Saturday, 4 August 2018

ಮೌಲಾನಾ ಆಜಾದ ಮಾದರಿ ಶಾಲೆ : 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ


ಕೊಪ್ಪಳ ಆ. 04 (ಕರ್ನಾಟಕ ವಾರ್ತೆ): ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಹೊಸದಾಗಿ ಪ್ರಾರಂಭವಾಗುತ್ತಿರುವ ವಸತಿ ರಹಿತ ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ (ಆಂಗ್ಲ ಮಾಧ್ಯಮ) ಶಾಲೆ ದಿಡ್ಡಿಕೇರಾ ಓಣಿ, ಕೊಪ್ಪಳ ಶಾಲೆಯಲ್ಲಿ  6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಣೆಯಾಗುತ್ತಿರುವ ವಸತಿ ರಹಿತ ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ (ಆಂಗ್ಲ ಮಾಧ್ಯಮ) ಶಾಲೆಯನ್ನು ಕೊಪ್ಪಳ ನಗರದ ದಿಡ್ಡಿಕೇರಾ ಓಣಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಪ್ರಾರಂಭಿಸಲಾಗಿದ್ದು, 6ನೇ ತರಗತಿಗೆ ನೇರವಾಗಿ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. 
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  ಕುಟುಂಬದ ವಾರ್ಷಿಕ ವರಮಾನವು 1 ಲಕ್ಷ ರೂ. ಗಳಿಗೆ ಮೀರಿರಬಾರದು.  ಶಾಲೆಯಲ್ಲಿ 60 ಸ್ಥಾನಗಳನ್ನು ನಿಗದಿಪಡಿಸಲಾಗಿದ್ದು, ಶೇ.75 ಸ್ಥಾನಗಳನ್ನು ಅಲ್ಪಸಂಖ್ಯಾತರು ಹಾಗೂ ಶೇ.25 ಇತರೆ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು.  ಅಂಗವಿಕಲ ವಿದ್ಯಾರ್ಥಿಗಳು, ವಿಶೇಷ ಗುಂಪಿಗೆ ಸೇರಿದ ಅನಾಥ ಮಕ್ಕಳು, ವಿಧವೆಯರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು, ಇತ್ಯಾದಿಗಳಿಗೆ ಶೇ. 03 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.  ಅರ್ಜಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಥವಾ ವೆಬ್‍ಸೈಟ್   http://dom.karnataka.gov.in/koppal   ನಲ್ಲಿ ಸಹ ಪಡೆಯಬಹುದಾಗಿದೆ. 
ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ದೃಢೀಕರಿಸಿದ ಪ್ರಮಾಣ ಪತ್ರ, ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಅಂಕ ಪಟ್ಟಿಯ ದೃಢೀಕೃತ ಪ್ರತಿ, ವಾಸಸ್ಥಳ ಪ್ರಮಾಣ ಪತ್ರ, ಆಧಾರ ಕಾರ್ಡ ಹಾಗೂ ವಿದ್ಯಾರ್ಥಿ ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ 2 ಭಾವಚಿತ್ರಗಳೊಂದಿಗೆ ಆ. 10 ರೊಳಗಾಗಿ ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ (ಆಂಗ್ಲ ಮಾಧ್ಯಮ) ಶಾಲೆ ದಿಡ್ಡಿಕೇರಾ ಓಣಿ, ಕೊಪ್ಪಳ ಶಾಲೆಯಲ್ಲಿ ಅರ್ಜಿ ಸಲ್ಲಿಸಿ, ನೇರವಾಗಿ ಶಾಲೆಗೆ ಪ್ರವೇಶ ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-225070 ಕ್ಕೆ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment