Friday, 4 May 2018

ಕುಷ್ಟಗಿಯಲ್ಲಿ ಟೋಕನ್ ಪಡೆದು ಚಿಕನ್ ವಿತರಣೆ : ಪ್ರಕರಣ ದಾಖಲು


ಕೊಪ್ಪಳ ಮೇ. 04 (ಕರ್ನಾಟಕ ವಾರ್ತೆ) : ಕುಷ್ಟಗಿ ಪಟ್ಟಣದ ಚಿಕನ್ ಶಾಪ್‍ವೊಂದರಲ್ಲಿ ಟೋಕನ್ ಪಡೆದು, ಜನರಿಗೆ ಉಚಿತವಾಗಿ ಚಿಕನ್ ವಿತರಿಸುತ್ತಿದ್ದ ಆರೋಪದ ಮೇಲೆ ರಾಜಾಸಾಬ್ ತಂದೆ ಮೌಲಾಸಾಬ್ ಅವರ ವಿರುದ್ಧ ಕುಷ್ಟಗಿಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದೂರು ದಾಖಲಿಸಲಾಗಿದೆ ಎಂದು ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಚಿದಾನಂದ ಅವರು ತಿಳಿಸಿದ್ದಾರೆ.
  ವಿಧಾನಸಭೆ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿದ್ದು, ಕುಷ್ಟಗಿ ಪಟ್ಟಣದ ಚಿಕನ್ ಶಾಪ್‍ವೊಂದರಲ್ಲಿ ಟೋಕನ್ ಪಡೆದು, ಸಾರ್ವಜನಿಕರಿಗೆ ಉಚಿತವಾಗಿ ಚಿಕನ್ ವಿತರಿಸುತ್ತಿದ್ದಾರೆ ಎಂಬುದಾಗಿ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ದೂರವಾಣಿ ಮೂಲಕ ಬಂದ ದೂರು ಆಧರಿಸಿ, ಫ್ಲೈಯಿಂಗ್ ಸ್ಕ್ವಾಡ್ ತಂಡದ ಮುಖ್ಯಸ್ಥ ಚಿದಾನಂದ ಅವರು ಚಿಕನ್ ಶಾಪ್‍ಗೆ ಭೇಟಿ ನೀಡಿ ಪರಿಶೀಲಿಸಿದರು.  ಈ ಸಂದರ್ಭದಲ್ಲಿ ಟೋಕನ್ ಪಡೆದು, ಚಿಕನ್ ವಿತರಿಸುತ್ತಿದ್ದುದು ಪತ್ತೆಯಾಗಿದೆ.  ಬಿಜೆಪಿ ಪಕ್ಷದ ವತಿಯಿಂದ ಈ ವ್ಯವಸ್ಥೆ ಮಾಡಲಾಗಿತ್ತು ಎಂಬುದಾಗಿ ಚಿಕನ್ ಅಂಗಡಿ ಮಾಲೀಕ ಹೇಳಿರುವುದಾಗಿ ಚಿದಾನಂದ ಅವರು ತಿಳಿಸಿದ್ದಾರೆ.  ಅಂಗಡಿಕಾರನಿಂದ ಒಟ್ಟು 111 ಟೋಕನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಂಗಡಿ ಮಾಲೀಕ ರಾಜಾಸಾಬ್ ತಂದೆ ಮೌಲಾಸಾಬ್ ಅವರ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ ಎಂದು ಪ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಚಿದಾನಂದ ಅವರು ತಿಳಿಸಿದ್ದಾರೆ.
Post a Comment