Saturday, 4 August 2018

ಮಾಧ್ಯಮ ಅಕಾಡೆಮಿಯಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಧರರಿಗೆ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಆ. 04 (ಕರ್ನಾಟಕ ವಾರ್ತೆ): ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಕಚೇರಿಯಲ್ಲಿ ತರಬೇತಿ ಕೊಡಿಸುವ ಸಲುವಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಕರ್ನಾಟಕ ಮಾಧ್ಯಮ ಅಕಾಡೆಮಿಯು ಹಲವು ವರ್ಷಗಳಿಂದ ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತ ಬರುತ್ತಿದೆ. ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಕೌಶಲ್ಯಾಭಿವೃದ್ಧಿಗೆ ಶ್ರಮಿಸುತ್ತಿದೆ.  ಈ ದಿಸೆಯಲ್ಲಿ ಮಾಧ್ಯಮ ಕಚೇರಿಗಳ ಸಹಕಾರವನ್ನು ಪಡೆದು ಪತ್ರಕರ್ತರ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳುವುದು ಅಕಾಡೆಮಿ ರೂಪಿಸಿರುವ ಹೊಸ ಯೋಜನೆಯಾಗಿದೆ.  ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಮುಗಿಸಿ ಹೊರ ಬರುವ ಅಭ್ಯರ್ಥಿಗಳಿಗೆ ಮಾಧ್ಯಮ ಕಚೇರಿಯ ಎಲ್ಲಾ ವಿಭಾಗಗಳಲ್ಲಿ ತರಬೇತಿಯನ್ನು ಕೊಡಿಸುವ ಮೂಲಕ ತರಬೇತಿ ಹೊಂದಿದ ಪತ್ರಕರ್ತರಾಗುವಂತೆ ಸಿದ್ಧಪಡಿಸುವುದು ಅಕಾಡೆಮಿಯ ಉದ್ದೇಶವಾಗಿದೆ.
     ಪ್ರಸಕ್ತ ವರ್ಷದಲ್ಲಿ ಪರಿಶಿಷ್ಟ ಜಾತಿ ,  ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿಯಲ್ಲಿ 4 ಮಂದಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಧರರಿಗೆ ಮತ್ತು ಹಿಂದುಳಿದ ವರ್ಗಗಳ 2 ಮಂದಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಧರರಿಗೆ (ಒಟ್ಟು 6 ಮಂದಿ)  ಪ್ರಮುಖ ದಿನಪತ್ರಿಕೆ / ಎಲೆಕ್ಟ್ರಾನಿಕ್ ಮಾಧ್ಯಮಗಳ ಕಚೇರಿಯಲ್ಲಿ 10 ತಿಂಗಳ ಕಾಲ ತರಬೇತಿ ಕೊಡಿಸಲು ಉದ್ದೇಶಿಸಲಾಗಿದೆ.   ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ  ಮಾಸಿಕ ತಲಾ 20 ಸಾವಿರ ರೂ. ಗಳ ಶಿಷ್ಯ ವೇತನ ನೀಡಲಾಗುವುದು.
    ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಂವಹನ ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ 28 ವರ್ಷ ಒಳಗಿನ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಸ್ವವಿವರ, ವಿದ್ಯಾರ್ಹತೆ ಪತ್ರಗಳು, ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಛಾಯಾಚಿತ್ರಗಳನ್ನು ಸ್ಕ್ಯಾನ್ ಮಾಡಿ  ಇಮೇಲ್ ವಿಳಾಸ  traineekma@gmail.com ಮೂಲಕ ಅಥವಾ ಅಂಚೆ ಮೂಲಕ ಆಗಸ್ಟ್ 31 ರ ಒಳಗಾಗಿ ಕಳುಹಿಸಲು ಕೋರಿದೆ.  ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.  ಈ ಹಿಂದೆ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment