Monday, 30 April 2018

ಬಾಲ್ಯ ವಿವಾಹದಿಂದ ಬಾಲಕಿ ರಕ್ಷಣೆ : ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು


ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದಲ್ಲಿ ನಡೆಸಲು ನಿಗದಿಪಡಿಸಲಾಗಿದ್ದ ಬಾಲ್ಯ ವಿವಾಹವೊಂದನ್ನು ತಡೆದು, ಬಾಲಕಿಯನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.
      ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ಲ್ ಗ್ರಾಮದಲ್ಲಿ ಬಾಲ್ಯ ವಿವಾಹ ಮಾಡುತ್ತಿರುವುದಾಗಿ ಮಾಹಿತಿ ಬಂದ ಹಿನ್ನೆಲೆಯಲ್ಲಿ   ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತರು, ಗಂಗಾವತಿ ಶಿಶುಅಭಿವೃದ್ದಿ ಯೋಜನಾಧಿಕಾರಿಗಳು, ರೀಡ್ಸ್ ಸಂಸ್ಥೆಯ ಸಿಬ್ಬಂದಿಗಳು ಮತ್ತು ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ, ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ವರನೊಂದಿಗೆ ಮೇ. 03 ರಂದು ಮದುವೆ ನಡೆಸಲು ಸಿದ್ಧತೆ ಕೈಗೊಂಡಿದ್ದು ಖಚಿತಗೊಂಡಿದೆ.   ಮದುವೆ ನಿಶ್ಚಯಗೊಂಡ ಬಾಲಕಿಯ ಶಾಲಾ ದಾಖಲಾತಿಯ ಪ್ರಕಾರ 12 ವರ್ಷ 10 ತಿಂಗಳು 15 ದಿನಗಳಾಗಿದ್ದು, ಬಾಲಕಿ ಅಪ್ರಾಪ್ತಳಾಗಿದ್ದು ಕಂಡು ಬಂದಿದ್ದರಿಂದ, ಬಾಲಕಿಯ ಪಾಲಕರಿಗೆ ಬಾಲ್ಯವಿವಾಹ ದುಷ್ಪರಿಣಾಮಗಳ ಕುರಿತು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಬಗ್ಗೆ ತಿಳುವಳಿಕೆ ನೀಡಿ, ಬಾಲಕಿಯನ್ನು ವಶಕ್ಕೆ ಪಡೆದು ಮುಂದಿನ ಆರೈಕೆ ಮತ್ತು ಪೋಷಣೆಗಾಗಿ, ಮಕ್ಕಳ ಕಲ್ಯಾಣ ಸಮಿತಿ, ಕೊಪ್ಪಳಕ್ಕೆ ಹಾಜರುಪಡಿಸಲಾಗಿದೆ.  ಬಾಲ್ಯ ವಿವಾಹ ಮಾಡುವುದು, ವಿವಾಹದಲ್ಲಿ ಪಾಲ್ಗೊಳ್ಳುವುದು ಕೂಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment