Thursday, 2 August 2018

ಪ್ರತಿ ತಿಂಗಳ 07 ರಂದು ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆ


ಕೊಪ್ಪಳ ಆ. 02 (ಕರ್ನಾಟಕ ವಾರ್ತೆ): ಪ್ರತಿ ತಿಂಗಳು 07ನೇ ತಾರೀಖು "ಸೋಷಿಯಲ್ ಆಡಿಟ್ ಆಹಾರ ಅದಾಲತ್" ಸಭೆ ಆಯಾ ಗ್ರಾಮ ಪಂಚಾಯಿತಿ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯಲಿವೆ ಎಂದು ಕೊಪ್ಪಳ ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. 
    ಆಯುಕ್ತರು ಆಹಾರ ಇಲಾಖೆ ಬೆಂಗಳೂರು ಇವರು ಕೊಪ್ಪಳ ಜಿಲ್ಲೆಯಲ್ಲಿ ಬರುವ ನ್ಯಾಯಬೆಲೆ ಅಂಗಡಿಗಳ ಮಟ್ಟದ ಜಾಗೃತಿ ಸಮಿತಿ ಸದಸ್ಯರು ಪ್ರತಿ ಮಾಹೆ 7ನೇ ತಾರೀಖು 2017-18ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿಯಲ್ಲಿ ಸೋಷಿಯಲ್ ಆಡಿಟ್ ಆಹಾರ ಅದಾಲತ್ ಸಭೆಯನ್ನು ನಡೆಸಿ, ಸಭೆಯ ನಡವಳಿ ವರದಿಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿರುತ್ತಾರೆ.  ಇದರನ್ವಯ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಜಾಗೃತಿ ಸಮಿತಿ ಸದಸ್ಯರು ಪ್ರತಿ ತಿಂಗಳು 7ನೇ ತಾರೀಖು ಆಯಾ ಗ್ರಾಮ ಪಂಚಾಯಿತಿ ಹಾಗೂ ನ್ಯಾಯಾಬೆಲೆ ಅಂಗಡಿಗಳಲ್ಲಿ "ಸೋಷಿಯಲ್ ಆಡಿಟ್ ಆಹಾರ ಅದಾಲತ್" ಸಭೆಯನ್ನು ಆಯೋಜಿಸಬೇಕು.  ಜಿಲ್ಲೆಯ ಪಡಿತರ ಚೀಟಿದಾರರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Post a Comment