Wednesday, 16 May 2018

ವಸತಿ ಕಾಲೇಜುಗಳ ಪ್ರಥಮ ಪಿಯುಸಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಮೇ. 16 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಏಕಲವ್ಯ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 6  ರಿಂದ 10 ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮಿಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ವಿದ್ಯಾರ್ಥಿಗಳಿಗೆ ಮುಂದುವರೆದ ಶಿಕ್ಷಣ ನೀಡುವ ಹಿತದೃಷ್ಟಿಯಿಂದ ಸರ್ಕಾರವು ಜಿಲ್ಲೆಗೊಂದರಂತೆ 26 ಮೊರಾರ್ಜಿದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜುಗಳನ್ನು ಪ್ರಾರಂಭಿಸಿದೆ.  ಈ ಕಾಲೇಜುಗಳಲ್ಲಿ ಉಚಿತವಾಗಿ ಊಟ, ವಸತಿ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರೆ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲಾಗುತ್ತಿದೆ.  ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶಿಕ್ಷಣವನ್ನು ಕಲ್ಪಿಸಲಾಗಿದೆ.  ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ, ಪ್ರ.ವರ್ಗ1 ರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 02 ಲಕ್ಷ 50 ಸಾವಿರ, ಹಿಂದುಳಿದ ವರ್ಗಗಳಾದ 2ಎ, 2ಬಿ, 3ಎ, ಮತ್ತು 3ಬಿ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 01 ಲಕ್ಷ ಆದಾಯದ ಮಿತಿಯನ್ನು ನಿಗದಿಪಡಿಸಲಾಗಿದೆ.  ಮೊರಾರ್ಜಿದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜುಗಳಲ್ಲಿ ಶೇ 50 ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಾಗಿಡಲಾಗಿರುತ್ತದೆ.  ಒಂದು ಸಾರಿ ವಸತಿ ಕಾಲೇಜಿಗೆ ಆಯ್ಕೆಯಾದ ವಿದ್ಯಾರ್ಥಿ 12 ನೇ ತರಗತಿಯವರೆಗೆ ನಿರಂತರ ವಿದ್ಯಾಭ್ಯಾಸ ಮಾಡಬಹುದಾಗಿದೆ.  ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ನೀಡಲಾಗುವುದು.
    ವಸತಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿ.ಯು.ಸಿ. ತರಗತಿಯ ಪಿ.ಸಿ.ಎಮ್.ಬಿ ಮತ್ತು ಪಿ.ಸಿ.ಎಮ್.ಸಿ ಈ ಸಂಯೋಜನೆಗಳಿಗೆ ತಲಾ 40 ವಿದ್ಯಾರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.  2017-18 ನೇ ಸಾಲಿನಲ್ಲಿ ಮೊರಾರ್ಜಿದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 6 ರಿಂದ 10 ನೇ ತರಗತಿಯವರೆಗೆ ಕನ್ನಡ ಅಥವಾ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಅರ್ಜಿಸಲ್ಲಿಸಬಹುದಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ 2017-18 ನೇ ಸಾಲಿನಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿಚೆನ್ನಮ್ಮ, ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 6  ರಿಂದ 10 ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.  ಜಿಲ್ಲಾ ಮಟ್ಟದಲ್ಲಿ ವಿಷಯ ಸಂಯೋಜನೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ ಪ್ರವೇಶ ನೀಡಲಾಗುವುದು ಎಂದು ಕೊಪ್ಪಳ ಮೊರಾರ್ಜಿ ದೇಸಾಯಿ ಪ.ಪೂ ವಸತಿ ಕಾಲೇಜು ಜಿಲ್ಲಾ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment