Sunday, 22 April 2018

ಯಶಸ್ವಿ ಚುನಾವಣೆಗಾಗಿ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಂದ ಪಾಠ



ಕೊಪ್ಪಳ ಏ. 22 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ಯ ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆ ಗೊಂದಲ ರಹಿತವಾಗಿ ಹಾಗೂ ಸುಗಮವಾಗಿ ನಡೆಸಲು ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಖುದ್ದು ಮಾರ್ಗದರ್ಶನ ನೀಡಿದರು.

     ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಧಾನಸಭೆ ಚುನಾವಣೆ ಸಂಬಂಧ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಭಾನುವಾರದಂದು ಏರ್ಪಡಿಸಲಾದ ತರಬೇತಿಯಲ್ಲಿ ಪಾಲ್ಗೊಂಡು, ಅವರು ಅಧಿಕಾರಿಗಳಿಗೆ ಮತದಾನ ದಿನದಂದು ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಮಾರ್ಗದರ್ಶನ ನೀಡಿದರು.

     ಮೇ. 12 ರಂದು ಜರುಗುವ ಮತದಾನ ಪ್ರಕ್ರಿಯೆಗೆ ಈಗಾಗಲೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮತದಾನ ಕಾರ್ಯ ಸುಗಮವಾಗಿ ನಡೆಸಲು ಈ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ.  ಮತಗಟ್ಟೆಯಲ್ಲಿದ್ದುಕೊಂಡು, ಮತದಾರರಿಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲು, ಮತಗಟ್ಟೆ ಅಧಿಕಾರಿಗಳು ಆಯೋಗದ ನಿಯಮಗಳನ್ನು ಸರಿಯಾಗಿ ಮನನ ಮಾಡಿಕೊಳ್ಳಲೇಬೇಕಿದೆ.  ಹೀಗಾಗಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಖುದ್ದು ತಾವೇ ತರಬೇತಿ ನೀಡುವುದರ ಜೊತೆಗೆ, ಅಧಿಕಾರಿಗಳ ಗೊಂದಲ, ಪ್ರಶ್ನೆ ಅಥವಾ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗಲಿದೆ.  ಇದಕ್ಕೆಂದೆ ಭಾನುವಾರದಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಏರ್ಪಡಿಸಲಾಗಿದ್ದು, ಈ ತರಬೇತಿ ಕೇಂದ್ರಗಳಿಗೆ ತಾವೇ ಖುದ್ದು, ಭೇಟಿ ನೀಡಿ, ಅಧಿಕಾರಿಗಳೊಂದಿಗೆ ನಿಯಮಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
     ಮತಗಟ್ಟೆ ಅಧಿಕಾರಿಗಳು, 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ಚಟುವಟಿಕೆಗೆ ಅವಕಾಶ ನೀಡಬಾರದು.  ಮತಗಟ್ಟೆಗಳಲ್ಲಿ ಯಾವುದೇ ಪಕ್ಷ ಅಥವಾ ಚಿಹ್ನೆಗಳ ಛಾಯಾಚಿತ್ರವಿದ್ದಲ್ಲಿ ಅದನ್ನು ಮರೆಮಾಚಬೇಕು.  ಮತದಾನ ಪ್ರಕ್ರಿಯೆ ಗೌಪ್ಯವಾಗಿರುವ ರೀತಿಯಲ್ಲಿ ಮತಯಂತ್ರಗಳನ್ನು ಇರಿಸಲು ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಿಕೊಂಡು, ಸ್ಥಳ ನಿಗದಿ ಮಾಡಿಕೊಳ್ಳಬೇಕು.  ಪೋಲಿಂಗ್ ಏಜೆಂಟರ ಕಾರ್ಯ ಪರಿಶೀಲಿಸಬೇಕು. ಬೆಳಿಗ್ಗೆ 06 ಗಂಟೆಗೆ ಸರಿಯಾಗಿ ಅಣಕು ಮತದಾನ ಪ್ರಕ್ರಿಯೆ ಪ್ರಾರಂಭಿಸಬೇಕು.  ಮತಗಟ್ಟೆಯೊಳಗೆ ಯಾವುದೇ ಮತದಾರ ಅಥವಾ ಸಿಬ್ಬಂದಿ ಮೊಬೈಲ್ ಫೋನ್ ತರುವಂತಿಲ್ಲ.  ಇದರ ಬಗ್ಗೆ ನಿಗಾ ವಹಿಸಬೇಕು.  ಮತಗಟ್ಟೆ ಬಳಿ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು.  ಚುನಾವಣೆಯನ್ನು ಮುಕ್ತ ಮತ್ತು ನಿಸ್ಪಕ್ಷಪಾತ ರೀತಿಯಲ್ಲಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.  ಮತಗಟ್ಟೆಯಲ್ಲಿ ಮತದಾನದ ಬಗ್ಗೆ ಸರಿಯಾಗಿ ದಾಖಲೆಗಳನ್ನು ನಿರ್ವಹಿಸಬೇಕು.  ನಕಲಿ ಮತದಾರರು ಮತ ಚಲಾವಣೆಗೆ ಯತ್ನಿಸುವ ಸಾಧ್ಯತೆಗಳಿದ್ದು, ಈ ಕುರಿತು ನಿಗಾ ವಹಿಸಿ, ಮತದಾರರನ್ನು ಗುರುತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಧರು ಅಥವಾ ದುರ್ಬಲರು ಮತಗಟ್ಟೆಗೆ ಬಂದಾಗ, ಅವರು ಮತ ಚಲಾಯಿಸಲು ನಿಯಮಾನುಸಾರ ಅನುವು ಮಾಡಿಕೊಡಬೇಕು.  ಸಂಜೆ 06 ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ, ನಿಯಮಗಳಿಗೆ ಅನುಗುಣವಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.  ಒಟ್ಟಾರೆ ಮತಗಟ್ಟೆಯಲ್ಲಿ ಚುನಾವಣಾ ಆಯೋಗದ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುಗಮವಾಗಿ ಹಾಗೂ ನ್ಯಾಯ ಸಮ್ಮತವಾಗಿ ಮತದಾನ ಪ್ರಕ್ರಿಯೆ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ, ಸಹಾಯಕ ಚುನಾವಣಾಧಿಕಾರಿ ಗುರುಬಸವರಾಜ ಸೇರಿದಂತೆ ಟ್ರೈನರ್‍ಗಳು ಪಾಲ್ಗೊಂಡಿದ್ದರು.  ತರಬೇತಿ ಅಂಗವಾಗಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರಗಳ ಕಾರ್ಯ ನಿರ್ವಹಣೆ ಹಾಗೂ ಈ ಬಾರಿಯ ಚುನಾವಣೆಯಲ್ಲಿ ನೂತನವಾಗಿ ಪರಿಚಯಿಸಲಾಗುತ್ತಿರುವ ವಿವಿ ಪ್ಯಾಟ್ ಕಾರ್ಯ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.    ಮತಗಟ್ಟೆಗಳಿಗೆ ನೇಮಕ ಮಾಡಲಾಗಿರುವ ಅಧಿಕಾರಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಕೊಠಡಿಗಳಲ್ಲಿ ತರಬೇತಿ ನೀಡಲಾಯಿತು.
Post a Comment