Wednesday, 2 May 2018

ಕೊಪ್ಪಳ : ಚುನಾವಣಾ ವೆಚ್ಚ ವಿವರ ಸಲ್ಲಿಸದ ಇಬ್ಬರು ಅಭ್ಯರ್ಥಿಗಳಿಗೆ ನೋಟೀಸ್


ಕೊಪ್ಪಳ ಮೇ. 02 (ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭಾ ಚುನಾವಣೆಗೆ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಿ, ವೆಚ್ಚದ ವಿವರವನ್ನು ಸಲ್ಲಿಸದೇ ಇರುವ ಕ್ಷೇತ್ರದ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೆ ಕ್ಷೇತ್ರದ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ನೋಟಿಸ್ ಜಾರಿಗೊಳಿಸಿದ್ದಾರೆ.
    ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಈಗಾಗಲೇ ನಾಮಪತ್ರವನ್ನು ಸಲ್ಲಿಸಿದ್ದು, ಪ್ರಜಾ ಪ್ರಾತಿನಿಧ್ಯ ಕಾಯಿದೆ 1951 ಸೆಕ್ಷನ್-77ರ ಪ್ರಕಾರ ನಿಗದಿತ ನಮೂನೆಗಳಲ್ಲಿ ಖರ್ಚಿನ ವಿವರಣೆಯನ್ನು ನಿರ್ವಹಿಸುವ ಮೂಲಕ ಖರ್ಚಿನ ವಿವರಣೆಯನ್ನು ಸಂಬಂಧಪಟ್ಟ ಅಧಿಕೃತ ದಾಖಲಾತಿಗಳೊಂದಿಗೆ ಚುನಾವಣಾ ವೆಚ್ಚದ ನಿರೀಕ್ಷಣೆಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.  ಅದರಂತೆ ಮೊದಲ ಹಂತದ ವೆಚ್ಚದ ವಿವರವನ್ನು ಸಲ್ಲಿಸುವಂತೆ ಏ. 30 ರಂದು ಎಲ್ಲಾ ಪಕ್ಷದ ಅಭ್ಯರ್ಥಿಗಳಿಗೆ ಸಮಯವನ್ನು ನಿಗದಿಪಡಿಸಲಾಗಿತ್ತು.  ಆದಾಗ್ಯೂ   ಸುರೇಶಗೌಡ ಹಾಗೂ ಮಲ್ಲಿಕಾರ್ಜುನ ನಿಜಗುಣಪ್ಪ ಹಡಪದ ಸೇರಿದಂತೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ವೆಚ್ಚದ ವಿವರಗಳನ್ನು ಸಲ್ಲಿಸಿರುವುದಿಲ್ಲ.  ಆದ್ದರಿಂದ ಈ ಇಬ್ಬರು ಅಭ್ಯರ್ಥಿಗಳ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯಿದೆ 1951 ಸೆಕ್ಷನ್-77ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ನೋಟಿಸ್‍ನಲ್ಲಿ ತಿಳಿಸಿದ್ದಾರೆ.
Post a Comment