Tuesday, 24 April 2018

ಕರ್ನಾಟಕ ವಿಧಾನಸಭೆ ಚುನಾವಣೆ : ಈ ಬಾರಿ ಮತ ಖಾತ್ರಿಗೆ ವಿವಿಪ್ಯಾಟ್ಕೊಪ್ಪಳ ಏ. 24 (ಕರ್ನಾಟಕ ವಾರ್ತೆ): ‘ಈ ಬಾರಿ ವೋಟ್ ಮಾಡಲು ಕಾತರದಿಂದ ಕಾಯುತ್ತಿದ್ದೇನೆ, ಏಕೆಂದರೆ ಇದು ನಾನು ಚಲಾಯಿಸುತ್ತಿರುವ ಮೊಟ್ಟಮೊದಲ ವೋಟ್. ಮತದಾನ ಮಾಡುವುದು ನನ್ನ ಹಕ್ಕು. ಅದರಲ್ಲೂ ನಾನು ಮತದಾನ ಮಾಡಿರುವ ಬಗ್ಗೆ ಗ್ಯಾರಂಟಿ ನೀಡಲು ಹೊಸದಾಗಿ ವಿವಿಪ್ಯಾಟ್ ಯಂತ್ರ ಬಂದಿದೆಯಲ್ಲಾ. . . .ಮೋಸ ಮಾಡೋದಂತೂ ಸಾಧ್ಯವೇ ಇಲ್ಲ.   ಅದಕ್ಕೆ ನಾನು ವೋಟ್ ಮಾಡುವುದನ್ನು ತಪ್ಪಿಸುವುದಿಲ್ಲ.”
ಕೊಪ್ಪಳ ಜಿಲ್ಲೆಯ ಯುವ ಮತದಾರರು ಸೇರಿದಂತೆ ಹಲವು ಮತದಾರರು ವ್ಯಕ್ತಪಡಿಸುತ್ತಿರುವ ಸಾಮಾನ್ಯ ಅಭಿಪ್ರಾಯಗಳಿವು. 
“ಕಳೆದ ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡುವ ಗೋಜಿಗೇ ಹೋಗದವರು, ಮತಗಟ್ಟೆಗೆ ಬರುವಂತಾಗಲು,  ನೋಟಾ ಬಟನ್ ( None of the Above) ವ್ಯವಸ್ಥೆಯನ್ನು ಅಳವಡಿಸಲಾಗಿತ್ತು.  ಇನ್ನೂ ಕೆಲವರು   ಇವಿಎಂ ಮಶೀನ್‍ನಲ್ಲಿ ಯಾರಿಗೆ ಮತಹಾಕಿದೆ ಗೊತ್ತಾಗೋಲ್ಲ ಅಂತಿದ್ರು. . . 

“ಆದರೆ ವಿವಿಪ್ಯಾಟ್ ಅಂತ ಹೊಸ ಮಶೀನ್ ಒಂದು ಬಂದಿದ್ಯಂತೆ, ನಾವು ಯಾರಿಗೆ ಮತ ಹಾಕಿದೆ ಅಂತ ಸ್ಕ್ರೀನ್‍ನಲ್ಲಿ ಕಾಣ್ಸುತ್ತೇ, ಎಟಿಎಂ ಸ್ಲಿಪ್ ಬರುತ್ತಲ್ಲ, ಆ ಥರ ಚೀಟಿ ಮೆಷಿನ್‍ನ ಡಬ್ಬದೊಳಗೆ ಬೀಳುತ್ತೆ.  ಅದಕ್ಕೆ ನಾವು ಈ ಸರ್ತಿ ವೋಟ್ ಖಂಡಿತ ಮಾಡ್ತೀವಿ ಎನ್ನುತ್ತಿದ್ದಾರೆ ಮತದಾರರು.   ಇವಿಎಂ ಮೆಷಿನ್‍ನಲ್ಲಿ ನಾವು ಯಾರಿಗ್ ಮತ ಹಾಕಿದ್ರೂ ಕೂಡ, ಒಂದೇ ಪಕ್ಷಕ್ಕೆ ಮತ ಬೀಳುವ ರೀತಿ ಮಾಡಿಕೊಳ್ಳಬಹುದು ಎಂದು ಸುಖಾಸುಮ್ಮನೆ ಆರೋಪಿಸುವವರ ಅನುಮಾನ ದೂರು ಮಾಡಲೆಂದೆ ಈ ಬಾರಿ ಇವಿಎಂ ಮತಯಂತ್ರದ ಜೊತೆಗೆ ವಿವಿಪ್ಯಾಟ್ ಅಳವಡಿಕೆಯನ್ನು ಚುನಾವಣಾ ಆಯೋಗ ಜಾರಿಗೆ ತಂದಿದೆ.   
  ಜಿಲ್ಲಾ ಮಟ್ಟದ ಸ್ವೀಪ್ (ಸಮಗ್ರ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಆಂದೋಲನ( SಗಿಇಇP ) ಸಮಿತಿ ವತಿಯಿಂದ ವಿವಿಪ್ಯಾಟ್(  Voter Verifiable Paper Audit Trail ) ಕುರಿತು ಜಿಲ್ಲೆಯಾದ್ಯಂತ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.
ಚುನಾವಣಾ ಪ್ರಕ್ರಿಯೆ ಕುರಿತಂತೆ ಮತದಾರರಲ್ಲಿ ಜಾಗೃತಿ ಮತ್ತು ಅರಿವಿನ ಕೊರತೆ ಇನ್ನೂ ಇದೆ ಎಂಬ ಅಂಶ ಚುನಾವಣಾ ಆಯೋಗ ಇತ್ತೀಚೆಗೆ ರಾಜ್ಯದ 4 ಕಂದಾಯ ವಿಭಾಗಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ  ಮತದಾರರ ಅರಿವು, ಮನೋಭಾವ ಮತ್ತು ಅಭ್ಯಾಸಗಳ (ಏಂP) ಕುರಿತು ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿತು. ಸಮೀಕ್ಷೆಯಲ್ಲಿ  ಕಂಡು ಬಂದ ಅಂಶಗಳ ಆಧಾರದ ಮೇಲೆ ಅಗತ್ಯ ಸಂವಹನ ವಿಧಾನ ಮತ್ತು ಮಧ್ಯಸ್ಥಿಕೆಗಳನ್ನು  ಸ್ವೀಪ್ ಮುಖಾಂತರ ಚುನಾವಣಾ ಆಯೋಗ ಕೈಗೊಂಡಿದೆ.  
ಸಮೀಕ್ಷೆಯ ಪ್ರಕಾರ ರಾಜ್ಯದ ಶೇ. 72.4 ರಷ್ಟು ಮಂದಿಗೆ ವಿವಿಪ್ಯಾಟ್ ಬಗ್ಗೆ ತಿಳುವಳಿಕೆ ಇಲ್ಲದಿರುವ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ವೀಪ್ ವತಿಯಿಂದ ಇವಿಎಂ, ವಿವಿಪ್ಯಾಟ್  ಬಳಕೆ ಕುರಿತು  ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. 
ಮತದಾರ ಮತದಾನ ಮಾಡುವ ಸಂದರ್ಭದಲ್ಲಿ ತಾನು ಮತ ಚಲಾಯಿಸಬೇಕೆಂದಿರುವ ಚಿಹ್ನೆ ಮತ್ತು ಹೆಸರಿನ ಪಕ್ಕದಲ್ಲಿರುವ ನೀಲಿ ಬಣ್ಣ ಬಟನ್ ಒತ್ತಿದ ಕೂಡಲೇ ಕೆಂಪು ದೀಪ ಬೆಳಗುತ್ತದೆ. ಇವಿಎಂಗೆ ಅಳವಡಿಸಿರುವ ವಿವಿಪ್ಯಾಟ್ ಯಂತ್ರದ  ಪರದೆಯಲ್ಲಿ ಮತದಾರನು ತಾನು ಮತ ಚಲಾಯಿಸಿರುವ ಚಿಹ್ನೆ ಮತ್ತು  ಹೆಸರಿನ ವಿವರವುಳ್ಳ ಚೀಟಿಯನ್ನು 7 ಕ್ಷಣಗಳ ಕಾಲ ಡಿಸ್‍ಪ್ಲೇ ಸೆಕ್ಷನ್‍ನಲ್ಲಿ ವೀಕ್ಷಿಸಬಹುದು. ತದನಂತರ ಆ ಚೀಟಿಯು ಡ್ರಾಪ್  ಬಾಕ್ಸ್  ಒಳಗೆ  ತುಂಡಾಗಿ ಬೀಳುತ್ತದೆ (ಈ ಚೀಟಿಯನ್ನು ಮತದಾರ ಪಡೆಯುವಂತಿಲ್ಲ). ಈ ಮೂಲಕ ಮತದಾರ, ತಾನು ಆರಿಸಬೇಕೆಂದಿರುವ ವ್ಯಕ್ತಿ / ಪಕ್ಷಕ್ಕೆ ಮತ ಚಲಾವಣೆಯಾಗಿರುವುದನ್ನು  ಖಾತ್ರಿಪಡಿಸಿಕೊಳ್ಳಬಹುದಾಗಿದೆ. ಬ್ಯಾಲೆಟ್ ಚೀಟಿ ಕಾಣಿಸದಿದ್ದರೆ ಹಾಗೂ ಬೀಪ್ ಶಬ್ದ ಕೇಳಿಸದಿದ್ದರೆ ಮತದಾರನು ಮತಗಟ್ಟೆಯ ಅಧ್ಯಕ್ಷಾಧಿಕಾರಿಯನ್ನು ಸಂಪರ್ಕಿಸಬಹುದು. 
ಇವಿಎಂ ಯಂತ್ರಗಳು ಅತ್ಯಂತ ಸುರಕ್ಷಿತವಾಗಿವೆ. ಈ ಯಂತ್ರದಲ್ಲಿ ಮೈಕ್ರೋ ಕಂಟ್ರೋಲರ್ ಚಿಪ್ ಅಳವಡಿಸಲಾಗಿದ್ದು, ಇವಿಎಂ ನ್ನು ಒಮ್ಮೆ ಮಾತ್ರ ಪ್ರೊಗ್ರಾಂ ಮಾಡಲು ಸಾಧ್ಯ. ಚಿಪ್‍ನಲ್ಲಿರುವ  ಸಾಫ್ಟ್‍ವೇರ್ ಕೋಡ್ ರೀಡ್ ಅಥವಾ ರೀರೈಟ್ ಮಾಡಲು ಸಾಧ್ಯವಿಲ್ಲ. ಈ ತಂತ್ರಾಂಶವನ್ನು ಸರ್ಕಾರದ ಅಂಗಸಂಸ್ಥೆಯಾದ ಬಿಇಎಲ್ ಮತ್ತು ಇಸಿಐಇಲ್ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಇವಿಎಂ ಯಂತ್ರಗಳನ್ನು ಅಂತರ್ಜಾಲ ಅಥವಾ ಇನ್ಯಾವುದೇ ನೆಟ್‍ವರ್ಕ್ ಸಂಪರ್ಕದಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಯಂತ್ರದಲ್ಲಿ ಯಾವುದೇ ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡದಿರುವುದರಿಂದ ವೈರಸ್ ದಾಳಿ ಉಂಟಾಗುವ ಭಯವೂ ಇಲ್ಲ.
ಇವಿಎಂ, ವಿವಿಪ್ಯಾಟ್  ಬಳಕೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡಗಳಿಗೆ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಪ್ರಾತ್ಯಕ್ಷಿಕೆಗಾಗಿ ಒದಗಿಸಲಾಗಿದೆ. ಈ ತಂಡಗಳು ವಿಧಾನಸಭಾ ಕ್ಷೇತ್ರಗಳ ವಿವಿಧ ಭಾಗಗಳಲ್ಲಿ ಸಂಚರಿಸಿ ಈ ಯಂತ್ರದ ಕಾರ್ಯನಿರ್ವಹಣೆ ಬಗ್ಗೆ ವಿವರಿಸುತ್ತದೆ. ಮತದಾರರು ಸಹ ಈ ಯಂತ್ರವನ್ನು ಬಳಸಲು ಅವಕಾಶ ನೀಡಲಾಗುತ್ತಿದೆ. 
ಇದಲ್ಲದೆ ಸ್ಥಳೀಯ ಟಿವಿ ಹಾಗೂ ಕೇಬಲ್ ವಾಹಿನಿಗಳು, ಸಮುದಾಯ ರೇಡಿಯೋ, ಎಫ್‍ಎಂ ರೇಡಿಯೋ, ಆಕಾಶವಾಣಿ, ದೂರದರ್ಶನದ ಮೂಲಕ ಮಹಿಳೆಯರು, ಹಿರಿಯ ನಾಗರಿಕರನ್ನೊಳಗೊಂಡಂತೆ ಅಕ್ಷರಸ್ಥ ಹಾಗೂ ಅನಕ್ಷರಸ್ಥರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಂತೆ, ಜಾತ್ರೆ ಹಾಗೂ ಜನನಿಬಿಡ ಸ್ಥಳಗಳಲ್ಲಿ ಬೀದಿ ನಾಟಕಗಳು ಹಾಗೂ ಜಾಥಾಗಳನ್ನು ಹಾಗೂ ಮೊಬೈಲ್ ಎಲ್‍ಇಡಿ ವಾಹನಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದ್ದು, ಅನಕ್ಷರಸ್ಥ ಹಾಗೂ ಗ್ರಾಮೀಣ ಮತದಾರರನ್ನು ತಲುಪಲಾಗುತ್ತಿದೆ. 
ಮೊಬೈಲ್ ಬಳಕೆದಾರರು ಹಾಗೂ ಯುವಜನತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ದಿನಪತ್ರಿಕೆಗಳು, ಕರಪತ್ರ ಬ್ಯಾನರ್, ಕೈಪಿಡಿ, ಜಾಹಿರಾತು ಹಾಗೂ ಮೂಲಕ ಯುವಜನತೆ , ದಿನಪತ್ರಿಕೆ ಓದುಗರಲ್ಲಿ  ಜಾಗೃತಿ ಮೂಡಿಸುವುದರ ಜೊತೆಗೆ ಇವಿಎಂ ಹಾಗೂ ವಿವಿಪ್ಯಾಟ್ ಕುರಿತ ಕಿರುಚಿತ್ರ ಹಾಗೂ ಸ್ಲೈಡ್‍ಗಳನ್ನು  ಥಿಯೇಟರ್ಸ್ ಹಾಗೂ ಸಿನಿಮಾ ಮಂದಿರದಲ್ಲಿ ಪ್ರದರ್ಶಿಸುವ ಮೂಲಕ ಜನರಲ್ಲಿ  ಅರಿವು ಮೂಡಿಸಲಾಗುತ್ತಿದೆ. 
ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕದ ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೈಜೋಡಿಸಿದ್ದು, ವಿವಿಧ ಮಾಧ್ಯಮಗಳ ಮೂಲಕ ಚುನಾವಣಾ ಸಂದೇಶಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಕಂದಾಯ ಇಲಾಖೆ, ಬಿಬಿಎಂಪಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಶಿಕ್ಷಣ, ಕೃಷಿ, ತೋಟಗಾರಿಕೆ ಹಾಗೂ ಇನ್ನಿತರ ಪ್ರಮುಖ ಇಲಾಖೆಗಳು  ಒಗ್ಗೂಡಿ ನಗರ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿವೆ. ಈ ಪ್ರಚಾರ ಕಾರ್ಯವು ಈಗಾಗಲೇ 2 ಕೋಟಿ ಜನರನ್ನು ತಲುಪಿದೆ.  ಇವಿಎಂ-ವಿವಿಪ್ಯಾಟ್ ಬಗ್ಗೆ ಸ್ಪಷ್ಠತೆಯೊಂದಿಗೆ ಕಡೇ ಕ್ಷಣದವರೆಗೂ ಮತದಾನಕ್ಕೆ ಉತ್ತೇಜನ ನೀಡಲು ಚುನಾವಣಾ ಆಯೋಗ ಪ್ರಯತ್ನಿಸುತ್ತಿದೆ.
ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮತದಾರರ ಜಾಗೃತಿಗೆ ಎಲ್ಲ ಕ್ರಮಗಳನ್ನು ಸ್ವೀಪ್ ಮೂಲಕ ಚುನಾವಣಾ ಆಯೋಗ ಕೈಗೊಂಡಿದೆ. ಚುನಾವಣಾ ಆಯೋಗವು ಸ್ವೀಪ್ ಮುಖಾಂತರ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಔಚಿತ್ಯಪೂರ್ಣ ಮತ್ತು ನ್ಯಾಯೋಚಿತ ಮತದಾನವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ  ಕಾರ್ಯೋನ್ಮುಖವಾಗಿದೆ.
Post a Comment