Tuesday, 17 April 2018

ಕಲ್ಯಾಣಿ ಮತ್ತು ಕಿರ್ಲೋಸ್ಕರ್ ಕಾರ್ಖಾನೆಗಳಲ್ಲಿ ಮತದಾನ ಜಾಗೃತಿಕೊಪ್ಪಳ ಏ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ಕಲ್ಯಾಣಿ ಹಾಗೂ ಕಿರ್ಲೋಸ್ಕರ್ ಕಾರ್ಖಾನೆಗಳ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕರಿಗೆ ಮತದಾನದ ಕುರಿತು ಇವಿಎಂ ಹಾಗೂ ವಿವಿ ಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ.100 ರಷ್ಟು ಮತದಾನ ಯಶಸ್ವಿಯಾಗಿ ಜರುಗಿಸುವ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.  ನಮ್ಮ ಮತ-ನಮ್ಮ ಹಕ್ಕು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಎನ್ನುವ ಸಂದೇಶಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.   ಮತದಾನ ಜಾಗೃತಿಗಾಗಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ.  ಮೇ. 12 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೆಪಿಸಲು ಕೊಪ್ಪಳ ತಾಲೂಕಿನ ಕಲ್ಯಾಣಿ ಸ್ಟೀಲ್ ಲಿಮಿಟೆಡ್ ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಕಾರ್ಖಾನೆಗಳ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕಾರ್ಮಿಕರಿಗೆ ಮತದಾನ ಜಾಗೃತಿ ಮತ್ತು ಮತದಾನ ಖಾತ್ರಿ ಯಂತ್ರ (ವಿ.ವಿ.ಪ್ಯಾಟ್) ಬಳಕೆ ಕುರಿತು ಸೋಮವಾರದಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.  ಅಲ್ಲದೆ ಇದೇ ಸಂದರ್ಭದಲ್ಲಿ ಅಧಿಕಾರಿಗಳು, ಕಾರ್ಮಿಕರು ಅಣಕು ಮತದಾನ ಮೂಲಕ ಮತಯಂತ್ರಗಳ ಮಹತ್ವವನ್ನು ಮನವರಿಕೆ ಮಾಡಿಕೊಡಲಾಯಿತು.      

 ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ಯಾಮರಾವ್, ಸೆಕ್ಟರ್ ಅಧಿಕಾರಿ ಸೇರಿದಂತೆ ಕಲ್ಯಾಣಿ ಮತ್ತು ಕಿರ್ಲೋಸ್ಕರ್ ಕಾರ್ಖಾನೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಕಾರ್ಮಿಕರು ಉಪಸ್ಥಿತರಿದ್ದರು. 
Post a Comment