Thursday, 10 May 2018

ಬಹಿರಂಗ ಪ್ರಚಾರ ಅಂತ್ಯ ಬಳಿಕ ಚುನಾವಣಾ ಕಾರ್ಯಕ್ರಮಗಳಿಗೆ ನಿರ್ಬಂಧ


ಕೊಪ್ಪಳ ಮೇ. 10 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಮೇ. 10 ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮತದಾನ ಅಂತ್ಯಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಚುನಾವಣಾ ಕಾರ್ಯಕ್ರಮಗಳನ್ನು ನಿರ್ಭಂಧಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ. 
            ಕರ್ನಾಟಕ ವಿಧಾಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ. 12 ರಂದು ಮತದಾನ  ಜರುಗಲಿದ್ದು, ರಾಜಕೀಯ ಪಕ್ಷಗಳ. ಅಭ್ಯರ್ಥಿಗಳ ಬಹಿರಂಗ ಪ್ರಚಾರ/ ಮೆರವಣಿಗೆಗಳು ಗುರುವಾರದಂದು ಸಂಜೆ 6 ಗಂಟೆಗೆ ಅಂತ್ಯಗೊಳ್ಳುತ್ತವೆ.  ಹೀಗಾಗಿ ಮತದಾನ ಮುಕ್ತಾಯಗೊಳ್ಳುವ 48 ಗಂಟೆಯೊಳಗಿನ ಅವಧಿಯಲ್ಲಿ ಚುನಾವಣಾ ಸಂಬಂಧಿಸಿದಂತೆ ಛಾಯಾಚಿತ್ರಣ, ದೂರದರ್ಶನ ಮತ್ತು ಇನ್ನಿತರ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಮತ್ತು ಸಂಗೀತ ಕಾರ್ಯಕ್ರಮಗಳು/ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮುಖಾಂತರ ಜನರನ್ನು ಸೆಳೆದು ಪ್ರಚಾರ ಮಾಡುವುದನ್ನು ಸಹ ನಿರ್ಭಧಿಸಲಾಗಿದೆ.
ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಜರುಗಿಸುವ ಸಂಬಂಧವಾಗಿ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ತಮ್ಮ ಪ್ರಚಾರಕ್ಕಾಗಿ ಹೊರಗಿನ ಮತ ಕ್ಷೇತ್ರದಿಂದ ಕರೆತಂದ ಮತ್ತು ಈ ಕ್ಷೇತ್ರದ ಮತರಾರರಲ್ಲದೇ ಇರುವ ರಾಜಕೀಯ ಅಧಿಕಾರಸ್ಥರು, ತಾರಾ ಪ್ರಚಾರಕರು, ಪಕ್ಷದ ಕಾರ್ಯಕರ್ತರು ಮೆರವಣಿಗೆ ಸಂಬಂಧ ಕರೆತಂದ ಕಾರ್ಯಕರ್ತರು, ಪ್ರಚಾರ ಕಾರ್ಯಕರ್ತರು ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಸಂಬಂಧಿಸಿದ ವಿಧಾನಸಭೆ ಕ್ಷೇತ್ರಗಳಿಂದ ಹೊರಹೋಗಲು ಸೂಚನೆ ನೀಡಲಾಗಿದೆ.  ಚುನಾವಣೆ ಅವಧಿಯಲ್ಲಿ ರಾಜಕೀಯ ಪಕ್ಷಗಳ ರಾಜ್ಯದ ಪ್ರಭಾರ ಹೊಂದಿರುವ ಪದಾಧಿಕಾರಿಗಳ ಸಂಬಂಧದಲ್ಲಿ ಈ ನಿರ್ಭಧನೆಗಳು ಅನ್ವಯಿಸುವುದಿಲ್ಲ.  ರಾಜಕೀಯ ಪಕ್ಷದ ಅಂತಹ ಪದಾಧಿಕಾರಿಗಳು ರಾಜ್ಯ ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಹೂಡಿರುವ ಸ್ಥಳವನ್ನು ಘೋಷಿಸಬೇಕು.  ಮತ್ತು ಮತದಾನ ಅವಧಿಯಲ್ಲಿನ ಅವರ ಚಲನ ವಲನಗಳು ಸಾಮಾನ್ಯವಾಗಿ ಅವರ ಪಕ್ಷದ ಕಛೇರಿ ಮತ್ತು ಅವರ ವಾಸ್ತವ್ಯ ಹೂಡಿರುವ ಸ್ಥಳಗಳಿಗೆ ಸೀಮಿರವಾಗಿರಬೇಕು.
        ಮತದಾನ ಅವಧಿಯಲ್ಲಿ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಬಾಗಿಲಿನಿಂದ ಬಾಗಿಲಿಗೆ ಹೋಗಿ ಮತಯಾಚಿಸುವ ಸಲುವಾಗಿ ಮನೆಯಿಂದ ಮನೆಗೆ ಹೋಗುವುದನ್ನು ನಿರ್ಭಂಧಿಸಿರುವುದಿಲ್ಲ.  ಆದರೆ 10 ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಕೂಡಿಕೊಂಡು ಮನೆಯಿಂದ ಮನೆಗೆ ಹೋಗಿ ಮತಯಾಚಿಸುವುದನ್ನು ನಿರ್ಭಧಿಸಲಾಗಿದೆ.  ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಜರುಗಿಸಲು ಸಹಕರಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
Post a Comment