Wednesday, 8 August 2018

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ : ಶಸ್ತ್ರಗಳನ್ನು ಠೇವಣಿ ಮಾಡುವಂತೆ ಸೂಚನೆ


ಕೊಪ್ಪಳ ಆ. 08 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ವಿವಿದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಪರವಾನಿಗೆ ಪಡೆದ ಶಸ್ತ್ರಗಳನ್ನು ಪೊಲೀಸ್ ಇಲಾಖೆಯಲ್ಲಿ ಠೇವಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
    ರಾಜ್ಯ ಚುನಾವಣಾ ಆಯೋಗವು ಪ್ರಸಕ್ತ ಸಾಲಿನಲ್ಲಿ ಅವಧಿ ಪೂರ್ಣಗೊಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಗಳನ್ನು ಘೋಷಣೆ ಮಾಡಿದ್ದು, ಸೆಪ್ಟೆಂಬರ್. 01 ರವರೆಗೆ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ.  ಕೊಪ್ಪಳ ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ನಗರಸಭೆ, ಕುಷ್ಟಗಿ ಪುರಸಭೆ ಹಾಗೂ ಯಲಬುರ್ಗಾ ಪಟ್ಟಣ ಪಂಚಾಯತಿ ಸೇರಿದಂತೆ ಜಿಲ್ಲೆಯ ಒಟ್ಟು 04 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯನ್ನು ಮುಕ್ತ ಶಾಂತ ರೀತಿಯಿಂದ ಮತ್ತು ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಕಾನೂನು ಸುವ್ಯವಸ್ತೆ ಮತ್ತು ಶಾಂತಿ ಪಾಲನೆಗಾಗಿ ಭಾರತ ಶಸ್ತ್ರ ಕಾಯ್ದೆ 1959 ಕಲಂ 74ರ (1) (ಎ) ಪ್ರಕಾರ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಪರವಾನಿಗೆ ಪಡೆದ ಶಸ್ತ್ರಗಳನ್ನು ಪೊಲೀಸ್ ಇಲಾಖೆಯಲ್ಲಿ ಠೇವಣಿ ಮಾಡಿಕೊಳ್ಳಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಿದೆ.  ಈ ಆದೇಶವು ರಾಷ್ಟ್ರೀಕೃತ ಬ್ಯಾಂಕಗಳಿಗೆ ಹಾಗೂ ಆರ್.ಬಿ.ಐ ನಿಂದ ಮಾನ್ಯತೆ ಪಡೆದಿರುವ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Post a Comment