Thursday, 5 July 2018

ಬಜೆಟ್‍ನಲ್ಲಿ ಕೊಪ್ಪಳ ಜಿಲ್ಲೆಗೆ ಬಂಪರ್ ಕೊಡುಗೆ : ಕೃಷಿ ಅಭಿವೃದ್ಧಿಗೆ ಇಸ್ರೇಲ್ ಮಾದರಿ ನೀರಾವರಿ, ಆಟಿಕೆ ತಯಾರಿಕಾ ಕ್ಲಸ್ಟರ್ ಸ್ಥಾಪನೆ, 450 ಹಾಸಿಗೆ ಆಸ್ಪತ್ರೆ


ಕೊಪ್ಪಳ ಜು.05 (ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರದಂದು ಮಂಡಿಸಿರುವ ಬಜೆಟ್‍ನಲ್ಲಿ ಕೊಪ್ಪಳ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ್ದು, ಕೊಪ್ಪಳ ಜಿಲ್ಲೆಯಲ್ಲಿ 5000 ಹೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಇಸ್ರೇಲ್ ಮಾದರಿಯಲ್ಲಿ ನೀರಾವರಿ ಸೌಲಭ್ಯ.  ಜಿಲ್ಲೆಯಲ್ಲಿ ಆಟಿಕೆ ತಯಾರಿಕಾ ಕ್ಲಸ್ಟರ್ ಸ್ಥಾಪನೆ ಹಾಗೂ ಕಿಮ್ಸ್‍ಗೆ 450 ಹಾಸಿಗೆ ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡಿದ್ದಾರೆ. 
     ವಿಧಾನಸಭೆಯಲ್ಲಿಂದು 2018-19ನೇ ಸಾಲಿನ ರಾಜ್ಯದ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ  ಕೊಪ್ಪಳ, ಕೋಲಾರ, ಚಿತ್ರದುರ್ಗ ಮತ್ತು ಗದಗ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ತಲಾ ಐದು ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ. ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
     ಕೊಪ್ಪಳ, ಗದಗ, ಚಾಮರಾಜನಗರ, ಮತ್ತು ಹಾಸನ ನಗರಗಳ ವೈದ್ಯಕೀಯ ಕಾಲೇಜುಗಳಲ್ಲಿ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ನಿರ್ಮಾಣಕ್ಕೆ 200 ಕೋಟಿ ರೂ. ಒದಗಿಸಲಾಗಿದೆ. 
     ಪ್ರಸ್ತುತ ದೇಸಿ ಆಟಿಕೆಗಳನ್ನು ಸಣ್ಣ ಸಣ್ಣ ಉದ್ಯಮಗಳು ತಯಾರಿಸುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಮತ್ತು ವಿದ್ಯುತ್ ಚಾಲಿತ ಆಟಿಕೆಗಳು ಮಾರುಕಟ್ಟೆಗೆ ಬಂದಿದ್ದು, ಅವುಗಳಲ್ಲಿ

ICB, Chip, Micro DC Motor ಗಳನ್ನುಅಳವಡಿಸಿರುತ್ತಾರೆ. ಇಂತಹ ಆಟಿಕೆಗಳಿಗೆ ಜಾಗತಿಕವಾಗಿ  ಮಾರುಕಟ್ಟೆ ಇದೆ.  ಚೀನಾ ದೇಶದಲ್ಲಿ ಯಾಂತ್ರಿಕ ಆಟಿಕೆಗಳು ತಯಾರಾಗಿ ಇಡೀ ಪ್ರಪಂಚಕ್ಕೆ ಸರಬರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾ ಆಟಿಕೆಗಳಿಗೆ ಸವಾಲೊಡ್ಡುವಂತೆ ಕೊಪ್ಪಳ ಜಿಲ್ಲೆಯಲ್ಲಿ, ಆಟಿಕೆ ತಯಾರಿಕಾ ಕ್ಲಸ್ಟರ್‍ಗಳನ್ನು ಹುಟ್ಟುಹಾಕಲು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.
     ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯವನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಹಾಗೂ ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಣೆ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
     ಬಡಜನರು ವೃದ್ಧಾಪ್ಯದಲ್ಲಿ ತೊಂದರೆ ಅನುಭವಿಸಬಾರದು ಎನ್ನುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ಫಲಾನುಭವಿಗಳು ಪಡೆಯುತ್ತಿರುವ 600 ರೂ.ಗಳ ಮಾಸಾಶನವನ್ನು 1000 ರೂ.ಗಳಿಗೆ ಹೆಚ್ಚಿಸಿ, 1ನೇ ನವೆಂಬರ್ 2018ರಿಂದ ಜಾರಿಗೊಳಿಸಲಾಗುವುದು. ಇದರಿಂದಾಗಿ 65 ವರ್ಷ ಮೀರಿದ 32.92 ಲಕ್ಷ ವೃದ್ಧರು ಆರ್ಥಿಕ ಪ್ರಯೋಜನ ಪಡೆಯಲಿದ್ದಾರೆ.
     ಧಾರ್ಮಿಕ ಪರಂಪರೆಯ ಮೇರು ವ್ಯಕ್ತಿಗಳಾದ ಆದಿ ಶಂಕರಾಚಾರ್ಯರ ಜಯಂತಿ ರಾಜ್ಯಾದ್ಯಂತ ಆಚರಿಸುವುದಾಗಿ ಘೋಷಣೆ.
     ಒಟ್ಟಾರೆ 2,18,488 ಕೋಟಿ ರೂ.ಗಳ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಮೊದಲ ಹಂತದಲ್ಲಿ 31-12-2017ರವರೆಗೆ ರೈತರು ಮಾಡಿದ ಎಲ್ಲ ಸುಸ್ತಿ ಬೆಳೆಸಾಲ ಒಂದೇ ಹಂತದಲ್ಲಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರುವ ಸುಸ್ತಿದಾರರಲ್ಲದ ರೈತರ ಪ್ರತಿ ಸಾಲ ಖಾತೆಗೆ ಮಾರುಪಾತಿ ಮಾಡಿರುವ ಸಾಲದ ಮೊತ್ತ ಅಥವಾ 25 ಸಾವಿರ ರೂ.ಗಳಲ್ಲಿ ಯಾವುದೇ ಕಡಿಮೆ ಅದನ್ನು ತುಂಬಲು ತೀರ್ಮಾನಿಸುವುದಾಗಿ ಘೋಷಿಸಿದ್ದಾರೆ. ಸಾಲದ ಮೊತ್ತವನ್ನು ಪ್ರತಿ ರೈತ ಕುಟುಂಬಕ್ಕೆ 2 ಲಕ್ಷ ರೂ.ಗಳಿಗೆ ಮಿತಿಗೊಳಿಸಲಾಗಿದ್ದು,   ಈ ಬೆಳೆ ಸಾಲ ಮನ್ನಾ ಯೋಜನೆಯಿಂದ ಸುಮಾರು 34,000 ಕೋಟಿ ರೂ.ಗಳ ಮೊತ್ತದ ಪ್ರಯೋಜನ ರೈತರಿಗೆ ದೊರೆಯಲಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು ಹಾಗೂ ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವಂತಹ ರೈತರುಗಳು ಹಾಗೂ ಇತರೆ ಅನರ್ಹ ಕೃಷಿ ಸಾಲಗಾರರು ಈ ಸಾಲ ಮನ್ನಾ ಯೋಜನೆಯಿಂದ ಹೊರಗುಳಿಯಲಿದ್ದಾರೆ.
     ರೈತರು ಹೊಸ ಸಾಲ ಪಡೆಯಲು ಅನುಕೂಲವಾಗುವಂತೆ ಸರ್ಕಾರ ಅವರ ಸುಸ್ತಿ ಖಾತೆಯಲ್ಲಿರುವ ಬಾಕಿ ಮನ್ನಾಮಾಡಿ ಋಣಮುಕ್ತ ಪತ್ರ ನೀಡಲು ತೀರ್ಮಾನಿಸಲಾಗಿದೆ. ಹಿಂದಿನ ಸರ್ಕಾರ ಮಾಡಿದ ಸಹಕಾರಿ ಬ್ಯಾಂಕುಗಳ ರೈತರ ಸಾಲ ಮನ್ನಾದ ಬಾಕಿ ಹಣವನ್ನು ಪಾವತಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.  ಶೂನ್ಯ ಬಂಡವಾಳ ಕೃಷಿ ಪದ್ಧತಿಗೆ ತಾಂತ್ರಿಕ ಸಹಾಯ ನೆರವು ಪಡೆದು ಯೋಜನೆ ಅನುಷ್ಠಾನಗೊಳಿಸಲು 50 ಕೋಟಿ ರೂ. ಒದಗಿಸಲಾಗಿದೆ.
     ರೈತರ ಸಹಭಾಗಿತ್ವದಲ್ಲಿ ಕೃಷಿ ವಲಯದ ಚಟುವಟಿಕೆಗಳಿಗೆ ಆದ್ಯತೆ ನೀಡಲು ಪ್ರತಿ ಜಿಲ್ಲೆಯ ಇಬ್ಬರು ಪ್ರಗತಿಪರ ರೈತರನ್ನೊಳಗೊಂಡ ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿ ರಚನೆ ಮಾಡುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಸಮನ್ವಯ ಉನ್ನತ ಸಮಿತಿ ರಚನೆ, ರೈತ ಸಂಘಟನೆ ಮತ್ತು ಸಾಮಥ್ರ್ಯ ಬಲವರ್ಧನೆ ಮಾಡಲು ರಾಜ್ಯ ರೈತ ಉತ್ಪಾದನೆ ನೀತಿ ಜಾರಿಗೆ ಕ್ರಮ, ಕೃಷಿ ಪೂರಕ ತಂತ್ರಜ್ಞಾನ ನವ ಉದ್ಯಮಗಳಿಗೆ ಉತ್ತೇಜನ, ಎಣ್ಣೆ ಗಾಣಗಳಿಗೆ ಪ್ರೋತ್ಸಾಹ, ಅಂಟುವಾಳಕಾಯಿ ಮರ ಬೆಳೆಸಲು ಪ್ರೋತ್ಸಾಹ, ನಿರ್ವಾತ ತಂತ್ರಜ್ಞಾನ ಬಳಕೆ ಕುರಿತಂತೆ ರೈತರಿಗೆ ಅರಿವು, ಆಂದ್ರಪ್ರದೇಶ ಮಾದರಿಯಲ್ಲಿ ಶೂನ್ಯ ಬಂಡವಾಳ, ಸಹಜ ಕೃಷಿಗೆ ಉತ್ತೇಜನ, ಸಾವಯವ ಹಾಗೂ ಸಾವಯವ ಬೀಜ ಪ್ರಮಾಣಕರಣ ದೃಢೀಕರಣ ಕೇಂದ್ರ ಸ್ಥಾಪನೆ, ತೆಂಗಿನ ಬೆಳಗಾರರ ಹಿತರಕ್ಷಣೆ ಮಾಡುವುದಾಗಿ ಘೋಷಿಸಿದ್ದಾರೆ.
     ಬಡವರ ಬಂಧು ಯೋಜನೆಯಡಿ ಬೀದಿ ವ್ಯಾಪಾರಿ, ಸಣ್ಣ ವ್ಯಾಪಾರಿಗಳಿಗೆ ಕಿರು ಸಾಲ, ಕಾಯಕ ಯೋಜನೆಯಡಿ ಸ್ವ ಸಹಾಯ ಗುಂಪುಗಳಿಗೆ ನೆರವು, ಎಲ್ಲ ಜಿಲ್ಲೆಗಳಿಗೂ ದಿಶಾ ಯೋಜನೆ ವಿಸ್ತರಣೆ, ಸಂಭಾವ್ಯ ಉದ್ಯಮಿದಾರರಿಗೆ ತರಬೇತಿ, ವಿದೇಶದಲ್ಲಿ ಉದ್ಯೋಗ ಹೊಂದಲು ಅಗತ್ಯ ತರಬೇತಿ ನೀಡುವುದಾಗಿ ಘೋಷಿಸಿದ್ದಾರೆ.
     ಒಂದು ಸಾವಿರ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭ, ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ಮಕ್ಕಳ ಹಾಜರಾತಿ ನಿಗಾವಹಿಸಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿ, ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ಆರಂಭಿಸುವುದಾಗಿ ಘೋಷಿಸಿದ್ದಾರೆ.
     ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು ಹಾಗೂ ತಾಂಡಾಗಳ ಸಮಗ್ರ ಅಭಿವೃದ್ಧಿಗೆ ಪ್ರಗತಿ ಕಾಲೋನಿ ಯೋಜನೆ ಜಾರಿ, ಈ ವರ್ಗದ ಜನರಿಗಾಗಿ ಆಯ್ದ ಜಿಲ್ಲೆಗಳಲ್ಲಿ ನವಗ್ರಾಮ ನಿರ್ಮಾಣ, ವಿವಿಧ ಧಾರ್ಮಿಕ ಸಂಸ್ಥೆಗಳು, ಸಾಮಾಜಿಕ ಸೇವೆ ಮಾಡುವ ಸಂಘ-ಸಂಸ್ಥೆಗಳಿಗೆ, ಧಾರ್ಮಿಕ ಪೀಠಗಳಿಗೆ 25 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
     ಬಿ.ಪಿ.ಎಲ್. ಕುಟುಂಬದ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮೂರು ತಿಂಗಳವರೆಗೆ ತಲಾ ಒಂದು ಸಾವಿರ ರೂ. ಪ್ರೋತ್ಸಾಹ ಹಣ ನೀಡುವ ಮುಖ್ಯಮಂತ್ರಿ ಮಾತೋಶ್ರೀ ಯೋಜನೆ ಜಾರಿ, ರಾಜ್ಯದ ಎಲ್ಲ ಉಪವಿಭಾಗಗಳಿಗೆ ಒಂದರಂತೆ ವೃದ್ಧಾಶ್ರಮ ಸ್ಥಾಪನೆ, ವಿಕಲಚೇತನರ ಉನ್ನತ ಶಿಕ್ಷಣ, ವಿಶೇಷ ಶಿಕ್ಷಕರಿಗೆ ತರಬೇತಿ, ವಿಕಲಚೇತನರ ಪಾಲನೆ ಹಾಗೂ ನಿರ್ವಹಣೆಗೆ ವಿಕಲಚೇತನರ ಕ್ಯಾಂಪಸ್ ಆರಂಭ, ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಪೂರೈಸಿದ ಹಿರಿಯರಿಗೆ 1000 ರೂ. ಮಾಶಾಸನ ಹೆಚ್ಚಿಳಮಾಡಿ ಘೋಷಿಸಿದ್ದಾರೆ.
     ಆಂದೋಲನ ಮಾದರಿಯಲ್ಲಿ ಅರಣ್ಯ ಬೆಳವಣಿಗೆಗೆ ಹಸಿರು ಕರ್ನಾಟಕ ಯೋಜನೆ ಈ ಕಾರ್ಯಕ್ರಮ ಅನುಷ್ಠಾನಕ್ಕೆ 10 ಕೋಟಿ ರೂ. ಅನುದಾನ, ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಎಲ್ಲ ಜಿಲ್ಲೆಗಳಲ್ಲೂ ನಿರಂತರ ಪರಿವೇಷ್ಠಕ ವಾಯುಮಾಲಿನ್ಯ ನಿಯಂತ್ರಣ ಘಟಕಗಳ ಸ್ಥಾಪನೆ, ಗ್ರಾಮ ಪಂಚಾಯತಿಯಲ್ಲಿ ವಿಡಿಯೋ ಸಂವಾದ ಸೌಲಭ್ಯ, ಸಾರ್ವಜನಿಕ ಕುಂದುಕೊರತೆ ನಿರ್ವಹಣೆಗೆ ಕಾಲಸೆಂಟರ್, ಮೊಬೈಲ್ ಆಪ್, ವೆಬ್‍ಆಪ್, ಸಾಮಾಜಿಕ ಜಾಲತಾಣಗಳ ಮೂಲಕ ನಾಗರಿಕ ಸಮಸ್ಯೆಗಳ ನೋಂದಣಿಗೆ ಅವಕಾಶ, ಗ್ರಾಮೀಣ ಕುಡಿಯುವ ನೀರು ಪೂರೈಕೆಗಾಗಿ ಜಲಧಾರೆ ಯೋಜನೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ದಾಖಲೆಯಲ್ಲಿರುವ ಎಲ್ಲ ಆಸ್ತಿಗಳನ್ನು ಜಿ.ಐ.ಎಸ್. ಆಧಾರಿತ ಮ್ಯಾಪಿಂಗ್ ಮಾಡಲು ಕ್ರಮ ಸೇರಿದಂತೆ ಹಲವು ಯೋಜನೆಗಳನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ.  ಒಟ್ಟಾರೆ ಈ ಬಾರಿಯ ಬಜೆಟ್‍ನಲ್ಲಿ ಕೊಪ್ಪಳ ಜಿಲ್ಲೆಗೆ ಒಳ್ಳೆಯ ಯೋಜನೆಗಳು ದೊರಕಿವೆ.
Post a Comment