಸಮಾಜ ಪರಿಸರ ಮತ್ತು ನೈರ್ಮಲ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡದಿರುವುದು ಕಳವಳಕಾರಿ ಸಂಗತಿಯಾಗಿದೆ. ನಮ್ಮ ನಾಡು ಪದೇ ಪದೇ ಬರಕ್ಕೆ ತುತ್ತಾಗಲು ಪರಿಸರವನ್ನು ಕಾಯ್ದುಕೊಳ್ಳದಿರುವುದು ಹಾಗೂ ಪರಿಸರದ ಅಸಮತೋಲನವೇ ಪ್ರಮುಖ ಕಾರಣಗಳಲ್ಲೊಂದಾಗಿದೆ. ಪರಿಸರದ ರಕ್ಷಣೆ ಕುರಿತು ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಲು ಶಿಕ್ಷಕರು ಮುಂದಾಗಬೇಕು. ಕಲೆ, ಸಾಹಿತ್ಯ, ನೃತ್ಯ, ಸಂಗೀತದಂತಹ ಸೃಜನಶೀಲ ಚಟುವಟಿಕೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ಪರಿಸರ ಸ್ವಚ್ಛಗೊಳಿಸುವಂತಹ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಹೆಚ್ಚು ಹಮ್ಮಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಗುರುದತ್ ಹೆಗಡೆ ಅವರು ಕರೆ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಪರಿಸರ ಮಿತ್ರ ಶಾಲೆ- ನನಸಾದ ಕನಸುಗಳು ಎನ್ನುವ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿ, ಶಾಲೆಯಲ್ಲಿ ಹೆಚ್ಚು, ಹೆಚ್ಚು ಗಿಡಗಳನ್ನು ನೆಟ್ಟು, ಶಾಲೆಯ ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡಿರುವ ಶಾಲೆಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಶಾಲೆ, ಪರಿಸರ ಮಿತ್ರ ಶಾಲೆ, ಹಳದಿ ಶಾಲೆ ಎನ್ನುವ ಪ್ರಶಸ್ತಿಯನ್ನು ನೀಡಿ ಪ್ರೊತ್ಸಾಹ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ. ಇಂತಹ ಪ್ರಶಸ್ತಿಯನ್ನು ಎಲ್ಲ ಶಾಲೆಗಳೂ ಪಡೆಯುವಂತಾಗಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಗುರುಬಸವರಾಜ ಮಾತನಾಡಿ, ಶಾಲೆಗಳಲ್ಲಿ ಪರಿಸರವನ್ನು ಉತ್ತಮವಾಗಿರಿಸಿಕೊಳ್ಳಲು, ಶಿಕ್ಷಕರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಮಕ್ಕಳ ಆಸಕ್ತಿ ಮುಖ್ಯ ಪಾತ್ರ ವಹಿಸಲಿದೆ. ಶಾಲೆಗಳಲ್ಲಿ ಲಭ್ಯವಿರುವ ನೀರನ್ನು ವ್ಯರ್ಥವಾಗಿ ಹರಿಸದೆ, ಕೈತೋಟ ನಿರ್ಮಾಣ, ಹೆಚ್ಚು, ಹೆಚ್ಚು ಗಿಡಗಳನ್ನು ನೆಡುವುದು, ಶಾಲೆಯ ವಾತಾವರಣವನ್ನು ಹಸಿರಾಗಿಸುವ ಕಾರ್ಯವನ್ನು ಎಲ್ಲ ಶಾಲೆಗಳು ಹಮ್ಮಿಕೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜೇಶ್ ಅಂಗಡಿ ಸ್ವಾಗತಿಸಿದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗಂಗಾವತಿ ತಾಲೂಕಿನ ಕರಡಿಗುಡ್ಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಸಕ್ತ ಸಾಲಿನ“ಜಿಲ್ಲಾ ಪರಿಸರ ಮಿತ್ರ ಶಾಲೆ” ಪ್ರಶಸ್ತಿಯ ಜೊತೆಗೆ 30 ಸಾವಿರ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ಉಳಿದಂತೆ ಜಿಲ್ಲೆಯ ಗಂಗಾವತಿ ತಾಲೂಕಿನ ಗುಡ್ಡದ ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಯಲಬುರ್ಗಾ ತಾಲೂಕಿನ ಬೇವೂರಿನ ಕೂಡಲಸಂಗಮೇಶ್ವರ ಪ್ರೌಢ ಶಾಲೆ, ಮುರಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬುಕನಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಂಡಲಮರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಕೊಪ್ಪಳ ತಾಲೂಕು ಕೊಪ್ಪಳದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಹೊಸಮುದ್ಲಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಿನ್ನಾಪುರ ಚಿಕ್ಕತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಇರಕಲ್ಗಡ ಈಶ್ವರ ಪ್ರಾಥಮಿಕ ಶಾಲೆ, ಹಾಗೂ ಹೊಸಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಸಿರು ಶಾಲೆಯ ಪ್ರಶಸ್ತಿಯ ಜೊತೆಗೆ ತಲಾ 05 ಸಾವಿರ ನಗದು ಬಹುಮಾನವನ್ನು ಪಡೆದುಕೊಂಡವು. ಯಲಬುರ್ಗಾ ತಾಲೂಕಿನ ಗೆದಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೇವೂರ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಕುದುರೆಮೋತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಕೊಪ್ಪಳ ತಾಲೂಕಿನ ಅಗಳಕೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಳೇಬಾವಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಳೇಲಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಕುಷ್ಟಗಿ ತಾಲೂಕಿನ ಕಾಟಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಬಲಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಗಂಗಾವತಿ ತಾಲೂಕಿನ ಹುಳ್ಕಿಹಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನರಸಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ “ಹಳದಿ ಶಾಲೆ’ ಪ್ರಶಸ್ತಿಯ ಜೊತೆಗೆ ತಲಾ 04 ಸಾವಿರ ರೂ. ನಗದು ಬಹುಮಾನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಯಲಬುರ್ಗಾ ತಾಲೂಕು ಮಂಗಳೂರಿನ ಕಲ್ಲಪ್ಪ ಕವಳಕೇರಿ ಅವರು ಬರೆದ ಹಕ್ಕಿಗೂಡು- ಪರಿಸರ ಉಳಿಸಿ ಜೀವಿಗಳ ರಕ್ಷಿಸಿ ಮಕ್ಕಳ ಕವನ ಸಂಕಲನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
2017; ಡೆಹಾರಡೂನ್ ಮಿಲಿಟರಿ ಶಾಲೆ 8ನೇ ತರಗತಿ ಪ್ರವೇಶ ಪರೀಕ್ಷೆ : ಅರ್ಜಿ ಆಹ್ವಾನ
****************************
ಕೊಪ್ಪಳ, ಫೆ.22(ಕರ್ನಾಟಕ ವಾರ್ತೆ): ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಂಗಳೂರು ಇವರ ವತಿಯಿಂದ, ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಡೆಹಾರಡೂನ್ ಕಾಲೇಜ್ 8ನೇ ತರಗತಿ ಪ್ರವೇಶಕ್ಕಾಗಿ ಕರ್ನಾಟಕದ ಬಾಲಕರಿಗೆ ಜೂನ್ ತಿಂಗಳಲ್ಲಿ ನಡೆಯಲಿರುವ ಪ್ರವೇಶ ಪರಿಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
ಜನೇವರಿ-2018ನೇ ಅವಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹಾರಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜೂನ್.01 ಮತ್ತು 02 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿವೆ. ಪರೀಕೆಗಾಗಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು 01-01-2018 ರಂತೆ 11.5 ರಿಂದ 13 ವರ್ಷದೊಳಗಿರಬೇಕು (ಅಂದರೆ ದಿನಾಂಕ 02-06-2005 ರಿಂದ 01-07-2006 ರೊಳಗೆ ಜನಿಸಿರಬೇಕು). ಬಾಲಕರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಸಂಸ್ಥೆಯ ಮುಖ್ಯ ಗುರಿ ಯುವಕರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ಧಗೊಳಿಸುವುದು ಹಾಗೂ ಸರ್ವರೀತಿಯ ವಿದ್ಯಾಭ್ಯಾಸ ನೀಡುವುದು. ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ ರೂ. 42,400 ಆಗಿರುತ್ತದೆ.
ವಿವರಣೆ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಅರ್ಜಿ ನಮೂನೆಯನ್ನು ಕೋರಿಕೆ ಪತ್ರದ ಮೇರೆಗೆ ನಿರ್ದೇಶಕ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು 560 025, ಇಲ್ಲಿಂದ ದಿ ಕಮಾಂಡೆಂಟ್, ಆರ್ಐಎಂಸಿ ಡೆಹ್ರಾಡೂನ್ (ಪೇಯಬಲ್ ಅಟ್ ಎಸ್ಬಿಐ ಟೆಲ್ ಭವನ್, ಡೆಹ್ರಾಡೂನ್- ಬ್ಯಾಂಕ್ ಕೋಡ್- 01576), ಇವರ ಹೆಸರಿನಲ್ಲಿ ಪಡೆದ ರೂ. 550 (ಸಾಮಾನ್ಯ ಅಭ್ಯರ್ಥಿಗಳಿಗೆ) & ರೂ.505 (ಎಸ್/ಎಸ್ಟಿ ಅಭ್ಯರ್ಥಿಗಳಿಗೆ) ಡಿಮಾಂಡ್ ಡ್ರಾಪ್ಟ್ ಮೂಲಕ ಖುದ್ದಾಗಿ ಪಡೆಯಬಹುದಾಗಿದೆ. ರಿಜಿಸ್ಟರ್ಡ್ ಪಾರ್ಸಲ್ ಮೂಲಕ ಅರ್ಜಿ ನಮೂನೆಗಳನ್ನು ಪಡೆಯಲಿಚ್ಚಿಸುವ ಅಭ್ಯಾರ್ಥಿಗಳು ಮೇಲೆ ತಿಳಿಸಿದ ಬ್ಯಾಂಕ್ ಡ್ರಾಪ್ಟ್ನೊಂದಿಗೆ 11”/9” ಅಳತೆಯ ಸೈಜಿನ ಸ್ವವಿಳಾಸದ ಲಕೋಟೆಯ ಮೇಲೆ ರೂ.10 ಮೌಲ್ಯದ ಅಂಚೆ ಚೀಟಿ ಲಗತ್ತಿಸಿ ಕಳುಹಿಸಬೇಕು.
ಲಕೋಟೆಯ ಮೇಲೆ ಅಭ್ಯರ್ಥಿಯ ಪೂರ್ಣ ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ದ್ವಿಪ್ರತಿಯಲ್ಲಿ ಆಂಗ್ಲ ಭಾಷೆಯ ಜನನ ಪ್ರಮಾಣ ಪತ್ರ, ಪಾಸ್ಪೋರ್ಟ್ ಸೈಜಿನ ಭಾವಚಿತ್ರ, ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ ಧೃಢಿಕರಣ ಪ್ರತಿ (ಆಂಗ್ಲ ಭಾಷೆಯ), ಪರೀಕ್ಷಾ ಪ್ರವೇಶ ಪತ್ರವನ್ನು ರವಾನಿಸಲು ರೂ.40 ರ ಅಂಚೆ ಚೀಟಿ ಅಂಟಿಸಿದ ಸ್ವವಿಳಾಸ ಲಕೋಟೆ, ಶಾಲಾ ಮುಖ್ಯೋಪಾಧ್ಯಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪ್ರಮಾಣ ಪತ್ರ ಮೂಲ ಪ್ರತಿ ಹಾಗೂ ರಾಜ್ಯದ ವಾಸಸ್ಥಾನ ಧೃಢಿಕರಣ ಪತ್ರ (ತಹಶಿಲ್ದಾರರಿಂದ) ಲಗತ್ತಿಸಿ ಮಾರ್ಚ್ 31 ರ ಒಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸಬೇಕು.. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
2017; ತಾವರಗೇರಾ : ಖಾಸಗಿ ಬೋರ್ವೆಲ್ ವಶಕ್ಕೆ ಪಡೆಯಲು ಡಿಸಿ ಸೂಚನೆ
***********************
ಕೊಪ್ಪಳ ಫೆ. 22 (ಕರ್ನಾಟಕ ವಾರ್ತೆ): ತಾವರಗೇರಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಿನುಗು ಕೆರೆ ಪಕ್ಕದಲ್ಲಿ ಖಾಸಗಿ ವ್ಯಕ್ತಿಗಳು ಕೊರೆದಿರುವ ಬೋರ್ವೆಲ್ಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾವರಗೇರಾ ಪಟ್ಟಣಕ್ಕೆ ಬುಧವಾರದಂದು ಭೇಟಿ ನೀಡಿ, ಅಲ್ಲಿನ ಕುಡಿಯುವ ನೀರು ಪೂರೈಕೆ ಕುರಿತ ಸ್ಥಿತಿ-ಗತಿಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ತಾವರಗೇರಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಿನುಗು ಕೆರೆಯ ಪಕ್ಕದಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಬೋರ್ವೆಲ್ಗಳನ್ನು ಕೊರೆಯಿಸಿರುವುದನ್ನು ಪರಿಶೀಲಿಸಿದರು. ಈಗಾಗಲೇ ಕೆರೆಯ ಪಕ್ಕದಲ್ಲಿ ಖಾಸಗಿಯವರು ಕೊರೆದಿರುವ ಬೋರ್ವೆಲ್ಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡು ತಾವರಗೇರಾ ಪಟ್ಟಣಕ್ಕೆ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರವರಿಗೆ ಹಾಗೂ ಪ.ಪಂ. ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪಟ್ಟಣ ಪಂಚಾಯತ್ ವತಿಯಿಂದ ಕೆರೆಯ ಪಕ್ಕದಲ್ಲಿ ಬೋರ್ವೆಲ್ಗಳನ್ನು ಕೊರೆಯಿಸಲಾಗಿತ್ತು. ಆದರೆ ಈ ಬೊರ್ವೆಲ್ಗಳನ್ನು ದುಷ್ಕರ್ಮಿಗಳು ಮುಚ್ಚಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಮೊಕ್ಕದ್ದಮೆ ದಾಖಲಿಸಲಾಗಿದೆ. ಸರ್ಕಾರದ ಬೋರ್ವೆಲ್ಗಳನ್ನು ಮುಚ್ಚಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವಂತೆ ಕಾನೂನಾನ್ಮತಕ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು ನೀರಿನ ಅಭದ್ರತೆಯನ್ನು ತಪ್ಪಿಸಲು ತಾವರಗೇರಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಖಾಸಗಿ ಮಾಲೀಕತ್ವದಲ್ಲಿರುವ ಬೋರ್ವೆಲ್ಗಳನ್ನು ಬೇಸಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಸರ್ಕಾರದ ಸುಪರ್ದಿಗೆ ನೀಡಲು ಖಾಸಗಿ ಬೋರ್ವೆಲ್ ಮಾಲೀಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಅಲ್ಲದೆ ನೀರನ್ನು ಮಿತವಾಗಿ ಬಳಸುವಚಿತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸೋರಿಕೆಯನ್ನು ತಡೆಗಟ್ಟಲು ಹಾಗೂ ನೀರಿನ ಅಭಾವ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಬೇಕು. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಅಭಿವೃದ್ದಿ ಕಾರ್ಯಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸುವಂತೆ ಮುಖ್ಯಾಧಿಕಾರಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೂಚಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ, ಕುಷ್ಟಗಿ ತಹಶೀಲ್ದಾರ್ ಗಂಗಪ್ಪ, ಸೇರಿದಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದರು.
2017; ಕುಡಿಯುವ ನೀರು ಯೋಜನೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿ- ಶೇಖರಪ್ಪ ನಾಗರಳ್ಳಿ
********************************
ಕೊಪ್ಪಳ, ಫೆ.22(ಕರ್ನಾಟಕ ವಾರ್ತೆ): ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಗಳನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಕೊಠಡಿಯಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಗೆ ಪ್ರಸಕ್ತ ಸಾಲಿಗೆ ಗ್ರಾಮೀಣ ಕುಡಿಯುವ ನೀರು ಯೋಜನೆಗಳಿಗೆ ಸಂಬಂಧಿಸಿದಂತೆ 73. 92 ಕೋಟಿ ರೂ. ಅನುದಾನವನ್ನು ಸರ್ಕಾರ ಒದಗಿಸಿದೆ. ಈವರೆಗೆ 63. 18 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದುವರೆಗೂ 36. 57 ಕೋಟಿ ರೂ. ಮಾತ್ರ ವೆಚ್ಚವಾಗಿದೆ. ಬೇಸಿಗೆಯ ಕಾಲ ಈಗಾಗಲೆ ಪ್ರಾರಂಭವಾಗಿದ್ದು, ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯ ಕಾರಣದಿಂದ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈಗಲೆ ಕುಡಿಯುವ ನೀರಿನ ತೊಂದರೆ ಕಂಡುಬರುತ್ತಿದೆ. ಸರ್ಕಾರ ಒದಗಿಸಿರುವ ಅನುದಾನದಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಗಳನ್ನು ಕೂಡಲೆ ಪೂರ್ಣಗೊಳಿಸಿ, ಜನರಿಗೆ ನೀರು ಪೂರೈಸುವಂತಾಗಬೇಕು. ಲಭ್ಯವಿರುವ ಅನುದಾನ ವ್ಯರ್ಥವಾಗದಂತೆ ಮಾರ್ಚ್ ಅಂತ್ಯದೊಳಗೆ ಅನುದಾನವನ್ನು ಸದ್ಬಳಕೆ ಮಾಡಿಕೊಂಡು, ಕುಡಿಯುವ ನೀರು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕುಡಿಯುವ ನೀರು ಶುದ್ಧೀಕರಣ ಘಟಕಗಳಿಗೆ ಬಿಲ್ ಪಾವತಿಸಲು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್ಐಡಿಎಲ್) ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಬೇಸಿಗೆಯಲ್ಲಿ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ ಕಂಡುಬಂದಲ್ಲಿ, ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು, ಸಮಸ್ಯೆ ಪರಿಹರಿಸಬೇಕು. ಪ್ರತಿದಿನ ಸಾಗಾಣಿಕೆ ಮೂಲಕ ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸುತ್ತಿರುವ ಗ್ರಾಮಗಳ ವಿವರವನ್ನು ಜಿಲ್ಲಾ ಪಂಚಾಯತಿ ಸೂಚನಾ ಫಲಕದಲ್ಲಿ ನಮೂದಿಸಬೇಕು. ಬರ ಪರಿಹಾರ ಕಾರ್ಯಪಡೆ ನಿಧಿಯಲ್ಲಿ ಕುಡಿಯುವ ನೀರು ಕಾಮಗಾರಿಗಳನ್ನು ಕೈಗೊಂಡು, ನೀರಿನ ಸಮಸ್ಯೆಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತ್ವರಿತವಾಗಿ ಸ್ಪಂದಿಸಿ, ಸಮರ್ಪಕ ನೀರು ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಿ.ಬಿ. ಬಟ್ಟೂರ, ಸೇರಿದಂತೆ ಎಲ್ಲ ತಾಲೂಕುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ಪಾಲ್ಗೊಂಡಿದ್ದರು.
2017; ಛತ್ರಪತಿ ಶಿವಾಜಿ ಅಪ್ರತಿಮ ದೇಶಭಕ್ತ – ಕೆ. ರಾಘವೇಂದ್ರ ಹಿಟ್ನಾಳ್
*****************************
ಕೊಪ್ಪಳ,ಫೆ.19 (ಕರ್ನಾಟಕ ವಾರ್ತೆ): ಸ್ವರಾಜ್ಯ ಕಲ್ಪನೆಯ ರೂವಾರಿಯಾದ ಛತ್ರಪತಿ ಶಿವಾಜಿ ಅಪ್ರತಿಮ ದೇಶಭಕ್ತರಾಗಿದ್ದರು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಬಣ್ಣಿಸಿದರು.
ನಗರದ ಸರ್ಕಾರಿ ನೌಕರರ ಸಾಂಸ್ಕøತಿಕ ಭವನದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತರಾಗಿದ್ದರು. ರಾಷ್ಟ್ರಾಭಿಮಾನಕ್ಕೆ ಶಿವಾಜಿ ಎನ್ನುವ ಹೆಸರೇ ಪ್ರೇರಣಾ ಶಕ್ತಿಯಾಗಿದೆ. ಭಾರತದ ಇತಿಹಾಸದಲ್ಲಿ ಪ್ರಸಿದ್ಧ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿ, ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ ಬೆಳೆಸಿಕೊಂಡಿದ್ದರು. ಬಾಲ್ಯದಲ್ಲಿಯೇ ಸೈನ್ಯವನ್ನು ಕಟ್ಟಿದ ಕೀರ್ತಿ ಶಿವಾಜಿಯದ್ದು. ಸ್ವರಾಜ್ಯ ಕಲ್ಪನೆಯ ರೂವಾರಿಯಾಗಿದ್ದ ಶಿವಾಜಿಗೆ, ಆತನ ತಾಯಿಯೇ ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದಳು. ತನ್ನ ಹೋರಾಟ ಪ್ರವೃತ್ತಿಯಿಂದಲೇ ಸಾಮ್ರಾಜ್ಯ ಕಟ್ಟಿದ ಶಿವಾಜಿ, ಮೂಲಭೂತ ಹಕ್ಕನ್ನು ಹೋರಾಟದಿಂದಲೇ ಪಡೆಯುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದರು. ಸಾಧನೆಯ ಮೂಲಕ ತಾಯಿ ಜೀಜಾಬಾಯಿಗೆ ಗೌರವ ಅರ್ಪಿಸಿದ ಮಾತೃಪ್ರೇಮಿ ಛತ್ರಪತಿ ಶಿವಾಜಿ. ಇಂತಹ ಮಹನೀಯರ ಚರಿತ್ರೆಯನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವುದಲ್ಲದೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮರಾಠ ಸಮಾಜದವರಿಗೆ ಕೊಪ್ಪಳದಲ್ಲಿ ಸಮುದಾಯ ಭವನ ನಿರ್ಮಿಸುವ ಬೇಡಿಕೆ ಇದ್ದು, ಛತ್ರಪತಿ ಶಿವಾಜಿ ಸಮುದಾಯ ಭವನವನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ವಿಜಯಕುಮಾರ ಬೋಂದಾಡೆ ಅವರು, ಶಿವಾಜಿಯು ಧಾರ್ಮಿಕ ಸಮಾನತೆ, ಮೂಲಭೂತ ಹಕ್ಕುಗಳನ್ನು ಗೌರವಿಸುವಂತೆ ಮಾಡಿದ್ದರು. ಜಗತ್ತಿನಲ್ಲಿಯೇ ಮೊದಲ ಬಾರಿಗೆ ಎಲ್ಲ ಬಗೆಯ ಯುದ್ಧ ತಂತ್ರಗಳನ್ನು ಅಳವಡಿಸಿಕೊಂಡ ಶ್ರೇಷ್ಠ ರಣಕಲಿ ಶಿವಾಜಿ ಮಹಾರಾಜರು. ಶಿವಾಜಿಯು ರಾಷ್ಟ್ರದ ಪ್ರತಿಯೊಬ್ಬ ಯುವಕರಿಗೂ ದೇಶಪ್ರೇಮ ಬಿಂಬಿಸುವ ಪ್ರತೀಕ. ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿವಾಜಿಯೇ ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ತಹಸಿಲ್ದಾರ್, ಗುರುಬಸವರಾಜ, ನಗರಸಭೆ ಸದಸ್ಯರುಗಳಾದ ಅಮ್ಜದ್ ಪಟೇಲ್, ಮುತ್ತುರಾಜ್ ಕುಷ್ಟಗಿ, ಬಾಳಪ್ಪ ಬಾರಕೇರ, ಗವಿಸಿದ್ದಪ್ಪ ಚಿನ್ನೂರ, ಮಾರುತಿ, ರಾಮಣ್ಣ ಹದ್ದಿನ ಸೇರಿದಂತೆ ನಾಗರಾಜ ಬಡಿಗೇರ, ಪ್ರಸನ್ನ ಗಡಾದ, ಫಕೀರಪ್ಪ ಆರೇರ, ಮಾರುತಿ ನಿಕ್ಕಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷಣಮೂರ್ತಿ ದೇಸಾಯಿ ಸ್ವಾಗತಿಸಿ, ವಂದಿಸಿದರು. ಸಿ.ವಿ. ಜಡಿಯವರ್ ನಿರೂಪಿಸಿದರು. ಸದಾಶಿವ ಪಾಟೀಲ, ರಾಮಚಂದ್ರಪ್ಪ ಉಪ್ಪಾರ್ ಅವರ ತಂಡ ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿತು.
ಶಿವಾಜಿ ಜಯಂತಿ ಅಂಗವಾಗಿ ಶಿವಾಜಿ ಭಾವಚಿತ್ರದ ಮೆರವಣಿಗೆ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಭ ಮಾರ್ಗವಾಗಿ ತುಳಜಾಭವಾನಿ ದೇವಸ್ಥಾನದವರೆಗೆ ನೆರವೇರಿತು. ಹಲವು ಜಾನಪದ ಮತ್ತು ಸಾಂಸ್ಕøತಿಕ ಕಲಾತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.
2017; ಮಕ್ಕಳ ಹಕ್ಕುಗಳನ್ನು ಎಲ್ಲರೂ ಗೌರವಿಸಿ- ಬಿ. ದಶರಥ
*************************
ಕೊಪ್ಪಳ ಫೆ. 21 (ಕರ್ನಾಟಕ ವಾರ್ತೆ): ಬಾಲಕಾರ್ಮಿಕ ಪದ್ಧತಿ ಎನ್ನುವ ಅನಿಷ್ಠ ಸಾಮಾಜಿಕ ಪಿಡುಗನ್ನು ಸಮಾಜದಿಂದ ಸಂಪೂರ್ಣ ನಿರ್ಮೂಲನೆ ಮಾಡಬೇಕಿದ್ದು, ಈ ದಿಸೆಯಲ್ಲಿ ಎಲ್ಲರೂ ಮಕ್ಕಳ ಹಕ್ಕುಗಳಿಗೆ ಗೌರವ ನೀಡುವಂತಾಗಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳದ ಕೊಟಗಾರಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ಮತ್ತು ಹದಿಹರೆಯದವರ ದುಡಿಮೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಗೆ ಕಳೆದ ವರ್ಷ ತಿದ್ದುಪಡಿಯಾಗಿದೆ. ಈ ಮೊದಲು 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸುವಂತಿರಲಿಲ್ಲ. ಕಾಯ್ದೆ ತಿದ್ದುಪಡಿಯಿಂದಾಗಿ, ಇದೀಗ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಅಥವಾ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ 2 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆಯನ್ವಯ 18 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಶಿಕ್ಷಾರ್ಹ ಅಪರಾಧ, ಕಾಯ್ದೆ ಉಲ್ಲಂಘಿಸಿದಲ್ಲಿ 5 ವರ್ಷ ಜೈಲು ಹಾಗು 01 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಕ್ಕಳ ಹಕ್ಕುಗಳ ಬಗ್ಗೆ ಶಾಲಾ ಹಂತದಲ್ಲಿಯೇ ಶಿಕ್ಷಕರು ಅರಿವು ಮೂಡಿಸಬೇಕು. ಕಾನೂನನ್ನು ಗೌರವಿಸುವುದು ಎಲ್ಲರ ಕರ್ತವ್ಯವವಾಗಿದ್ದು, ಮಕ್ಕಳು ವಿದ್ಯಾವಂತರಾದರೆ, ಬಲಿಷ್ಟ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಹೇಳಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಲಂಕೇಶ್ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಎಂಬುದು ನಮ್ಮ ಸಮಾಜಕ್ಕೆ ಅಂಟಿದ ಸಾಮಾಜಿಕ ಪಿಡುಗು. ಹಾಗೂ ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದೆ. ಇದರ ನಿರ್ಮೂಲನೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ಕಾಯ್ದೆ, ಕಾನೂನುಗಳು ಜಾರಿಯಾಗಿದ್ದರೂ, ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿಲ್ಲ. ಮಕ್ಕಳು ಉತ್ತಮ ಪರಿಸರ, ವಾತಾವರಣದಲ್ಲಿ ಶಿಕ್ಷಣದ ನಡುವೆ ಬದುಕಬೇಕಾಗಿದೆ. ಹೋಟೆಲ್, ಕಾರ್ಖಾನೆ, ಕೋಳಿಫಾರಂ, ಫುಟ್ಪಾತ್ ವ್ಯಾಪಾರಕ್ಕೆ ಮಕ್ಕಳನ್ನು ದುಡಿಯಲು ಕಳುಹಿಸುವುದು ಕಂಡುಬರುತ್ತಿದೆ. ರಾಜ್ಯದಲ್ಲಿನ ಮಕ್ಕಳ ಪೈಕಿ ಶೇ. 10. 2 ರಷ್ಟು ಮಕ್ಕಳು ಬಾಲಕಾರ್ಮಿಕ ಪದ್ಧತಿಯಲ್ಲಿದ್ದಾರೆ ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಾಲಕಾರ್ಮಿಕತೆ ಹೆಚ್ಚು ಕಂಡುಬಂದಿದೆ. ಬಾಲ್ಯದಿಂದಲೇ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಜ್ಞಾನಸುಂದರ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಪ.ಜಾತಿ ಮತ್ತು ಪ.ಪಂಗಡದಲ್ಲಿ ಹೆಚ್ಚು ಕಂಡುಬರುತ್ತದೆ. ಬಡತನ, ಅನಕ್ಷರತೆ ಇದಕ್ಕೆ ಪ್ರಮುಖ ಕಾರಣವಾಗಿರಬಹುದಾಗಿದೆ. ಇಂತಹ ಸಮಾಜವನ್ನು ಶಿಕ್ಷಣದ ಮೂಲಕವೇ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟಗಾರಗೇರಾ ಶಾಲೆಯ ಮುಖ್ಯೋಪಾಧ್ಯಯ ಕೆ. ಮಹಾಬಳೇಶ್ವರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಸಮಾಜ ಕಲ್ಯಾಣ ಇಲಾಖೆಯ ಸೋಮಣ್ಣ, ಕಾರ್ಮಿಕ ಇಲಾಖೆಯ ಹೊನ್ನಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
2017; ಪ್ರೋತ್ಸಾಹ ಧನ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
*****************************
ಕೊಪ್ಪಳ, ಫೆ.21(ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮಂಜೂರಾತಿಗಾಗಿ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಫೆ. 28 ರವರೆಗೆ ವಿಸ್ತರಿಸಲಾಗಿದೆ.
ಸರ್ಕಾರದ ಆದೇಶಗಳ ಅನ್ವಯ 2015-16ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳ ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಅಥವಾ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರೋತ್ಸಾಹ ಧನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿ, ಜ. 25 ಕೊನೆ ದಿನವನ್ನಾಗಿ ನಿಗದಿಪಡಿಸಲಾಗಿತ್ತು. ಆದರೆ ಹಲವು ವಿಶ್ವವಿದ್ಯಾಲಯಗಳ ಫಲಿತಾಂಶ ಇನ್ನೂ ಪ್ರಕಟವಾಗದಿರುವ ಅಥವಾ ತಡವಾಗಿ ಪ್ರಕಟವಾಗಿರುವ ಹಾಗೂ ಪ್ರಮಾಣಪತ್ರಗಳನ್ನು ನೀಡದಿರುವ ಸಾಧ್ಯತೆಗಳು ಇರುವುದರಿಂದ, ಅರ್ಜಿ ಸಲ್ಲಿಕೆ ಅವಧಿಯನ್ನು ಫೆ. 28 ರವರೆಗೆ ವಿಸ್ತರಿಸಲಾಗಿದೆ. ದ್ವಿತೀಯ ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಕೃಷಿ, ಇಂಜಿನಿಯರಿಂಗ್, ವೈದ್ಯಕೀಯ, ಪಶುಸಂಗೋಪನೆ ಕೋರ್ಸ್ ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರೋತ್ಸಾಹಧನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಫೆ.28 ಕೋನೆಯ ದಿನವಾಗಿದ್ದು, www.sw.kar.nic.in ನಲ್ಲಿ ಸಲ್ಲಿಸಬೇಕು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯನ್ನು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಇವರಿಗೆ ಮಾ. 02 ರಂದು ಖುದ್ದಾಗಿ ಸಲ್ಲಿಸಬೇಕು. ಆನ್ಲೈನ್ನಲ್ಲಿ ಸ್ವೀಕೃತವಾದ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳು, ಕೊಪ್ಪಳ ಇವರ ಅಧ್ಯಕ್ಷತೆಯ ಸಮಿತಿಯಲ್ಲಿ ಮಂಡಿಸಿ, ನಂತರ ಪ್ರೋತ್ಸಾಹಧನವನ್ನು ಮಂಜೂರು ಮಾಡಲಾಗುವುದು ಎಂದು ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಹಕ್ಕುಗಳನ್ನು ಎಲ್ಲರೂ ಗೌರವಿಸಿ- ಬಿ. ದಶರಥ
*************************
ಕೊಪ್ಪಳ ಫೆ. 21 (ಕರ್ನಾಟಕ ವಾರ್ತೆ): ಬಾಲಕಾರ್ಮಿಕ ಪದ್ಧತಿ ಎನ್ನುವ ಅನಿಷ್ಠ ಸಾಮಾಜಿಕ ಪಿಡುಗನ್ನು ಸಮಾಜದಿಂದ ಸಂಪೂರ್ಣ ನಿರ್ಮೂಲನೆ ಮಾಡಬೇಕಿದ್ದು, ಈ ದಿಸೆಯಲ್ಲಿ ಎಲ್ಲರೂ ಮಕ್ಕಳ ಹಕ್ಕುಗಳಿಗೆ ಗೌರವ ನೀಡುವಂತಾಗಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳದ ಕೊಟಗಾರಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ಮತ್ತು ಹದಿಹರೆಯದವರ ದುಡಿಮೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಗೆ ಕಳೆದ ವರ್ಷ ತಿದ್ದುಪಡಿಯಾಗಿದೆ. ಈ ಮೊದಲು 14 ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ಬಳಸುವಂತಿರಲಿಲ್ಲ. ಕಾಯ್ದೆ ತಿದ್ದುಪಡಿಯಿಂದಾಗಿ, ಇದೀಗ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಅಥವಾ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ 2 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆಯನ್ವಯ 18 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಶಿಕ್ಷಾರ್ಹ ಅಪರಾಧ, ಕಾಯ್ದೆ ಉಲ್ಲಂಘಿಸಿದಲ್ಲಿ 5 ವರ್ಷ ಜೈಲು ಹಾಗು 01 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಕ್ಕಳ ಹಕ್ಕುಗಳ ಬಗ್ಗೆ ಶಾಲಾ ಹಂತದಲ್ಲಿಯೇ ಶಿಕ್ಷಕರು ಅರಿವು ಮೂಡಿಸಬೇಕು. ಕಾನೂನನ್ನು ಗೌರವಿಸುವುದು ಎಲ್ಲರ ಕರ್ತವ್ಯವವಾಗಿದ್ದು, ಮಕ್ಕಳು ವಿದ್ಯಾವಂತರಾದರೆ, ಬಲಿಷ್ಟ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಹೇಳಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಲಂಕೇಶ್ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಎಂಬುದು ನಮ್ಮ ಸಮಾಜಕ್ಕೆ ಅಂಟಿದ ಸಾಮಾಜಿಕ ಪಿಡುಗು. ಹಾಗೂ ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದೆ. ಇದರ ನಿರ್ಮೂಲನೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ, ಕಾಯ್ದೆ, ಕಾನೂನುಗಳು ಜಾರಿಯಾಗಿದ್ದರೂ, ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿಲ್ಲ. ಮಕ್ಕಳು ಉತ್ತಮ ಪರಿಸರ, ವಾತಾವರಣದಲ್ಲಿ ಶಿಕ್ಷಣದ ನಡುವೆ ಬದುಕಬೇಕಾಗಿದೆ. ಹೋಟೆಲ್, ಕಾರ್ಖಾನೆ, ಕೋಳಿಫಾರಂ, ಫುಟ್ಪಾತ್ ವ್ಯಾಪಾರಕ್ಕೆ ಮಕ್ಕಳನ್ನು ದುಡಿಯಲು ಕಳುಹಿಸುವುದು ಕಂಡುಬರುತ್ತಿದೆ. ರಾಜ್ಯದಲ್ಲಿನ ಮಕ್ಕಳ ಪೈಕಿ ಶೇ. 10. 2 ರಷ್ಟು ಮಕ್ಕಳು ಬಾಲಕಾರ್ಮಿಕ ಪದ್ಧತಿಯಲ್ಲಿದ್ದಾರೆ ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಾಲಕಾರ್ಮಿಕತೆ ಹೆಚ್ಚು ಕಂಡುಬಂದಿದೆ. ಬಾಲ್ಯದಿಂದಲೇ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಜ್ಞಾನಸುಂದರ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಪ.ಜಾತಿ ಮತ್ತು ಪ.ಪಂಗಡದಲ್ಲಿ ಹೆಚ್ಚು ಕಂಡುಬರುತ್ತದೆ. ಬಡತನ, ಅನಕ್ಷರತೆ ಇದಕ್ಕೆ ಪ್ರಮುಖ ಕಾರಣವಾಗಿರಬಹುದಾಗಿದೆ. ಇಂತಹ ಸಮಾಜವನ್ನು ಶಿಕ್ಷಣದ ಮೂಲಕವೇ ಮುಖ್ಯವಾಹಿನಿಗೆ ತರಲು ಸಾಧ್ಯ ಎಂದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟಗಾರಗೇರಾ ಶಾಲೆಯ ಮುಖ್ಯೋಪಾಧ್ಯಯ ಕೆ. ಮಹಾಬಳೇಶ್ವರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಸಮಾಜ ಕಲ್ಯಾಣ ಇಲಾಖೆಯ ಸೋಮಣ್ಣ, ಕಾರ್ಮಿಕ ಇಲಾಖೆಯ ಹೊನ್ನಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
2017; ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರಕ್ಕೆ 03 ಕೋಟಿ ರೂ. ಅನುದಾನ- ಎ. ಮಂಜು
**************************
ಕೊಪ್ಪಳ, ಫೆ.20 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದಿನಲ್ಲಿ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ 03 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಎ. ಮಂಜು ಅವರು ಹೇಳಿದರು.
ತಾಲೂಕಿನ ಮುನಿರಾಬಾದಿನ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಆವರಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ದೇಶಿ ತಳಿಗಳಿಂದ ಗುಣಮಟ್ಟದ ಹಾಲು ಉತ್ಪಾದನೆಯ ಜೊತೆಗೆ ಜನರ ಆರೋಗ್ಯ ಸುಧಾರಣೆ ಸಾಧ್ಯ ಎನ್ನುವ ಅಂಶವನ್ನು ತಜ್ಞರು ಸಂಶೋಧನೆಗಳಿಂದ ದೃಢಪಡಿಸಿದ್ದಾರೆ. ದೇಶಿ ತಳಿ ದನಗಳ ಸಂರಕ್ಷಣೆ ಹಾಗೂ ದೇಶಿ ತಳಿ ದನಗಳ ಉತ್ಪಾದಕತೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಅಮೃತ ಮಹಲ್, ಹಳ್ಳಿಕಾರ್, ದೇವಣಿ, ಖಿಲಾರ್, ಮಲ್ನಾಡ್ಗಿಡ್ಡ, ಕೃಷ್ಣಾ ವ್ಯಾಲಿಯಂತಹ ದೇಶಿ ತಳಿಯ ದನಗಳನ್ನು ಹೆಚ್ಚು, ಬಳಕೆಗೆ ತರುವಂತೆ ಮಾಡಲು ಪಶುಸಂಗೋಪನೆ ಇಲಾಖೆ ಉದ್ದೇಶಿಸಿದೆ. ಇದಕ್ಕಾಗಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮುನಿರಾಬಾದಿನಲ್ಲಿ ದೇಶಿ ತಳಿ ದನಗಳ ವೀರ್ಯ ಸಂಸ್ಕರಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದ್ದು, ಕಟ್ಟಡ ಹಾಗೂ ಅಗತ್ಯ ಉಪಕರಣಗಳ ಖರೀದಿಗೆ 03 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಬರುವ 06 ತಿಂಗಳ ಒಳಗಾಗಿ ಈ ಕೇಂದ್ರ ಪ್ರಾರಂಭಗೊಂಡು, ಲೋಕಾರ್ಪಣೆಯಾಗಲಿದೆ. ದೇಶಿ ಹೋರಿಗಳಿಂದ ವೀರ್ಯವನ್ನು ಸಂಗ್ರಹಿಸಿ, ಸಂಸ್ಕರಿಸಿ, ರಾಜ್ಯದ ಎಲ್ಲ ಜಿಲ್ಲೆಗಳಿಗೆ, ಆಯಾ ಪ್ರದೇಶದ ಭೌಗೋಳಿಕ ಹವಾಗುಣಕ್ಕೆ ಹೊಂದಿಕೊಳ್ಳುವಂತಹ ದೇಶೀಯ ತಳಿಗಳ ದನಗಳನ್ನು ಆಯಾ ಭಾಗಕ್ಕೆ ಪೂರೈಕೆಯಾಗುವ ರೀತಿಯಲ್ಲಿ ವೀರ್ಯ ಸಂಸ್ಕರಣಾ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಇದಕ್ಕಾಗಿ 6. 55 ಕೋಟಿ ರೂ. ಅನುದಾನವನ್ನು 2017-18 ನೇ ಸಾಲಿಗೆ ಒದಗಿಸಲಾಗುವುದು. ರಾಜ್ಯದಲ್ಲಿ ಈ ಹಿಂದೆ ದಿನವೊಂದಕ್ಕೆ 59 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿತ್ತು. ಇಲಾಖೆ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ ಇದೀಗ 72 ಲಕ್ಷ ಲೀ. ಹಾಲು ಸುಮಾರು 9 ಲಕ್ಷ ರೈತರಿಂದ ನಿತ್ಯ ಸಂಗ್ರಹವಾಗುತ್ತಿದೆ. ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನ 04 ರೂ. ಗಳಿಂದ 05 ರೂ. ಗೆ ಹೆಚ್ಚಿಸಲಾಗಿದ್ದು, ನಿತ್ಯ 3. 5 ಕೋಟಿ ರೂ. ಪ್ರೋತ್ಸಾಹಧನ ಸಂಬಂಧಿಸಿದ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ರೈತರು ಕೃಷಿಯ ಜೊತೆಗೆ ಹೈನುಗಾರಿಕೆ, ರೇಷ್ಮೆಯಂತಹ ಉಪ ಕಸುಬನ್ನು ಹೆಚ್ಚು, ಹೆಚ್ಚು, ಅಳವಡಿಸಿಕೊಂಡರೆ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಎ. ಮಂಜು ಅವರು ಹೇಳಿದರು.
ಪಶುವೈದ್ಯಕೀಯ ಡಿಪ್ಲೋಮಾ ಕಾಲೇಜು :
***************** ಕೊಪ್ಪಳ ತಾಲೂಕಿನ ಮುನಿರಾಬಾದಿನಲ್ಲಿ ಪಶುಸಂಗೋಪನೆ ಇಲಾಖೆಗೆ ಸೇರಿದ ಸಾಕಷ್ಟು ಭೂಮಿ ಲಭ್ಯವಿದ್ದು, ಇಲ್ಲಿ ಪಶು ವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವಂತೆ ಸ್ಥಳೀಯ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮನವಿ ಸಲ್ಲಿಸಿದ್ದು, ಈಗಾಗಲೆ ಪಶುವೈದ್ಯಕೀಯ ಕಾಲೇಜು ಬೇರೆ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. ಪಶು ವೈದ್ಯರ ನೇಮಕದ ಜೊತೆಗೆ ಪಶು ವೈದ್ಯ ಸಹಾಯಕರ ಹುದ್ದೆಗಳೂ ಸಹ ಹೆಚ್ಚು ಖಾಲಿ ಇರುವುದರಿಂದ, ಇದಕ್ಕೆ ಪೂರಕವಾಗುವಂತೆ ಮುನಿರಾಬಾದಿನಲ್ಲಿ ಪಶುವೈದ್ಯಕೀಯ ಡಿಪ್ಲೋಮಾ ಕಾಲೇಜು ಪ್ರಾರಂಭಿಸುವ ಉದ್ದೇಶವಿದ್ದು, ಈ ಕುರಿತು ಬರುವ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಸಚಿವ ಎ. ಮಂಜು ಅವರು ಹೇಳಿದರು.
550 ಪಶುವೈದ್ಯರ ನೇರ ನೇಮಕಾತಿ
************ರಾಜ್ಯದಲ್ಲಿ ಪಶು ವೈದ್ಯಾಧಿಕಾರಿಗಳ ವೃಂದದ 695 ಹುದ್ದೆಗಳು ಖಾಲಿ ಇದ್ದು, ಈ ಪೈಕಿ 550 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಶೀಘ್ರ ಭರ್ತಿ ಮಾಡಲಾಗುವುದು. ಅಲ್ಲದೆ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ 371(ಜೆ) ಅಡಿ 116 ಪಶು ವೈದ್ಯರನ್ನು ಕೂಡ ಶೀಘ್ರ ಭರ್ತಿ ಮಾಡಲಾಗುವುದು. 1512 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವ ಎ. ಮಂಜು ಅವರು ಹೇಳಿದರು.
ಎಲ್ಲ ಹೋಬಳಿಗಳಿಗೆ ಆ್ಯಂಬುಲೆನ್ಸ್ :
****************** ಮನೆ ಬಾಗಿಲಿಗೆ ಪಶುವೈದ್ಯ ಸೇವೆ ನೀಡುವ ಉದ್ದೇಶದಿಂದ ಸಂಚಾರಿ ಪಶು ಚಿಕಿತ್ಸಾ ಸೌಲಭ್ಯವನ್ನು ತಾಲೂಕು ಮಟ್ಟದಿಂದ ಹೋಬಳಿ ಮಟ್ಟಕ್ಕೂ ವಿಸ್ತರಿಸಲಾಗಿದ್ದು, ಈಗಾಗಲೆ ರಾಜ್ಯದ 45 ಹೋಬಳಿಗಳಿಗೆ ಆ್ಯಂಬುಲೆನ್ಸ್ ಒದಗಿಸಲಾಗಿದೆ. ಈ ವರ್ಷ ಇನ್ನೂ 50 ಹೋಬಳಿಗಳಿಗೆ ಆ್ಯಂಬುಲೆನ್ಸ್ ಮಂಜೂರು ಮಾಡಲಾಗುತ್ತಿದ್ದು, ಬರುವ ದಿನಗಳಲ್ಲಿ ಎಲ್ಲ ಹೋಬಳಿಗಳಿಗೆ ಸಂಚಾರಿ ಪಶು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಲು ಇಲಾಖೆ ಉದ್ದೇಶಿದಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ತೀವ್ರ ಬರ ಪರಿಸ್ಥಿತಿಯ ಸಂದರ್ಭದಲ್ಲಿ ಎಲ್ಲ ರೈತರು ಬೆಳೆ ವಿಮೆ ಮಾಡಿಸಲು ಮುಂದಾಗಬೇಕು. ಕೇವಲ ವ್ಯವಸಾಯದಿಂದ ರೈತರ ಪರಿಸ್ಥಿತಿ ಸುಧಾರಣೆಯಾಗಲು ಸಾಧ್ಯವಾಗದ ಸ್ಥಿತಿ ಈಗಿದೆ. ಸಾವಯವ ಗೊಬ್ಬರ, ರೇಷ್ಮೆ, ಹೈನುಗಾರಿಕೆಯಂತಹ ಉಪಕಸುಬನ್ನು ರೈತರು ಅಳವಡಿಸಿಕೊಂಡಲ್ಲಿ, ನಿತ್ಯ ಆದಾಯ ಗಳಿಕೆ ಸಾಧ್ಯವಾಗಲಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಹೈನುಗಾರಿಕೆಯಲ್ಲಿ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ ಶಾಸಕರು, ಮುನಿರಬಾದಿನಲ್ಲಿ ಪಶು ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಅಗತ್ಯ ಮಂಜೂರಾತಿ ನೀಡುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ತಾ.ಪಂ. ಉಪಾಧ್ಯಕ್ಷೆ ಶಂಕ್ರಮ್ಮ ಅಮರೇಶ ಉಪಲಾಪುರ, ಜಿ.ಪಂ. ಸದಸ್ಯೆ ಬೀನಾಗೌಸ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ನಿರ್ದೇಸಕ ಡಾ. ಕೆ.ಎಂ. ಮಹಮ್ಮದ್ ಜಫರುಲ್ಲಾ ಖಾನ್, ಕೆಎಲ್ಡಿಎ ಅಪರ ನಿರ್ದೇಶಕ ಡಾ. ಎಂ.ಟಿ. ಮಂಜುನಾಥ್ ಉಪಸ್ಥಿತರಿದ್ದರು. ಪಶುಸಂಗೋಪನಾ ಇಲಾಖೆಯ ವಿವಿಧ ಯೋಜನೆಗಳ ಸೌಲಭ್ಯವನ್ನು ಸಚಿವ ಎ. ಮಂಜು ಅವರು ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಿದರು.
2017; ಸರ್ವಜ್ಞರ ವಚನಗಳು ಅಜರಾಮರ : ಕೆ. ರಾಘವೇಂದ್ರ ಹಿಟ್ನಾಳ್
*********************
ಕೊಪ್ಪಳ, ಫೆ.20(ಕರ್ನಾಟಕ ವಾರ್ತೆ): ಕನ್ನಡದ ಕಣ್ಮಣಿ, ಜಗದ ಕವಿ ತ್ರಿಪದಿ ಕವಿ ಸರ್ವಜ್ಞ ರವರ ವಚನಗಳು ಇಂದಿಗೂ ಪ್ರಸ್ತುತವಾಗಿದೆ, ಅವರ ವಚನಗಳು ಅಜರಾಮರವಾಗಿ ಉಳಿದಿದೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಶಾದಿ ಮಹಲ್ನಲ್ಲಿ ಸೋಮವಾರದಂದು ಏರ್ಪಡಿಸಿದ ಕವಿ ಸರ್ವಜ್ಞ ಜಂಯಂತಿ ಆಚರಣೆ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.
ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಕನಕದಾಸ ರಂತಹ ಮಹನಿಯರ ಜಯಂತಿ ಆಚರಣೆ ಮಾಡುವದರ ಮೂಲಕ ಇಂದಿನ ಯುವ ಪೀಳಿಗೆಗೆ ಆದರ್ಶ ಮತ್ತು ಅವರು ಹಾಕಿಕೊಟ್ಟ ಮಾರ್ಗದೆಡೆ ಜೀವನ ಸಾಗಿಸಲು ಅರಿವು ಮತ್ತು ಜಾಗೃತಿ ಮೂಡಿಸುವ ಸದುದ್ದೇಶದಿಂದ ಸರ್ಕಾರ ಇಂತಹ ಜಯಂತಿಗಳನ್ನು ಆಚರಿಸುತ್ತದೆ. ಸಣ್ಣ-ಸಣ್ಣ ಸಮಾಜಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಶಿಕ್ಷಣ ಅತ್ಯವಶ್ಯಕವಾಗಿದೆ. ಶಿಕ್ಷಣದಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ. ಸಮಾಜಗಳು ಅಭಿವೃದ್ಧಿಯತ್ತ ಸಾಗಿದರೆ ಜಯಂತಿಗಳ ಆಚರಣೆಗೆ ಅರ್ಥಬರುತ್ತದೆ. ಕುಂಬಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಯವರ ಗಮನಕ್ಕೆ ತಂದು, ಅವರಿಗೆ ಮನವರಿಕೆ ಮಾಡಿ ಅಗತ್ಯ ಕ್ರಮ ಕೈಗೊಂಡು ಕೊಪ್ಪಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೆ, ಕುಂಬಾರ ಸಮಾಜದ ತರಬೇತಿ ಕೇಂದ್ರ ಪ್ರಾರಂಭ, ಸರ್ವಜ್ಞರ ಹೆಸರಿನಲ್ಲಿ ಉದ್ಯಾನವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬಡವರಿಗೆ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಒಂದು ಕೋಟಿ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ವಾರದ ಐದು ದಿನಗಳವರೆಗೆ ಹಾಲು ನೀಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರ ಜಾರಿಗೊಳಿಸಿದ ವಿದ್ಯಾಸಿರಿ ಯೋಜನೆ ದೇಶದಲ್ಲಿಯೇ ಮಾದರಿಯಾಗಿದ್ದು, ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಕ್ರೀಡಾಪಟುಗಳಿಗೆ ಕೂಡ ಸರ್ಕಾರ ಹೆಚ್ಚಿನ ಕಾಳಜಿವಹಿಸಿ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಹೆಚ್ಚಿಸಿದೆ ಎಂದು ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ ಉಪಾಸೆ ರವರು ವಿಶೇಷ ಉಪನ್ಯಾಸ ನೀಡಿ, ತ್ರಿಪದಿ ಕವಿ ಸರ್ವಜ್ಞರವರನ್ನು ನೀತಿಭೋದಕರೆಂದು ಇತಿಹಾಸ ಪರಂಪರೆಯಲ್ಲಿ ಗುರುತಿಸಲಾಗಿದೆ. ಜಗತ್ತಿನಲ್ಲಿ ಬೇಕಾದಂತಹ ಸಾಮಾನ್ಯ ವೇದ ಪುರಾಣಗಳನ್ನು ಒಪ್ಪುವುದಿಲ್ಲ, ಬದುಕು ಮುಖ್ಯ ಎಂದು ಹೇಳಿದ ಅವರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಜಾತಿ, ಮತ, ಪಂಥ ಯಾಕೆ ಎಂದು ಪ್ರಶ್ನಿಸಿದ ಅವರು, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಬದುಕು ಮತ್ತು ಸಾವಿನ ನಡುವೆ ಮನುಷ್ಯರಾಗಿ ಬಾಳುವುದು ಮುಖ್ಯ ಎಂಬುದು ಕವಿ ಸರ್ವಜ್ಞ ರವರು ಮನುಕುಲಕ್ಕೆ ನೀಡಿದ ಸಂದೇಶವಾಗಿದೆ ಎಂದರು.
ಸಮಾರಂಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ ಖಾದ್ರಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ ಅಧ್ಯಕ್ಷ ಬಾಲಚಂದ್ರನ್, ತಹಶಿಲ್ದಾರ ಗುರುಬಸವರಾಜ, ಗಣ್ಯರಾದ ಮುತ್ತುರಾಜ ಕುಷ್ಟಗಿ, ಕಳಕಪ್ಪ ಕುಂಬಾರ, ನಿಂಗಪ್ಪ ಕುಂಬಾರ, ಪ್ರಭು ಕುಂಬಾರ, ಪಂಪಣ್ಣ ಕುಂಬಾರ, ಈರಣ್ಣ ಆಡೂರ, ಗವಿಸಿದ್ದಪ್ಪ, ಸುವರ್ಣ ಕುಂಬಾರ ಹಾಗೂ ಬಾಳಪ್ಪ ಬಾರಕೇರ ಉಪಸ್ಥಿತರಿದ್ದರು. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿಸಲಾಯಿತು.
ಕಾರ್ಯಕ್ರಮದ ನಂತರ ಕವಿ ಸರ್ವಜ್ಞರ ಭಾವಚಿತ್ರದ ಭವ್ಯ ಮೇರವಣಿಗೆ ಅಶೋಕ ವೃತ್ತದಿಂದ ಜವಾಹರ ರಸ್ತೆಯ ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಮಾರ್ಗವಾಗಿ ಪ್ಯಾಟಿ ಈಶ್ವರ ದೇವಸ್ಥಾನದವರೆಗೆ ಅದ್ದೂರಿಯಾಗಿ ಜರುಗಿತು.
2017; ಗುಳೆ ತಡೆ ಅಭಿಯಾನಕ್ಕೆ ಕೊಪ್ಪಳದಲ್ಲಿ ಚಾಲನೆ
*********************
ಕೊಪ್ಪಳ, ಫೆ.18 (ಕರ್ನಾಟಕ ವಾರ್ತೆ): ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಿ, ಗುಳೇ ಹೋಗುವುದನ್ನು ತಡೆಯುವ ಉದ್ದೇಶದಿಂದ ತಾಲೂಕಾ ಪಂಚಾಯತಿ ವತಿಯಿಂದ ಆಯೋಜಿಸಲಾಗಿರುವ ಗುಳೆ ತಡೆ ಅಭಿಯಾನ ರಥಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಶನಿವಾರದಂದು ಚಾಲನೆ ನೀಡಿದರು.
ತಾಲೂಕಾ ಪಂಚಾಯತಿ ಆವರಣದಲ್ಲಿ ಗುಳೆ ತಡೆ ಅಭಿಯಾನ ರಥಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು, ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಮುಂಗಾರು ಮತ್ತು ಹಿಂಗಾರು ಮಳೆಯ ಅಭಾವದಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ತೀವ್ರ ಸಮಸ್ಯೆ ತಲೆದೋರಿದ್ದು, ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಉದ್ಯೋಗ ಖಾತ್ರಿ ಯಡಿ ಕೆಲಸ ನೀಡಲಾಗುತ್ತಿದೆ. ಕೂಲಿಕಾರರು ಗುಳೇ ಹೋಗದಂತೆ ತಡೆಯಲು ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಗುಳೆ ತಡೆ ಅಭಿಯಾನ ರಥ ಫೆ. 28 ರವರೆಗೆ ತಾಲೂಕಿನಲ್ಲಿ ಸಂಚರಿಸಲಿದೆ. ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮದಡಿ ತಾಲೂಕಿನ 38 ಗ್ರಾಮ ಪಂಚಾಯತಿಗಳಲ್ಲಿ ವಯಕ್ತಿಕ ಅಥವಾ ಸಮುದಾಯ ಆಧಾರಿತ ಕಾಮಗಾರಿಗಳಲ್ಲಿ ಕೆಲಸ ಕೊಡಲಾಗುತ್ತಿದೆ. ಕೂಲಿಕಾರರು ಆಯಾ ಗ್ರಾಮ ಪಂಚಾಯತಿಗಳನ್ನು ಸಂಪರ್ಕಿಸಿ ನಮೂನೆ-06 ರಲ್ಲಿ ಕೂಡಲೆ ಅರ್ಜಿ ಸಲ್ಲಿಸಬೇಕು. ಉದ್ಯೋಗಖಾತ್ರಿ ಯೋಜನೆಯಡಿ ಪ್ರತಿ ದಿನಕ್ಕೆ ರೂ. 224 ರಂತೆ ಕೂಲಿ ಹಣ ನೀಡಲಾಗುತ್ತಿದೆ. ಅಲ್ಲದೆ ಉಪಕರಣಗಳ ಬಳಕೆಗಾಗಿ ರೂ. 10 ಹೆಚ್ಚುವರಿ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಕೂಲಿಕಾರರು ಗುಳೇ ಹೋಗದೆ, ಸ್ಥಳೀಯವಾಗಿ ಗ್ರಾ.ಪಂ. ಕಚೇರಿಯನ್ನು ಸಂಪರ್ಕಿಸಿ ಸಮುದಾಯ ಕಾಮಗಾರಿಗಳಾದ ಕೆರೆ ಅಭಿವೃದ್ಧಿ, ಆಟದ ಮೈದಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ನಮ್ಮ ಹೊಲ ನಮ್ಮ ರಸ್ತೆ, ಕೃಷಿ ಹೊಂಡ ನಿರ್ಮಾಣ ಮುಂತಾದ ಕಾಮಗಾರಿಗಳಲ್ಲಿ ಭಾಗವಹಿಸಿ ಕೆಲಸ ಮಾಡಬಹುದು. ಜಮೀನು ಇಲ್ಲದ ರೈತರು, ವಯಕ್ತಿಕ ಕಾಮಗಾರಿಗಳಾದ ದನದ ದೊಡ್ಡಿ, ಕುರಿದೊಡ್ಡಿ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ಕೂಲಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ನಿಗದಿತ ಅವಧಿಯಲ್ಲಿ ಬ್ಯಾಂಕ್ಗೆ ಜಮಾ ಆಗದಿದ್ದಲ್ಲಿ ಪ್ರತಿ ತಿಂಗಳ ಎರಡನೆ ಗುರುವಾರದಂದು ನಡೆಯುವ ರೋಜಗಾರ್ ಸಭೆಯಲ್ಲಿ ಭಾಗವಹಿಸಿ, ತಮ್ಮ ಕುದುಕೊರತೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಮಾತನಾಡಿ, ಸ್ಥಳೀಯವಾಗಿ ಗ್ರಾಮ ಪಂಚಾಯತಿಗಳಿಂದ ನೀಡುವ ಉದ್ಯೋಗ ಮಾಡುವುದರಿಂದ, ಕೂಲಿಕಾರರಿಗೆ ಅನಗತ್ಯ ವೆಚ್ಚ ಕಡಿಮೆ ಆಗಲಿದೆ. ಯಾರೂ ಸಹ ಗುಳೇ ಹೋಗದೆ, ಸ್ಥಳೀಯವಾಗಿಯೇ ಉದ್ಯೋಗ ಮಾಡುವಂತೆ ಕರೆ ನೀಡಿದರು.
ತಾಲೂಕಾ ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ಜಿ.ಪಂ. ಸದಸ್ಯ ರಾಜಶೇಖರ ಹಿಟ್ನಾಳ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ತಹಸಿಲ್ದಾರ್ ಗುರುಬಸವರಾಜ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
2017; ನಿಷ್ಠೆಯಿಂದ ಕೆಲಸ ಮಾಡದ ನೌಕರರು ಸರ್ಕಾರಕ್ಕೆ ದ್ರೋಹವೆಸಗಿದಂತೆ- ಸುರೇಶ್ ಹಳ್ಯಾಳ
*********************************
ಕೊಪ್ಪಳ ಫೆ. 18 (ಕರ್ನಾಟಕ ವಾರ್ತೆ): ಸರ್ಕಾರಿ ನೌಕರರು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡದಿದ್ದರೆ ಸರ್ಕಾರಕ್ಕೆ ಹಾಗೂ ಈ ನಾಡಿಗೆ ಅನ್ಯಾಯವೆಸಗಿದಂತಾಗುತ್ತದೆ ಎಂದು ಖಜಾನೆ ಇಲಾಖೆ ಉಪನಿರ್ದೇಶಕ ಸುರೇಶ್ ಹಳ್ಯಾಳ ಅವರು ಅಭಿಪ್ರಾಯಪಟ್ಟರು.
ಸರ್ಕಾರಿ ಸೇವೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನೀಡಲಾಗುವ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಜಿಲ್ಲೆಯ ಖಜಾನೆ ಇಲಾಖೆ ಎಲ್ಲ ನೌಕರರ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಾರ್ವಜನಿಕರು ಸರ್ಕಾರಕ್ಕೆ ಕಟ್ಟುವ ತೆರಿಗೆಯಲ್ಲಿ ನಾವು ವೇತನ ಪಡೆದು, ಕೆಲಸ ಮಾಡುವ ನಾವು, ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ನಿಷ್ಠೆಯಿಂದ ಇರಬೇಕಾಗುತ್ತದೆ. ಸರ್ಕಾರ ನಮಗೆ ವಹಿಸಿದ ಕೆಲಸವನ್ನು ನಾವು ಸಮರ್ಪಕವಾಗಿ ಮಾಡದಿದ್ದರೆ, ಸರ್ಕಾರಕ್ಕೆ ಅಷ್ಟೇ ಅಲ್ಲ, ನಮಗೆ ನಾವೇ ದ್ರೋಹ ಬಗೆದಂತಾಗಲಿದೆ. ಖಜಾನೆ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಬಿಲ್ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಸರಳೀಕರಣಗೊಳಿಸಲು ಖಜಾನೆ-2 ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಿದೆ. ಕೆಲವು ಇಲಾಖೆಗಳು ಈ ಹೊಸ ಪದ್ಧತಿಯನ್ನು ಉತ್ತಮವಾಗಿ ಅಳವಡಿಸಿಕೊಂಡಿವೆ. ನಿಜಕ್ಕೂ ಖಜಾನೆ-2 ತಂತ್ರಾಂಶ ಆರ್ಥಿಕ ವ್ಯವಹಾರಗಳನ್ನು ಸುಲಭ ಹಾಗೂ ನಿಖರಗೊಳಿಸಲು ಸಹಕಾರಿಯಾಗಿದೆ ಎಂದು ಖಜಾನೆ ಉಪನಿರ್ದೇಶಕ ಸುರೇಶ್ ಹಳ್ಯಾಳ ಅವರು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್ ಅವರು ಮಾತನಾಡಿ, ಖಜಾನೆ ಇಲಾಖೆ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಲು ನೆರವಾದ ಉಪನಿರ್ದೇಶಕ ಸುರೇಶ್ ಹಳ್ಯಾಳ ಅವರು ಪ್ರಶಸ್ತಿಗೆ ಅರ್ಹರು ಹಾಗೂ ಅಭಿನಂದನಾರ್ಹರು ಎಂದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯಾಗಿರುವ ಎಸ್. ದೇಶಪಾಂಡೆ ಸೇರಿದಂತೆ ವಿವಿಧ ತಾಲೂಕು ಖಜಾನೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಖಜಾನೆ ಇಲಾಖೆಯ ಗಂಗಾಧರ್, ಎಸ್. ಕಳ್ಳೇರ್ ಅವರು ಕಾರ್ಯಕ್ರಮ ನಿರ್ವಹಿಸಿದರು.
2017; ಸ್ಟಾಫ್ ನರ್ಸ ಹುದ್ದೆ : ಫೆ.21 ರಂದು ಕೊಪ್ಪಳದಲ್ಲಿ ನೇರ ಆಯ್ಕೆ ಸಂದರ್ಶನ
************************
ಕೊಪ್ಪಳ, ಫೆ.17 (ಕರ್ನಾಟಕ ವಾರ್ತೆ): ಕರ್ನಾಟಕ ಉದ್ಯೋಗ ಮತ್ತು ತರಬೇತಿ ಇಲಾಖೆ, ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಹಾಗೂ ಅಪೊಲೊ ಹೋಮ್ ಹೆಲ್ತ್ ಕೇರ್ ಲಿಮಿಟೆಡ್, ಬೆಂಗಳೂರು ಇವರ ಸಹಯೋಗದಲ್ಲಿ ಖಾಲಿ ಇರುವ ಸ್ಟಾಫ್ ನರ್ಸ ಹುದ್ದೆಗಳಿಗೆ ಭರ್ತಿ ಮಾಡಲು ನೇರ ಆಯ್ಕೆ ಸಂದರ್ಶನವನ್ನು ಫೆ.21 ರಂದು ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ನೇರ ಆಯ್ಕೆ ಸಂದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವವರು, ಪಿಯುಸಿ (ಎ.ಎನ್.ಎಂ, ಜಿ.ಎನ್.ಎಂ, ಬಿ.ಎಸ್.ಸಿ ಮತ್ತು ಎಂ.ಎಸ್.ಸಿ ನರ್ಸಿಂಗ್ ಪಾಸ್ ) ಪಾಸಾಗಿರಬೇಕು. ವಯೋಮಿತಿ 18 ರಿಂದ 32 ವರ್ಷದೊಳಗಿರಬೇಕು. ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ದಾಖಲೆಗಳೊಂದಿಗೆ ಫೆ. 21 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಅಥವಾ 08539-220859 ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
2017; ಸರಕಾರಿ ನೌಕರರ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಉದ್ಘಾಟನೆ
*****************************
ಕೊಪ್ಪಳ, ಫೆ.17 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸರಕಾರಿ ನೌಕರರ ಪತ್ತಿನ ಸಹಕಾರ ಸಂಘ ಕೊಪ್ಪಳ. ಹಾಗೂ ಸರಕಾರಿ ನೌಕರರ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಉದ್ಘಾಟನಾ ಸಮಾರಂಭ ಫೆ.19 ರಂದು ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳದ ರಾಜ್ಯ ಸರಕಾರಿ ನೌಕರರ ಸಾಂಸ್ಕøತಿಕ ಭವನದಲ್ಲಿ ನಡೆಯಲಿದೆ.
ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಉದ್ಘಾಟನೆ ನೆರೆವೇರಿಸುವರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಪತ್ತಿನ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆರ್. ಜುಮ್ಮನ್ನವರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ತ ಹೆಗಡೆ, ವಿಜಯಪುರದ ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ಜಿಲ್ಲಾಧ್ಯಕ್ಷೆ ರೀತಾ ಕುಲಕರ್ಣಿ, ಖಜಾನೆ ಇಲಾಖೆಯ ಉಪನಿರ್ದೇಶಕ ಸುರೇಶ ಹಳ್ಯಾಳ, ಸಹಕಾರ ಸಂಘಗಳ ಉಪನಿಬಂಧಕ ಗುರುಮೂರ್ತಿಸ್ವಾಮಿ, ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ಬಸವರಾಜ ಪಾಟೀಲ್ ಕೊಂಕಲ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಮರಾವ್ ಬಿ.ವಿ., ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ವಿ. ಜಡಿಯವರ್ ಹಾಗೂ ಕರ್ನಾಟಕ ಜಾನಪದ ಪರಿಷತ್ನ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ ಪಾಲ್ಗೊಳ್ಳುವರು.
ಅತಿಥಿಗಳಾಗಿ ಕ.ರಾ. ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಮಾರ್ತಂಡರಾವ್ ದೇಸಾಯಿ, ಕ.ರಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸುರೇಶ ಅರಕೇರಿ, ಆರೋಗ್ಯ ಮತ್ತು ಕು.ಕ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಪ್ರಸನ್ನಾಚಾರ, ಪದವಿ ಪೂರ್ವ ಉಪನ್ಯಾಸಕರ ಪತ್ತಿನ ಸಂಘದ ಅಧ್ಯಕ್ಷ ಎ.ವಿ. ಉಪಾಧ್ಯಾಯ, ತಾಲೂಕಾ ಪ್ರೌಢಶಾಲಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಬಾರಕೇರ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೈಲಾರಗೌಡ ಹೊಸಮನಿ ಹಾಗೂ ಸರ್ಕಾರಿ ಮತ್ತು ಅನುದಾನ ಪಡೆದ ಪ್ರಾ.ಶಾ.ಶಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಭಾಗವಹಿಸುವರು.
ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ದೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಬಕಾರಿ ಇಲಾಖೆಯ ಹುಸೇನಬಾಷಾ, ಶಿಕ್ಷಣ ಇಲಾಖೆಯ ವೆಂಕಟೇಶ ಪಾಟೀಲ ಮತ್ತು ಯಲ್ಲಪ್ಪ ಬಿ.ವಿ ರವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುವುದು. ಹಾಗೂ ಕ.ರಾ ಸರಕಾರಿ ನೌಕರರ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ವೈವಿದ್ಯಮಯ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
2017; “ಭಾರತ ಭಾಗ್ಯ ವಿಧಾತ” ಧ್ವನಿ ಬೆಳಕು ಕಾರ್ಯಕ್ರಮ ಯಶಸ್ವಿಗೊಳಿಸಿ- ಡಾ. ರುದ್ರೇಶ್ ಘಾಳಿ
*****************************
ಕೊಪ್ಪಳ ಫೆ. 16 (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಜಯಂತಿ ವರ್ಷಾಚರಣೆ ಅಂಗವಾಗಿ ಫೆ. 26 ರಂದು ಕೊಪ್ಪಳದಲ್ಲಿ ಏರ್ಪಡಿಸಿರುವ ``ಭಾರತ ಭಾಗ್ಯ ವಿಧಾತ''ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಸೂಚನೆ ನೀಡಿದರು.
ಭಾರತ ಭಾಗ್ಯ ವಿಧಾತ- ಧ್ವನಿ ಬೆಳಕು ಕಾರ್ಯಕ್ರಮ ಆಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರದಂದು ಏರ್ಪಡಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಜಯಂತಿ ವರ್ಷಾಚರಣೆ ಅಂಗವಾಗಿ ಇದೇ ಫೆ. 26 ರಂದು ಭಾನುವಾರ ಸಂಜೆ 6.30 ಕ್ಕೆ ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಏರ್ಪಡಿಸಲಾಗಿದೆ. ಭಾರತದ ತಳಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮುಡಿಗೊಳಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು, ಯಾವುದೇ ಒಂದು ಜಾತಿ-ವರ್ಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರ ಜೀವನ ಸಾಧನೆಗಳನ್ನು ಅರಿತುಕೊಳ್ಳುವದರ ಜೊತೆಗೆ ಭಾರತದ ಆಧುನಿಕ ಇತಿಹಾಸವನ್ನು ಅರಿಯುವ ಸದವಕಾಶ ಭಾರತ ಭಾಗ್ಯ ವಿಧಾತ- ಧ್ವನಿ ಬೆಳಕು ಕಾರ್ಯಕ್ರಮದ ಮೂಲಕ ಕೊಪ್ಪಳ ಜಿಲ್ಲೆಯ ಜನರಿಗೆ ಒದಗಿ ಬಂದಿದೆ. ಇಂತಹ ಕಾರ್ಯಕ್ರಮ ಕೊಪ್ಪಳದಲ್ಲಿ ನಡೆಯುತ್ತಿರುವದು ಸಂತಸದ ಸಂಗತಿಯಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಅಪರೂಪದ ಕಾರ್ಯಕ್ರಮ ವೀಕ್ಷಿಸಿ ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲ ಕಾಲೇಜುಗಳಿಗೆ ಪದವಿಫೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಬೇಕು. ಫೆ. 25 ಮತ್ತು 26 ರಂದು ಎರಡು ದಿನಗಳ ಕಾಲ ಸಾರ್ವಜನಿಕ ಮೈದಾನದಲ್ಲಿ ಯಾವುದೇ ಲಾರಿ, ಕಾರು, ಟ್ಯಾಕ್ಸಿಗಳ ನಿಲುಗಡೆ ಮಾಡದಂತೆ ತೆರವುಗೊಳಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಬೇಕು. ಎರಡೂ ದಿನಗಳಂದು ಸಾರ್ವಜನಿಕ ಮೈದಾನವನ್ನು ನಗರಸಭೆ ವತಿಯಿಂದ ಸ್ವಚ್ಛಗೊಳಿಸಿ, ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ಧ್ವನಿ-ಬೆಳಕು ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿರುವುದರಿಂದ, ಕೊಪ್ಪಳದಲ್ಲಿನ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿನ ಎಲ್ಲ ವಿದ್ಯಾರ್ಥಿಗಳನ್ನು ಕಾರ್ಯಕ್ರಮ ವೀಕ್ಷಿಸಲು ಕರೆತರುವ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಜಿಲ್ಲೆಯ ಎಲ್ಲ ನಾಗರಿಕರು, ಯುವಜನರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು, ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಕಾರ್ಯಕ್ರಮ ಕುರಿತು ವಿವರಣೆ ನೀಡಿ, ಭಾರತ ಭಾಗ್ಯ ವಿಧಾತ-ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕವು, ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕತೆ. ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ, ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆ, ಭಾರತ ಸಂವಿಧಾನ ಶಿಲ್ಪಿಯೆಂದೇ ಖ್ಯಾತರಾದ ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಗಾಥೆ ಇದಾಗಿದೆ. ಸುಮಾರು 80 ಕಲಾವಿದರು, 20 ತಂತ್ರಜ್ಞರು ಕಾರ್ಯಕ್ರಮ ಪ್ರಸ್ತುತಪಡಿಸುವರು. ಹೆಸರಾಂತ ಸಾಹಿತಿಗಳು, ಕಲಾವಿದರು, ಸಂಗೀತಜ್ಞರು ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.
ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಿರಂಜನ ಮುಧೋಳ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವಿಜಯಲಕ್ಷ್ಮಿ, ಕೊಪ್ಪಳ ಪಿಎಸ್ಐ ಚಂದ್ರಹಾಸ, ನಗರಸಭೆ ವತಿಯಿಂದ ವಿಜಯಕುಮಾರ್ ಅವರು ಪಾಲ್ಗೊಂಡಿದ್ದರು.
2017; ಕನಕಗಿರಿ ಜಾತ್ರೆ : ಫೆ. 19 ರಂದು ಪೂರ್ವಭಾವಿ ಸಭೆ
**********************
ಕೊಪ್ಪಳ ಫೆ. 16 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದ ಪ್ರಸಕ್ತ ಸಾಲಿನ ವಾರ್ಷಿಕ ಜಾತ್ರೆ ಮಾ. 11 ರಿಂದ ಆರಂಭಗೊಳ್ಳಲಿದ್ದು, ಈ ಕುರಿತಂತೆ ಪೂರ್ವಭಾವಿ ಸಭೆ ಫೆ. 19 ರಂದು ಬೆಳಿಗ್ಗೆ 11 ಗಂಟೆಗೆ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದೆ.
ಕನಕಾಚಲಪತಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಮಾ. 11 ರಿಂದ ಮಾ. 24 ರವರೆಗೆ ಜರುಗಲಿದ್ದು, ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಯಅಧಿಕಾರಿಗಳು ಮತ್ತು ಅಧಿಕಾರೇತರರೊಂದಿಗೆ ಚರ್ಚಿಸಲು ಪೂರ್ವಭಾವಿ ಸಭೆ ಫೆ. 19 ರಂದು ಬೆಳಿಗ್ಗೆ 11 ಗಂಟೆಗೆ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಜ ಎಸ್. ತಂಗಡಗಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಸದರಿ ಸಭೆಗೆ ಕಳೆದ ವರ್ಷದ ಜಾತ್ರೆಯಲ್ಲಿ ಒದಗಿಸಲಾದ ಸೌಕರ್ಯಗಳ ಮಾಹಿತಿಯೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ತಪ್ಪದೆ ಸಭೆಗೆ ಹಾಜರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ತಿಳಿಸಿದ್ದಾರೆ.
2017; ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗೆ 10 ವರ್ಷ ಜೈಲು ಶಿಕ್ಷೆ
*************************
ಕೊಪ್ಪಳ ಫೆ. 16 (ಕರ್ನಾಟಕ ವಾರ್ತೆ): ಮದುವೆಯಾಗುವುದಾಗಿ ನಂಬಿಸಿ, ಅಪ್ರಾಪ್ತೆಯನ್ನು ಅಪಹರಣ ಮಾಡಿಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಪೋಕ್ಸೊ ಕಾಯ್ದೆಯಡಿ ಕೊಪ್ಪಳ ಜಿಲ್ಲಾ ಸತ್ರ ಮತ್ತು ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕೊಪ್ಪಳ ತಾಲೂಕು ಇರಕಲ್ಲಗಡ ಗ್ರಾಮದ ಸೋಮಪ್ಪ ಹರಿಜನ @ ಸ್ವಾಮಿ ಎಂಬಾತನೆ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಪೋಕ್ಸೊ ಕಾಯ್ದೆಯಡಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ.
ಸೋಮಪ್ಪ ಹರಿಜನ (35) ಎನ್ನುವ ವ್ಯಕ್ತಿ 16 ವರ್ಷದ ಅಪ್ರಾಪ್ತೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಭರವಸೆ ಕೊಟ್ಟು, ದುರುದ್ದೇಶದಿಂದ, ಆಕೆಯ ಇಚ್ಛೆಗೆ ವಿರುದ್ಧವಾಗಿ, ಕಳೆದ 2015 ರ ಆಗಸ್ಟ್ 02 ರಂದು ಅಪಹರಣ ಮಾಡಿಕೊಂಡು ರಾಣೆಬೆನ್ನೂರಿನ ಹಲಗೇರಿ ಕ್ರಾಸ್ ಬಳಿಯ ಕುಂಚೂರು ಗ್ರಾಮದ ಮನೆಯೊಂದರಲ್ಲಿ ಇರಿಸಿಕೊಂಡಿದ್ದ. ನಂತರ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತಂತೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಉಪನಾಳ ಅವರು, ಆರೋಪಿ ಸೋಮಪ್ಪ @ ಸ್ವಾಮಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5000 ರೂ. ದಂಡ. ದಂಡ ಭರಿಸಲು ತಪ್ಪಿದಲ್ಲಿ, 03 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಫೆ. 15 ರಂದು ತೀರ್ಪು ನೀಡಿದ್ದಾರೆ. ಕೊಪ್ಪಳ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ಎಲ್ ದೇಸಾಯಿ ಸರ್ಕಾರದ ಪರ ವಾದ ಮಂಡಿಸಿದ್ದರು.
ಕೊಪ್ಪಳ ಫೆ. 16 (ಕರ್ನಾಟಕ ವಾರ್ತೆ): ಮದುವೆಯಾಗುವುದಾಗಿ ನಂಬಿಸಿ, ಅಪ್ರಾಪ್ತೆಯನ್ನು ಅಪಹರಣ ಮಾಡಿಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಪೋಕ್ಸೊ ಕಾಯ್ದೆಯಡಿ ಕೊಪ್ಪಳ ಜಿಲ್ಲಾ ಸತ್ರ ಮತ್ತು ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕೊಪ್ಪಳ ತಾಲೂಕು ಇರಕಲ್ಲಗಡ ಗ್ರಾಮದ ಸೋಮಪ್ಪ ಹರಿಜನ @ ಸ್ವಾಮಿ ಎಂಬಾತನೆ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಪೋಕ್ಸೊ ಕಾಯ್ದೆಯಡಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ.
ಸೋಮಪ್ಪ ಹರಿಜನ (35) ಎನ್ನುವ ವ್ಯಕ್ತಿ 16 ವರ್ಷದ ಅಪ್ರಾಪ್ತೆಯನ್ನು ಮದುವೆ ಮಾಡಿಕೊಳ್ಳುವುದಾಗಿ ಭರವಸೆ ಕೊಟ್ಟು, ದುರುದ್ದೇಶದಿಂದ, ಆಕೆಯ ಇಚ್ಛೆಗೆ ವಿರುದ್ಧವಾಗಿ, ಕಳೆದ 2015 ರ ಆಗಸ್ಟ್ 02 ರಂದು ಅಪಹರಣ ಮಾಡಿಕೊಂಡು ರಾಣೆಬೆನ್ನೂರಿನ ಹಲಗೇರಿ ಕ್ರಾಸ್ ಬಳಿಯ ಕುಂಚೂರು ಗ್ರಾಮದ ಮನೆಯೊಂದರಲ್ಲಿ ಇರಿಸಿಕೊಂಡಿದ್ದ. ನಂತರ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತಂತೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಉಪನಾಳ ಅವರು, ಆರೋಪಿ ಸೋಮಪ್ಪ @ ಸ್ವಾಮಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5000 ರೂ. ದಂಡ. ದಂಡ ಭರಿಸಲು ತಪ್ಪಿದಲ್ಲಿ, 03 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಫೆ. 15 ರಂದು ತೀರ್ಪು ನೀಡಿದ್ದಾರೆ. ಕೊಪ್ಪಳ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ಎಲ್ ದೇಸಾಯಿ ಸರ್ಕಾರದ ಪರ ವಾದ ಮಂಡಿಸಿದ್ದರು.
2017; ವಸತಿ ಶಾಲೆಗಳಿಗೆ 06 ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
***************
ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ 2017-18 ನೇ ಸಾಲಿಗೆ 06 ನೇ ತರಗತಿಗಾಗಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಕೆ ಅವಧಿಯನ್ನು ಫೆ. 18 ರವರೆಗೆ ವಿಸ್ತರಿಸಲಾಗಿದ್ದು, ಪ್ರವೇಶ ಪರೀಕ್ಷೆಯನ್ನು ಮಾರ್ಚ್ 05 ಕ್ಕೆ ಮುಂದೂಡಲಾಗಿದೆ.
ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ 2017-18 ನೇ ಸಾಲಿಗೆ 06 ನೇ ತರಗತಿಗಾಗಿ ಫೆ. 19 ರಂದು ಪ್ರವೇಶ ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇವರ ಆದೇದನ್ವಯ ಆದರ್ಶ ವಿದ್ಯಾಲಯಗಳ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳಿಗೆ 06ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಏಕಕಾಲಕ್ಕೆ ನಡೆಸುವ ಪ್ರಸ್ತಾವನೆ ರಾಜ್ಯ ಮಟ್ಟದಲ್ಲಿ ಅಂಗೀಕಾರವಾಗಿದ್ದರಿಂದ, ಪ್ರವೇಶ ಪರೀಕ್ಷೆಯನ್ನು ಫೆ. 19 ರ ಬದಲಿಗೆ ಮಾರ್ಚ್ 05 ರ ಭಾನುವಾರದಂದು ನಡೆಸಲು ದಿನಾಂಕ ಮರು ನಿಗದಿಪಡಿಸಲಾಗಿದೆ. ಅಲ್ಲದೆ ಅರ್ಜಿ ಸಲ್ಲಿಕೆ ಅವಧಿಯನ್ನು ಫೆ. 18 ರವರೆಗೆ ವಿಸ್ತರಿಸಲಾಗಿದೆ. ಪೋಷಕರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಮಾ. 05 ರಂದು ಸಂಬಂಧಪಟ್ಟ ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗಬೇಕು. ಪರೀಕ್ಷೆಯು ಇದೇ ಮೊದಲ ಬಾರಿಗೆ ಓಎಂಆರ್ ಮಾದರಿಯಲ್ಲಿದ್ದು 05 ನೇ ತರಗತಿ ಶಿಕ್ಷಕರಿಗೆ ಈ ಕುರಿತು ತರಬೇತಿ ನೀಡುವಂತೆ ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಸಮೀಪದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕೊಪ್ಪಳ ಜಿಲ್ಲಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2017; ಪಡಿತರ ಕೂಪನ್ ಹಾಗೂ ಆಧಾರ್ ಸಂಖ್ಯೆ ಜೋಡಣೆಗೆ ಹಣ ನೀಡಬೇಡಿ
**********************
ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ): ಪಡಿತರ ಕೂಪನ್ ಪಡೆಯಲು ಹಾಗೂ ಆಧಾರ್ ಸಂಖ್ಯೆಯನ್ನು ನೋಂದಾಯಿಸಲು ಯಾವುದೇ ಫಲಾನುಭವಿಗಳು ಹಣ ನೀಡುವ ಅಗತ್ಯವಿಲ್ಲ, ಇದು ಉಚಿತ ಸೇವೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳ ಮೂಲಕ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯ ತಂತ್ರಾಂಶದ ಮೂಲಕ ನೋಂದಾಯಿಸಲು ಯಾವುದೇ ಶುಲ್ಕವನ್ನು ನಿಗದಿಪಡಿಸಿರುವುದಿಲ್ಲ. ಯಾವುದೇ ಫಲಾನುಭವಿಗಳು ಕೂಪನ್ ಪಡೆಯಲು ಹಾಗೂ ಆಧಾರ್ ಸಂಖ್ಯೆಯನ್ನು ನೋಂದಾಯಿಸಲು ಹಣ ಸಂದಾಯ ಮಾಡದೆ, ಉಚಿತವಾಗಿ ಸೌಲಭ್ಯ ಪಡೆಯಬೇಕು. ಪಡಿತರ ವ್ಯವಸ್ಥೆಯಲ್ಲಿ ಹೆಸರು ಬೇಳೆಯನ್ನು ವಿತರಿಸಲಾಗುತ್ತಿದ್ದು, ಹೆಸರು ಬೇಳೆಗೆ ಪ್ರತಿ ಕೆ.ಜಿ.ಗೆ ರೂ. 33 ದರ ನಿಗದಿಪಡಿಸಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡುಬಂದಲ್ಲಿ, ಸಂಬಂಧಪಟ್ಟ ತಹಸಿಲ್ದಾರರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2017; ಕೂಲಿಕಾರರಿಗೆ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ನೀಡಿ- ಕರಡಿ ಸಂಗಣ್ಣ
****************************
ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶದ ಜನರು ಗುಳೇ ಹೋಗುವುದನ್ನು ತಡೆಯಲು ಬೇಡಿಕೆಗೆ ಅನುಗುಣವಾಗಿ ಕೂಲಿಕಾರರಿಗೆ ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಸಮರ್ಪಕ ಉದ್ಯೋಗ ನೀಡುವಂತೆ ಸಂಸದ ಕರಡಿ ಸಂಗಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ವರ್ಷ ಭೀಕರ ಬರ ಪರಿಸ್ಥಿತಿ ತಲೆದೋರಿದೆ. ಮುಂಗಾರು ಮತ್ತು ಹಿಂಗಾರು ಮಳೆ ವಿಫಲಗೊಂಡ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು, ಕೂಲಿಕಾರರಿಗೆ ಉದ್ಯೋಗದ ತೊಂದರೆಯಾಗಿದ್ದು, ಕೆಲಸ ಅರಸಿಕೊಂಡು ಗುಳೇ ಹೋಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿವೆ. ಉದ್ಯೋಗಕ್ಕಾಗಿ ಫಾರಂ 06 ಅನ್ನು ಭರ್ತಿ ಮಾಡಿಕೊಡುವ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಉದ್ಯೋಗಖಾತ್ರಿ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಕೂಲಿಕಾರರಿಗೆ ಬೇಡಿಕೆಗೆ ತಕ್ಕಂತೆ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು. ಇದಕ್ಕಾಗಿ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೆರೆ ಹೂಳೆತ್ತುವುದು ಸೇರಿದಂತೆ ಸಾಮೂಹಿಕ ಕೆಲಸ ನೀಡುವಂತಹ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಕೊಟ್ಟಲ್ಲಿ, ಜನ ಗುಳೇ ಹೋಗುವುದನ್ನು ಕೈಬಿಡುತ್ತಾರೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿ ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು, ಈ ವರ್ಷದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಈಗಾಗಲೆ ಸಿದ್ಧತೆಗಳನ್ನು ಕೈಗೊಂಡಿದೆ. ಉದ್ಯೋಗಖಾತ್ರಿ ಯೋಜನೆಯಡಿ ಪ್ರಸಕ್ತ ವರ್ಷ 97. 82 ಕೋಟಿ ರೂ. ಗಳ ಅನುದಾನವನ್ನು ನಿಗದಿಪಡಿಸಲಾಗಿತ್ತು. ಆದರೆ ಬರಗಾಲವನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಜಿಲ್ಲೆಗೆ 32. 90 ಕೋಟಿ ರೂ. ಗಳ ಹೆಚ್ಚುವರಿ ಅನುದಾನ ಸೇರಿದಂತೆ ಒಟ್ಟು 130. 40 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದ್ದು, 24. 68 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯನ್ನು ಪರಿಷ್ಕರಿಸಿ, ಹೆಚ್ಚುವರಿಯಾಗಿ 8. 23 ಲಕ್ಷ ಮಾನವ ದಿನಗಳು ಸೇರಿದಂತೆ ಒಟ್ಟು 32. 90 ಲಕ್ಷ ಮಾನವದಿನಗಳನ್ನು ಸೃಜಿಸುವ ಗುರಿ ಹಾಕಿಕೊಳ್ಳಲಾಗಿದೆ. ಈವರೆಗೆ 1911235 ಮಾನವದಿನಗಳನ್ನು ಸೃಜಿಸಲಾಗಿದ್ದು, 71. 71 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಗ್ರಾ.ಪಂ. ಉದ್ಯೋಗ ಸೃಜನೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಕೆರೆ ಹೂಳೆತ್ತುವಂತಹ ಕಾಮಗಾರಿಗಳಿಗೆ ಆದ್ಯತೆ ನೀಡಿ, ಹೆಚ್ಚು, ಹೆಚ್ಚು ಕೂಲಿಕಾರರಿಗೆ ಉದ್ಯೋಗ ನೀಡಲಾಗುತ್ತಿದೆ. ಉದ್ಯೋಗಖಾತ್ರಿ ಯೋಜನೆ ಕುರಿತು ಗ್ರಾಮ ಮಟ್ಟದಲ್ಲಿ ಹೆಚ್ಚು, ಹೆಚ್ಚು ಪ್ರಚಾರ ಮಾಡಲಾಗುತ್ತಿದೆ ಎಂದರು.
ಅಗತ್ಯಕ್ಕನುಗುಣವಾಗಿ ಗೋಶಾಲೆ ಪ್ರಾರಂಭಿಸಿ :
**************** ಜಿಲ್ಲೆಯಲ್ಲಿ ಸುಮಾರು 3 ಲಕ್ಷದಷ್ಟು ಜಾನುವಾರುಗಳಿದ್ದು, ಕೇವಲ 05 ಗೋಶಾಲೆಗಳನ್ನು ಪ್ರಾರಂಭಿಸಲಾಗಿದೆ. ಮುಂಗಾರು ಮತ್ತು ಹಿಂಗಾರು ಮಳೆಯ ವಿಫಲತೆಯಿಂದಾಗಿ ಮೇವಿನ ಕೊರತೆ ಇದೆ. ಇನ್ನೂ ಹೆಚ್ಚು ಗೋಶಾಲೆಗಳನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಅವರು, ಜಿಲ್ಲೆಯಲ್ಲಿ ಸದ್ಯ ತೆರೆಯಲಾಗಿರುವ 05 ಗೋಶಾಲೆಗಳಲ್ಲಿ ಸುಮಾರು 1300 ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತಿದೆ. ನೀರಾವರಿ ಭೂಮಿ ಹೊಂದಿರುವ ರೈತರಿಗೆ ಮೇವು ಬೆಳೆಯಲು ಇಲಾಖೆಯಿಂದ ಮೇವು ಬೀಜದ ಕಿಟ್ಗಳನ್ನು ನೀಡಲಾಗಿದೆ. ಜಾನುವಾರುಗಳಿಗೆ ಮೇವು ಪೂರೈಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, 08 ಏಜೆನ್ಸಿಗಳಿಗೆ ಮೇವು ಪೂರೈಕೆಗೆ ಕಾರ್ಯಾದೇಶ ನೀಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಏಜೆನ್ಸಿಗಳು ಮೇವು ಪೂರೈಸುತ್ತಿದ್ದು, ಜಾನುವಾರುಗಳಿಗೆ ಯಾವುದೇ ಮೇವಿನ ಕೊರತೆ ಇಲ್ಲ. ಸದ್ಯ 09 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಬರುವ ದಿನಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಇನ್ನೂ ಹೆಚ್ಚಿನ ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆ ಬದಿ ಗಿಡಗಳಿಗೆ ನೀರುಣಿಸಿ :
************ ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿಗಳಲ್ಲಿ ನೆಡಲಾಗಿರುವ ಗಿಡಗಳಿಗೆ ಬೇಸಿಗೆ ಮುಗಿಯುವವರೆಗೂ ನಿಯಮಿತವಾಗಿ ನೀರುಣಿಸಿ ಸಂರಕ್ಷಿಸುವ ಕಾರ್ಯವನ್ನು ಇಲಾಖೆ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಗಿಡಗಳು ಒಣಗಿಹೋಗಿ, ಸರ್ಕಾರ ಖರ್ಚು ಮಾಡಿರುವ ಕೋಟಿಗಟ್ಟಲೆ ಹಣ ಪೋಲಾಗಲಿದೆ. ಅಲ್ಲದೆ ಮುಂದಿನ ಆರ್ಥಿಕ ವರ್ಷಕ್ಕೆ ಅಗತ್ಯವಿರುವ ಸಸಿಗಳನ್ನು ಬೆಳೆಸುವ ಕಾರ್ಯವನ್ನು ಸಹ ಸಮರ್ಪಕವಾಗಿ ಅರಣ್ಯ ಇಲಾಖೆ ಕೈಗೊಳ್ಳುವಂತೆ ಸಂಸದ ಕರಡಿ ಸಂಗಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ದಿಶಾ ಸಮಿತಿಯ ಸದಸ್ಯರುಗಳಾದ ಶೋಭಾ ನಗರಿ, ಶಿವನಗೌಡ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
2017; ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ- ಕೃಷ್ಣಮೂರ್ತಿ ದೇಸಾಯಿ
*************************
ಕೊಪ್ಪಳ ಫೆ. 14 (ಕರ್ನಾಟಕ ವಾರ್ತೆ): ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ ಜೈಲುಶಿಕ್ಷೆ ಹಾಗೂ ದಂಡ ಎರಡೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಹೇಳಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಬಾಲಕಾರ್ಮಿಕ ಅನಿಷ್ಠ ಪದ್ಧತಿಯ ಕುರಿತು ಬೀದಿನಾಟಕ ಮೂಲಕ ಜನಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಆಂದೋಲನಕ್ಕೆ ನಗರದ ತಹಸಿಲ್ದಾರರ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆಗೆ ತೆರಳಿ, ಶಿಕ್ಷಣವನ್ನು ಕಲಿಯಬೇಕಾದ ಮಕ್ಕಳನ್ನು ಬಡತನದ ಕುಂಟು ನೆಪ ಹೇಳಿಕೊಂಡು, ದುಡಿಮೆಗೆ ಕಳುಹಿಸಿಸುವ ಅನಿಷ್ಠ ವ್ಯವಸ್ಥೆ ನಮ್ಮ ಸಮಾಜದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ. ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಯಾವುದೇ ಕಾರ್ಖಾನೆ, ಉದ್ಯಮ, ಕೋಳಿಫಾರಂ, ಮನೆಕೆಲಸ, ಗ್ಯಾರೇಜ್, ಹೋಟೆಲ್ ಸೇರಿದಂತೆ ಯಾವುದೇ ಬಗೆಯ ಕೆಲಸಕ್ಕೆ ಸೇರಿಸಿಕೊಳ್ಳುವುದು, ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಅಪರಾಧಿಗಳಿಗೆ ಜೈಲು ಶಿಕ್ಷೆಯ ಜೊತೆಗೆ ದಂಡ ವಿಧಿಸಲು ಕಾನೂನು ಅವಕಾಶ ಕಲ್ಪಿಸಿದೆ. ಮಕ್ಕಳನ್ನು ಯಾವುದೇ ಕಾರಣಕ್ಕೂ ದುಡಿಮೆಗೆ ಕಳುಹಿಸಬಾರದು. ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ, ಶಾಲಾಬ್ಯಾಗ್, ಮಧ್ಯಾಹ್ನದ ಬಿಸಿಯೂಟ, ಉಚಿತವಾಗಿ ಸಮವಸ್ತ್ರವನ್ನು ನೀಡಿ ಉತ್ತೇಜನ ನೀಡುತ್ತಿದೆ. ಮಕ್ಕಳು ಶಿಕ್ಷಣವಂತರಾದರೆ, ಮುಂದಿನ ಅವರ ಭವಿಷ್ಯ ಉಜ್ವಲವಾಗಿ ರೂಪುಗೊಳ್ಳಲಿದೆ. ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಹೇಳಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಸ್ವಾಗತಿಸಿ, ಬಾಲಕಾರ್ಮಿಕ ಪದ್ಧತಿಯನ್ನು ಜಿಲ್ಲೆಯಲ್ಲಿ ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಬೀದಿನಾಟಕಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ವಿವಿಧ ಕಲಾತಂಡಗಳು ತೆರಳಿ, ಬೀದಿನಾಟಕಗಳನ್ನು ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಲಿವೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ತಹಸಿಲ್ದಾರರ ಕಚೇರಿಯ ಜಯಶ್ರೀ, ಅಂಗವಿಕಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿವಮೂರ್ತಿ ಮೇಟಿ ನೇತೃತ್ವದ ಚೇತನ ಸಾಂಸ್ಕøತಿಕ ಕಲಾಸಂಘದ ವತಿಯಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ‘ಕಳಿಸಬ್ಯಾಡವ್ವ ಕೆಲಸಕ್ಕ ನನ್ನ’ ಬೀದಿನಾಟಕ ಪ್ರದರ್ಶನ ಇದೇ ಸಂದರ್ಭದಲ್ಲಿ ನಡೆಯಿತು.
2017; ವಿವಿಧ ಗ್ರಾ.ಪಂ. ಗಳ ಚುನಾವಣೆ : ಶೇ. 81. 73 ಮತದಾನ
************************
ಕೊಪ್ಪಳ ಫೆ. 13 (ಕರ್ನಾಟಕ ವಾರ್ತೆ): ವಿವಿಧ ಕಾರಣಗಳಿಂದ ತೆರವಾಗಿದ್ದ ಗ್ರಾಮ ಪಂಚಾಯತಿಗಳ ಸದಸ್ಯ ಸ್ಥಾನಗಳಿಗಾಗಿ ಭಾನುವಾರದಂದು ನಡೆದ ಮತದಾನದಲ್ಲಿ ಒಟ್ಟಾರೆ ಶೇ. 81. 73 ರಷ್ಟು ಮತದಾನವಾಗಿದೆ.
ಕೊಪ್ಪಳ ತಾಲೂಕಿನ ಬೆಟಗೇರಾ ಗ್ರಾಮ ಪಂಚಾಯತಿಯಲ್ಲಿ ನಡೆದ ಚುನಾವಣೆಯಲ್ಲಿ 907 ಮತದಾರರ ಪೈಕಿ 703 ಮತದಾರರು ಮತ ಚಲಾಯಿಸಿದ್ದು, ಶೇ. 77. 50 ರಷ್ಟು ಮತದಾನವಾಗಿದೆ. ಕೋಳೂರು ಗ್ರಾಮ ಪಂಚಾಯತಿಯ ದದೇಗಲ್ ಸ್ಥಾನದ ಚುನಾವಣೆಯಲ್ಲಿ 740 ಮತದಾರರ ಪೈಕಿ 643 ಮತದಾರರು ಹಕ್ಕು ಚಲಾಯಿಸಿದ್ದು, ಶೇ. 86. 89 ರಷ್ಟು ಮತದಾನವಾಗಿದೆ. ಯಲಬುರ್ಗಾ ತಾಲೂಕು ಮುರಡಿ ಗ್ರಾಮ ಪಂಚಾಯತಿಯ ತರಲಕಟ್ಟಿಯ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 813 ಮತದಾರರ ಪೈಕಿ 657 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, 80. 81 ರಷ್ಟು ಮತದಾನವಾಗಿದೆ. ಒಟ್ಟಾರೆ ಭಾನುವಾರದಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ. 81. 73 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
2017; ಕೇಂದ್ರ ಬರ ಅಧ್ಯಯನ ತಂಡಕ್ಕೆ ಕೊಪ್ಪಳ ಜಿಲ್ಲೆಯ ಭೀಕರ ಬರದ ದರ್ಶನ
******************************
ಕೊಪ್ಪಳ ಫೆ. 12 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ಹಿಂಗಾರು ಮಳೆಯ ವೈಫಲ್ಯದಿಂದ ಹಾನಿಯಾಗಿರುವ ಕುರಿತು ಪರಿಶೀಲನೆಗೆ ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡಕ್ಕೆ ಭಾನುವಾರದಂದು ಜಿಲ್ಲೆಯಲ್ಲಿನ ಭೀಕರ ಬರದ ದರ್ಶನವಾಯಿತು.
ಕೇಂದ್ರ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯ, ಹೈದರಾಬಾದಿನ ಜಂಟಿನಿರ್ದೇಶಕ ಡಾ. ಕೆ. ಪೊನ್ನುಸ್ವಾಮಿ ಹಾಗೂ ಕೇಂದ್ರ ಪಶುಸಂಗೋಪನೆ ಇಲಾಖೆ ಮೇವು ಬೇಸಾಯ ವಿಭಾಗದ ದೆಹಲಿ ಅಧಿಕಾರಿ ವಿಜಯ ಥಾಕರೆ ಮತ್ತು ಭಾರತೀಯ ಆಹಾರ ನಿಗಮ ಬೆಂಗಳೂರು ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಎಲ್. ಚತ್ರು ನಾಯಕ್ ಅವರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ, ಭಾನುವಾರದಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಹಿಂಗಾರು ಬೆಳೆ ಹಾನಿ, ಬರಿದಾದ ಕೃಷಿ ಹೊಂಡಗಳು, ಉದ್ಯೋಗಖಾತ್ರಿ ಯೋಜನೆಯ ಪ್ರಗತಿ, ಜಾನುವಾರುಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ತೆರೆದಿರುವ ಗೋಶಾಲೆ ಸ್ಥಳಗಳಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿ ಭೀಕರ ಬರದ ದರ್ಶನ ಪಡೆಯಿತು.
ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಬಳಿ ಶಿವಪ್ಪ ಆದಾಪುರ ರೈತನ ಹೊಲಕ್ಕೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡ, 12 ಎಕರೆ ಜಮೀನಿನಲ್ಲಿ ಕಡಲೆ ಬೆಳೆ ಸಂಪೂರ್ಣ ಹಾನಿಯಾಗಿರುವುದು, ಜೊತೆಗೆ, ಸರ್ಕಾರದ ಸಹಾಯಧನದಲ್ಲಿ ನಿರ್ಮಿಸಲಾಗಿರುವ ಕೃಷಿ ಹೊಂಡ ಒಂದು ಹನಿಯೂ ನೀರಿಲ್ಲದೆ ಸಂಪೂರ್ಣ ಒಣಗಿಹೋಗಿರುವುದನ್ನು ಗಮನಿಸಿತು. ಸಾಕಷ್ಟು ಹಣ ಖರ್ಚು ಮಾಡಿ, 12 ಎಕರೆಯಲ್ಲಿ ಕಡಲೆ ಬೆಳೆ ಬಿತ್ತಲಾಗಿತ್ತು. ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬೆಳೆ ಸಂಪೂರ್ಣ ಒಣಗಿಹೋಗಿದೆ, ಇದರಿಂದಾಗಿ ತೀವ್ರ ನಷ್ಟ ಎದುರಿಸುತ್ತಿದ್ದೇವೆ. ಮುಂಗಾರು ಮಳೆಯೂ ಕೂಡ ವಿಫಲವಾಗಿದ್ದರಿಂದ ಮುಂಗಾರಿನಲ್ಲಿಯೂ ಯಾವುದೇ ಬೆಳೆ ಬಂದಿಲ್ಲ ಎಂದು ರೈತರು ತಂಡದ ಎದುರು ತಮ್ಮ ಅಳಲು ತೋಡಿಕೊಂಡರು. ನಂತರ ಬನ್ನಿಕೊಪ್ಪ ಬಳಿಯ ಚೆನ್ನಪ್ಪ ಗೊಂಡಬಾಳ ಎಂಬ ರೈತರ ಜಮೀನಿಗೆ ಭೇಟಿ ನೀಡಿದ ತಂಡ, ಇಲ್ಲಿ ಜೋಳ ಬೆಳೆ ಸಂಪೂರ್ಣ ನೆಲಕಚ್ಚಿರುವುದನ್ನು ಕಂಡು, ಬರದ ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಂಡರು. ಚನ್ನಪ್ಪ ಗೊಂಡಬಾಳ ರೈತ ತನ್ನ 13 ಎಕರೆ ಜಮೀನಿನಲ್ಲಿ ಜೋಳ ಬೆಳೆದಿದ್ದು, ಬೆಳೆ ಸಂಪೂರ್ಣ ಹಾನಿಯಾಗಿದೆ. ಕೇಂದ್ರ ತಂಡವು ಮನ್ನಾಪುರ ಗ್ರಾಮಕ್ಕೆ ಭೇಟಿ ನೀಡಿ, ಶಿವನಗೌಡ ದೇವರೆಡ್ಡಿ ರೈತನ 12 ಎಕರೆ ಜಮೀನಿನಲ್ಲಿ ಹತ್ತಿ ಬೆಳೆ ಸಂಪೂರ್ಣ ಹಾಳಾಗಿರುವುದನ್ನು ಪರಿಶೀಲಸಿದರು. ರಾಜೂರು ಗ್ರಾಮದ ಬಳಿ ಬಾಲಪ್ಪ ನಿಂಗೋಜಿ ತನ್ನ 3 ಎಕರೆಯಲ್ಲಿ ಬಿತ್ತಿದ ಸೂರ್ಯಕಾಂತಿ ಬೆಳೆ ಸಂಪೂರ್ಣ ನಷ್ಟಕ್ಕೆ ಒಳಗಾಗಿರುವುದು ಅಲ್ಲದೆ ಸಂಗನಾಳ ಗ್ರಾಮದ ಬಳಿ ಹಿಂಗಾರು ಮಳೆ ಇಲ್ಲದ ಕಾರಣ ಬಿತ್ತನೆಯಾಗದೆ, ನೂರಾರು ಎಕರೆ ಖಾಲಿ ಉಳಿದಿರುವ ಜಮೀನಿನ ದರ್ಶನ ಪಡೆಯಿತು. ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮಕ್ಕೆ ಭೇಟಿ ನೀಡಿದ
ಯಲಬುರ್ಗಾ ತಾಲೂಕು ಬನ್ನಿಕೊಪ್ಪ ಗ್ರಾಮದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯ, ಹೈದರಾಬಾದಿನ ಜಂಟಿನಿರ್ದೇಶಕ ಡಾ. ಕೆ. ಪೊನ್ನುಸ್ವಾಮಿ ಅವರು, ಹಿಂಗಾರು ಮಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಬರ ತಲೆದೋರಿದ್ದು, ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಬರದ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಗೆ ಬಂದಿದ್ದೇವೆ. ಇಲ್ಲಿನ ಭೀಕರ ಬರವನ್ನು ಕಣ್ಣಾರೆ ಕಂಡಿದ್ದೇವೆ. ಕಳೆದ ಸುಮಾರು ಹತ್ತು ವರ್ಷಗಳಿಂದಲೂ ನಿರಂತರ ಬರ ಪರಿಸ್ಥಿತಿಯನ್ನು ಜಿಲ್ಲೆ ಎದುರಿಸುತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿದ್ದಾರೆ. ಫೆ. 13 ರ ಸೋಮವಾರದಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿಯನ್ನು ಸಂಗ್ರಹಿಸುತ್ತೇವೆ. ನಂತರ ಕ್ರೋಢೀಕೃತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶೀಘ್ರ ಸಲ್ಲಿಸುತ್ತೇವೆ. ಕೇಂದ್ರ ಬರ ಅಧ್ಯಯನ ತಂಡ ನೀಡುವ ವರದಿಯ ಆಧಾರದಲ್ಲಿ ಕೇಂದ್ರ ಸರ್ಕಾರ ಪರಿಹಾರ ಅನುದಾನ ಬಿಡುಗಡೆ ಮಾಡಲಿದೆ ಎಂದರು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಕೊಪ್ಪಳ ಜಿಲ್ಲೆಯಲ್ಲಿ 1.55 ಲಕ್ಷ ಹೆ. ಹಿಂಗಾರು ಬಿತ್ತನೆ ಗುರಿಯ ಬದಲಿಗೆ 1. 03 ಹೆ. ಹಿಂಗಾರು ಬಿತ್ತನೆಯಾಗಿತ್ತು. ಆದರೆ ಹಿಂಗಾರು ಮಳೆ ಸಂಪೂರ್ಣ ವಿಫಲವಾದ ಕಾರಣದಿಂದ 95726 ಹೆ. ಪ್ರದೇಶದಲ್ಲಿ ಶೇ. 33 ಕ್ಕಿಂತ ಹೆಚ್ಚು ಹಾನಿಯಾಗಿದೆ. ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿಯಂತೆ ಕೊಪ್ಪಳ ಜಿಲ್ಲೆಗೆ 61 ಕೋಟಿ ರೂ. ಅನುದಾನ ಒದಗಿಸುವಂತೆ ವರದಿ ಸಲ್ಲಿಸಿದ್ದೇವೆ. ಮುಂಗಾರು ಹಂಗಾಮಿನ 121 ಕೋಟಿ ರೂ. ಹಾಗೂ ಹಿಂಗಾರು ಹಂಗಾಮಿಗೆ 61 ಕೋಟಿ ಸೇರಿದಂತೆ ಒಟ್ಟು 181 ಕೋಟಿ ರೂ. ಅನುದಾನವನ್ನು ಕೊಪ್ಪಳ ಜಿಲ್ಲೆಗೆ ಬಿಡುಗಡೆ ಮಾಡಬೇಕಾಗಿದೆ. ಕೇಂದ್ರ ಬರ ಅಧ್ಯಯನ ತಂಡಕ್ಕೆ ಕೊಪ್ಪಳ ಜಿಲ್ಲೆಯಲ್ಲಿನ ಭೀಕರ ಬರ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ವರದಿಯ ಸಹಿತ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ, ಯಲಬುರ್ಗಾ ತಹಸಿಲ್ದಾರ್ ರಮೇಶ್ ಅಳವಂಡಿಕರ್ ಮುಂತಾದವರಿದ್ದರು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಕೊಪ್ಪಳ ಜಿಲ್ಲೆಯಲ್ಲಿ 1.55 ಲಕ್ಷ ಹೆ. ಹಿಂಗಾರು ಬಿತ್ತನೆ ಗುರಿಯ ಬದಲಿಗೆ 1. 03 ಹೆ. ಹಿಂಗಾರು ಬಿತ್ತನೆಯಾಗಿತ್ತು. ಆದರೆ ಹಿಂಗಾರು ಮಳೆ ಸಂಪೂರ್ಣ ವಿಫಲವಾದ ಕಾರಣದಿಂದ 95726 ಹೆ. ಪ್ರದೇಶದಲ್ಲಿ ಶೇ. 33 ಕ್ಕಿಂತ ಹೆಚ್ಚು ಹಾನಿಯಾಗಿದೆ. ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿಯಂತೆ ಕೊಪ್ಪಳ ಜಿಲ್ಲೆಗೆ 61 ಕೋಟಿ ರೂ. ಅನುದಾನ ಒದಗಿಸುವಂತೆ ವರದಿ ಸಲ್ಲಿಸಿದ್ದೇವೆ. ಮುಂಗಾರು ಹಂಗಾಮಿನ 121 ಕೋಟಿ ರೂ. ಹಾಗೂ ಹಿಂಗಾರು ಹಂಗಾಮಿಗೆ 61 ಕೋಟಿ ಸೇರಿದಂತೆ ಒಟ್ಟು 181 ಕೋಟಿ ರೂ. ಅನುದಾನವನ್ನು ಕೊಪ್ಪಳ ಜಿಲ್ಲೆಗೆ ಬಿಡುಗಡೆ ಮಾಡಬೇಕಾಗಿದೆ. ಕೇಂದ್ರ ಬರ ಅಧ್ಯಯನ ತಂಡಕ್ಕೆ ಕೊಪ್ಪಳ ಜಿಲ್ಲೆಯಲ್ಲಿನ ಭೀಕರ ಬರ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ವರದಿಯ ಸಹಿತ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ, ಯಲಬುರ್ಗಾ ತಹಸಿಲ್ದಾರ್ ರಮೇಶ್ ಅಳವಂಡಿಕರ್ ಮುಂತಾದವರಿದ್ದರು.
2017; ಸರ್ವಜ್ಞ, ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ
***********************
ಕೊಪ್ಪಳ ಫೆ. 10 (ಕರ್ನಾಟಕ ವಾರ್ತೆ): ಇದೇ ಫೆ. 20 ರಂದು ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿ ಹಾಗು ಫೆ. 21 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ವಿಜೃಂಭಣೆಯಿಂದ ಜಿಲ್ಲಾ ಕೇಂದ್ರದಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರು, ಕವಿ ಸರ್ವಜ್ಞರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕವಿ ಸರ್ವಜ್ಞರ ಜಯಂತಿ :
************ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿಯನ್ನು ಫೆ. 20 ರಂದು ಜಿಲ್ಲಾ ಕೇಂದ್ರದಲ್ಲಿ ನಡೆಸಲಾಗುವುದು. ಜಯಂತಿ ಆಚರಣೆ ನಿಮಿತ್ಯ ಫೆ. 20 ರಂದು ಬೆಳಿಗ್ಗೆ 10 ಗಂಟೆಗೆ ವೇದಿಕೆ ಸಮಾರಂಭ ಕೊಪ್ಪಳದ ಸರ್ಕಾರಿ ನೌಕರರ ಸಂಘದ ಸಾಂಸ್ಕøತಿಕ ಭವನದಲ್ಲಿ ನಡೆಯಲಿದೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂಗಮೇಶ ಉಪಾಸೆ ಅವರು ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡುವರು. ವೇದಿಕೆ ಸಮಾರಂಭದ ನಂತರ ಸಾಂಸ್ಕøತಿಕ ಭವನದಿಂದ ಕವಿ ಸರ್ವಜ್ಞರ ಭಾವಚಿತ್ರದೊಂದಿಗೆ ಮೆರವಣಿಗೆಯು ಪ್ರಾರಂಭವಾಗಲಿದೆ. ಮೆರವಣಿಗೆಯು ಅಶೋಕವೃತ್ತ, ಜವಾಹರ ರಸ್ತೆ, ಆಜಾದ್ ಸರ್ಕಲ್, ಮೂಲಕ ಪ್ಯಾಟಿ ಈಶ್ವರ ದೇವಸ್ಥಾನದವರೆಗೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಲಿವೆ.
ಛತ್ರಪತಿ ಶಿವಾಜಿ ಜಯಂತಿ :
************** ಭಾರತದಲ್ಲಿ ಸ್ವರಾಜ್ಯದ ಕಲ್ಪನೆಯನ್ನು ಹುಟ್ಟುಹಾಕಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯನ್ನು ಫೆ. 19 ರ ಬದಲಿಗೆ ಫೆ. 21 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಲಾಗುವುದು. ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಶಾದಿ ಮಹಲ್ ಅಥವಾ ರಾಜ್ಯ ಸರ್ಕಾರಿ ನೌಕರರ ಸಂಘದ ಸಾಂಸ್ಕøತಿಕ ಭವನದಲ್ಲಿ ವೇದಿಕೆ ಸಮಾರಂಭ ಏರ್ಪಡಿಸಲಾಗುವುದು. ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ. ವೇದಿಕೆ ಕಾರ್ಯಕ್ರಮದ ಬಳಿಕ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದೊಂದಿಗೆ ಮೆರವಣಿಗೆ ಪ್ರಾರಂಭವಾಗಲಿದ್ದು, ನಗರದ ತುಳಜಾ ಭವಾನಿ ದೇವಸ್ಥಾನದವರೆಗೆ ಸಾಗಿಬರಲಿದೆ. ಮೆರವಣಿಗೆಯಲ್ಲಿ ವಿಶೇಷ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಆಕರ್ಷಕಗೊಳಿಸಲಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ತಿಳಿಸಿದರು.
ಕವಿ ಸರ್ವಜ್ಞರ ಜಯಂತಿ ಹಾಗೂ ಶಿವಾಜಿ ಮಹಾರಾಜರ ಜಯಂತಿ ಸಮಾರಂಭಗಳ ದಿನದಂದು, ರಸ್ತೆ ಸ್ವಚ್ಛತೆ, ಮೆರವಣಿಗೆಯಲ್ಲಿ ಹಾಗೂ ವೇದಿಕೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾದಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಸಮಾಜದ ಮುಖಂಡರು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ, ತಹಸಿಲ್ದಾರ್ ಗುರುಬಸವರಾಜ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗಣ್ಯರಾದ ಮಾರುತಿ ನಿಕ್ಕಂ, ಶಿವಾನಂದ ಹೊದ್ಲೂರ್, ಮಂಜುನಾಥ ಗೊಂಡಬಾಳ, ಈರಣ್ಣ ಕುಂಬಾರ್ ಮುಂತಾದವರು ಭಾಗವಹಿಸಿ, ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
2017; ಗಂಗಾವತಿ : ಭಾರಿ ವಾಹನ ಚಾಲನೆ ತರಬೇತಿಗೆ ಅರ್ಜಿ ಆಹ್ವಾನ
************************
ಕೊಪ್ಪಳ ಫೆ. 10 (ಕರ್ನಾಟಕ ವಾರ್ತೆ): ಗಂಗಾವತಿ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನ ನಲ್ಮ್ ಯೋಜನೆಯ ಇ.ಎಸ್.ಟಿ. ಉಪಯೋಜನೆಯ ಅಡಿಯಲ್ಲಿ ಭಾರಿ ವಾಹನ ಚಾಲನಾ ತರಬೇತಿ ಆಯೋಜಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
25 ಅಭ್ಯರ್ಥಿಗಳಿತೆ ತರಬೇತಿ ನೀಡುವ ಗುರಿ ಇರುತ್ತದೆ. ಆಸಕ್ತರು ಅರ್ಜಿಯನ್ನು ಕಾರ್ಯಾಲಯದ ನಲ್ಮ್ ವಿಭಾಗದಲ್ಲಿ ಪಡೆದು ಭರ್ತಿ ಮಾಡಿ, ಸಲ್ಲಿಸಲು ಫೆ. 28 ಕೊನೆಯ ದಿನವಾಗಿರುತ್ತದೆ. ಅರ್ಜಿ ಸಲ್ಲಿಸಲು ಲಘು ವಾಹನ ಚಾಲನ ಪರವಾನಿಗೆ ಪಡೆದು ಕನಿಷ್ಟ 01 ವರ್ಷ ಪೂರ್ಣಗೊಂಡಿರಬೇಕು. ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣಪತ್ರ, ವಿದ್ಯಾರ್ಹತೆ ಪ್ರಮಾಣಪತ್ರ, ಮತದಾರರ ಭಾವಚಿತ್ರವಿರುವ ಗುರುತಿನ ಕಾರ್ಡ್, ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್ ಸ್ವಯಂ ದೃಢೀಕೃತ ದಾಖಲೆಗಳೊಂದಿಗೆ ದ್ವಿ ಪ್ರತಿಯಲ್ಲಿ ಲಗತ್ತಿಸಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ವೇಳೆಯಲ್ಲಿ ಗಂಗಾವತಿ ನಗರಸಭೆಯ ನಲ್ಮ್ ವಿಭಾಗದಲ್ಲಿ ಪಡೆಯಬಹುದು.
2017; ಐಟಿಐ ಪಾಸಾದವರಿಗೆ ಕ್ಯಾಂಪಸ್ ಸಂದರ್ಶನ
*******************
ಕೊಪ್ಪಳ ಫೆ. 10 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಟಣಕನಕಲ್ ನಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೆ: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್, ಬೇವಿನಹಳ್ಳಿ, ತಾ: ಕೊಪ್ಪಳ ಇವರಿಂದ ಅಪ್ರೆಂಟಿಸ್ ಟ್ರೈನಿಂಗ್ಗಾಗಿ ಫೆ. 15 ರಂದು ಬೆಳಿಗ್ಗೆ 9 ಗಂಟೆಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.
ಫಿಟ್ಟರ್, ಎಲೆಕ್ಟ್ರಿಷಿಯನ್, ಟರ್ನರ್, ಮೆಕ್ಯಾನಿಕ್ ಡೀಸೆಲ್ ಮತ್ತು ವೆಲ್ಡರ್ ವೃತ್ತಿಯಲ್ಲಿ ಐಟಿಐ ಪಾಸಾದವರು ಈ ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9535470111 ಅಥವಾ 9611772394 ಅಥವಾ 9448813422 ಮೊಬೈಲ್ಗೆ ಸಂಪರ್ಕಿಸಬಹುದು ಎಂದು ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2017; ಗಂಗಾವತಿ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
********************************
ಕೊಪ್ಪಳ ಫೆ. 10 (ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕಿನಲ್ಲಿ ಖಾಲಿ ಇರುವ 09 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಮತ್ತು 25 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗಂಗಾವತಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇರುವ ಪ್ರದೇಶ ಹಾಗೂ ಮೀಸಲಾತಿ ವಿವರ ಇಂತಿದೆ. ಗಂಗಾವತಿ ನಗರಸಭೆ ವ್ಯಾಪ್ತಿಯ 8 ನೇ ವಾರ್ಡ್ ಉಪ್ಪಿನಮಳ್ಳಿ ಕ್ಯಾಂಪ್ (ಇತರೆ). 12 ನೇ ವಾರ್ಡ್ ಜುಲೈ ನಗರ (ಇತರೆ), 29 ನೇ ವಾರ್ಡ್ ಹಿರೇಜಂತಕಲ್ (ಇತರೆ), ತಾಲೂಕಿನ ಬೆನ್ನೂರು (ಇತರೆ), ಬರಗೂರು ಗ್ರಾ.ಪಂ. ಅರುಣೋದಯ ತಾಂಡ (ಪ.ಜಾತಿ), ಬರಗೂರು ಗ್ರಾ.ಪಂ., ಹೆಬ್ಬಾಳ (ಇತರೆ), ವಡ್ರಟ್ಟಿ ಗ್ರಾ.ಪಂ., ಗುಡ್ಡದ ಕ್ಯಾಂಪ್ (ಇತರೆ) ಹಾಗೂ ಚಿಕ್ಕಬೆಣಕಲ್ (ಇತರೆ).
ಗಂಗಾವತಿ ತಾಲೂಕಿನಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇರುವ ಪ್ರದೇಶ ಹಾಗೂ ಮೀಸಲಾತಿ ವಿವರ ಇಂತಿದೆ. ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಸಿದ್ದಿಕೇರಿ ಕ್ಯಾಂಪ್ (ಪ.ಪಂಗಡ). ವಕಿಲ್ ಗೇಟ್ (ಇತರೆ), ಕಿಲ್ಲಾ ಏರಿಯಾ (ಅಲ್ಪಸಂಖ್ಯಾತರು), ಗೌಸಿಯಾ ಕಾಲೋನಿ (ಅಲ್ಪಸಂಖ್ಯಾತರು), ಉಪ್ಪನಮಳ್ಳಿ ಕ್ಯಾಂಪ್ (ಇತರೆ), 10 ನೇ ವಾರ್ಡ್ (ಇತರೆ), ಇಸ್ಲಾಂಪುರ (ಇತರೆ), ಜುಲಾಯಿ ನಗರ (ಇತರೆ), ಪಿಂಜಾರ್ ಓಣಿ (ಇತರೆ), ಗಾಂಧಿನಗರ (ಪ.ಜಾತಿ), ಅಂಬೇಡ್ಕರ್ ನಗರ (ಇತರೆ), ಗುಂಡಮ್ಮ ಕ್ಯಾಂಪ್ (ಇತರೆ), ವಿಜಯನಗರ ಕಾಲೋನಿ (ಇತರೆ), ಆಶ್ರಯ ಕಾಲೋನಿ (ಇತರೆ), ಜಬ್ಬಲ್ ಕ್ಯಾಂಪ್ (ಅಲ್ಪಸಂಖ್ಯಾತರು), ತಾಲೂಕಿನ ವಡ್ಡರಹಟ್ಟಿ (ಇತರೆ), ಆರ್ಹಾಳ (ಇತರೆ), ಬಸಾಪಟ್ಟಣ 04 ಮತ್ತು 05 ನೇ ವಾರ್ಡ್ (ಇತರೆ), ಬಸಾಪಟ್ಟಣ 3 ನೇ ವಾರ್ಡ್ (ಅಲ್ಪಸಂಖ್ಯಾತರು), ಹೆಬ್ಬಾಳ (ಇತರೆ), ಅರುಣೋದಯ ತಾಂಡಾ (ಪ.ಜಾತಿ), ಬೆನ್ನೂರು (ಇತರೆ).
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಲು ಮಾ. 08 ಕೊನೆಯ ದಿನವಾಗಿದ್ದು, ಹೆಚ್ಚಿನ ವಿವರಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಗಂಗಾವತಿ ಇವರಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
2017; ವಿದ್ಯಾರ್ಥಿ ವೇತನ : ಆಧಾರ್ ಸಂಖ್ಯೆ ಬಳಕೆಗೆ ಆನ್ಲೈನ್ನಲ್ಲಿ ಸಮ್ಮತಿ ನೀಡಲು ಸೂಚನೆ
**********************************
ಕೊಪ್ಪಳ ಫೆ. 10 (ಕರ್ನಾಟಕ ವಾರ್ತೆ): ವಿದ್ಯಾರ್ಥಿ ವೇತನವನ್ನು ಬ್ಯಾಂಕ್ ಖಾತೆಗೆ ನೇರ ಜಮಾ ಮಾಡುವ ಸೇವೆಗಾಗಿ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಬಳಸಲು, ಆನ್ಲೈನ್ ಮೂಲಕ ಸಮ್ಮತಿ ನೀಡುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಭಾರತ ಸರ್ಕಾರದ ಆರ್ಥಿಕ ಇಲಾಖೆಯ ಸೂಚನೆ ಹಾಗೂ ಮಾರ್ಗಸೂಚಿಯಂತೆ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಅನುಷ್ಟಾನಗೊಳಿಸಬೇಕಾಗಿದ್ದು, ಇದಕ್ಕಾಗಿ ವಿದ್ಯಾರ್ಥಿಗಳಿಂದ ದೃಢೀಕರಣ ಪಡೆಯುವಂತೆ ಸೂಚನೆ ನೀಡಿದೆ. ಜಿಲ್ಲೆಯಲ್ಲಿ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಸಮರ್ಥಗೊಳಿಸುವ ಸೇವೆಗೆ ಮತ್ತು ಆಧಾರ್ ಸಂಖ್ಯೆಯನ್ನು ಇಲಾಖೆಯ ವಿದ್ಯಾರ್ಥಿ ವೇತನ ಸೇವೆಗೆ ಉಪಯೋಗಿಸಲು ಸಮ್ಮತಿ ನೀಡಬೇಕಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ www.sw.kar.nic.in ಕ್ಕೆ ಸಂಪರ್ಕಿಸಿ ಆನ್ಲೈನ್ ಮೂಲಕ ವಿದ್ಯಾರ್ಥಿಗಳು ಸಮ್ಮತಿಯನ್ನು ನೀಡಬೇಕು. 2016-17 ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವ ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳು ತಮ್ಮ ದೃಢೀಕರಣಕ್ಕಾಗಿ ಫೆ. 15 ರ ಒಳಗಾಗಿ ಆನ್ಲೈನ್ ಮೂಲಕ ಒಪ್ಪಿಗೆ ನೀಡಬೇಕು.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಮತ್ತು ಗಂಗಾವತಿ/ಕುಷ್ಟಗಿ ತಾಲೂಕುಗಳ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ. ಕಲ್ಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2017; ಬ್ಯಾಂಕ್ ಖಾತೆ ಕುರಿತು ಬರುವ ಮೊಬೈಲ್ ಕರೆಗಳಿಗೆ ಸ್ಪಂದಿಸಬೇಡಿ- ಶ್ರೀನಿವಾಸ ಗಲಗಲಿ
*********************
ಕೊಪ್ಪಳ ಫೆ.09 (ಕರ್ನಾಟಕ ವಾರ್ತೆ): ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡಲಾಗುತ್ತಿದೆ, ಸರಿಪಡಿಸಲು ಬ್ಯಾಂಕ್ ಎಟಿಎಂ ಕಾರ್ಡ್ ಸಂಖ್ಯೆ ಅಥವಾ ಪಿನ್ ಸಂಖ್ಯೆಯನ್ನು ನೀಡುವಂತೆ ಮೊಬೈಲ್ನಲ್ಲಿ ಕೋರುವ ಯಾವುದೇ ಕರೆಗಳಿಗೆ ಸಾರ್ವಜನಿಕರು ಸ್ಪಂದಿಸಬೇಡಿ, ಬದಲಿಗೆ ಅಂತಹವರ ವಿರುದ್ಧ ದೂರು ದಾಖಲಿಸಿ ಎಂದು ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರದ ಸಲಹೆಗಾರ ಶ್ರೀನಿವಾಸ ಗಲಗಲಿ ಅವರು ಹೇಳಿದರು.
ಗ್ರಾಹಕರ ಹಕ್ಕು ಮತ್ತು ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್), ಪ್ರಾದೇಶಿಕ ಕಛೇರಿ, ಬೆಂಗಳೂರು ಇವರ ವತಿಯಿಂದ ಜಿಲ್ಲಾ ಆಡಳಿತ ಭವನದ ಆಡಿಟೊರಿಯಮ್ ಹಾಲ್ ನಲ್ಲಿ ಗುರುವಾರದಂದು ಏರ್ಪಡಿಸಿದ ಗ್ರಾಹಕರ ನೇರಸಂಪರ್ಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ 9 ಸರ್ವೀಸ್ ಪ್ರೊವೈಡರ್, 65.70 ಮಿಲಿಯನ್ ಮೊಬೈಲ್ ಮತ್ತು 2.23 ಮಿಲಿಯನ್ ಸ್ಥಿರ ದೂರವಾಣಿ ಗ್ರಾಹಕರಿದ್ದಾರೆ. ಹೆಚ್ಚಿನ ಗ್ರಾಹಕರಿಗೆ ಟ್ರಾಯ್ನ ನಿಯಮಾವಳಿಗಳ ಬಗ್ಗೆ ಮಾಹಿತಿಯ ಅರಿವಿಲ್ಲ. ‘ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದಿಂದ ಮಾತನಾಡುತ್ತಿದ್ದೇವೆ, ತಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡಲಾಗುತ್ತಿದೆ, ಸರಿಪಡಿಸಲು ಕಾರ್ಡ್ ಸಂಖ್ಯೆ ಅಥವಾ ಪಿನ್ ಸಂಖ್ಯೆ ನೀಡಿ’, ಅಥವಾ ‘ತಮ್ಮ ಮೊಬೈಲ್ ಸಂಖ್ಯೆಗೆ ಲಕ್ಷಗಟ್ಟಲೆ ಲಾಟರಿ ಹಣ ಬಂದಿದೆ’ ಎಂಬುದಾಗಿ ಮೊಬೈಲ್ಗಳಿಗೆ ಕರೆಗಳು ಬರುತ್ತವೆ. ಯಾವುದೇ ಬ್ಯಾಂಕ್ಗಳು ತಮ್ಮ ಗ್ರಾಹಕರಿಂದ ಈ ರೀತಿಯ ಮಾಹಿತಿಯನ್ನು ಕೇಳುವುದಿಲ್ಲ. ಸಾರ್ವಜನಿಕರು ಇಂತಹ ಕರೆಗಳಿಗೆ ಸ್ಪಂದಿಸಬಾರದು, ಒಂದು ವೇಳೆ ಸ್ಪಂದಿಸಿ, ವಿವರ ನೀಡಿದರೆ, ಅವರ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಯಾರೂ ಸಹ ಇಂತಹ ಕರೆಗಳಿಗೆ ದಯವಿಟ್ಟು ಸ್ಪಂದಿಸಬೇಡಿ, ಬದಲಿಗೆ ಅಂತಹವರ ವಿರುದ್ಧ ದೂರು ನೀಡಬೇಕು ಎಂದರು.
ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಟ್ರಾಯ್ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಗ್ರಾಹಕರ ಹಕ್ಕು ಮತ್ತು ಸವಲತ್ತುಗಳು ಹಾಗೂ ಸೇವಾ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಸೇವೆಯನ್ನು ಹೇಗೆ ಪೂರೈಸಬೇಕು. ಪ್ರಾಧಿಕಾರದ ಪ್ರಮುಖ ನಿಬಂಧನೆಗಳಾದ ಮೊಬೈಲ್ ನಂಬರ್ ಪೋರ್ಟಬಿಲಿಟಿ, ಅನಪೇಕ್ಷಿತ ವಾಣಿಜ್ಯ ಸಂದೇಶಗಳು, ದೂರು ನಿರ್ವಾಹಣಾ ಪ್ರಕ್ರಿಯೆ ಮುಂತಾದವುಗಳ ಕುರಿತು ವಿವರಣೆ ನೀಡಿದ ಶ್ರೀನಿವಾಸ ಅವರು, ಮೊಬೈಲ್ ಸೇವೆ ಕುರಿತಂತೆ ಗ್ರಾಹಕರು ದೂರು ಕೇಂದ್ರದಲ್ಲಿ ದೂರು ನೊಂದಾಯಿಸಬೇಕು. ಒಂದು ವೇಳೆ ಗ್ರಾಹಕರಿಗೆ ದೂರು ನಿವಾರಣೆಯ ಕುರಿತು ಅತೃಪ್ತಿಯಿದ್ದಲ್ಲಿ, ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು. ಗ್ರಾಹಕರು www.tccms.gov.in ವೆಬ್ ಸೈಟ್ ನಲ್ಲಿ ಗ್ರಾಹಕರ ಸಂಖ್ಯೆ, ಸಾಮಾನ್ಯ ಮಾಹಿತಿ ಸಂಖ್ಯೆ, ದೂರು ಕೇಂದ್ರದ ಸಂಖ್ಯೆ ಮತ್ತು ಮೇಲ್ಮನವಿ ಪ್ರಾಧಿಕಾರದ ವಿವರಗಳನ್ನು ಪಡೆಯಬಹುದು. ಮೊಬೈಲ್ ಪೋರ್ಟಬಿಲಿಟಿ ಪ್ರಕ್ರಿಯೆ 15 ದಿನಗಳ ಒಳಗೆ ಪೂರ್ಣಗೊಳ್ಳಬೇಕು. ದೇಶದ 20. 4 ಕೋಟಿ ಚಂದಾದಾರರು ಈವರೆಗೆ ಇದರ ಸೌಲಭ್ಯ ಬಳಸಿದ್ದಾರೆ. ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶಗಳು/ ಟೆಲಿಮಾರ್ಕೆಟಿಂಗ್ ಕರೆಗಳನ್ನು ತಡೆಹಿಡಿಯಲು ಗ್ರಾಹಕರು ತಮ್ಮ ಆದ್ಯತೆಯನ್ನು ನೋಂದಾಯಿಸಲು ಟೋಲ್ ಫ್ರೀ ಸಂಖ್ಯೆಯಾದ 1909 ಗೆ ಕರೆ ಮಾಡಬಹುದು ಅಥವಾ ಎಸ್.ಎಂ.ಎಸ್ ಕಳುಹಿಸಬಹುದು. ನೋಂದಾವಣಿಯಾದ ಮೇಲೂ ಸಂದೇಶ ಬಂದಲ್ಲಿ, 3 ದಿನಗೊಳಗಾಗಿ 1909 ಗೆ ಕರೆ ಅಥವಾ ಎಸ್.ಎಂ.ಎಸ್ ಮಾಡುವುದರ ಮೂಲಕ ಸರ್ವೀಸ್ ಪ್ರೊವೈಡರ್ಗೆ ದೂರನ್ನು ಸಲ್ಲಿಸಬಹುದು. 2013 ರಿಂದ ಈವರೆಗೆ ಇಂತಹ ಸುಮಾರು 1. 70 ಲಕ್ಷ ದೂರುಗಳು ಸಲ್ಲಿಕೆಯಾಗಿವೆ. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ವಿನಾಕಾರಣ ಯಾವುದೇ ಅಪ್ಲಿಕೇಶನ್ಗಳಿಗೆ ಶೇರ್ ಮಾಡಬಾರದು. ಉದಾಹರಣೆಗೆ ಟ್ರೂ ಕಾಲರ್ನಂತಹ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವಾಗ ಮೊಬೈಲ್ ಸಂಖ್ಯೆ ಶೇರ್ ಮಾಡಿಕೊಳ್ಳಲು ತಮಗರಿವಿಲ್ಲದಂತೆ ಒಪ್ಪಿಗೆಯನ್ನು ನೀಡಿರುತ್ತೀರಿ. ಇದೇ ರೀತಿ ವಿವಿಧ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಾಗ, ತಮ್ಮ ಮೊಬೈಲ್ ಸಂಖ್ಯೆಗಳು ಹತ್ತು ಹಲವು ಟೆಲಿ ಮಾರ್ಕೆಟಿಂಗ್ ಗಳಿಗೆ ಅಥವಾ ವಂಚಕರಿಗೆ ದೊರೆಯುತ್ತವೆ. ಕೆಲವು ಸಂಸ್ಥೆಗಳು ಮೊಬೈಲ್ ಟವರ್ ಅನುಸ್ಥಾಪನೆಗೆ ಹೆಚ್ಚಿನ ಬಾಡಿಗೆ ನೀಡುವ ನೆಪದಲ್ಲಿ ಜನರಿಂದ ಹಣ ಪಡೆದು, ನಂತರ ಮಾಯವಾಗುತ್ತಿವೆ. ಮೊಬೈಲ್ ಟವರ್ ಅನುಸ್ಥಾಪನೆಯಲ್ಲಿ ಟ್ರಾಯ್ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಪಾತ್ರ ವಹಿಸುವುದಿಲ್ಲ. ಸಾರ್ವಜನಿಕರು ಇಂತಹ ವಂಚನೆಗೆ ಒಳಗಾಗುವುದನ್ನು ತಡೆಯಲು ಜಾಗೃತಿ ಮೂಡಿಸುವುದೊಂದೇ ದಾರಿ ಎಂದರು.
ಉತ್ತಮ ಗುಣಮಟ್ಟದ ಶಬ್ದ ಮತ್ತು ಚಿತ್ರ, ಹೈ ಡೆಫನೇಷನ್ ಟಿ ವಿ, ವೀಡಿಯೋ ಆನ್ ಡಿಮ್ಯಾಂಡ್, ಬ್ರಾಡ್ ಬ್ಯಾಂಡ್ ಸೇವೆ, ಬಿಲ್ಲಿಂಗ್ ನಲ್ಲಿ ಪಾರದರ್ಶಕತೆ ಮತ್ತು ಉತ್ತಮ ದೂರು ನಿರ್ವಹಣಾ ವ್ಯವಸ್ಥೆ ಮುಂತಾದ ಡಿಜಿಟೈಜೆಷನ್ ಲಾಭಗಳ ಬಗ್ಗೆ ಕಾರ್ಯಕ್ರಮದಲ್ಲಿ ವಿವರಗಳನ್ನು ನೀಡಲಾಯಿತು. ಅಲ್ಲದೆ ಗ್ರಾಹಕರ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಉಚಿತವಾಗಿ ವಿತರಿಸಲಾಯಿತು. ಟ್ರಾಯ್ನ ಹಿರಿಯ ಸಂಶೋಧನಾ ಅಧಿಕಾರಿ ಲತಾ ಹೆಚ್.ಸಿ. ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಏರ್ಟೆಲ್, ವೋಡಫೋನ್, ಐಡಿಯಾ, ಜಿಯೋ, ರಿಲಯನ್ಸ್, ಟಾಟಾ ಡೊಕೋಮೊ, ಬಿಎಸ್ಎನ್ಎಲ್ ಮೊಬೈಲ್ ಸೇವಾ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಂಡು, ಗ್ರಾಹಕ ಸೇವೆಗಾಗಿ ಇರುವ ಸೌಲಭ್ಯಗಳನ್ನು ವಿವರಿಸಿದರು. ನಂತರ ನಡೆದ ಗ್ರಾಹಕರ ಸಂಪರ್ಕ ಕಾರ್ಯಕ್ರಮದಲ್ಲಿ ಹಲವು ಸಾರ್ವಜನಿಕರು ವಿವಿಧ ಮೊಬೈಲ್ ಕಂಪನಿಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಟ್ರಾಯ್ ಅಧಿಕಾರಿಗಳ ಗಮನಕ್ಕೆ ತಂದರು.
2017; ಹಾಪ್ಕಾಮ್ಸ್ನಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಪ್ಲಾಸ್ಟಿಕ್ ಕ್ರೇಟ್ ವಿತರಣೆ
************************
ಕೊಪ್ಪಳ ಫೆ. 09 (ಕರ್ನಾಟಕ ವಾರ್ತೆ): ತೋಟಗಾರಿಕೆ ಬೆಳೆಗಳನ್ನು ಸಾಗಿಸಲು ಬೇಕಾಗಿರುವ ಪ್ಲಾಸ್ಟಿಕ್ ಪುಟ್ಟಿಗಳನ್ನು (ಪ್ಲಾಸ್ಟಿಕ್ ಕ್ರೇಟ್ಸ್) ಕೊಪ್ಪಳ ಜಿಲಾ ಹಾಪ್ಕಾಮ್ಸ್ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ.
ತೋಟಗಾರಿಕೆ ಬೆಳೆಗಳಲ್ಲಿ ಕೊಯ್ಲಿನ ನಂತರ ಸಾಗಾಣಿಕೆಯಲ್ಲಿ ಶೇ.10-15 ರಷ್ಟು ನಷ್ಟ ಕಂಡು ಬರುತ್ತದೆ. ಇದಕ್ಕೆ ಕಾರಣ ಎಂದರೆ ಅವೈಜ್ಞಾನಿಕ ಸಾಗಾಣಿಕೆ ಪದ್ಧತಿಗಳು. ಬೇಗನೆ ಹಾಳಾಗುವಂತಹ ಟೊಮ್ಯಾಟೋ, ದೊಣ್ಣೆ ಮೆಣಸಿನಕಾಯಿ, ಮಾವು, ದ್ರಾಕ್ಷಿ ಇವು ಸಾಗಾಣಿಕೆಯಲ್ಲಿ ನಷ್ಟಕ್ಕೆ ತುತ್ತಾಗುತ್ತವೆ. ಸರಿಯಾಗಿ ಗಾಳಿಯಾಡುವ, ದೂರದ ಊರಿಗೂ ಸಾಗಿಸಲು ಉತ್ತಮವಾದ ಸಾಧನಗಳೆಂದರೆ, ಚೌಕಾಕಾರದ ಪ್ಲಾಸ್ಟಿಕ್ ಪುಟ್ಟಿಗಳು ಅಂದರೆ ಪ್ಲಾಸ್ಟಿಕ್ ಕ್ರೇಟ್ಸ್. ರೈತರ ಅನುಕೂಲಕ್ಕಾಗಿ ಜಿಲ್ಲಾ ಹಾಪ್ಕಾಮ್ಸ್ನಿಂದ ಪ್ಲಾಸ್ಟಿಕ್ ಕ್ರೇಟ್ ಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತಿದೆ. ಜಿಲ್ಲಾ ಹಾಪ್ಕಾಮ್ಸ್ನಲ್ಲಿ ಕ್ರೇಟ್ಸ್ಗಳು ಲಭ್ಯವಿದ್ದು, ತೋಟಗಾರಿಕೆ ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು, ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ- ಕೊಪ್ಪಳ, ಮೊಬೈಲ್ ಸಂಖ್ಯೆ-9844874822 ಅಥವಾ ದೂರವಾಣಿಸಂಖ್ಯೆ-08539-231531 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
2017; ದಡಾರ-ರುಬೆಲ್ಲಾ ಲಸಿಕಾ ಕಾರ್ಯಕ್ರಮಕ್ಕೆ ಡಿಸಿ ಕನಗವಲ್ಲಿ ಚಾಲನೆ
************************
ಕೊಪ್ಪಳ ಫೆ. 07 (ಕರ್ನಾಟಕ ವಾರ್ತೆ): ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕೊಪ್ಪಳದ ಎಸ್ಎಫ್ಎಸ್ ಶಾಲೆಯಲ್ಲಿ ಚಾಲನೆ ನೀಡಿದರು.
ಲಸಿಕಾ ಅಭಿಯಾನವನ್ನು ಜ್ಯೊತಿ ಬೆಳಗಿಸುವ ಮೂಲಕ ಚಾಲನೆ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲ ಮಕ್ಕಳಿಗೆ ತಪ್ಪದೆ ದಡಾರ-ರುಬೆಲ್ಲಾ ಲಸಿಕೆ ತಲುಪಿಸುವ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಶಾಲೆಯಲ್ಲಿ ಓದುತ್ತಿರುವ ಜಿಲ್ಲಾಧಿಕಾರಿಗಳ ಪುತ್ರಿಗೆ ಅವರ ಸಮ್ಮುಖದಲ್ಲೇ ದಡಾರ-ರುಬೆಲ್ಲಾ ಲಸಿಕೆಯ ಚುಚ್ಚುಮದ್ದು ಇದೇ ಸಂದರ್ಭದಲ್ಲಿ ನೀಡಲಾಯಿತು. ಲಸಿಕೆಯು ಸುರಕ್ಷಿತವಾಗಿದ್ದು, ಲಸಿಕೆ ಕುರಿತಂತೆ ಮಕ್ಕಳ ಪಾಲಕರು/ಪೋಷಕರು ಯಾವುದೇ ಬಗೆಯ ವದಂತಿಗಳಿಗೆ ಕಿವಿಗೊಡಬಾರದು. ಮಕ್ಕಳಿಗೆ ಮಾರಕ ರೋಗ ಬಾರದಂತೆ ಲಸಿಕೆಯು ತಡೆಗಟ್ಟುತ್ತದೆ. ಲಸಿಕೆ ಅಭಿಯಾನವನ್ನು ಫೆ. 07 ರಿಂದ 28 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 09 ತಿಂಗಳಿನಿಂದ 15 ವರ್ಷದೊಳಗಿನ ಸುಮಾರು 4.5 ಲಕ್ಷ ಮಕ್ಕಳಿಗೆ ಈ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತವಾಗಬಾರದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಪೂರ್ವ ತಯಾರಿಯೊಂದಿಗೆ, ಸಮರ್ಪಕವಾಗಿ ಮಕ್ಕಳಿಗೆ ಲಸಿಕೆ ತಲುಪಿಸುವ ಕಾರ್ಯ ಕೈಗೊಳ್ಳಬೇಕು. ಮಕ್ಕಳಿಗೆ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ತಂದೆ-ತಾಯಿಯರ ಪಾತ್ರ ಮಹತ್ವದ್ದಾಗಿದ್ದು, ಸ್ವಯಂ ಪ್ರೇರಣೆಯಿಂದ ಅವರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಆರ್ಸಿಹೆಚ್ ಅಧಿಕಾರಿ ಡಾ. ಅಲಕಾನಂದ ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
2017; ಲಸಿಕಾ ಅಭಿಯಾನ : ಫೆ. 11 ಮತ್ತು 18 ರ ಶನಿವಾರದಂದು ಪೂರ್ಣದಿನ ಶಾಲೆ
*************************
ಕೊಪ್ಪಳ ಫೆ. 07 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಫೆ. 07 ರಿಂದ 28 ರವರೆಗೆ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಜರುಗುತ್ತಿದ್ದು, ಈ ಅವಧಿಯಲ್ಲಿ ಬರುವ ಫೆ. 11 ಮತ್ತು 18 ರ ಶನಿವಾರ ದಿನದಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಅರ್ಧದಿನದ ಬದಲಿಗೆ ಪೂರ್ಣ ದಿನ ಕಾರ್ಯ ನಿರ್ವಹಿಸಬೇಕು ಎಂದು ಡಿಡಿಪಿಐ ಶ್ಯಾಮಸುಂದರ್ ಆದೇಶ ಹೊರಡಿಸಿದ್ದಾರೆ.
ದಡಾರ ಮತ್ತು ರುಬೆಲ್ಲಾ ಲಸಿಕೆ ಎಲ್ಲ ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯ ಯೋಜನೆ ಜಾರಿಗೊಳಿಸಲಾಗಿದೆ. ಫೆ. 11 ಮತ್ತು 18 ರ ಶನಿವಾರದ ದಿನದಂದು ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪ್ರತಿ ಶನಿವಾರದಂದು ಅರ್ಧ ದಿನ ಕಾರ್ಯ ನಡೆಸುವ ಬದಲಾಗಿ ಉಳಿದ ದಿನಗಳಂತೆ ಪೂರ್ಣ ದಿನ ಅಂದರೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಕಾರ್ಯ ನಿರ್ವಹಿಸಬೇಕು ಎಂದು ಡಿಡಿಪಿಐ ಶ್ಯಾಮಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2017; ಅವೈಜ್ಞಾನಿಕ ವೇಗಮಿತಿ ರಸ್ತೆ ತಡೆ ಉಬ್ಬುಗಳನ್ನು ತೆರವುಗೊಳಿಸಿ- ಡಿಸಿ ಕನಗವಲ್ಲಿ ಸೂಚನೆ
****************************
ಕೊಪ್ಪಳ ಫೆ. 07 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕವಾಗಿ ಹಾಕಲಾಗಿರುವ ವೇಗಮಿತಿ ರಸ್ತೆ ತಡೆ ಉಬ್ಬುಗಳನ್ನು ಕೂಡಲೆ ತೆರವುಗೊಳಿಸಿ, ಅಗತ್ಯವಿರುವ ಕಡೆಗಳಲ್ಲಿ ಮಾತ್ರ ವೈಜ್ಞಾನಿಕವಾಗಿ ವೇಗಮಿತಿ ರಸ್ತೆ ತಡೆ ಉಬ್ಬುಗಳನ್ನು ಹಾಕುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ವಿವಿಧ ಪ್ರಮುಖ ರಾಜ್ಯ ಹೆದ್ದಾರಿಗಳಿವೆ. ಇಂತಹ ಪ್ರಮುಖ ರಸ್ತೆಗಳಲ್ಲಿ ಹಲವೆಡೆ ಅವೈಜ್ಞಾನಿಕವಾಗಿ ವೇಗಮಿತಿ ರಸ್ತೆ ತಡೆಗಳನ್ನು ನಿರ್ಮಿಸಿರುವುದರಿಂದ, ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ. ಅಲ್ಲದೆ ವಾಹನ ಚಾಲಕರಿಗೆ ಅನಗತ್ಯ ಕಿರಿಕಿರಿಯಾಗುತ್ತಿರುವುದರ ಜೊತೆಗೆ ವಾಹನಗಳೂ ಹಾಳಾಗುತ್ತಿವೆ. ಒಂದು ವಾರದ ಒಳಗಾಗಿ, ಜಿಲ್ಲೆಯಲ್ಲಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ತೀವ್ರ ಅಪಘಾತ ವಲಯಗಳು, ಶಾಲೆ/ಕಾಲೇಜು ಪ್ರದೇಶಗಳು, ಇಂತಹ ವಲಯಗಳನ್ನು ಗುರುತಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಮಾತ್ರ ವೈಜ್ಞಾನಿಕವಾಗಿ ವೇಗಮಿತಿ ರಸ್ತೆ ತಡೆಗಳನ್ನು ಹಾಕಬೇಕು. ಇಂತಹ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ, ವಾಹನ ಚಾಲಕರಿಗೆ ಕಾಣುವ ರೀತಿಯಲ್ಲಿ ರಿಫ್ಲೆಕ್ಷನ್ ಪೇಂಟ್ ಬಳಿಯಬೇಕು. ಇದರ ನಂತರವೇ ಅವೈಜ್ಞಾನಿಕವಾಗಿ ಹಾಕಲಾಗಿರುವ ವೇಗಮಿತಿ ರಸ್ತೆ ತಡೆಗಳನ್ನು ತೆರವುಗೊಳಿಸಬೇಕು. ಅಗತ್ಯ ಬಿದ್ದಲ್ಲಿ, ಪೊಲೀಸ್ ಇಲಾಖೆಯ ನೆರವನ್ನು ಪಡೆಯಬೇಕು. ಸಾರ್ವಜನಿಕರು ಒತ್ತಾಯಿಸುತ್ತಾರೆನ್ನುವ ನೆಪವೊಡ್ಡಿ, ಅವೈಜ್ಞಾನಿಕವಾಗಿ ಅನಗತ್ಯವಿರುವ ಕಡೆಗಳಲ್ಲಿ ರಸ್ತೆ ತಡೆ ಉಬ್ಬುಗಳನ್ನು ನಿರ್ಮಿಸಿ, ಅಪಘಾತಗಳು ಸಂಭವಿಸಿದರೆ, ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು. ನಗರ ಮತ್ತು ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿಯೂ ಕೂಡ ಇದೇ ನಿಯಮವನ್ನು ಅನುಸರಿಸಬೇಕು. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿರುವ ಅವೈಜ್ಞಾನಿಕ ವೇಗಮಿತಿ ರಸ್ತೆ ತಡೆಗಳ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ, ನಗರಸಭೆ,ಪುರಸಭೆ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಜಿ.ಎಂ. ಮಹೇಂದ್ರ ಅವರು, ಕೊಪ್ಪಳ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 16 ಕಡೆಗಳಲ್ಲಿ ಅವೈಜ್ಞಾನಿಕವಾಗಿ ವೇಗಮಿತಿ ರಸ್ತೆ ತಡೆಗಳನ್ನು ಹಾಕಲಾಗಿದ್ದು, ಒಂದು ವಾರದೊಳಗಾಗಿ ತೆರವುಗೊಳಿಸಲಾಗುವುದು. ಹಾಗೂ ಅಗತ್ಯವಿರುವ ಕಡೆಗಳಲ್ಲಿ ವೈಜ್ಞಾನಿಕವಾಗಿ ವೇಗಮಿತಿ ರಸ್ತೆ ತಡೆಗಳನ್ನು ಅಳವಡಿಸಿ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಎಂದರು.
ಅಪಘಾತವಲಯಗಳನ್ನು ಗುರುತಿಸಿ :
*************** ಜಿಲ್ಲೆಯ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿರುವ ಅಪಘಾತ ಸಂಖ್ಯೆಗಳ ಆಧಾರದಲ್ಲಿ ಅಪಘಾತ ವಲಯಗಳನ್ನು ಗುರುತಿಸುವ ಕಾರ್ಯ ಆಗಬೇಕು. ಒಂದು ವಾರದ ಒಳಗಾಗಿ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಅಲ್ಲದೆ ಇಂತಹ ಅಪಘಾತ ವಲಯದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಅಪಘಾತ ಸಂಖ್ಯೆ ಕಡಿಮೆಗೊಳಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕುಡಿದು ವಾಹನ ಚಾಲನೆ ನಡೆಸುವುದನ್ನು ಪತ್ತೆ ಹಚ್ಚಿ, ಅಂತಹ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಕಾರ್ಯ ಸರಿಯಾಗಿ ಆಗಬೇಕು. ನಗರ ಮತ್ತು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ವಾಹನಗಳ ವೇಗಮಿತಿ ನಿಗದಿಪಡಿಸಿ, ಸೂಚನೆಯ ಫಲಕಗಳನ್ನು ಹಾಕಬೇಕು. ವೇಗಮಿತಿಯನ್ನು ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಕಾರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಸಿ ಅವರು ಸೂಚನೆ ನೀಡಿದರು. ಕೊಪ್ಪಳ ಡಿವೈಎಸ್ಪಿ ಶ್ರೀಕಾಂತ್ ಕಟ್ಟಿಮನಿ ಅವರು ಮಾತನಾಡಿ, ಕೊಪ್ಪಳದಲ್ಲಿ ಕುಡಿದು ವಾಹನ ಚಾಲನೆ ಮಾಡುವುದನ್ನು ಪತ್ತೆಹಚ್ಚುವ 05 ಉಪಕರಣಗಳು ಲಭ್ಯವಿದ್ದು, ಕುಡಿದು ವಾಹನ ಚಾಲನೆ, ರಸ್ತೆ ಸಂಚಾರ ನಿಯಮ ಉಲ್ಲಂಘನೆ ಮುಂತಾದ ಪ್ರಕರಣಗಳು ಸೇರಿದಂತೆ ನಿತ್ಯ ಸುಮಾರು 100 ಪ್ರಕರಣಗಳು ದಾಖಲಾಗುತ್ತಿವೆ. ಹೆಲ್ಮೆಟ್ ಬಳಕೆ, ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಪೊಲೀಸ್ ಮತ್ತು ಸಾರಿಗೆ ಇಲಾಖೆಗಳು ಜಂಟಿಯಾಗಿ ಮಾಡುತ್ತಿವೆ ಎಂದರು.
ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಿ :
***************** ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಪ್ರಮುಖ ರಸ್ತೆಗಳು, ಪ್ರಮುಖ ವೃತ್ತಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕಾಗಿರುವ ಸ್ಥಳಗಳನ್ನು ಗುರುತಿಸಬೇಕು. ಅಲ್ಲದೆ ನಗರಸಭೆ, ಪುರಸಭೆ ಅಥವಾ ಪಟ್ಟಣ ಪಂಚಾಯತಿ ವತಿಯಿಂದಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ತುರ್ತು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹಾಗೂ ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಒಟ್ಟು 05 ಕಡೆಗಳಲ್ಲಿ ಟೋಲ್ ಸಂಗ್ರಹ ಕೇಂದ್ರಗಳಿದ್ದು, ಇಲ್ಲಿ ಕೇವಲ ವಾಹನದ ನೋಂದಣಿ ಸಂಖ್ಯೆ ಬೋರ್ಡ್ ಮಾಹಿತಿ ಮಾತ್ರ ಸಿಗುವ ರೀತಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಾಹನದ ಹಾಗೂ ವಾಹನ ಚಾಲಕರ ಪೂರ್ಣ ದೃಶ್ಯ ಬರುವ ರೀತಿಯಲ್ಲಿ ಕ್ಯಾಮೆರಾ ಅಳವಡಿಸಿಲ್ಲ. ಕೆಲ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಇದರಿಂದ ತೊಂದರೆಯಾಗುತ್ತಿದೆ ಎಂಬುದಾಗಿ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಟೋಲ್ ಸಂಗ್ರಹ ಕೇಂದ್ರಗಳಲ್ಲಿ ಸಂಪೂರ್ಣ ದೃಶ್ಯ ಕಾಣುವ ರೀತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಆಯಾ ತಹಸಿಲ್ದಾರರು, ಸಿಸಿ ಕ್ಯಾಮೆರಾ ಅಳವಡಿಕೆಯ ಮೇಲುಸ್ತುವಾರಿಯನ್ನು ವಹಿಸಿ, ಅಳವಡಿಕೆಯ ನಂತರ ವರದಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಆ್ಯಂಬುಲೆನ್ಸ್ ಸ್ಪಂದನೆ ತ್ವರಿತವಾಗಬೇಕು :
***************** ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸೇವೆಗಾಗಿ ಕರೆ ಬಂದ ಕೂಡಲೆ, ಅತ್ಯಂತ ಕನಿಷ್ಟ ಸಮಯದಲ್ಲಿ ಆ್ಯಂಬುಲೆನ್ಸ್ ಸೇವೆ ಲಭ್ಯವಾಗುವಂತಾಗಬೇಕು. ಅಪಘಾತ ಸಂದರ್ಭದಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯವಾಗಿರುವುದರಿಂದ, ಆ್ಯಂಬುಲೆನ್ಸ್ನವರು ತಕ್ಷಣ ಸ್ಪಂದಿಸಿ, ಆದಷ್ಟು ತ್ವರಿತವಾಗಿ ಅಪಘಾತ ಸ್ಥಳಕ್ಕೆ ಧಾವಿಸಬೇಕು. ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ಸ್ಪಂದನೆ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿನ 108 ಸೇರಿದಂತೆ ವಿವಿಧ ಸರ್ಕಾರಿ ಆ್ಯಂಬುಲೆನ್ಸ್ಗಳ ವಾಹನ ಓಡಾಟ ವಿವರ, ಕರೆಯ ಸಮಯ, ಸ್ಪಂದನೆಗೆ ತೆಗೆದುಕೊಂಡ ಸಮಯ ಒಳಗೊಂಡ ಸಂಪೂರ್ಣ ವಿವರವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಡಿಸಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗಡೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್ ಮಹಮ್ಮದ್ ಬಾಷಾ, ಈಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಬೋರಯ್ಯ, ಡಿವೈಎಸ್ಪಿ ಶ್ರೀಕಾಂತ್ ಕಟ್ಟಿಮನಿ, ಕೊಪ್ಪಳ ನಗರಸಭೆ ಪೌರಾಯುಕ್ತ ಪರಮೇಶ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ತಹಸಿಲ್ದಾರರು, ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Subscribe to:
Posts (Atom)