Saturday, 5 May 2018

ಅಪ್ರಾಪ್ತರೊಂದಿಗೆ ವಿವಾಹವಾದರೆ ಕಠಿಣ ಶಿಕ್ಷೆ : ಎಂ. ಕನಗವಲ್ಲಿ


ಕೊಪ್ಪಳ ಮೇ. 05 (ಕರ್ನಾಟಕ ವಾರ್ತೆ): ಅಪ್ರಾಪ್ತ ವಯಸ್ಸಿನವರೊಂದಿಗೆ ವಿವಾಹವಾದರೆ, ವರ ಹಾಗೂ ವಧುವಿನ ಪೋಷಕರಿಗೆ, ಮದುವೆ ಮಾಡಲು ಸಹಕರಿಸಿದ, ಭಾಗವಹಿಸಿದ ಮತ್ತು ಪ್ರೋತ್ಸಾಹಿಸಿದವರ ವಿರುದ್ಧ ಕಾನೂನು ರೀತ್ಯ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದ್ದಾರೆ.  
    ಮಕ್ಕಳ ಬಾಲ್ಯ ತುಂಬಾ ಅಮೂಲ್ಯವಾದದ್ದು, ಮಕ್ಕಳು ತಮ್ಮ ಬಾಲ್ಯವನ್ನು ಸಂಪೂರ್ಣವಾಗಿ ಅನುಭವಿಸುವ ಅಧಿಕಾರವನ್ನು ಖಾತ್ರಿಪಡಿಸಲು, ಮಕ್ಕಳ ಹಾಗೂ ಸಮುದಾಯದ ಸ್ವಾಸ್ಥ್ಯವನ್ನು ಕಾಪಾಡಲು, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ  ಹಾಗೂ ಕರ್ನಾಟಕ ರಾಜ್ಯವನ್ನು ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿಸುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರವು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಾಯ್ದೆಯನ್ನು 2016ರ ಫೆಬ್ರುವರಿ. 22 ರಲ್ಲಿ ತಿದ್ದುಪಡಿಯನ್ನು ಮಾಡಿದೆ.   ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಕಲಂ 3(1) ರನ್ವಯ 2016 ರ ನಂತರದ ಎಲ್ಲಾ ಬಾಲ್ಯ ವಿವಾಹಗಳು ಅಸಿಂಧು ವಿವಾಹಗಳಾಗುತ್ತವೆ.  ಕಲಂ 9, 10, 11 ರಡಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಥವಾ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಮದುವೆಯಾದ ವಯಸ್ಕ ಪುರುಷ ಅಥವಾ ಮಹಿಳೆ, ಮದುವೆಯನ್ನು ಮಾಡಿಕೊಂಡ ವರನ ಹಾಗೂ ವಧುವಿನ ಪೋಷಕರಿಗೆ ಮತ್ತು ಮದುವೆಯನ್ನು ಮಾಡಲು ಸಹಕರಿಸಿದವರಿಗೆ, ಭಾಗವಹಿಸಿದವರಿಗೆ ಪ್ರೋತ್ಸಾಹಿಸಿದವರಿಗೆ ಕನಿಷ್ಠ 1 ವರ್ಷದಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ರೂ. 1 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುವುದು.  ಕಲಂ 15 (ಎ) ರಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿ ಬಾಲ್ಯವಿವಾಹವಾದಲ್ಲಿ ಅಥವಾ ಬಾಲ್ಯ ವಿವಾಹ ಮಾಡಲು ತಯಾರಿಯನ್ನು ನಡೆಸಿದಲ್ಲಿ ಸ್ವಯಂಪ್ರೇರಿತ (ಸುಮೋಟೋ) ಅಧಿಕಾರದಡಿ ಪ್ರಕರಣವನ್ನು ದಾಖಲಿಸಿಕೊಳ್ಳುವ ಅಧಿಕಾರವನ್ನು ನೀಡಿದೆ.
    ಬಾಲ್ಯ ವಿವಾಹವನ್ನು ಮಾಡುವ ಉದ್ದೇಶದಿಂದ, ಪಾಲಕರು ಮಾಡಿಕೊಂಡ ಪೂರ್ವ ತಯಾರಿಯ ಅಧಾರದ ಮೇಲೆ  ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೂಮೊಟೋ ಅಧಿಕಾರದಡಿಯಲ್ಲಿ ತಾವರಗೇರಾ ಠಾಣೆಯಲ್ಲಿ 02 ಪ್ರಕರಣಗಳು ಹಾಗೂ ಗಂಗಾವತಿ ನಗರ ಠಾಣೆಯಲ್ಲಿ 1, ಪ್ರಕರಣ ಸೇರಿದಂತೆ ಒಟ್ಟು 03 ಪ್ರಕರಣಗಳು ದಾಖಲಾಗಿವೆ.   ಸರ್ವೋಚ್ಛ ನ್ಯಾಯಾಲಯವು ಡಬ್ಲ್ಯೂ.ಪಿ (ಸಿವ್ಹಿಲ್) 382 2013 ಇದರ ತೀರ್ಪಿನಲ್ಲಿ ಭಾರತೀಯ ದಂಡ ಸಂಹಿತೆ 1860 ಅಡಿ ಸೆಕ್ಷನ್ 375 ನ ಎಕ್ಸೇಪ್‍ಷನ್ 2 ನ್ನು ತಿದ್ದುಪಡಿ ಮಾಡಿದ್ದು, ಅದರ ಪ್ರಕಾರ 18 ವರ್ಷದ ಒಳಗಿನ ಪತ್ನಿಯ ಜೊತೆಗಿನ ಲೈಂಗಿಕ ಸಂಪರ್ಕವು ಕೂಡ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಬೇಕು ಎಂದು ಆದೇಶಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದ ಸುಮಾರು 15 ವರ್ಷದ ಬಾಲಕಿಯನ್ನು  ಅದೇ ತಾಲೂಕಿನ ಜೀರಾಳ ಗ್ರಾಮದ ಯಮನೂರಪ್ಪ ಎಂಬುವವರು  ಕದ್ದುಮುಚ್ಚಿ ಮದುವೆಯಾಗಿ, ಬಾಲಕಿಯ ಗರ್ಭಕ್ಕೆ ಕಾರಣವಾದ ಘಟನೆಯು ವರದಿಯಾದ ಹಿನ್ನಲೆಯಲ್ಲಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ರಡಿಯಲ್ಲಿ ಗಂಗಾವತಿ ಗ್ರಾಮಾಂತರ ಠಾಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕರಣವನ್ನು ದಾಖಲಿಸಿದ್ದು, ಆರೋಪಿತನು ಜೈಲುಪಾಲಾಗಿರುತ್ತಾನೆ.  ಆದ್ದರಿಂದ ಪಾಲಕರು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹವನ್ನು ಮಾಡಬಾರದು.  ತಪ್ಪಿದಲ್ಲಿ ಕಾನೂನು ಪ್ರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
Post a Comment