Friday, 3 August 2018

ಯುವ ಶಕ್ತಿ ಸಂಘ ಯೋಜನೆಯಡಿ ಸುತ್ತು ನಿಧಿ : ಪ್ರಸ್ತಾವನೆಗೆ ಆಹ್ವಾನ


ಕೊಪ್ಪಳ ಆ. 03 (ಕರ್ನಾಟಕ ವಾರ್ತೆ): ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ "ಯುವ ಶಕ್ತಿ ಸಂಘ ಯೋಜನೆ" ಅಡಿಯಲ್ಲಿ ಯುವ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸುತ್ತುನಿಧಿಯನ್ನು ನೀಡಲಾಗುತ್ತಿದ್ದು, ಅರ್ಹ ಸಂಘಗಳಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ.
ಯುವ ಶಕ್ತಿ ಸಂಘ ಯೋಜನೆಯಡಿ ಯುವ ಸಂಘಗಳು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸುತ್ತುನಿಧಿ ಒದಗಿಸಲು ಜಿಲ್ಲೆಯ 01 ಉತ್ತಮ ಯುವಕ/ ಯುವತಿ ಸಂಘಕ್ಕೆ ರೂ.05 ಲಕ್ಷಗಳ ಸುತ್ತುನಿಧಿ ನೀಡಲಾಗುವುದು.  ಅದರಂತೆ ರಾಜ್ಯಾದ್ಯಂತ ಯುವಶಕ್ತಿ ರಚಿಸಿ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಯುವ ಜನರನ್ನು ತೊಡಗಿಸುವುದರ ಮೂಲಕ ಬಡ ಯುವ ಜನರ ಆದಾಯವನ್ನು ಹೆಚ್ಚಿಸಿ, ಆರ್ಥಿಕ ಸ್ಥಿರತೆಯನ್ನು ಮೂಡಿಸುವುದು ಯುವಶಕ್ತಿ ಸಂಘದ ಆಶಯವಾಗಿದೆ.   
ಯೋಜನೆಯ ಉದ್ದೇಶ :
******* ಯುವ ಜನರಿಗೆ ಆರ್ಥಿಕ ಪ್ರಗತಿಯನ್ನು ಸಾಧಿಸುವಂತಹ ಹಾಗೂ ಸಾಮಾಜಿಕ ಬದಲಾವಣೆಗೆ ಸೂಕ್ತ ವಾತಾವರಣವನ್ನು ಮೂಡಿಸುವಂತಹ ಹಾಗೂ  ಯುವ ಶಕ್ತಿ ಸಂಘಗಳನ್ನು ರಚಿಸುವದು.  ಅವರಲ್ಲಿ ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆ ಮೂಡಿಸಿ ಸಂಪನ್ಮೂಲಗಳ ಮೇಲೆ ಹತೋಟಿ ಮತ್ತು ಸಾಮಿಪ್ಯವನ್ನು ಸಾಧಿಸುವುದು.  ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ಯುವ ಜನರನ್ನು ತೊಡಗಿಸುವುದರ ಮೂಲಕ ಬಡ ಯುವಜನರ  ಆದಾಯವನ್ನು ಹೆಚ್ಚಿಸಿ ಆರ್ಥಿಕ ಸ್ಥಿರತೆಯನ್ನು ಮೂಡಿಸಿ ಬಡತನ ನಿವಾರಣೆ ಮಾಡುವುದು.  ವಿವಿಧ ಇಲಾಖೆಗಳ ಸೇವೆಗಳನ್ನು ಒಗ್ಗೂಡಿಸುವ ಮೂಲಕ ಸಂಘದ ಸದಸ್ಯರುಗಳಿಗೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯ ದೊರೆಯುವಂತೆ ಕ್ರಮ ವಹಿಸುವುದು ಯೋಜನೆಯ ಉದ್ದೇಶವಾಗಿದೆ.
         ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಲು ಆ. 07 ಕೊನೆಯ ದಿನವಾಗಿದ್ದು, ಪ್ರಸ್ತಾವನೆ ಸಲ್ಲಿಸುವ ಸಂಘವು ನಿಯಾಮಾನುಸಾರ ಸೊಸೈಟಿ ನೊಂದಣಿ ಕಾಯ್ದೆ-1960ರ ಅಡಿಯಲ್ಲಿ ಕಡ್ಡಾಯವಾಗಿ ನೊಂದಣಿಯಾಗಿರಬೇಕು.  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಮಾನ್ಯತೆ ಪಡೆದು ಕಾಲಕಾಲಕ್ಕೆ ನವೀಕರಿಸಿರಬೇಕು.  ಸಂಘದಲ್ಲಿನ ಸದಸ್ಯರ ವಯೋಮಿತಿಯು 15 ರಿಂದ 35 ವರ್ಷದೊಳಗಿರಬೇಕು.  ಕಡ್ಡಾಯವಾಗಿ ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹೆಸರಿನಲ್ಲಿ ಜಂಟಿ ಖಾತೆ ಹೊಂದಿರಬೇಕು.  ಸಂಘದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ/ ಯುವತಿಯರಿಗೆ ಹೆಚ್ಚಿನ ಆದ್ಯತೆ ನೀಡುವುದು.  ಸರ್ಕಾರದ ಅನುದಾನವನ್ನು ಕೇವಲ ಸಂಘದ ಸದಸ್ಯರಿಗೆ ಸ್ವ-ಸಹಾಯ ಉದ್ದೇಶಕ್ಕೆ ಮಾತ್ರ ಸಾಲವಾಗಿ ನೀಡುವುದು ಮತ್ತು ಸಂಘದ ಸದಸ್ಯರಲ್ಲದವರಿಗೆ ನೀಡಲಾಗುವುದಿಲ್ಲ.  ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದು ಕಂಡುಬಂದಲ್ಲಿ ಸುತ್ತು ನಿಧಿಯನ್ನು ನಿಗದಿಪಡಿಸಿದ ಅವಧಿಯೊಳಗೆ ಸರಕಾರಕ್ಕೆ ಮರುಪಾವತಿ ಮಾಡದಿದ್ದಲ್ಲಿ, ಸಂಘದ ಎಲ್ಲಾ ಸದಸ್ಯರಿಂದ ಬಾಕಿ ಹಣವನ್ನು ಭೂಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲಾಗುವುದು.  ಹಾಗಾಗಿ ಪಡೆದುಕೊಂಡ ಅನುದಾನಕ್ಕೆ ಸಂಘದ ಎಲ್ಲಾ ಸದಸ್ಯರು ಹೊಣೆಗಾರರಾಗಿರುತ್ತಾರೆ. 
     ಪ್ರಸ್ತಾವನೆ ಸಲ್ಲಿಸಲಿಚ್ಛಿಸುವ ಅರ್ಹ ಸಂಘದವರು ಅಗತ್ಯ ದಾಖಲೆಗಳೊಂದಿಗೆ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರಿಗೆ ನಿಗದಿತ ಅವಧಿಯೊಳಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಇಲಾಖೆಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08539-201400 ಕ್ಕೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಹಿಮೂದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment