Tuesday, 12 June 2018

ದಲಿತ ಸಾಹಿತಿಗಳಿಗೆ ಕೃತಿ ಪ್ರಕಟಿಸಲು ಪ್ರೋತ್ಸಾಹಧನ : ಅರ್ಜಿ ಆಹ್ವಾನ


ಕೊಪ್ಪಳ ಜೂ. 12 (ಕರ್ನಾಟಕ ವಾರ್ತೆ): ಕನ್ನಡ ಪುಸ್ತಕ ಪ್ರಾಧಿಕಾರವು ವಿಶೇಷ ಘಟಕ ಯೋಜನೆಯಡಿ ದಲಿತ ಸಾಹಿತಿಗಳಿಗೆ ಕೃತಿ ಪ್ರಕಟಿಸಲು ತಲಾ 35,000/-ಗಳ ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು, ಅರ್ಜಿ ಆಹ್ವಾನಿಸಲಾಗಿದೆ. 
    ಅರ್ಜಿದಾರರು ಕಡ್ಡಾಯವಾಗಿ ತಮ್ಮ ಆರ್.ಡಿ ನಂಬರ್ ಇರುವ ಜಾತಿ ಪ್ರಮಣ ಪತ್ರದೊಂದಿಗೆ ಎ-4 ಸೈಜ್ ಹಾಳೆಯಲ್ಲಿ ಡಿ.ಟಿ.ಪಿ ಮಾಡಿದ ಕನಿಷ್ಟ 200 ಪುಟಗಳಿರುವ ಕೃತಿಯನ್ನು ಸಲ್ಲಿಸಬಹುದಾಗಿದೆ.  ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯ ಸಾಹಿತ್ಯ, ಮಾನವಿಕ, ವಿಜ್ಞಾನ ವಿಚಾರ ಸಾಹಿತ್ಯ ಹಾಗೂ ಇತರ ಜ್ಞಾನ ಶಿಸ್ತುಗಳ ವಿಚಾರಗಳಿಗೆ ಸಂಬಂಧಿಸಿದ್ದಾಗಿದ್ದು, ಅನುವಾದಗಳನ್ನು, ಪಠ್ಯ ಪುಸ್ತಕಗಳನ್ನು ಹಾಗೂ ಬೇರಾವುದೇ ಪದವಿಗಾಗಿ ಸಿದ್ಧಪಡಿಸಿರುವ ಪ್ರಬಂಧಗಳನ್ನು ಪರಿಗಣಿಸಲಾಗುವುದಿಲ್ಲ.
    ಕೃತಿಯ ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರುಗಳ ಕುರಿತಂತೆ ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಮನನೋಯಿಸುವಂತಹ ವಿಷಯವಾಗಲಿ ಇರಬಾರದು.  ಅಲ್ಲದೇ ರಾಷ್ಟ್ರೀಯ ಭಾವೈಕ್ಯತೆಗೆ ದಕ್ಕೆ ತರುವಂತಹ ವಿಷಯ ಅಥವಾ ಸಂಗತಿಗಳು ಪ್ರಸ್ತಾಪವಾಗಿರಬಾರದು.  ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಯನ್ನು ಅಥವಾ ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಒಬ್ಬ ಲೇಖಕರ ಒಂದು ಪ್ರತಿಯನ್ನು ಮಾತ್ರ ಆಯ್ಕೆಗಾಗಿ ಪರಿಗಣಿಸಲಾಗುವುದು.  ಈಗಾಗಲೇ ಸಾಕಷ್ಟು ಕೃತಿಗಳು ಪ್ರಕಟವಾಗಿರುವ ಲೇಖಕರೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ.  ಅರ್ಜಿಯನ್ನು  ಜೂ. 30 ರೊಳಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 ಇವರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು, ದೂ. ಸಂ: 080-22484516/ 22017704 ಅಥವಾ ವೆಬ್‍ಸೈಟ್   www.kannadapustakapradhikara.com ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Post a Comment