Saturday, 7 July 2018

ಸಸಿ ನಾಟಿ ಮಾಡಲು ರೈತರಿಗೆ ತೋಟಗಾರಿಕೆ ಇಲಾಖೆಯ ಸಲಹೆ


ಕೊಪ್ಪಳ ಜು. 07 (ಕರ್ನಾಟಕ ವಾರ್ತೆ): ಸಸ್ಯ ಸಂತೆ ಕಾರ್ಯಕ್ರಮ ಏರ್ಪಡಿಸಿ, ಸಸಿಗಳನ್ನು ವಿತರಿಸಿದ್ದ, ತೋಟಗಾರಿಕೆ ಇಲಾಖೆ, ಇದೀಗ ಸಸಿ ನಾಟಿ ಮಾಡಲು ರೈತರಿಗೆ ಉಪಯುಕ್ತ ಸಲಹೆಗಳನ್ನು ನೀಡಿದೆ.
     ಇತ್ತೀಚಿಗೆ ತೋಟಗಾರಿಕೆ ಇಲಾಖೆಯಿಂದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2018 ನ್ನು ಹಮ್ಮಿಕೊಳ್ಳಲಾಗಿತ್ತು.  10 ದಿನಗಳ ಕಾಲ ನಡೆದ ಈ ಸಸ್ಯಸಂತೆಯಲ್ಲಿ ತೋಟಗಾರಿಕೆ ಇಲಾಖೆಯ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಸಸಿ/ಕಸಿಗಳನ್ನು ರೈತರಿಗೆ/ಸಾರ್ವಜನಿಕರಿಗೆ ನೇರವಾಗಿ ಯೋಗ್ಯ ದರದಲ್ಲಿ ಪೂರೈಸುವ ಉದ್ದೇಶದಿಂದ ಆರಂಭಿಸಿದ ಈ ಸಸ್ಯಸಂತೆಯಲ್ಲಿ ಮಾವು, ಸೀಬೆ, ಸಪೋಟ, ವಿವಿಧ ಹೂವಿನ ಸಸಿಗಳು ಅಲಂಕಾರಿಕ ಸಸಿಗಳು, ತೆಂಗು ಮುಂತಾದವುಗಳನ್ನು ರೈತರು/ನಾಗರಿಕರು ಖರೀದಿಸಿದ್ದಾರೆ.
    ಬಹು ವಾರ್ಷಿಕ ಬೆಳೆಗಳಾದ ಮಾವು, ಸೀಬೆ, ಸಪೋಟ, ತೆಂಗು ಮುಂತಾದ ಬೆಳೆಗಳನ್ನು ನಾಟಿ ಮಾಡುವ ವಿಧಾನ ಬಹು ಮುಖ್ಯ. ಕಟ್ಟಡಕ್ಕೆ ಅಡಿಪಾಯ ಇದ್ದಂತೆ ಬಹುವಾರ್ಷಿಕ ಬೆಳೆಗಳ ಬೇರು ಬೆಳವಣಿಗೆ ಅತೀ ಮುಖ್ಯ. ಸುಮಾರು 30-40 ವರ್ಷಗಳವರೆಗೆ ಇಳುವರಿ ಕೊಡುವ ಈ ಬೆಳೆಗಳು ಸಧೃಡವಾಗಬೇಕಾದಲ್ಲಿ ಸೂಕ್ತ ನಾಟಿ ವಿಧಾನ ಅನುಸರಿಸಬೇಕು.  ಯಲಬುರ್ಗಾದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಲಿಂಗನಗೌಡ, ಸಹಾಯಕ ತೋಟಗಾರಿಕೆ ಅಧಿಕಾರಿ ಉಮೇಶ ಕಾಳೆ ಹಾಗೂ ಹಾರ್ಟಿಕ್ಲಿನಿಕ್ ವಿಷಯ ತಜ್ಞ ವಾಮನಮೂರ್ತಿರವರು ಇತ್ತೀಚೆಗೆ ಮಾವು ನಾಟಿ ವಿಧಾನದ ಪ್ರಾತ್ಯಕ್ಷಿತೆಯನ್ನು ಹಮ್ಮಿಕೊಂಡಿದ್ದರು.
     ಅದರಂತೆ ರೈತರು ತೋಟಗಾರಿಕೆ ಮಾಡಬೇಕಾದ ಜಮೀನಿನಲ್ಲಿ ಮಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಒಡೆದು ಭೂಮಿ ಹದ ಮಾಡಿಕೊಳ್ಳಬೇಕು. ನಂತರ ನಾಟಿ ಮಾಡಿದ ಒಂದು ತಿಂಗಳು ಮೊದಲೇ ನಿರ್ಧಾರಿತ ಅಂತರ (5 ಮೀ ಅಥವಾ 8 ಮೀ ಅಥವಾ 10 ಮೀ) ದಲ್ಲಿ 2 1/2 ಯಿಂದ 3 ಘನ ಅಡಿ ಗಾತ್ರದ ಗುಂಡಿಗಳನ್ನು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ತೆರದಿಟ್ಟುಕೊಳ್ಳಬೇಕು. ಇದರಲ್ಲಿ ಬೇವು, ಹೊಂಗೆ ಮುಂತಾದ ಸೊಪ್ಪುಗಳನ್ನು 5-10 ಕಿಲೊ ಗ್ರಾಂ ನಷ್ಟು ಕತ್ತರಿಸಿ ಹಾಕಿ ಮೇಲಿನ ಮಣ್ಣನ್ನು ಅರ್ಧದಷ್ಟು ತುಂಬಿ ನೀರು ಹಾಯಿಸಿ ಬಿಸಿಲು, ಗಾಳಿಗೆ ಚೆನ್ನಾಗಿ ಹದವಾಗುವಂತೆ ಮಾಡಬೇಕು.  ಆಯ್ದ ಬೆಳೆ, ಆಯ್ದ ತಳಿ ಸಸಿ/ಕಸಿಗಳನ್ನು ತಂದು 15 ದಿನಗಳವರೆಗೆ ನೆರಳಲ್ಲಿ ಸಾಲಾಗಿಟ್ಟು ಸಂಜೆ ಹೊತ್ತು ತೆಳುವಾಗಿ ರೋಸ್ ಕ್ಯಾನ್‍ನಿಂದ ನೀರುಣಿಸಬೇಕು. ಗುಂಡಿ ತೆಗೆದು 3-4 ವಾರಗಳ ನಂತರ ನಾಟಿ ಮಾಡುವುದು ಸೂಕ್ತ.
ನಾಟಿ ಮಾಡುವ ಬಗೆ : ನಾಟಿ ಮಾಡುವ ಹಿಂದಿನ ದಿನ ಗುಂಡಿಗಳನ್ನು ನೀರಿನಿಂದ ತುಂಬಿಸಿಡಬೇಕು. ಸಮ ಪ್ರಮಾಣ (1:1:1) ಮಣ್ಣು, ಮರಳು ಮತ್ತು ಕೊಟ್ಟಿಗೆ ಗೊಬ್ಬರ, ಫೊರೇಟ 10 ಜಿ. ಗುಳಿಗೆ, ಸಿಂಗಲ ಸುಪರ ಫಾಸ್ಪೇಟ ಗೊಬ್ಬರ ಸಿದ್ಧಪಡಿಸಿಕೊಳ್ಳಬೇಕು. ಆಸರೆಗಾಗಿ ಕೋಲು ಮತ್ತು ಕಟ್ಟಲು ದಾರ ಇವುಗಳು ಇರುವುದು ಸೂಕ್ತ.    ನಾಟಿ ಮಾಡುವಾಗ 1:1:1 ಮಣ್ಣು, ಮರಳು ಮತ್ತು ಕೊಟ್ಟಿಗೆ ಗೊಬ್ಬರ ಬೆರೆಸಿರಿ. ನಂತರ ಸಸಿ/ಕಸಿಯನ್ನು ಪ್ಲಾಸ್ಟಿಕ ಚೀಲದಿಂದ ಬೇರ್ಪಡಿಸಿ ಗುಂಡಿಯ ಮಧ್ಯಭಾಗದಲ್ಲಿ ಸಸಿ ಸುತ್ತ ಮಣ್ಣು ಇರುವಷ್ಟು ತೆಗ್ಗು ಮಾಡಿ ಮಣ್ಣಿನ ಉಂಡೆಯ ಜೊತೆಗೆ ಕಸಿ ಮಾಡಿದ ಭಾಗ ಮಣ್ಣಿನ ಮೇಲೆ ಇರುವಂತೆ ನೆಟ್ಟು ಸುತ್ತಲೂ ಕಾಲಿನಿಂದ ಚೆನ್ನಾಗಿ ತುಳಿಯಬೇಕು. ಗುಂಡಿಯಲ್ಲಿ 6 ಇಂಚಿನಷ್ಟು ಜಾಗವನ್ನು ಮೇಲೆ ಖಾಲಿ ಬಿಟ್ಟು ಆಸರೆ ಕೋಲನ್ನು ನೆಟ್ಟು ದಾರದಿಂದ ಕಟ್ಟಬೇಕು. 10-15 ಗ್ರಾಂ ನಷ್ಟು  ಫೋರೇಟ ಜಿ. ಮತ್ತು 25 ಗ್ರಾಂ ಗುಳಿಗೆಯನ್ನು ಸುತ್ತಲೂ ಉದುರಿಸಿ ರೋಸ್ ಕ್ಯಾನ್‍ನಿಂದ ನೀರುಣಿಸಬೇಕು. ಕಸಿ ಮಾಡಿದ ಜಾಗದಲ್ಲಿ ಅಂಟಿಕೊಂಡ ಪ್ಲಾಸ್ಟಿಕ್‍ನ್ನು ನಿಧಾನವಾಗಿ ಕಸಿ ಭಾಗಕ್ಕೆ ಹಾನಿಯಾಗದಂತೆ ತೆಗೆದು ಹಾಕಬೇಕು.  ಹೀಗೆ ನಾಟಿ ಮಾಡಿದ ಸಸಿಗಳು ಆರು ತಿಂಗಳಲ್ಲಿ ಚೆನ್ನಾಗಿ ಬೇರು ಬಿಟ್ಟು ಸಮೃದ್ಧವಾಗಿ ಬೆಳೆಯುತ್ತವೆ. 6 ತಿಂಗಳ ನಂತರ ಶಿಫಾರಿತ ಪ್ರಮಾಣದಲ್ಲಿ  ಗೊಬ್ಬರ ನೀಡಬೇಕು.
    ವಿವಿಧ ಸಸಿಗಳನ್ನು ನೆಡಲು ವಿವಿಧ ಗಾತ್ರದ ಗುಂಡಿಗಳನ್ನು ತೆಗೆಯ ಬೇಕಾಗುತ್ತದೆ. ಇದನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ತಿಳಿದುಕೊಳ್ಳಬೇಕು.  ಬೆಳವಣಿಗೆ ಹಂತದಲ್ಲಿ ನೀರು/ಪೋಷಕಾಂಶಗಳ ನಿರ್ವಹಣೆ, ಸಸ್ಯ ಸಂರಕ್ಷಣೆ ಅತೀ ಮುಖ್ಯ.  ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖಾ ಅಧಿಕಾರಿಗಳು ಹಾಗೂ ವಿಷಯ ತಜ್ಞರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.
Post a Comment