Saturday, 21 April 2018

ಕುಷ್ಟಗಿ : ಉದ್ಯೋಗಖಾತ್ರಿ ಕೂಲಿಕಾರರಿಗೆ ಮತದಾರರ ಜಾಗೃತಿ

ಕೊಪ್ಪಳ ಏ. 21 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆಗಾಗಿ ಮೇ. 12 ರಂದು ನಡೆಯುವ ಮತದಾನ ಕಾರ್ಯದಲ್ಲಿ ಎಲ್ಲ ಕೂಲಿ ಕಾರ್ಮಿಕರು ತಪ್ಪದೆ ಪಾಲ್ಗೊಂಡು, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನೈತಿಕವಾಗಿ ಮತದಾನ ಮಾಡಬೇಕು ಎಂದು ಕುಷ್ಟಗಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಅವರು ಮನವಿ ಮಾಡಿಕೊಂಡರು.

     ಕುಷ್ಟಗಿ ತಾಲೂಕು ತಳುವಗೇರಾ ಗ್ರಾಮ ವ್ಯಾಪ್ತಿಯ ನಿಡಶೇಸಿ ಕೆರೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಕೆರೆ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.  ಕುಷ್ಟಗಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಅವರು ಮಾತನಾಡಿ, ಮೇ. 12 ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಅಂದು ಎಲ್ಲ ಮತದಾರರು ತಪ್ಪದೆ ಮತದಾನ ಮಾಡಬೇಕು.  ಮತದಾನಕ್ಕಾಗಿ ಕೆಲವರು ಹಣ, ಮದ್ಯದ ಆಸೆ, ಆಮಿಷವೊಡ್ಡುವ ಸಾಧ್ಯತೆಗಳಿದ್ದು, ಇಂತಹ ಆಮಿಷಗಳಿಗೆ ಯಾರೂ ಒಳಗಾಗಬಾರದು.  ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇರುವ ಏಕೈಕ ಅಧಿಕಾರ, ಅದು ಮತ ಚಲಾವಣೆಯಾಗಿದ್ದು, ಇಂತಹ ಪವಿತ್ರ ಕಾರ್ಯವಾಗಿರುವ ಮತದಾನವನ್ನು, ತಪ್ಪದೆ ಕೈಗೊಂಡು, ನಮ್ಮ ಕರ್ತವ್ಯವನ್ನು ನಾವು ನಿಭಾಯಿಸಬೇಕು ಎಂದು ಅವರು ಹೇಳಿದರು.


     ಗ್ರಾಮ ಪಂಚಾಯತಿ ಪಿಡಿಒ ಸಂಗನಗೌಡ ಸೇರಿದಂತೆ ತಳುವಗೇರಾ, ನಿಡಶೇಸಿ ಹಾಗೂ ವಣಗೇರಾ ಗ್ರಾಮಗಳ ಸುಮಾರು 1500 ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು.
Post a Comment