Tuesday, 24 April 2018

ಡಾ:ರಾಜ್‍ಕುಮಾರ್ ಜನ್ಮದಿನಾಚರಣೆ : ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‍ಕುಮಾರ್‍ಗೆ ಭಾವಪೂರ್ಣ ಭಕ್ತಿ ನಮನ


ಕೊಪ್ಪಳ ಏ. 24 (ಕರ್ನಾಟಕ ವಾರ್ತೆ): ಕನ್ನಡ ಚಲನಚಿತ್ರ ರಂಗ ಕಂಡ ಮೆರು ನಟ, ನಟಸಾರ್ವಭೌಮ, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‍ಕುಮಾರ್ ಅವರ 90 ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಸೇರಿದಂತೆ ಎಲ್ಲ ಗಣ್ಯಮಾನ್ಯರು ಡಾ. ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು ಭಕ್ತಿ ನಮನ ಸಲ್ಲಿಸಿದರು.

  ಡಾ. ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಚುನಾವಣೆ ನೀತಿ ಸಂಹಿತೆಯ ಕಾರಣದಿಂದಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಮಂಗಳವಾರದಂದು ಸರಳವಾಗಿ ಆಚರಿಸಲಾಯಿತು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಡಾ. ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು ಭಕ್ತಿ ನಮನ ಸಲ್ಲಿಸಿದರು.  

  ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು, ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಜನ್ಮದಿನಾಚರಣೆಯನ್ನು ವಾರ್ತಾ ಇಲಾಖೆ ವತಿಯಿಂದ ವಿಜೃಂಭಣೆಯಿಂದ ಆಚರಿಸಬೇಕಾಗಿತ್ತು.  ಆದರೆ ನೀತಿ ಸಂಹಿತೆಯ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ.  1929 ಏಪ್ರಿಲ್ 24 ರಂದು ಗಾಜನೂರಿನಲ್ಲಿ ಪುಟ್ಟಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ದಂಪತಿಗೆ ಮಗನಾಗಿ ಜನಿಸಿದ ಡಾ. ರಾಜ್‍ಕುಮಾರ್ ಅವರ ಮೂಲ ಹೆಸರು ಮುತ್ತುರಾಜ.  ಗುಬ್ಬಿ ವೀರಣ್ಣ ಕಂಪನಿಯಲ್ಲಿ ತಂದೆಯ ಜೊತೆಗೆ ವೃತ್ತಿ ಬದುಕು ಪ್ರಾರಂಭಿಸಿದ ರಾಜ್‍ಕುಮಾರ್ ಅವರು, 1954 ರಲ್ಲಿ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕ ನಟರಾಗಿ ಆಯ್ಕೆಯಾಗಿ, ನಟಿಸಿದರು.  ಇದು ಇವರ ಮೊಟ್ಟ ಮೊದಲ ಚಿತ್ರವಾಯಿತು.  ಪೌರಾಣಿಕ, ಭಕ್ತಿ ಪ್ರಧಾನ, ಜೇಮ್ಸ್‍ಬಾಂಡ್ ಮಾದರಿ, ಸಾಮಾಜಿಕ ಹೀಗೆ ಎಂತಹದೇ ಪಾತ್ರಗಳಿರಲಿ, ತನ್ಮಯರಾಗಿ ನಟಿಸಿ, ಆ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಡಾ. ರಾಜ್‍ಕುಮಾರ್ ಅವರು ಸುಮಾರು 206 ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಶಬ್ದವೇಧಿ ಅವರು ನಾಯಕ ನಟರಾಗಿ ನಟಿಸಿದ ಕೊನೆಯ ಚಿತ್ರ.  ಅಭಿಮಾನಿಗಳನ್ನೇ ದೇವರುಗಳು ಎಂದು ನಂಬಿದ್ದ ಡಾ. ರಾಜ್ ಅವರು ಒಬ್ಬ ಆದರ್ಶ ವ್ಯಕ್ತಿ ಹಾಗೂ ಕಲಾವಿದರಾಗಿದ್ದರು.  ಡಾ. ರಾಜ್‍ಕುಮಾರ್ ಅವರು ಕೇವಲ ನಟರು ಮಾತ್ರವಲ್ಲ, ಖ್ಯಾತ ಗಾಯಕರೂ ಕೂಡ ಆಗಿದ್ದರು, ಸುಮಾರು 300 ಕ್ಕೂ ಹೆಚ್ಚು ಚಿತ್ರಗೀತೆಗಳು, 400 ಕ್ಕೂ ಹೆಚ್ಚು ಭಕ್ತಿ ಗೀತೆಗಳನ್ನು ಹಾಡಿದ್ದಾರೆ.  ಜೀವನಚೈತ್ರ ಚಿತ್ರದ ‘ನಾದಮಯ’ ಹಾಡಿಗೆ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.  1992 ರಲ್ಲಿ ಕರ್ನಾಟಕದ ಸರ್ವೋನ್ನತ ಪ್ರಶಸ್ತಿಯಾಗಿರುವ ‘ಕರ್ನಾಟಕ ರತ್ನ’ ಪ್ರಶಸ್ತಿ, 1995 ರಲ್ಲಿ ಭಾರತ ಚಲನಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದರು.  ಕಾಡುಗಳ್ಳ ವೀರಪ್ಪನ್‍ನಿಂದ 2000 ಜುಲೈ 30 ರಲ್ಲಿ ಅಪಹರಣಕ್ಕೆ ಒಳಗಾದ ಡಾ. ರಾಜ್‍ಕುಮಾರ್ ಅವರು 108 ದಿನಗಳ ವನವಾಸದ ಬಳಿಕ ನವೆಂಬರ್ 15 ರಂದು ಬಿಡುಗಡೆಯಾದರು.  2006 ರ ಏಪ್ರಿಲ್ 12 ರಂದು ಡಾ. ರಾಜ್‍ಕುಮಾರ್ ಅವರ ನಿಧನ ಹೊಂದಿದರು ಎಂದರು.
  ಡಾ. ರಾಜ್‍ಕುಮಾರ್ ಜನ್ಮ ದಿನಾಚರಣೆ ಅಂಗವಾಗಿ ಕೊಪ್ಪಳದ ಖ್ಯಾತ ಗಾಯಕ ಅಮರೇಶ್ ಅವರು, ಡಾ. ರಾಜ್‍ಕುಮಾರ್ ಅವರ ಚಲನಚಿತ್ರಗಳಿಗೆ ಸಂಬಂಧಿಸಿದ ಕೆಲವು ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟರು.  ಗಾಯನದಲ್ಲಿ ಕೊಪ್ಪಳದ ಹೇಮಂತ್, ಪ್ರತಿಭಾ ಪಾಟೀಲ್ ಅವರು ಉತ್ತಮ ಸಾಥ್ ನೀಡುವ ಮೂಲಕ, ಪ್ರೇಕ್ಷಕರನ್ನು ರಂಜಿಸಿದರು.
  ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Post a Comment