Monday, 14 May 2018

ಮತಗಳ ಎಣಿಕಾ ಕಾರ್ಯದಲ್ಲಿ ತೀವ್ರ ಎಚ್ಚರಿಕೆ ವಹಿಸಿ : ಡಾ. ರುದ್ರೇಶ್ ಘಾಳಿ

ಕೊಪ್ಪಳ ಮೇ. 14 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆಯ ಅಂಗವಾಗಿ ಮೇ. 15 ರಂದು ನಗರದ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 08 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗಾಗಿ ನಿಯೋಜಿಸಲಾದ ಅಧಿಕಾರಿ, ಸಿಬ್ಬಂದಿಗಳು, ತೀವ್ರ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಸೂಚನೆ ನೀಡಿದರು.

      ಸೆಕ್ಟರ್ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅಧಿಕಾರಿಗಳಿಗೆ ಮತ ಎಣಿಕೆ ಕಾರ್ಯದ ಕುರಿತು ಕೊಪ್ಪಳ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಕೊಪ್ಪಳ ನಗರದ ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ ಸೇರಿದಂತೆ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಸಲಾಗುವುದು.  ಈಗಾಗಲೆ ಮತ ಎಣಿಕೆ ಕೇಂದ್ರ ಸಂಪೂರ್ಣ ಸಜ್ಜುಗೊಂಡಿದೆ.  ಕಟ್ಟಡದ ನೆಲಮಹಡಿಯಲ್ಲಿ ಕೊಠಡಿ ಸಂಖ್ಯೆ 02 ರಲ್ಲಿ ಕೊಪ್ಪಳ ಕ್ಷೇತ್ರದ ಮತಗಳ ಎಣಿಕೆ ಜರುಗಲಿದೆ.   ಕೊಠಡಿ ಸಂಖ್ಯೆ 12 ರಲ್ಲಿ ಕುಷ್ಟಗಿ ಕ್ಷೇತ್ರ,   ಕಟ್ಟಡದ ಮೊದಲನೆ ಮಹಡಿಯ ಕೊಠಡಿ ಸಂಖ್ಯೆ 18 ರಲ್ಲಿ ಯಲಬುರ್ಗಾ ಕ್ಷೇತ್ರ, ಕೊಠಡಿ ಸಂಖ್ಯೆ 29 ರಲ್ಲಿ ಕನಕಗಿರಿ ಕ್ಷೇತ್ರ, ಕೊಠಡಿ ಸಂಖ್ಯೆ 32 ರಲ್ಲಿ ಗಂಗಾವತಿ ಕ್ಷೇತ್ರದ ಮತಗಳ ಎಣಿಕೆ ಕಾರ್ಯ ಜರುಗಲಿದೆ.  ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 17 ಜನ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ.  ಪ್ರತಿ ಕ್ಷೇತ್ರಕ್ಕೆ ಮತ ಎಣಿಕೆಗಾಗಿ 14 ಟೇಬಲ್‍ನಂತೆ ವ್ಯವಸ್ಥೆ ಮಾಡಲಾಗಿದೆ.  ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಅಂದಾಜು 16 ರಿಂದ 20 ಸುತ್ತುಗಳಲ್ಲಿ ನಡೆಯಲಿದೆ.  ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಯಬೇಕಾಗಿದ್ದು, ಮತ ಎಣಿಕಾ ಕಾರ್ಯಕ್ಕಾಗಿ ನಿಯೋಜಿಸಲಾದ ಅಧಿಕಾರಿಗಳು ಮೇ. 15 ರಂದು ಬೆಳಿಗ್ಗೆ 5 ಗಂಟೆಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಿ, ಬೆಳಿಗ್ಗೆ 5-30ಕ್ಕೆ ವರದಿ ಮಾಡಿಕೊಳ್ಳಬೇಕು.  ತಮಗೆ ಹಂಚಿಕೆಯಾದ ವಿಧಾನಸಭಾ ಕ್ಷೇತ್ರ ಹಾಗೂ ಟೇಬಲ್ ಸಂಖ್ಯೆಯನ್ನು ತಿಳಿದುಕೊಳ್ಳಬೇಕು.  ಮತಯಂತ್ರಗಳ ಪ್ರಕಾರ ದಾಖಲಾದ ಮತಗಳ ಸಂಖ್ಯೆ, ಚಲಾವಣೆಯಾದ ಮತಗಳು ಇತ್ಯಾದಿಗಳ ವಿವರವನ್ನು ಪಡೆಯಬೇಕು.  ಮತ ಎಣಿಕೆ ಕಾರ್ಯದಲ್ಲಿ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು. ಮತ ಎಣಿಕೆ ಕಾರ್ಯದಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.  ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಅವರು ಮತ ಎಣಿಕಾ ಕಾರ್ಯದಲ್ಲಿ ಅಧಿಕಾಗಳು ಪಾಲಿಸಬೇಕಾದ ನಿಯಮಗಳು ಹಾಗೂ ಎಣಿಕಾ ಕಾರ್ಯದ ಮಾರ್ಗಸೂಚಿಯನ್ನು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿವರವಾಗಿ ತಿಳಿಸಿದರು.
  ಚುನಾವಣಾ ಸಾಮಾನ್ಯ ವೀಕ್ಷಕರಾದ ಶಂಕರನಾರಾಯಣನ್, ಜಾಯ್‍ಸಿಂಗ್ ಹಾಗೂ ಸತೀಶ್ ಸೇರಿದಂತೆ ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ, ಗಂಗಾವತಿ ಕ್ಷೇತ್ರದ ಡಾ. ರವಿ ತಿರ್ಲಾಪುರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Post a Comment