Saturday, 5 May 2018

ವಿಧಾನಸಭಾ ಸಾರ್ವತ್ರಿಕ ಚುನಾವಣೆ : ಮದ್ಯ ಮಾರಾಟ ನಿಷೇಧ


ಕೊಪ್ಪಳ ಮೇ. 05 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ನಿಮಿತ್ಯ ಕೊಪ್ಪಳ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ, ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
    ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮೇ. 12 ರಂದು ಮತದಾನ ನಡೆಯಲಿದ್ದು, ಚುನಾವಣೆಯು ಮುಕ್ತ ಹಾಗೂ ನಿಸ್ಪಕ್ಷಪಾತವಾಗಿ ನಡೆಸಲು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಅಗತ್ಯವಾಗಿರುತ್ತದೆ.  ಹೀಗಾಗಿ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮತದಾನ ಅಂತ್ಯಗೊಳ್ಳುವ 48 ಗಂಟೆಗಳ ಪೂರ್ವದಲ್ಲಿ ಹಾಗೂ ಮತ ಎಣಿಕೆ ದಿನದಂದು ಮದ್ಯಪಾನ, ಮದ್ಯ ಮಾರಾಟ ನಿಷೇಧಿಸಬೇಕಿರುತ್ತದೆ.  ಇದರನ್ವಯ ಮತದಾನದ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಮೇ. 10 ರ ಸಂಜೆ 6 ಗಂಟೆಯಿಂದ ಮೇ. 13 ರ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಮತ ಎಣಿಕೆಯ ನಿಮಿತ್ಯ ಮೇ. 15 ರ ಬೆಳಿಗ್ಗೆ 6 ಗಂಟೆಯಿಂದ ಮೇ. 16 ರ ಬೆಳಿಗ್ಗೆ 6 ಗಂಟೆಯವರೆಗೆ ಕರ್ನಾಟಕ ಅಬಕಾರಿ ಕಾಯ್ದೆ 1951ರ ಕಲಂ 135 ಸಿರ ಪ್ರಕಾರ ಜಿಲ್ಲೆಯಾದ್ಯಂತ ಮದ್ಯಪಾನ, ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
    ಈ ಸಂಬಂಧವಾಗಿ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ, ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ.  ಈ ಆದೇಶವನ್ನು ಜಾರಿ ತರುವಲ್ಲಿ ನಿರ್ಲಕ್ಷತನ ತೋರಿದವರ ವಿರುದ್ಧ ಕಾನೂನು ರೀತಿ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
Post a Comment