Friday, 10 August 2018

ಮಕ್ಕಳಲ್ಲಿನ ರಕ್ತಹೀನತೆ ತಡೆಗೆ ಜಂತುಹುಳು ನಿವಾರಣೆ ಅಗತ್ಯ- ವೆಂಕಟ್ ರಾಜಾ


ಕೊಪ್ಪಳ ಆ. 10 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಜಂತು ಹುಳ ನಿವಾರಣಾ ಅಂಗವಾಗಿ ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಇವರ ಸಹಯೋಗದಲ್ಲಿ ನಗರದ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರದಂದು ಆಯೋಜಿಸಲಾದ ಜಿಲ್ಲಾ ಮಟ್ಟದ "ರಾಷ್ಟ್ರೀಯ ಜಂತು ಹುಳ ನಿವಾರಣಾ" ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ "ಅಲ್ಬೆಂಡಜೋಲ್" ಮಾತ್ರೆ ನೀಡುವುದರ ಮೂಲಕ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಚಾಲನೆ ನೀಡಿದರು. 

    ಬಳಿಕ ಮಾತನಾಡಿದ ಅವರು, ಮಕ್ಕಳಲ್ಲಿ ಕಂಡುಬರುವ ಜಂತುಹುಳ ನಿವಾರಣೆಗಾಗಿ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಜಂತು ಹುಳ ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಒಂದು ಮಹತ್ವದ ಹೆಜ್ಜೆಯಾಗಿದೆ.  ಜಂತುಹುಳುವಿನ ಬಾಧೆಯ ಪ್ರಮುಖ ಲಕ್ಷಣಗಳೆಂದರೆ, ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಠಿಕತೆ ಹಾಗೂ ಹೊಟ್ಟೆನೋವು.  ಇದನ್ನು ತಡೆಗಟ್ಟಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿದ ಈ ಕಾರ್ಯಕ್ರಮ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಎಲ್ಲಿ ಸ್ವಚ್ಛತೆ ಕೊರತೆ ಇರುತ್ತದೆಯೋ ಅಂತಹ ಸ್ಥಳಗಳಲ್ಲಿ ಜಂತುಹುಳಗಳ ಲಭ್ಯತೆ ಹೆಚ್ಚಾಗಿರುತ್ತದೆ.  ಆದ್ದರಿಂದ ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು.  ಜಂತುಹುಳ ನಿವಾರಣೆಗಾಗಿ 01 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳನ್ನು ನಿಮ್ಮ ಹತ್ತಿರದಲ್ಲಿರುವ ಶಾಲೆಗಳಿಗೆ ಹಾಗೂ ಅಂಗನವಾಡಿ ಕೆಂದ್ರಗಳಿಗೆ ಕಳುಹಿಸಿ ಜಂತುಹುಳ ನಿವಾರಣೆ ಮಾತ್ರೆಯನ್ನು ಉಚಿತವಾಗಿ ಪಡೆಯಿರಿ ಎಂದು ತಿಳಿಸಿದರು.


    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಮಾತನಾಡಿ, ಪ್ರತಿ 06 ತಿಂಗಳಿಗೊಮ್ಮೆ ಜಂತು ಹುಳ ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.  01 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಅಂಗನವಾಡಿ ಕೇಂದ್ರಗಳಲ್ಲಿ, ಸರ್ಕಾರಿ ಶಾಲೆಗಳಲ್ಲಿ ಹಾಗೂ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ "ಅಲ್ಬೆಂಡಜೋಲ್" ಎಂಬ ಮಾತ್ರೆಯನ್ನು ನೀಡಲಾಗುತ್ತದೆ.  ಈ ಮಾತ್ರೆಯನ್ನು ಬಾಯಿಯಲ್ಲಿ ಹಾಕಿಕೊಂಡು ಕಡಿದು ತಿಂದು ನುಂಗಬೇಕು.  ಈ ಮಾತ್ರೆ ತೆಗೆದುಕೊಳ್ಳವುದರಿಂದ ಜಂತುಹುಳುಗಳ ನಿವಾರಣೆಯಾಗಲಿದೆ.  ಮಕ್ಕಳಿಗೆ ಇದರಿಂದ ತುಂಬ ಪ್ರಯೋಜನೆಗಳಿದ್ದು, ಪ್ರಮುಖವಾಗಿ ರಕ್ತಹೀನತೆ ತಡೆಗಟ್ಟಬಹುದು.  ಪೌಷ್ಠಿಕ ಆಹಾರ ಸೇವನೆ, ರೋಗನಿರೋಧಕ ಶಕ್ತಿ ಹಾಗೂ ಓದುವ ಆಸಕ್ತಿ ಹೆಚ್ಚಾಗುವುದು.  ದೈನಂದಿನ ಕಾರ್ಯಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದು.  ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುವುದನ್ನು ತಡೆಗಟ್ಟುವ ಮೂಲಕ ಜಂತುಹುಳು ಸೋಂಕನ್ನು ತಡೆಗಟ್ಟಬಹುದು.  ಜಂತುಹುಳ ನಿವಾರಣೆಯಲ್ಲಿ ಮುಂಜಾಗೃತ ಕ್ರಮವಾಗಿ ಕೈಯಲ್ಲಿರುವ ಉಗುರುಗಳನ್ನು ನಿರಂತರವಾಗಿ ಸ್ವಚ್ಛಗೊಳಿಸಬೇಕು.  ಶುದ್ಧವಾದ ನೀರು ಕುಡಿಯುವುದು, ಶುದ್ಧ ನೀರಿನಿಂದ ಹಣ್ಣು ಮತ್ತು ತರಕಾರಿಗಳನ್ನು ತೊಳೆದು ಉಪಯೋಗಿಸಬೇಕು.  ಕಡ್ಡಾಯವಾಗಿ ಮಕ್ಕಳು ಸಹಿತ ಶೌಚಾಲಯ ಬಳಸಬೇಕು.  ಪಾದರಕ್ಷೆಗಳನ್ನು ಧರಿಸುವುದು, ಊಟದ ಮೊದಲು ಹಾಗೂ ಶೌಚಾಲಯ ಉಪಯೋಗಿಸಿದ ನಂತರ ಸಾಬೂನಿಂದ ಕೈ ತೊಳೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.  

    ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಅಲಕನಂದಾ ಮಳಗಿ, ಶಾಲಾ ಮುಖ್ಯೋಪಾಧ್ಯಾಯರಾದ ಎನ್.ಹೆಚ್ ಪಾಟೀಲ್, ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ, ಶಿಕ್ಷಣ ಇಲಾಖೆ ಅಧಿಕಾರಿ ಮಹಾದೇವಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ತಾಲೂಕಾ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿಂಧು ಯಲಿಗಾರ್, ಬಿ.ಹೆಚ್.ಇ.ಓ. ಗಂಗಮ್ಮ, ಕಿ.ಆ.ಸ. ವಂದನಾ ಸೇರಿದಂತೆ ಆಶಾ ಮೇಲ್ವಿಚಾರಕರು, ಶಾಲಾ ಸಹ ಶಿಕ್ಷಕರು, ವಿಧ್ಯಾರ್ಥಿಗಳು, ಆರೋಗ್ಯ ಇಲಾಖೆಯ ಹಾಗೂ ಆರ್.ಬಿ.ಎಸ್.ಕೆ ತಂಡದ ವೈದ್ಯಾಧಿಕಾರಿ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Post a Comment