Friday, 4 May 2018

ಕಿನ್ನಾಳದ ಮದ್ಯದಂಗಡಿ ವಿರುದ್ಧ ಪ್ರಕರಣ ದಾಖಲು : 26 ಸಾವಿರ ನಗದು ವಶ


ಕೊಪ್ಪಳ ಮೇ. 04 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಕಿನ್ನಾಳ ಗ್ರಾಮದ ದೇವಿ ವೈನ್ಸ್ ಸಿಎಲ್-2 ಮದ್ಯದ ಅಂಗಡಿಗೆ ಅಬಕಾರಿ ನಿರೀಕ್ಷಕರು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳು ಆಕಸ್ಮಿಕ ಭೇಟಿ ನೀಡಿ, ದಾಸ್ತಾನು ಹಾಗೂ ಮಾರಾಟ ವಿವರ ಪರಿಶೀಲಿಸಿದ ಸಂದರ್ಭದಲ್ಲಿ, ಅಕ್ರಮ ಎಸಗಿರುವುದು ಕಂಡುಬಂದಿದ್ದು, ಮದ್ಯದ ಅಂಗಡಿಯಲ್ಲಿ ಕಂಡುಬಂದ ಹೆಚ್ಚುವರಿ ಮೊತ್ತ  26 ಸಾವಿರ ರೂ. ನಗದು ವಶಕ್ಕೆ ಪಡೆದು, ಅಂಗಡಿಯ ವಿರುದ್ಧ ಅಬಕಾರಿ ಅಕ್ರಮದ ಪ್ರಕರಣ ದಾಖಲಿಸಲಾಗಿದೆ.
  ಕೊಪ್ಪಳ ಅಬಕಾರಿ ನಿರೀಕ್ಷಕ ಕೃಷ್ಣಮೂರ್ತಿ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಗವಿಶಂಕರ್ ಅವರು ಬುಧವಾರದಂದು ಕಿನ್ನಾಳದ ದೇವಿ ವೈನ್ಸ್ ಮದ್ಯದ ಅಂಗಡಿಗೆ ಭೇಟಿ ನೀಡಿ ದಾಸ್ತಾನು, ಮಾರಾಟ ಹಾಗೂ ಬಿಲ್ ಮತ್ತು ಅಂಗಡಿಯಲ್ಲಿದ್ದ ನಗದು ಮೊತ್ತ ಪರಿಶೀಲಿಸಿದ ಸಂದರ್ಭದಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿರುತ್ತದೆ.  ಅಲ್ಲದೆ ಮದ್ಯದ ಅಂಗಡಿಯಲ್ಲಿ ಎಂ.ಆರ್.ಪಿ. ದರದ ಫಲಕವನ್ನು ಪ್ರದರ್ಶಿಸದಿರುವುದು ಕೂಡ ಕಂಡುಬಂದಿರುತ್ತದೆ.  ಅಂಗಡಿಯಲ್ಲಿ ಹೆಚ್ಚುವರಿಯಾಗಿ 26549 ರೂ. ನಗದು ಇರುವುದು ಕಂಡುಬಂದಿದ್ದು, ಹೆಚ್ಚುವರಿ ಮೊತ್ತವನ್ನು ವಶಕ್ಕೆ ಪಡೆದು, ಮದ್ಯದ ಅಂಗಡಿಯವರ ವಿರುದ್ಧ ಅಬಕಾರಿ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Post a Comment