Saturday, 28 April 2018

ಬೇಸಿಗೆಯ ನಿರ್ವಹಣೆ : ಸಾರ್ವಜನಿಕರಿಗೊಂದಿಷ್ಟು ಸಲಹೆಗಳು


ಕೊಪ್ಪಳ ಏ. 28 (ಕರ್ನಾಟಕ ವಾರ್ತೆ): ಬಿರು ಬೇಸಿಗೆ ಬಂದಾಗಿದೆ.  ಸೂರ್ಯನ ಕೆಂಡದಂತಹ ಬಿಸಿಲಿಗೆ ಭೂಮಿ ಅಕ್ಷರಶಃ ಕಾದ ಕಾವಲಿಯಂತಾಗಿದೆ.  ಸೂರ್ಯನ ಪ್ರತಾಪಕ್ಕೆ ಜನರು ಬಸವಳಿಯುತ್ತಿದ್ದು, ಸದ್ಯ ತೀವ್ರ ಸೆಖೆಗೆ ಮನೆಯೊಳಗೂ ಇರಲಾರದೆ, ಮನೆಯ ಹೊರಗೂ ಬರಲಾಗದೆ ಜನರು ಸಂಕಟ ಅನುಭವಿಸುವ ಸ್ಥಿತಿ ತಲೆದೋರಿದೆ.    ಸಾರ್ವಜನಿಕರು ಬಿಸಿಲಿನ ಆಘಾತ (ಸನ್ ಸ್ಟ್ರೋಕ್) ದಿಂದ ಪಾರಾಗಲು ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರಾಮಕೃಷ್ಣ ಹೆಚ್.ಇವರು ಕೆಲವು ಸಲಹೆಗಳನ್ನು ನೀಡಿದ್ದಾರೆ
    
     ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೆ ತಾಪಮಾನ 42 ಡಿಗ್ರಿ ಆಸುಪಾಸಿನಲ್ಲಿದೆ.  ಕಳೆದ ವರ್ಷಕ್ಕೆ ಹೋಲಿಸಿದಾಗ, ಮೇ ತಿಂಗಳಿನಲ್ಲಿರುತ್ತಿದ್ದ ಅತಿ ಹೆಚ್ಚಿನ ತಾಪಮಾನ, ಈ ಬಾರಿ ಏಪ್ರಿಲ್ ತಿಂಗಳಿನಲ್ಲಿಯೇ ತೀವ್ರ ಬಿಸಿಯ ಅನುಭವನ ನೀಡುತ್ತಿದೆ.  ಹೀಗಾಗಿ ಬೇಸಿಗೆಯಲ್ಲಿ ಸಾರ್ವಜನಿಕರು ಯಾವ ಕ್ರಮವನ್ನು ಅನುಸರಿಸಬೇಕು, ಯಾವುದನ್ನು ಮಾಡಬಾರದು ಎಂಬುದರ ಕುರಿತು ಆರೋಗ್ಯ ಇಲಾಖೆ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದೆ.
    
ಬೇಸಿಗೆಯಲ್ಲಿ ವಹಿಸಬೇಕಾದ ಕಾಳಜಿ :
***************
•    ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸುವುದು ಉತ್ತಮ
•    ಬಿಸಿಲಿನಲ್ಲಿ ಬಯಲು ಮತ್ತು ಹೊಲದಲ್ಲಿ ಕೆಲಸ ಮಾಡುವ ಜನರು ಸದಾ ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು
•    ಬಿಸಿಲಿನಲ್ಲಿ ಹೆಚ್ಚು ನಡೆಯುವುದು ಸೂಕ್ತವಲ್ಲ.  ಬಿಸಿಲಿನಲ್ಲಿ ಛತ್ರಿ ಉಪಯೋಗಿಸಿ.
•    ಆಗಾಗ್ಗೆ ಉಪ್ಪು ಸಕ್ಕರೆ ಮಿಶ್ರಿತ ನೀರನ್ನು ನಿಧಾನವಾಗಿ ಧಾರಾಳವಾಗಿ ಕುಡಿಯಬೇಕು, ಹಣ್ಣಿನ ರಸ ಅಥವಾ ಪಾನಕಗಳಾದರೆ ಇನ್ನೂ ಉತ್ತಮ.  ಆದಷ್ಟು ಕಾರ್ಬೋನೇಟೆಡ್ ಪಾನೀಯಗಳು, ಕಾಫಿ/ಟೀ ಇಂತಹವುಗಳ ಬಳಕೆ ಕಡಿಮೆಗೊಳಿಸಿ
•    ಹತ್ತಿಯ ನುಣುಪಾದ ಬಟ್ಟೆ, ಕರವಸ್ತ್ರದಿಂದ ಬೆವರನ್ನು ಒರೆಸಿಕೊಳ್ಳಬೇಕು
•    ನೀರು ಮಜ್ಜಿಗೆ/ ಎಳೆನೀರು ಅತ್ಯುತ್ತಮ
•    ಬೆಚ್ಚಗಿನ ಮಸಾಲೆ ರಹಿತ, ಶುದ್ಧ ಸಾತ್ವಿಕ ಆಹಾರ ಸೇವಿಸಬೇಕು
•    ಗಾಳಿಯಾಡುವಂತಿರುವ ಪಾದರಕ್ಷೆಯನ್ನು ಧರಿಸಬೇಕು

ಬೇಸಿಗೆಯಲ್ಲಿ ಇದು ಬೇಡ :
**************
•    ಬಿಗಿಯಾದ ಗಾಢ ಬಣ್ಣದ ಬಟ್ಟೆ ಧರಿಸಬಾರದು.
•    ಕುಷನ್ ಯುಕ್ತ ಕುರ್ಚಿಯಲ್ಲಿ ಹೆಚ್ಚಿನ ಸಮಯ ಕೂಡಬಾರದು.
•    ಐಸ್‍ಕ್ರೀಂ ಮತ್ತು ಫ್ರಿಡ್ಜ್ ನೀರು ಸೇವನೆ ತಗ್ಗಿಸಬೇಕು.
•    ಬಿಸಿಲಿನಿಂದ ಮನೆಗೆ ಹೋದ ತಕ್ಷಣ ಗಟಗಟನೆ ತಣ್ಣನೆಯ ನೀರು ಸೇವಿಸಬಾರದು,
•    ಬಾಯಾರಿದಾಗಲೆಲ್ಲ ಕಡ್ಡಾಯವಾಗಿ ನೀರನ್ನು ಕುಡಿಯಬೇಕೆ ಹೊರತು ಕಾರ್ಬೋನೇಟೆಡ್ ತಂಪು ಪಾನೀಯ ಕುಡಿಯುವುದು ಸೂಕ್ತವಲ್ಲ
•    ಬೆವರನ್ನು ಒರೆಸಲು ಒರಟಾದ ಬಟ್ಟೆಯ ಉಪಯೋಗ ಬೇಡ
•    ಕಾಫಿ/ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯವನ್ನು ಅತಿಯಾಗಿ ಸೇವಿಸುವುದು ಬೇಡ
•    ಬಿಸಿಯಾದ, ಹೆಚ್ಚು ಮಸಾಲೆಯುಕ್ತ ಆಹಾರ ತಿನ್ನುವುದು ಬೇಡ.
•    ಬಿಸಿಲಿನಲ್ಲಿ ದೀರ್ಘವಾಗಿ ವಾಹನ ಚಾಲನೆ ಮಾಡುವುದು ಬೇಡ.
•    ಮಾಂಸಾಹಾರ ಸೇವನೆ ಆದಷ್ಟು ಕಡಿಮೆ ಮಾಡಿ ಮತ್ತು  ಮದ್ಯಪಾನ ನಿಷೇಧಿಸಿ
•    ಬಿಗಿಯಾದ ಗಾಳಿಯಾಡದ ಪಾದರಕ್ಷೆ ಅಥವಾ ಶೂ ಧರಿಸುವುದು ಬೇಡ

ತೊಂದರೆಗೊಳಗಾದ ವ್ಯಕ್ತಿ ಕಂಡುಬಂದರೆ :
************* ಆಪತ್ಕಾಲದಲ್ಲಿ ಕೈಗೊಳ್ಳುವ ಶೀಘ್ರ ಸಮಯೋಚಿತ, ಪ್ರಜ್ಞಾಪೂರ್ವಕ ಕ್ರಮದಿಂದ ಆಘಾತಕ್ಕೊಳಗಾದ ವ್ಯಕ್ತಿಯ ಪ್ರಾಣವನ್ನು ಉಳಿಸಲು ಸಾಧ್ಯವಿದೆ.  ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸುವುದು ಕಂಡುಬಂದಲ್ಲಿ ಕೂಡಲೆ ಅಂತಹ ವ್ಯಕ್ತಿಯನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು.  ವ್ಯಕ್ತಿಯನ್ನು ಕೆಳಗೆ ಮಲಗಿಸಿ, ಕಾಲುಗಳನ್ನು ಮೇಲಕ್ಕೆತ್ತಬೇಕು.  ವ್ಯಕ್ತಿಯ ಹಣೆ, ಕತ್ತು, ಪಾದ, ತೊಡೆಯ ಸಂದುಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು (ತಂಪಾದ ಅಥವಾ ಐಸ್ ನೀರಿನಿಂದ ಬೇಡ).  ನಿಧಾನವಾಗಿ ಸ್ಪಲ್ಪ ಸಕ್ಕರೆ, ಉಪ್ಪು ಬೆರೆತ ನೀರನ್ನು ಕುಡಿಸಬೇಕು.   ಬಿಸಿಲಿನ ಜಳಕ್ಕೆ ವ್ಯಕ್ತಿಯು ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡ ಬಡಿಸಿದ್ದಲ್ಲಿ ಕೂಡಲೇ ಸಮೀಪದ ಆಸ್ಪತ್ರೆಗೆ ಹೋಗಬೇಕು, ಮತ್ತು ಆ ವ್ಯಕ್ತಿಯನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ ವಿಶ್ರಾಂತಿ ಪಡೆಯುವಂತೆ ನೋಡಿಕೊಳ್ಳಬೇಕು. ನಂತರ ಅಂತಹ ವ್ಯಕ್ತಿಗೆ ನಿಧಾನವಾಗಿ ಸ್ವಲ್ಪ ಸಕ್ಕರೆ ಉಪ್ಪು ಬೆರೆತ ನೀರನ್ನು ಕುಡಿಸಬೇಕು, ಚರ್ಮ ಕೆಂಪಾದರೆ, ಬೆವರಿನ ಪ್ರಮಾಣ ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀವ್ರ ಉಸಿರಾಟವಿದ್ದಲ್ಲಿ ತುರ್ತಾಗಿ ಆಸ್ಪತ್ರೆಗೆ ಹೋಗಬೇಕು. ಚಿಕ್ಕಮಕ್ಕಳು ವೃದ್ಧರು ಹಾಗೂ ಮನೆಯಲ್ಲಿ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಆದಷ್ಟು ಮನೆಯಿಂದ ಹೊರಗಡೆಗೆ ಅನಾವಶ್ಯಕವಾಗಿ ಹೋಗದಂತೆ ನೋಡಿಕೊಳ್ಳಬೇಕು. ರಸ್ತೆ ಅಕ್ಕ-ಪಕ್ಕ ತೆರೆದಿಟ್ಟ ತಿಂಡಿ ತಿನಿಸುಗಳನ್ನು ತಿನ್ನಬಾರದು ಮತ್ತು ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿಯಾಗುವುದನ್ನು ತಡೆಗಟ್ಟಬೇಕು.    ಕೃಷಿಕರು ಹೊಲದಲ್ಲಿ ಕೆಲಸ ಮಾಡಬೇಕಾದರೆ ಸಾಧ್ಯವಾದಷ್ಟು ಬೆಳಗಿನ ಸಮಯ ಹಾಗೂ ಸಾಯಂಕಾಲ ವೇಳೆಯಲ್ಲಿ ಮಾಡಿದರೆ ಒಳ್ಳೆಯದು.

ಬೇಸಿಗೆ ತೊಂದರೆಯ ಲಕ್ಷಣಗಳು :
*********** ಚರ್ಮ ಕೆಂಪಾಗುವುದು, ಬೆವರಿನ ಪ್ರಮಾಣ ಕಡಿಮೆಯಾಗುವುದು, ದೇಹದ ಉಷ್ಣತೆ ಜಾಸ್ತಿಯಾಗುವುದು, ದೀರ್ಘವಾದ ತೀವ್ರ ಉಸಿರಾಟ.  ಇಂತಹ ಲಕ್ಷಣಗಳು ಕಂಡುಬಂದಲ್ಲಿ, ಪ್ರಥಮ ಚಿಕಿತ್ಸೆಯಾಗಿ, ಆಘಾತಕ್ಕೊಳಗಾದ ವ್ಯಕ್ತಿಯ ಬಟ್ಟೆ, ಪಾದರಕ್ಷೆಗಳನ್ನು ಸಡಿಲಿಸಿ, ತೆಗೆಯಬೇಕು.  ತಂಪಾದ ನೆರಳಿನ ಜಾಗಕ್ಕೆ ಸ್ಥಳಾಂತರಿಸಿ, ಗಾಳಿ ಹಾಕಬೇಕು.  ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಬೇಕು.  ಯಾವುದೇ ಔಷಧ ತಕ್ಷಣ ನೀಡಬಾರದು.  ದೇಹವನ್ನು ಅತಿಯಾಗಿ ತಕ್ಷಣ ತಂಪು ಮಾಡುವುದೂ ಬೇಡ.  ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧ ನೀರನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಸುವುದು ಉತ್ತಮ.
ಬಿಸಿಲಿನ ಆಘಾತದಿಂದ ಯಾರಾದರೂ ತೊಂದರೆಗಳಪಟ್ಟರೆ ತಮ್ಮ ಗ್ರಾಮಗಳಲ್ಲಿರುವ ಕಿರಿಯ ಆರೋಗ್ಯ ಸಹಾಯಕರು   ಅಥವಾ ಆಶಾ ಕಾರ್ಯಕರ್ತೆಯರ ನೆರವಿನಿಂದ ಆರೋಗ್ಯ ಶಿಕ್ಷಣ ಹಾಗೂ ಓಆರ್‍ಎಸ್ ಪಾಕೆಟ್ ಪಡೆದು ಒಂದು ಲೀಟರ್ ನೀರಿಗೆ ಒಂದು ಪಾಕೆಟ್ ಹಾಕಿ ಚೆನ್ನಾಗಿ ಕಲಿಸಿ 24 ಗಂಟೆಯ ಒಳಗೆ ಉಪಯೋಗಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರಾಮಕೃಷ್ಣ ಹೆಚ್. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment