Saturday, 21 April 2018

ಮತದಾನ ಜಾಗೃತಿ : ಕೊಪ್ಪಳ ಜಿಲ್ಲೆಗೆ ಗಂಗಾವತಿ ಪ್ರಾಣೇಶ್ ಐಕಾನ್ : ಏ. 26 ರಿಂದ ಜಿಲ್ಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಏ. 21 (ಕರ್ನಾಟಕ ವಾರ್ತೆ): ರಾಜ್ಯ, ದೇಶ, ವಿದೇಶಗಳಲ್ಲಿ ಪ್ರವಾಸ ಕೈಗೊಂಡು, ತಮ್ಮ ಮಾತುಗಳ ಮೂಲಕವೇ ಜನರನ್ನು ನಗೆಗಡಲಲ್ಲಿ ತೇಲಿಸುವ, ಖ್ಯಾತ ಹಾಸ್ಯ ಸಾಹಿತಿ, ಕಲಾವಿದ ಕೊಪ್ಪಳ ಜಿಲ್ಲೆ ಗಂಗಾವತಿಯ ಪ್ರಾಣೇಶ್ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಐಕಾನ್ ಆಗಿ ನೇಮಕಗೊಂಡಿದ್ದಾರೆ.

     ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿ.ಪಂ. ಸಿಇಒ ವೆಂಕಟ್ ರಾಜಾ ಅವರು, ಪ್ರಾಣೇಶ್ ಅವರನ್ನು ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಮತದಾರರ ಜಾಗೃತಿಗೆ ಐಕಾನ್ ಆಗಿ ಆಯ್ಕೆ ಮಾಡಿ, ಅನುಮೋದನೆಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.  ಇದೀಗ, ಚುನಾವಣಾ ಆಯೋಗವು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಗಂಗಾವತಿಯ ಪ್ರಾಣೇಶ್ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರಲ್ಲಿ ನೈತಿಕ ಮತದಾನದ ಬಗ್ಗೆ ಹಾಸ್ಯ  ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಏರ್ಪಡಿಸುವ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಜಿಲ್ಲಾ ಪಂಚಾಯತಿ ವತಿಯಿಂದ ಕಾರ್ಯಕ್ರಮದ ವೇಳಾಪಟ್ಟಿ ಸಿದ್ಧಪಡಿಸಿದ್ದು, ಕಾರ್ಯಕ್ರಮದ ಸ್ಥಳವನ್ನು ಆಯಾ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳೇ ಆಯ್ಕೆ ಮಾಡಲಿದ್ದಾರೆ.
     ಕೊಪ್ಪಳ ಜಿಲ್ಲಾ ಪಂಚಾಯತ ವತಿಯಿಂದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದ ಜನರಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಏ. 26 ರಿಂದ ಜಿಲ್ಲೆಯಲ್ಲಿ ಆಯೋಜಿಸಲಾಗಿದೆ.  ಏ. 26 ರಂದು ಕೊಪ್ಪಳ ತಾಲೂಕಿನಲ್ಲಿ, ಏ. 28 ರಂದು ಕುಷ್ಟಗಿ ತಾಲೂಕು, ಏ. 30 ರಂದು ಗಂಗಾವತಿ ತಾಲೂಕು, ಮೇ. 02 ರಂದು ಯಲಬುರ್ಗಾ ತಾಲೂಕು, ಮೇ. 07 ರಂದು ಕೊಪ್ಪಳ ನಗರ ಮತ್ತು ಮೇ. 08 ರಂದು ಗಂಗಾವತಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ ಅವರಿಂದ ಮತದಾನ ಜಾಗೃತಿ ಕಾರ್ಯಕ್ರಮ ಜರುಗಲಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
Post a Comment