Saturday, 31 March 2018

ಸಾರ್ವತ್ರಿಕ ಚುನಾವಣೆ : ವಸತಿ ನಿಲಯಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ



ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯಗಳ ವಿಧ್ಯಾರ್ಥಿಗಳಿಗಾಗಿ ಮತದಾರರ ಜಾಗೃತಿ ಕುರಿತ ಸ್ವೀಪ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  
     ಸ್ವೀಪ್ ಕಾರ್ಯಕ್ರಮಗಳನ್ನು ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿನ ವಸತಿ ನಿಲಯಗಳಲ್ಲಿ ಏರ್ಪಡಿಸಲಾಯಿತು.  ಕಾರ್ಯಕ್ರಮಗಳಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಹಾಗೂ ಸಂಬಂಧಿಸಿದ ತಾಲೂಕ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಕುರಿತು ತಿಳುವಳಿಕೆ ನೀಡಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.  ಕಾರ್ಯಕ್ರಮವನ್ನು ಕೊಪ್ಪಳ ತಾಲೂಕಿನ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಮತ್ತು ಯಲಬುರ್ಗಾ ತಾಲೂಕಿನ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಆಯೋಜಿಸಲಾಗಿದ್ದು, ಮತದಾನ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.  ಹಾಗೂ ಮತದಾನದ ಪ್ರಾಮುಖ್ಯತೆ ಕುರಿತು ತಿಳಿಸಿ, ತಮ್ಮ ಮೂಲಕ ಉಳಿದ ನಾಗರೀಕರಿಗೆ ಮತದಾನದ ಪ್ರಾಮುಖ್ಯತೆ ಕುರಿತು ವಿವರಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಏ. 02 ರಂದು ಕೊಪ್ಪಳದಲ್ಲಿ ಪೊಲೀಸ್ ಧ್ವಜ ದಿನಾಚರಣೆ


ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ “ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮವನ್ನು ಏಪ್ರಿಲ್. 02 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಆಯೋಜಿಸಲಾಗಿದೆ. 
    ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಆರಕ್ಷಕ ಉಪನಿರೀಕ್ಷಕರಾದ ವೀರಭದ್ರಪ್ಪ ಎಸ್. ಬನ್ನಟ್ಟಿ ಅವರು ಮುಖ್ಯ ಅಥಿಗಳಾಗಿ ಆಗಮಿಸುವರು.  ಗೌರವವಂದನೆ ಸ್ವೀಕಾರ, ಕವಾಯತಿನ ಪರಿವೀಕ್ಷಣೆ, ಪಥ ಸಂಚಲನ, ಸ್ವಾಗತ ಭಾಷಣ, ವರದಿ ವಾಚನ, ಅತಿಥಿಗಳಿಗೆ ಧ್ವಜ ಸಮರ್ಪಣೆ, ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ್, ಮುಖ್ಯ ಅತಿಥಿಗಳಿಂದ ಭಾಷಣ ಹಾಗೂ ವಂದನಾರ್ಪಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ಮತದಾನದ ಅರಿವು ಮತ್ತು ಮಹತ್ವ : ಹೂವಿನಾಳ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ


ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು, ಮತ್ತು ಆರೋಗ್ಯ ಸಹಾಯಕಿಯರಿಗೆ ಮತದಾನದ ಅರಿವು ಮತ್ತು ಮಹತ್ವದ ಕುರಿತು ಹೂವಿನಾಳ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.     
ಕೊಪ್ಪಳ ಜಿಲ್ಲೆಯ ಹೂವಿನಾಳ ಗ್ರಾಮದಲ್ಲಿ ನಡೆದ ಪ್ರಾಥಮಿಕ ಆರೋಗ್ಯ ಆರೈಕೆಯ ಅಡಿಯಲ್ಲಿ ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು, ಮತ್ತು ಆರೋಗ್ಯ ಸಹಾಯಕಿಯರಿಗೆ ಅಸಾಂಕ್ರಾಮಿಕ ರೋಗಗಳ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದ ಜೊತೆ-ಜೊತೆಯಲ್ಲಿಯೇ ಮತದಾನದ ಅರಿವು ಮತ್ತು ಮಹತ್ವ ಕುರಿತು ತಿಳುವಳಿಕೆ ನೀಡಲು ಸ್ವೀಪ್ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.  ಹಾಗೂ ಚುನಾವಣೆಯ ಸಂದರ್ಭದಲ್ಲಿ ಮತದಾನದ ಬಗ್ಗೆ ಅರಿವು, ಅದರ ಮಹತ್ವ ಮತ್ತು ನಮ್ಮ ಮೂಲಭೂತ ಹಕ್ಕು.  ಮತದಾನ ಮಾಡುವುದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ ಎಂಬುವುದರ ಬಗ್ಗೆ ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು, ಮತ್ತು ಆರೋಗ್ಯ ಸಹಾಯಕಿಯರಿಗೆ ಜಾಗೃತಿ ಮೂಡಿಸಲಾಯಿತು.

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ


ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಮತದಾರರ ಜಾಗೃತಿ ಮೂಡಿಸಲಾಯಿತು.
      ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಯಿತು.  ನೈತಿಕ ಮತದಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ, ಚುನಾವಣೆಯ ದಿನದಂದು ತಪ್ಪದೇ ಮತ ಚಲಾಯಿಸಲು ಮತದಾನವು ನಮ್ಮ ಹಕ್ಕು ನಮ್ಮ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣಾ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂಬುದಾಗಿ ಪ್ರಮಾಣ ಸ್ವೀಕರಿಸಲಾಯಿತು.  ಹಾಸ್ಟೆಲ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಶಸ್ತ್ರಗಳನ್ನು ಒಪ್ಪಿಸಲು ಸೂಚನೆ


ಕೊಪ್ಪಳ ಮಾ. 31 (ಕರ್ನಾಟಕ ವಾರ್ತೆ) ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆಗಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ದೃಷ್ಠಿಯಿಂದ, ಜಿಲ್ಲ್ಲೆಯಲ್ಲಿ ರೈತರು, ಗಣವ್ಯಕ್ತಿಗಳು ಮತ್ತು ಇತರರು ಹೊಂದಿರುವ ಶಸ್ತ್ರಗಳನ್ನು ಪೊಲೀಸ್ ಇಲಾಖೆಗೆ ಒಪ್ಪಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶಿಸಿದ್ದಾರೆ.
     ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಮೇ 18 ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ.  ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಶಸ್ತ್ರಗಳನ್ನು ಪೊಲೀಸ್ ಇಲಾಖೆಯಲ್ಲಿ ನೀತಿಸಂಹಿತೆ ಮುಗಿಯುವವರೆಗೆ ಪೊಲೀಸ್ ಇಲಾಖೆಯಲ್ಲಿ ಠೇವಣಿ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈಗಾಗಲೆ ಸೂಚನೆ ನೀಡಲಾಗಿದೆ.  ಈ ಆದೇಶ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಆರ್.ಬಿ.ಐ. ನಿಂದ ಮಾನ್ಯತೆ ಪಡೆದಿರುವ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.

Friday, 30 March 2018

Voter Awareness Speech From Rahul Dravid

ಕರ್ನಾಟಕ ವಿಧಾನಸಭೆ ಚುನಾವಣೆ ಗಾಗಿ ಮೇ. 12 ರಂದು ನಡೆಯುವ ಮತದಾನ ಸಂದರ್ಭದಲ್ಲಿ ತಪ್ಪದೆ ಮತದಾನ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸಿ. Plz share this video to all Voters

ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯ : ಕೊಪ್ಪಳ ಚುನಾವಣಾಧಿಕಾರಿ ಸೂಚನೆ


ಕೊಪ್ಪಳ ಮಾ. 30 (ಕರ್ನಾಟಕ ವಾರ್ತೆ): ಚುನಾವಣಾ ಸಮಯದಲ್ಲಿ ಯಾವುದೇ ಸಭೆ/ ಸಮಾರಂಭಗಳಿಗೆ 24 ಗಂಟೆಗೂ ಪೂರ್ವದಲ್ಲಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬೇಕು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಆಹಾರ ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಸೂಚನೆ ನೀಡಿದರು.
     ಕೊಪ್ಪಳ ತಹಸಿಲ್ದಾರರ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಸಭೆಯಲ್ಲಿ ಚುನಾವಣಾಧಿಕಾರಿಗಳು ಸೂಚನೆ ನೀಡಿದರು.
     ಚುನಾವಣಾ ಸಮಯದಲ್ಲಿ ವಿವಿಧ ಸಭೆ/ಸಮಾರಂಭ ಹಾಗೂ ವಾಹನಗಳ ಅನುಮತಿಯನ್ನು ಪಡೆಯಲು ಸುಗಮ, ಸುವಿಧ ತಂತ್ರಾಂಶದಲ್ಲಿ  ಸಭೆಯನ್ನು ನಡೆಸುವ 24 ಗಂಟೆ ಪೂರ್ವದಲ್ಲಿ ಅನುಮತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದ ಅವರು, ಈ ಕುರಿತು, ಭೌತಿಕವಾಗಿ ರಾಜಕೀಯ ಪಕ್ಷದ ಮುಖಂಡರಿಗೆ ತಂತ್ರಾಂಶದ ಬಗ್ಗೆ ಅರಿವು ಮೂಡಿಸಿದರು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ಚುನಾವಣಾ ಕಾರ್ಯಗಳು ನಡೆಸಲು ಸಹಕಾರವನ್ನು ನೀಡಬೇಕು ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ.  ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳಲ್ಲಿ ಕೋರಿದರು.
     ಚುನಾವಣೆ ಸಂಬಂಧ ಕೊಪ್ಪಳ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ದೂರು ನಿರ್ವಹಣಾ ಘಟಕವನ್ನು ಆರಂಭಿಸಲಾಗಿದ್ದು, ದೂರು ನಿರ್ವಹಣಾ ಘಟಕದ ದೂರವಣಿ ಸಂಖ್ಯೆ 08539-222241 ಆಗಿರುತ್ತದೆ. ಈ ದೂರವಾಣಿ ಕೇಂದ್ರವು 24*7 ವೇಳೆ ಕಾರ್ಯ ನಿರ್ವಹಿಸುತ್ತದೆ ಸಾರ್ವಜನಿಕರು ಚುನಾವಣೆ ಸಂಬಂಧ ಯಾವುದೇ ದೂರುಗಳ ಇದ್ದಲ್ಲಿ ಸಲ್ಲಿಸಬಹುದು ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ತಿಳಿಸಿದರು.
     ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿರುವ ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನೇಮಕ


ಕೊಪ್ಪಳ ಮಾ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ 60-ಕುಷ್ಟಗಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಹಾಗೂ 64-ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
     ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಪ್ರಶಾಂತ್ ಪಿ.ಬಿ.- 9480789077 ಅವರು ಚುನಾವಣಾಧಿಕಾರಿಯಾಗಿದ್ದು, ಕುಷ್ಟಗಿ ತಹಸಿಲ್ದಾರ್ ಎಚ್. ವಿಶ್ವನಾಥ್-9483669366 ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ.
     ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕೊಪ್ಪಳ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎಚ್.ವಿ. ನಾಗರಾಜ್- 9448652748 ಅವರು ಚುನಾವಣಾಧಿಕಾರಿಯಾಗಿದ್ದು, ಕಾರಟಗಿಯ ವಿಶೇಷ ತಹಸಿಲ್ದಾರ್ ವಿಜಯಕುಮಾರ್-9980265830 ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ.
     ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಕೊಪ್ಪಳ ಉಪವಿಭಾಗಾಧಿಕಾರಿ ರವಿ ತಿರ್ಲಾಪುರ-9945228250 ಅವರು ಚುನಾವಣಾಧಿಕಾರಿಯಾಗಿದ್ದು, ಗಂಗಾವತಿ ತಹಸಿಲ್ದಾರ್ ರವಿ ಅಂಗಡಿ- 9449294410 ಅವರು ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ.
     ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಕಿ- 9739582619 ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದು, ಯಲಬುರ್ಗಾ ತಹಸಿಲ್ದಾರ್ ರಮೇಶ ಅಳವಂಡಿಕರ್- 9986684592 ಸಹಾಯಕ ಚುನಾವಣಾಧಿಕಾರಿಯಾಗಿದ್ದಾರೆ.
     ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ- 9886660847 ಅವರು ಚುನಾವಣಾಧಿಕಾರಿಯಾಗಿ ಹಾಗೂ ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ-9164813451 ಅವರು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದಾರೆ.
     ಈಗಾಗಲೆ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಸಾರ್ವಜನಿಕವಾಗಿ ಯಾವುದೇ ಸಭೆ, ಸಮಾರಂಭ, ವಾಹನಗಳ ಬಳಕೆ, ಮೆರವಣಿಗೆಗಳನ್ನು ನಡೆಸಲು ಉದ್ದೇಶಿಸಿದ್ದಲ್ಲಿ, ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾಧಿಕಾರಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು.  ತಪ್ಪಿದಲ್ಲಿ ಅಂತಹ ಪ್ರಕರಣವನ್ನು ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿ, ಚುನಾವಣಾ ಆಯೋಗದ ನಿರ್ದೇಶನಗಳಂತೆ ಕ್ರಮ ಜರುಗಿಸಲಾಗುವುದು.  ಅನುಮತಿಗಳನ್ನು ಆಯಾ ತಹಸಿಲ್ದಾರರ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.

Wednesday, 28 March 2018

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚುನಾವಣಾ ತಂಡಗಳು ನಿಗಾ ವಹಿಸಿ : ಎಂ. ಕನಗವಲ್ಲಿ



ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಪಾಲಿಸಬೇಕಾದ್ದ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಉಲ್ಲಂಘನೆ ಪ್ರಕರಣಗಳ ಬಗ್ಗೆ ಚುನಾವಣೆಗಾಗಿ ನೇಮಿಸಲಾಗಿರುವ ಎಲ್ಲ ತಂಡಗಳು ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.

     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಚುನಾವಣಾ ವಿವಿಧ ತಂಡಗಳಿಗಾಗಿ ಏರ್ಪಡಿಸಲಾಗಿದ್ದ ತರಬೇತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಈಗಾಗಲೆ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ನೀತಿ ಸಂಹಿತೆ ಪಾಲನೆಯ ಬಗ್ಗೆ ನಿಗಾ ವಹಿಸಲು ಹಲವು ತಂಡಗಳನ್ನು ರಚಿಸಿ, ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೆಲೆನ್ಸ್ ತಂಡ, ವಿಡಿಯೋ ವೀಕ್ಷಣಾ ತಂಡ, ಚುನಾವಣಾ ವೆಚ್ಚ ಪರಿಶೀಲನೆ, ಚೆಕ್‍ಪೋಸ್ಟ್ ತಂಡ, ವಿವಿಧ ಪೊಲೀಸ್ ಅಧಿಕಾರಿಗಳ ತಂಡ ಹೀಗೆ ನಾನಾ ತಂಡಗಳನ್ನು ರಚಿಸಲಾಗಿದೆ.  ಈ ಎಲ್ಲ ತಂಡಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚೂ ತಪ್ಪದೆ ನಿರ್ವಹಿಸಬೇಕು.  ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾ ವಹಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
      ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಸೇರಿದಂತೆ ವಿವಿಧ ಅಧಿಕಾರಿಗಳು, ರಿಟರ್ನಿಂಗ್ ಅಧಿಕಾರಿಗಳು, ಸಹಾಯಕ ರಿಟರ್ನಿಂಗ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೆಲೆನ್ಸ್ ತಂಡ, ವಿಡಿಯೋ ವೀಕ್ಷಣಾ ತಂಡ, ಚುನಾವಣಾ ವೆಚ್ಚ ಪರಿಶೀಲನೆ, ಚೆಕ್‍ಪೋಸ್ಟ್ ತಂಡಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸ್ವ-ಉದ್ಯೋಗ ತರಬೇತಿ : ಅರ್ಜಿ ಆಹ್ವಾನ


ಕೊಪ್ಪಳ ಮಾ. 28 (ಕರ್ನಾಟಕ ವಾರ್ತೆ): ಉತ್ತರಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಇವರ ವತಿಯಿಂದ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಪ್ರಾರಂಭವಾಗಲಿರುವ, ವಿವಿಧ ತರಬೇತಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ತರಬೇತಿಯಲ್ಲಿ ದ್ವಿಚಕ್ರ ವಾಹನ ರಿಪೇರಿ, ವೆಲ್ಡಿಂಗ್ & ಫ್ಯಾಬಿಕೇಶನ್, ಪುರುಷರ ಟೇಲರಿಂಗ್ ಹಾಗೂ ಕೋಳಿ ಸಾಕಾಣಿಕೆ, ಪ್ರಾಯೋಗಿಕ ಕೌಶಲ್ಯಗಳ ಜೊತೆಗೆ ವ್ಯವಹಾರಿಕ ತಂತ್ರಗಳ ಬಗ್ಗೆಯೂ ಸಹ ನುರಿತ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುವುದು.  ಊಟ ವಸತಿಯೊಂದಿಗೆ ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಆಸಕ್ತ 18 ರಿಂದ 45 ವರ್ಷದೊಳಗಿನ ಅರ್ಹ ನಿರುದ್ಯೋಗಿ ಯುವಜನತೆ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.  ತರಬೇತಿ ಪಡೆಯಲು ಇಚ್ಛಿಸುವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೆಲಿ ರಸ್ತೆ, ಹಳಿಯಾಳ (ಉತ್ತರ ಕನ್ನಡ ಜಿಲ್ಲೆ), ವಿಳಾಸಕ್ಕೆ  ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08284-220807, 9483485489, 9482188780 ಕ್ಕೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಕೊಪ್ಪಳ : ಏ. 01 ರಿಂದ ಸ್ವೀಕೃತಿ ತಂತ್ರಾಂಶ ಪದ್ದತಿ ಜಾರಿ


ಕೊಪ್ಪಳ ಮಾ. 28 (ಕರ್ನಾಟಕ ವಾರ್ತೆ): ಕೊಪ್ಪಳ ನಗರಸಭೆಯಲ್ಲಿ ನಗದು ರಹಿತ ಸ್ವೀಕೃತಿ ತಂತ್ರಾಂಶ ಪದ್ದತಿಯನ್ನು ಏಪ್ರಿಲ್ 01 ರಿಂದ ಜಾರಿಗೆ ಮಾಡಲಾಗುವುದು ಎಂದು ಕೊಪ್ಪಳ ನಗರಸಭೆ ಪೌರಾಯುಕ್ತ ಸುನೀಲ್ ತಿಳಿಸಿದ್ದಾರೆ. 
     ಕೊಪ್ಪಳ ನಗರಸಭೆಯಲ್ಲಿ ನಗದು ರಹಿತ ಸ್ವೀಕೃತಿ ವ್ಯವಸ್ಥೆಯನ್ನು ಖಜಾನೆ-02 ತಂತ್ರಾಶ ಬಳಸಿ ಏಪ್ರಿಲ್. 01 ರಿಂದ ಜಾರಿಗೆ ತರುತ್ತಿದ್ದು, ತಂತ್ರಾಂಶ ಬಳಸಿ ಹಣ, ತೆರಿಗೆ, ಇನ್ನಿತರೇ ಶುಲ್ಕ ಪಾವತಿಸುವ ಸಂಬಂಧ ಸಾರ್ವಜನಿಕರು ಯಾರ ಬಳಿಯೂ ಹಣ ನೀಡದೇ ತಾವೇ ಖದ್ದಾಗಿ ಬ್ಯಾಂಕ್‍ನಲ್ಲಿ ಹಣ ಪಾವತಿಸಲು ಕ್ರಮವಹಿಸಬೇಕು.  ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ 3ನೇ ವ್ಯಕ್ತಿಗಳು ಹಣ ಪಡೆದು ಮೋಸಗೊಳಿಸಿದರೇ ಅದರ ಜವಾಬ್ದಾರಿ/ ನಷ್ಟಕ್ಕೆ ಪಂಚಾಯತ ಹೊಣೆಯಾಗುವುದಿಲ್ಲ.  ಕಾರಣ ಸಾರ್ವಜನಿಕರು ಈ ತಂತ್ರಾಂಶದಲ್ಲಿ ಸೃಜನೆಯಾಗುವ ಚಲನ್ ಪಡೆದು ಖುದ್ದಾಗಿ ಸೂಚಿಸಿದ ಬ್ಯಾಂಕಿಗೆ ಹಣ ಜಮಾಮಾಡಿ, ಸ್ವೀಕೃತಿ ಪಡೆದು ಕಛೇರಿ ಪ್ರತಿಯನ್ನು ನಗರಸಭೆಯಲ್ಲಿ ನೀಡಿ, ಪಾವತಿದಾರರ ಪ್ರತಿಯನ್ನು ಕಾಯ್ದಿರಿಕೊಳ್ಳಬೇಕು. ಆನ್‍ಲೈನ್‍ನಲ್ಲಿ ಪಾವತಿಸಬಹುದಾದ ಬ್ಯಾಂಕ್ ಪಟ್ಟಿಯನ್ನು ಕಛೇರಿಯ ಸೂಚನಾ ಫಲಕದಲ್ಲಿ ನೋಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಮಹಾವೀರ ಜಯಂತಿ : ಸರಳ ಆಚರಣೆ


ಕೊಪ್ಪಳ ಮಾ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಭಗವಾನ್ ಮಹಾವೀರರ ಜಯಂತಿ ಆಚರಣೆಯನ್ನು ಮಾ. 29 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಭಗವಾನ್ ಮಹಾವೀರರ ಜಯಂತಿಯನ್ನು ಸರಳವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ದ್ವಿತೀಯ ಭಾಷೆ ಪರೀಕ್ಷೆ : 18729 ವಿದ್ಯಾರ್ಥಿಗಳು ಹಾಜರು


ಕೊಪ್ಪಳ ಮಾ. 27 (ಕ.ವಾ): ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಬುಧವಾರದಂದು ನಡೆದ ದ್ವಿತೀಯ ಭಾಷೆ ವಿಷಯದ ಪರೀಕ್ಷೆಗೆ ಜಿಲ್ಲೆಯ 18729 ವಿದ್ಯಾರ್ಥಿಗಳು ಹಾಜರಾಗಿದ್ದು, 441 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪರೀಕ್ಷೆಯ ದ್ವಿತೀಯ ಭಾಷೆ ವಿಷಯಕ್ಕೆ ಬಾಲಕರು- 9888, ಬಾಲಕಿಯರು- 9282 ಸೇರಿದಂತೆ ಒಟ್ಟು 19170 ವಿದ್ಯಾರ್ಥಿಗಳು ದಾಖಲಾಗಿದ್ದರು.  ಇದರಲ್ಲಿ ಬಾಲಕರು- 9607, ಬಾಲಕಿಯರು-9122 ಸೇರಿದಂತೆ ಒಟ್ಟು  18729 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,   281-ಬಾಲಕರು, 160- ಬಾಲಕಿಯರು, ಒಟ್ಟು 441 ಗೈರು ಹಾಜರಾಗಿದ್ದಾರೆ.   ಗಂಗಾವತಿ ತಾಲೂಕಿನಲ್ಲಿ - 156, ಕೊಪ್ಪಳ-103, , ಕುಷ್ಟಗಿ-71 ಮತ್ತು ಯಲಬುರ್ಗಾ ತಾಲೂಕಿನಲ್ಲಿ 111 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tuesday, 27 March 2018

ಮತದಾನ ಖಾತ್ರಿ ಯಂತ್ರದಿಂದ ಮತದಾರರ ವಿಶ್ವಾಸ ಹೆಚ್ಚಳ : ಜಿಲ್ಲಾಧಿಕಾರಿ ಎಂ. ಕನಗವಲ್ಲಿ


ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಮತದಾರರ ಮತ ಖಾತ್ರಿಪಡಿಸುವ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಮತದಾರರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ. ಕನಗವಲ್ಲಿ ಅವರು ತಿಳಿಸಿದರು.
     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ವಿವಿ ಪ್ಯಾಟ್‍ಗಳ ಬಳಕೆ ಕುರಿತಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿತೆ ನೀಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಈ ಹಿಂದೆ ಮತದಾನ ಸಂದರ್ಭದಲ್ಲಿ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮಾತ್ರ ಬಳಸಲಾಗುತ್ತಿತ್ತು.  ಇದೇ ಮೊದಲ ಬಾರಿಗೆ ರಾಜ್ಯದಲ್ಲಿನ ಚುನಾವಣೆಯಲ್ಲಿ ಮತದಾರರ ಮತ ಖಾತ್ರಿ ಪಡಿಸುವ ವಿವಿಪ್ಯಾಟ್‍ಗಳನ್ನು ಬಳಸಲಾಗುತ್ತಿದೆ. ಜಿಲ್ಲೆಗೆ ಪೂರೈಕೆಯಾದ ಎಲ್ಲ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‍ಗಳನ್ನು ಬಿ.ಇ.ಎಲ್. ಇಂಜನೀಯರ್‍ಗಳ ತಂಡ ಪರಿಶೀಲನೆ ನಡೆಸಿ ಪ್ರಮಾಣಿಕರಿಸಿದೆ ಎಂದು ತಿಳಿಸಿದರು.  ವಿವಿ ಪ್ಯಾಟ್ ( (Voter-verified paper audit trail)  ಬಳಕೆಯಿಂದ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದನ್ನು ಮತದಾರ ಮತದಾನ ಮಾಡಿದ ಕ್ಷಣದಲ್ಲಿ ವೀಕ್ಷಿಸಬಹುದಾಗಿದೆ. ಬ್ಯಾಲೆಟ್ ಯೂನಿಟ್‍ನಲ್ಲಿ ಮತಗುಂಡಿ ಒತ್ತಿದ ನಂತರ, ಮತದಾರ, ತಾನು ಮತದಾನ ಮಾಡಿದ ವಿವರ ವಿವಿಪ್ಯಾಟ್‍ನಲ್ಲಿ ಏಳು ಸೆಕೆಂಡ್‍ವರೆಗೆ ಪ್ರದರ್ಶನಗೊಳ್ಳಲಿದೆ. ಇದನ್ನು ಮತ ಚಲಾಯಿಸಿದ ಮತದಾರ ಮಾತ್ರ ವೀಕ್ಷಿಸಲು ಅವಕಾಶವಿರುತ್ತದೆ.  ಇದರಿಂದ ಯಾವುದೇ ಗೊಂದಲ, ಸಮಸ್ಯೆ, ಅನುಮಾನಗಳು ಮತದಾರನಿಗೆ ಉಳಿಯುವುದಿಲ್ಲ. ತಾನು ಮತಚಲಾಯಿಸಿದ ವ್ಯಕ್ತಿ ಅಥವಾ ಚಿಹ್ನೆಗೆ ಮತದಾನವಾದ ಕುರಿತಂತೆ ಖಾತ್ರಿಪಡಿಸಿಕೊಂಡು ಮತಗಟ್ಟೆಯ ಕೊಠಡಿಯಿಂದ ತೆರಳಬಹುದಾಗಿದೆ.
     ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್ ಹಾಗೂ ವಿವಿಪ್ಯಾಟ್‍ಗಳು ಪ್ರತಿ ಮತಗಟ್ಟೆಗೆ ಪೂರೈಸಲಾಗುವುದು. ವಿವಿಪ್ಯಾಟ್‍ಗಳ ವಿ.ಎಸ್.ಡಿ. ಯೂನಿಟ್ ನಿರ್ವಹಣೆಗಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ಪ್ರತಿಮತಗಟ್ಟೆಗೆ ನಿಯೋಜಿಸಲಾಗುವುದು. ಮತದಾನ ಆರಂಭವಾಗುವ ಮುನ್ನ ಅಣಕು ಪ್ರದರ್ಶನದ ಮೂಲಕ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‍ಗಳ ಕಾರ್ಯ ನಿರ್ವಹಣೆ ಕುರಿತಂತೆ ವಿವಿಧ ಪಕ್ಷಗಳ ಮತಗಟ್ಟೆ ಏಜೆಂಟರುಗಳ ಎದುರಿಗೆ ಪ್ರದರ್ಶಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು. 
     ವಿವಿಪ್ಯಾಟ್‍ಗಳು ಅತ್ಯಂತ ವಿಶ್ವಾರ್ಹವಾಗಿವೆ. ಭಾರತ ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ಬಿ.ಇ.ಎಲ್. ಕಂಪನಿಯ ತಾಂತ್ರಿಕ ತಂಡ ಯಂತ್ರಗಳನ್ನು ಅಭಿವೃದ್ಧಿಪಡಿಸಿದೆ.  ಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ವಿವಿಪ್ಯಾಟ್‍ಗಳನ್ನು ಬಳಸಲಾಗುತ್ತಿದೆ. ಇದರಿಂದ ಮತದಾನ ವ್ಯವಸ್ಥೆಯ ಬಗ್ಗೆ ಮತದಾರರಿಗೆ ದೃಢವಿಶ್ವಾಸ ಬರಲಿದೆ ಎಂದು ತಿಳಿಸಿದರು.  ಪ್ರತಿ ವಿವಿಪ್ಯಾಟ್‍ನಲ್ಲಿ 1500 ಮತಗಳನ್ನು ಮುದ್ರಿಸುವ ಸಾಮರ್ಥ್ಯ ಅಳವಡಿಸಲಾಗಿದೆ.  ಈ ಕಾರಣಕ್ಕಾಗಿ ಒಂದು ಗ್ರಾಮೀಣ ಮತಗಟ್ಟೆಯಲ್ಲಿ 1250 ಹಾಗೂ ನಗರ ಮತಗಟ್ಟೆಗಳಲ್ಲಿ 1350 ಮತದಾರರಿಗೆ ಸೀಮಿತಗೊಳಿಸಿ ಮತಗಟ್ಟೆಯನ್ನು ರಚಿಸಲಾಗಿದೆ. 
ಆರು ತಿಂಗಳ ಜೈಲು ಶಿಕ್ಷೆ:
************* ಭಾರತ ಚುನಾವಣೆ ಆಯೋಗದಿಂದ ಪೂರೈಕೆಯಾಗಿರುವ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‍ಗಳನ್ನು ಬಿ.ಇ.ಎಲ್.ತಾಂತ್ರಿಕ ಸಮಿತಿ ವಿವರವಾಗಿ ಪರಿಶೀಲಿಸಿ ಪ್ರಮಾಣಿಕರಿಸಿದೆ. ಮತದಾನ ಮಾಡುವ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಮತಯಂತ್ರದಲ್ಲಿ ನಾನು ಹಾಕಿದ ಮತದಾನ ಸರಿಯಾದ ವ್ಯಕ್ತಿಗೆ ತಲುಪಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರೆ ಅಂತಹ ವ್ಯಕ್ತಿಗೆ ಮತ್ತೊಮ್ಮೆ ಮತದಾನದ ಅವಕಾಶ ನೀಡಲಾಗುವುದು. ಆದರೆ ಆ ವ್ಯಕ್ತಿ ಮುಚ್ಚಳಿಕೆ ಬರೆದುಕೊಡಬೇಕಾಗುತ್ತದೆ.  ಮರು ಮತದಾನ ಮಾಡುವ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿ ವೀಕ್ಷಣೆ ಮಾಡಲಿದ್ದಾರೆ.  ವ್ಯಕ್ತಿ ಹಾಕಿದ ಮತ ಸರಿಯಾಗಿ ನಮೂದಾದರೆ ಆ ಸಂದರ್ಭದಲ್ಲಿ ಅನುಮಾನ ವ್ಯಕ್ತಪಡಿಸಿ ಮರು ಮತದಾನಕ್ಕೆ ಅವಕಾಶ ಪಡೆದ ಮತದಾರನಿಗೆ ಆರು ತಿಂಗಳ ಜೈಲುವಾಸ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ವಿವಿಪ್ಯಾಟ್‍ಗಳ ಬಳಕೆ, ಕಾರ್ಯನಿರ್ವಹಣೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್‍ಗಳ ಸಂಪರ್ಕ ಕುರಿತಂತೆ ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ವಿಜಯಕುಮಾರ್ ಹಾಗೂ ಪ್ರಭುರಾಜ ನಾಯಕ್ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಪ್ರಾತ್ಯಕ್ಷಿತೆ ನೀಡಿದರು. ಈ ಸಂದರ್ಭದಲ್ಲಿ ಅಣುಕು ಮತದಾನ ನಡೆಸಿ ವಿವಿಪ್ಯಾಟ್‍ನಲ್ಲಿ ಮತದಾನದ ಖಾತ್ರಿ ಕುರಿತಂತೆ ಮನವರಿಕೆ ಮಾಡಿಕೊಡಲಾಯಿತು. 
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾಗ್ಯನಗರ : ಏ. 01 ರಿಂದ ಸ್ವೀಕೃತಿ ತಂತ್ರಾಂಶ ಪದ್ದತಿ ಜಾರಿ


ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ನಗದು ರಹಿತ ಸ್ವೀಕೃತಿ ತಂತ್ರಾಂಶ ಪದ್ದತಿಯನ್ನು ಏಪ್ರಿಲ್ 01 ರಿಂದ ಜಾರಿಗೆ ಮಾಡಲಾಗುವುದು ಎಂದು ಭಾಗ್ಯನಗರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ತಿಳಿಸಿದ್ದಾರೆ. 
    ಭಾಗ್ಯನಗರ ಪಟ್ಟಣ ಪಂಚಾಯತದಲ್ಲಿ ನಗದು ರಹಿತ ಸ್ವೀಕೃತಿ ವ್ಯವಸ್ಥೆಯನ್ನು ಖಜಾನೆ-02 ತಂತ್ರಾಶ ಬಳಸಿ ಏಪ್ರಿಲ್. 01 ರಿಂದ ಜಾರಿಗೆ ತರುತ್ತಿದ್ದು, ತಂತ್ರಾಂಶ ಬಳಸಿ ಹಣ, ತೆರಿಗೆ, ಇನ್ನಿತರೇ ಶುಲ್ಕ ಪಾವತಿಸುವ ಸಂಬಂಧ ಸಾರ್ವಜನಿಕರು ಯಾರ ಬಳಿಯೂ ಹಣ ನೀಡದೇ ತಾವೇ ಖದ್ದಾಗಿ ಬ್ಯಾಂಕ್‍ನಲ್ಲಿ ಹಣ ಪಾವತಿಸಲು ಕ್ರಮವಹಿಸಬೇಕು.  ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ 3ನೇ ವ್ಯಕ್ತಿಗಳು ಹಣ ಪಡೆದು ಮೋಸಗೊಳಿಸಿದರೇ ಅದರ ಜವಾಬ್ದಾರಿ/ ನಷ್ಟಕ್ಕೆ ಪಂಚಾಯತ ಹೊಣೆಯಾಗುವುದಿಲ್ಲ.  ಕಾರಣ ಸಾರ್ವಜನಿಕರು ಈ ತಂತ್ರಾಂಶದಲ್ಲಿ ಸೃಜನೆಯಾಗುವ ಚಲನ್ ಪಡೆದು ಖುದ್ದಾಗಿ ಸೂಚಿಸಿದ ಬ್ಯಾಂಕಿಗೆ ಹಣ ಜಮಾಮಾಡಿ, ಸ್ವೀಕೃತಿ ಪಡೆದು ಕಛೇರಿ ಪ್ರತಿಯನ್ನು ಪಟ್ಟಣ ಪಂಚಾಯತ್‍ನಲ್ಲಿ ನೀಡಿ, ಪಾವತಿದಾರರ ಪ್ರತಿಯನ್ನು ಕಾಯ್ದಿರಿಕೊಳ್ಳಬೇಕು.  ಇದಲ್ಲದೇ ಪಂಚಾಯತಿಗೆ ಭರಿಸಬೇಕಾದ ತೆರಿಗೆ ಇನ್ನಿತರೇ ಶುಲ್ಕಗಳನ್ನು ಆನ್‍ಲೈನ್ ಬ್ಯಾಂಕಿಂಗ್ ಸಿಸ್ಟಂ ನಲ್ಲೂ ಸೂಚಿಸಿದ ಬ್ಯಾಂಕ್‍ಗಳಲ್ಲಿ ಭರಿಸಬಹುದಾಗಿದೆ.  ಚಲನ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಭಾಗ್ಯನಗರ ಶಾಖೆಯಲ್ಲಿ ಆನ್‍ಲೈನ್‍ನಲ್ಲಿ ಪಾವತಿಸಬಹುದಾದ ಬ್ಯಾಂಕ್ ಪಟ್ಟಿಯನ್ನು ಕಛೇರಿಯ ಸೂಚನಾ ಫಲಕದಲ್ಲಿ ನೋಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೌಲಾನಾ ಅಜಾದ ಮಾದರಿ ಶಾಲೆ : 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ವಸತಿ ರಹಿತ ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ (ಆಂಗ್ಲ ಮಾಧ್ಯಮ) ಶಾಲೆಗಳನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಪ್ರಸಕ್ತ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಣೆಯಾಗುತ್ತಿರುವ ವಸತಿ ರಹಿತ ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ (ಆಂಗ್ಲ ಮಾಧ್ಯಮ) ಶಾಲೆಗಳನ್ನು ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಹಾಗೂ ಗಂಗಾವತಿ ನಗರಗಳಲ್ಲಿ ಪ್ರಾರಂಭಿಸಲಾಗಿದ್ದು, ಪ್ರಸಕ್ತ ಸಾಲಿನ 6ನೇ ತರಗತಿಗೆ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.  ವಿದ್ಯಾರ್ಥಿಗಳು 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.  ಕುಟುಂಬದ ವಾರ್ಷಿಕ ವರಮಾನವು 1 ಲಕ್ಷ ರೂ. ಗಳಿಗೆ ಮೀರಿರಬಾರದು.  ಪ್ರತಿ ಶಾಲೆಯಲ್ಲಿ 60 ಆಸನಗಳನ್ನು ನಿಗದಿ ಪಡಿಸಲಾಗಿದ್ದು, ಶೇ.75 ಸ್ಥಾನಗಳನ್ನು ಅಲ್ಪಸಂಖ್ಯಾತರು ಹಾಗೂ ಶೇ.25 ಇತರೆ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು.  ಅಂಗವಿಕಲ ವಿದ್ಯಾರ್ಥಿಗಳು, ವಿಶೇಷ ಗುಂಪಿಗೆ ಸೇರಿದ ಅನಾಥ ಮಕ್ಕಳು, ವಿಧವೆಯರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು, ಇತ್ಯಾದಿಗಳಿಗೆ ಶೇ. 03 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.
    ಅರ್ಜಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಥವಾ ವೆಬ್‍ಸೈಟ್  http://dom.karnataka.gov.in/koppal   ನಲ್ಲಿ ಸಹ ಪಡೆಯಬಹುದಾಗಿದೆ.  ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ದೃಢೀಕರಿಸಿದ ಪ್ರಮಾಣ ಪತ್ರ, ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಅಂಕ ಪಟ್ಟಿಯ ದೃಢೀಕೃತ ಪ್ರತಿ, ವಾಸಸ್ಥಳ ಪ್ರಮಾಣ ಪತ್ರ, ಆಧಾರ ಕಾರ್ಡ ಹಾಗೂ ವಿದ್ಯಾರ್ಥಿ ಪಾಸ್ ಪೆÇರ್ಟ್ ಅಳತೆಯ ಇತ್ತೀಚಿನ 2 ಭಾವಚಿತ್ರಗಳೊಂದಿಗೆ ಏಪ್ರಿಲ್. 25 ರೊಳಗಾಗಿ ಸಂಬಂಧ ಪಟ್ಟ ಅಲ್ಪಸಂಖ್ಯಾತರ ಮೌಲಾನಾ ಆಜಾದ ಮಾದರಿ (ಆಂಗ್ಲ ಮಾಧ್ಯಮ) ಶಾಲೆ, ಅಲ್ಪಸಂಖ್ಯಾತರ ತಾಲೂಕ ಮಾಹಿತಿ ಕೇಂದ್ರಗಳಲ್ಲಿ ಅಥವಾ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೊಪ್ಪಳ ಇವರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-225070 ಕ್ಕೆ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಗಜೀವನರಾಮ್, ಅಂಬೇಡ್ಕರ್ ಜನ್ಮದಿನಾಚರಣೆ : ಪೂರ್ವಾಭಾವಿ ಸಭೆ ರದ್ದು


ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ಕೊಪ್ಪಳದಲ್ಲಿ ಡಾ. ಬಾಬು ಜಗಜೀವನರಾಂ ರವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು ಆಚರಿಸುವ ಸಂಬಂಧ ಮಾ. 28 ರಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯನ್ನು ರದ್ದು ಪಡಿಸಲಾಗಿದೆ. 
    ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ರವರ 111ನೇ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 127ನೇ ಜನ್ಮ ದಿನಾಚರಣೆಯನ್ನು ಏಪ್ರಿಲ್ ತಿಂಗಳಿನಲ್ಲಿ ಆಚರಿಸುವ ಕುರಿತು ಪೂರ್ವಭಾವಿ ಸಭೆ ಮಾ. 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು, ಚುನಾವಣಾ ಆಯೋಗದಿಂದ ಅಧಿಕಾರಿಗಳಿಗೆ ವಿಡಿಯೋ ಸಂವಾದವಿರುವುದರಿಂದ ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಮುಕ್ತ ದೇವದಾಸಿ ಮಹಿಳೆಯರಿಗೆ ಚುನಾವಣೆ ಜಾಗೃತಿ ಕಾರ್ಯಕ್ರಮ



ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಸಮೀಕ್ಷೆಯಲ್ಲಿ ಗುರುತಿಸಿದ ವಿಮುಕ್ತ ದೇವದಾಸಿ ಮಹಿಳೆಯರಿಗೆ ಚುನಾವಣಾ ಗುರುತಿನ ಚೀಟಿ ಹೊಂದಿರುವ ಬಗ್ಗೆ ಅಥವಾ ಇಲ್ಲದೇ ಇರುವ ಬಗ್ಗೆ ಪರಿಶೀಲಿಸಲು ಹೋಬಳಿವಾರು ವಿಮುಕ್ತ ದೇವದಾಸಿಯರನ್ನು ಸೇರಿಸಿ ಪ್ರತಿಜ್ಞಾ ವಿಧಿಯನ್ನು ಬೋದಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನಾ ಅನುಷ್ಠಾನಾಧಿಕಾರಿ ರೇಣುಕಾ .ಎಂ. ಅವರು ಹೇಳಿದರು.
      ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ ಕೊಪ್ಪಳ ವತಿಯಿಂದ ಜಿಲ್ಲೆಯ ಕುಕನೂರಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಯಲಬುರ್ಗಾ ತಾಲೂಕಿನ ಸಮೀಕ್ಷೆಯಲ್ಲಿ ಗುರುತಿಸಿರುವ ವಿಮುಕ್ತ ದೇವದಾಸಿ ಮಹಿಳೆಯರಿಗೆ ಚುನಾವಣಾ ಗುರುತಿನ ಚೀಟಿ ಮಾಡಲು ನಿಗಮದಿಂದ ಸಹಕಾರ ಪಡೆಯಲು ತಿಳಿಸಿದರು ಮತ್ತು ಎಲ್ಲರೂ ಚುನಾವಣೆಯ ದಿನದಂದು ತಪ್ಪದೇ ಮತ ಚಲಾಯಿಸಲು ಮತದಾನವು ನಮ್ಮ ಹಕ್ಕು ನಮ್ಮ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮುಕ್ತ, ನ್ಯಾಯ ಸಮ್ಮತಿ ಮತ್ತು ಶಾಂತಿಯುತ ಚುನಾವಣಾ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ನಾನು ಮತ್ತು ನನ್ನ ಕುಟುಂಬದ ಸದಸ್ಯರೆಲ್ಲ್ಲರೂ ಮತ ಚಲಾಯಿಸುತ್ತೇವೆಂದು ಪ್ರತಿಜ್ಞೆಯನ್ನು ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ನೂರಕ್ಕಿಂತ ಹೆಚ್ಚು ವಿಮುಕ್ತ ದೇವದಾಸಿ ಮಹಿಳೆಯರು ಕುಕನೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸಿ.ಎಮ್. ಹಿರೇಮಠ, ಡಾ. ವಿಜಯ ಕುಮಾರ, ಡಾ. ಮಮತಾ ಇಲಕಲ್ಲ, ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಎಸ್.ಡಿ. ಬೆನ್ನೂರ, ಚನ್ನ ಬಸಯ್ಯ ಸರಗಣಾಚಾರ್ಯ ಕಳಕಪ್ಪ ಬಂಡಿ, ದೇವದಾಸಿ ಮಹಿಳೆ ನೀಲಮ್ಮ ಮತ್ತಿತರರು ಭಾಗವಹಿಸಿದ್ದರು.

ವಿಧಾನಸಭೆ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿ : ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಕ್ರಮ : ಎಂ. ಕನಗವಲ್ಲಿ


ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ.  ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ವಿಧಾನಸಭೆ ಚುನಾವಣೆ ಸಂಬಂಧ ವಿವಿಧ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ.  ಚುನಾವಣಾ ವೇಳಾಪಟ್ಟಿಯನ್ವಯ ಚುನಾವಣಾ ಅಧಿಸೂಚನೆಯನ್ನು ಏಪ್ರಿಲ್ 17 ರಂದು ಹೊರಡಿಸಲಾಗುವುದು.  ಏ. 24  ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಏ. 25 ರಂದು ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಏ. 27 ಕೊನೆಯ ದಿನವಾಗಿದೆ.  ಮತದಾನ ಮೇ. 12 ರಂದು ಜರುಗಲಿದ್ದು, ಮತಗಳ ಎಣಿಕೆ ಮೇ. 15 ರಂದು ನಡೆಯಲಿದೆ.  ಚುನಾವಣೆ ಪ್ರಕ್ರಿಯೆಯನ್ನು ಮೇ. 18 ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದರು.
     ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳ ಅಧಿಕಾರಿಗಳು ಅಲ್ಲದೆ ಗ್ರಾಮ ಪಂಚಾಯತಿಗಳ ಪಿಡಿಒ/ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಚೇರಿಗಳ ಸ್ಥಳಗಳು, ಖಾಸಗಿ ಸ್ಥಳಗಳು, ಬಸ್‍ಸ್ಟ್ಯಾಂಡ್, ಬಸ್ ತಂಗುದಾಣಗಳು ಹೀಗೆ ಎಲ್ಲೆಡೆಗಳಲ್ಲಿ ಇರುವ ಜಾಹೀರಾತು ಫಲಕಗಳಲ್ಲಿನ ಫ್ಲೆಕ್ಸ್ ಮಾಹಿತಿಯನ್ನು, ಕೂಡಲೆ ತೆಗೆದುಹಾಕಬೇಕು.  ಯಾವುದೇ ಇಲಾಖೆಗೆ ಸಂಬಂಧಿಸಿದ್ದರೂ, ಎಲ್ಲ ಜಾಹೀರಾತುಗಳ ಮಾಹಿತಿಯನ್ನು, ಸರ್ಕಾರದ ಯೋಜನೆಗಳ ಕುರಿತು ಜಾಹೀರಾತು ಫಲಕಗಳಲ್ಲಿನ ಮಾಹಿತಿಯನ್ನು ಕೂಡ ತೆಗೆಸಬೇಕು.  ನೀತಿ ಸಂಹಿತೆ ಜಾರಿಯಾದ 24 ಗಂಟೆಗಳ ಒಳಗಾಗಿ ಜಿಲ್ಲೆಯಲ್ಲಿ ಎಲ್ಲ ಜಾಹೀರಾತುಗಳು ತೆರವುಗೊಳ್ಳಬೇಕು.  ತಪ್ಪಿದಲ್ಲಿ ಸಂಬಂಧಪಟ್ಟ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿಗಳ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು.  ಜನಪ್ರತಿನಿಧಿಗಳಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ಸಂಬಂಧಪಟ್ಟ ಇಲಾಖೆಗಳು ಹಿಂಪಡೆಯಬೇಕು.  ಇಂತಹ ಎಲ್ಲ ವಾಹನಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಸುಪರ್ದಿಗೆ ವಹಿಸಿ, ವರದಿ ಮಾಡಿಕೊಳ್ಳಬೇಕು.  ಜಿಲ್ಲೆಯ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.  ಯಾವುದೇ ಇಲಾಖೆಗಳು ವಯಕ್ತಿಕವಾಗಿ ಫಲಾನುಭವಿಗಳಿಗೆ ನೀಡುವ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ವಿತರಿಸುವಂತಿಲ್ಲ.  ಸರ್ಕಾರಿ ಯೋಜನೆಗಳ ಕಾಮಗಾರಿಗಳು ಈಗಾಗಲೆ ಪ್ರಾರಂಭಗೊಂಡಿದ್ದಲ್ಲಿ, ಪ್ರಗತಿಯಲ್ಲಿದ್ದಲ್ಲಿ, ಅಂತಹವುಗಳನ್ನು ಮುಂದುವರೆಸಬಹುದಾಗಿದ್ದು, ಇದುವರೆಗೂ ಭೌತಿಕವಾಗಿ ಆರಂಭವಾಗದೆ ಇರುವ ಕಾಮಗಾರಿಗಳನ್ನು ನೀತಿ ಸಂಹಿತೆ ಅವಧಿಯಲ್ಲಿ ಪ್ರಾರಂಭಿಸುವಂತಿಲ್ಲ.  ಸಂಬಂಧಪಟ್ಟ ಅಧಿಕಾರಿಗಳು,  ಜಾರಿಯಲ್ಲಿರುವ ಕಾಮಗಾರಿಗಳ ಸಮಗ್ರ ವಿವರವನ್ನು 48 ಗಂಟೆಗಳ ಒಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.  ಅಧಿಕಾರಿಗಳು ತಮಗೆ ವಹಿಸಲಾಗುವ ಕಾರ್ಯವನ್ನು ಚಾಚೂ ತಪ್ಪದೆ ನಿರ್ವಹಿಸಬೇಕು.  ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಯನ್ನು ಕಟ್ಟುನಿಟ್ಟಾಗಿ, ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಎಲ್ಲ ರೀತಿಯಿಂದ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ನೀತಿ ಸಂಹಿತೆ ಪಾಲನೆಗೆ ಚೆಕ್‍ಪೋಸ್ಟ್ ಸ್ಥಾಪನೆ ಫ್ಲೆಯಿಂಗ್ ಸ್ವಾಡ್ ನಿಯೋಜನೆ- ಎಂ. ಕನಗವಲ್ಲಿ

ಕೊಪ್ಪಳ ಮಾ. 27 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಗೊಂಡಿದ್ದು, ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು 11 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, 30 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿ ಪ್ಯಾಟ್‍ಗಳ ಬಳಕೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿತೆ ನೀಡಿದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಈ ಹಿಂದೆ ಮತದಾನ ಸಂದರ್ಭದಲ್ಲಿ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮಾತ್ರ ಬಳಸಲಾಗುತ್ತಿತ್ತು.  ಇದೇ ಮೊದಲ ಬಾರಿಗೆ ರಾಜ್ಯದಲ್ಲಿನ ಚುನಾವಣೆಯಲ್ಲಿ ಮತದಾರರ ಮತ ಖಾತ್ರಿ ಪಡಿಸುವ ವಿವಿಪ್ಯಾಟ್‍ಗಳನ್ನು ಬಳಸಲಾಗುತ್ತಿದೆ.  ಮತದಾನ ಪ್ರಕ್ರಿಯೆಯಲ್ಲಿ ಇವಿಎಂ ಯಂತ್ರಗಳ ಕುರಿತು ಮತದಾರರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಧ್ಯಮಗಳು ಕೂಡ ಕೈಗೊಳ್ಳಬೇಕಿರುವುದರಿಂದ, ಚುನಾವಣಾ ಆಯೋಗದ ಸೂಚನೆಯಂತೆ  ಮಾಧ್ಯಮ ಪ್ರತಿನಿಧಿಗಳಿಗೆ ಇವಿಎಂ ಹಾಗೂ ವಿವಿಪ್ಯಾಟ್‍ಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ ಎಂದರು.

1069199 ಮತದಾರರು :
********** ಜಿಲ್ಲೆಯಲ್ಲಿ 05 ವಿಧಾನಸಭಾ ಕ್ಷೇತ್ರಗಳನ್ನು ಸೇರಿದಂತೆ ಪುರುಷ-535874, ಮಹಿಳೆ-533325 ಸೇರಿದಂತೆ ಒಟ್ಟು 1069199 ಮತದಾರರಿದ್ದಾರೆ.  1286 ಮತಗಟ್ಟೆಗಳಿದ್ದು, 17 ಹೆಚ್ಚುವರಿ/ಹೊಸ ಮತಗಟ್ಟೆಗಳಿವೆ.  60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ  269 ಮತಗಟ್ಟೆಗಳು, 02 ಹೆಚ್ಚುವರಿ ಮತಗಟ್ಟೆಗಳಿವೆ.  ಮತದಾರರ ಸಂಖ್ಯೆ ಪುರುಷ-113134, ಮಹಿಳೆ-110531, ಒಟ್ಟು- 223665 ಮತದಾರರಿದ್ದಾರೆ.  61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 257 ಮತಗಟ್ಟೆಗಳು, 03 ಹೆಚ್ಚುವರಿ ಮತಗಟ್ಟೆಗಳಿವೆ.  ಮತದಾರರ ಸಂಖ್ಯೆ ಪುರುಷ-104085, ಮಹಿಳೆ-105779, ಒಟ್ಟು- 209864 ಮತದಾರರಿದ್ದಾರೆ.  62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 230 ಮತಗಟ್ಟೆಗಳು, 02 ಹೆಚ್ಚುವರಿ ಮತಗಟ್ಟೆಗಳಿವೆ.  ಮತದಾರರ ಸಂಖ್ಯೆ ಪುರುಷ-96178, ಮಹಿಳೆ-96538, ಒಟ್ಟು- 192716 ಮತದಾರರಿದ್ದಾರೆ.  63-ಯಲಬುರ್ಗಾ ಕ್ಷೇತ್ರದಲ್ಲಿ 251 ಮತಗಟ್ಟೆಗಳು, 02 ಹೆಚ್ಚುವರಿ ಮತಗಟ್ಟೆಗಳಿವೆ.  ಮತದಾರರ ಸಂಖ್ಯೆ ಪುರುಷ-103313, ಮಹಿಳೆ-101213, ಒಟ್ಟು- 204526 ಮತದಾರರಿದ್ದಾರೆ.  64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ- 279 ಮತಗಟ್ಟೆಗಳು, 08 ಹೆಚ್ಚುವರಿ/ಹೊಸ ಮತಗಟ್ಟೆಗಳಿವೆ.  ಮತದಾರರ ಸಂಖ್ಯೆ ಪುರುಷ-119164, ಮಹಿಳೆ-119264, ಒಟ್ಟು- 238428 ಮತದಾರರಿದ್ದಾರೆ.  
11 ಚೆಕ್ ಪೋಸ್ಟ್‍ಗಳು : ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ 11 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 06 ರಂತೆ ಒಟ್ಟು 30 ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಲಾಗಿದೆ.  ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 03 ರಂತೆ ಜಿಲ್ಲೆಯಲ್ಲಿ ಒಟ್ಟು 15 ವಿಡಿಯೋ ಸರ್ವೆಲೆನ್ಸ್ ತಂಡಗಳು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 01 ರಂತೆ ಒಟ್ಟು 05 ವಿಡಿಯೋ ವಿವಿಂಗ್ ತಂಡಗಳನ್ನು ರಚಿಸಿ, ಸಿದ್ಧವಾಗಿರಿಸಲಾಗಿದೆ ಎಂದರು.
ದೂರು ನಿರ್ವಹಣಾ ಘಟಕ :
********* ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕರಿಸಿ, ಅವುಗಳಿಗೆ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಸಂಬಂಧಿತ ದೂರು ಸ್ವೀಕೃತಿಗೆ 24*7 ಸಹಾಯವಾಣಿ ಸ್ಥಾಪಿಸಲಾಗಿದ್ದು, ದೂರವಾಣಿ ಸಂ: 08539-225001 ಹಾಗೂ ಟೋಲ್ ಫ್ರೀ ಸಂಖ್ಯೆ. 1077 ಸ್ಥಾಪಿಸಲಾಗಿದೆ. 
ಮತಗಟ್ಟೆಗಳಲ್ಲಿ ವಿಶೇಷ ವ್ಯವಸ್ಥೆ :
********* ಕೊಪ್ಪಳ ಜಿಲ್ಲೆಯಲ್ಲಿ ನೋಂದಾಯಿತರಾದ ಎಲ್ಲ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ನೀಡಲಾಗಿದ್ದು, ಮತದಾರರ ಪಟ್ಟಿಯಲ್ಲಿ ಶೇ. 99 ರಷ್ಟು ಮತದಾರರ ಭಾವಚಿತ್ರಗಳು ಲಭ್ಯವಿವೆ.  ಎಲ್ಲ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಎಲ್ಲ ಮತಗಟ್ಟೆಗಳಲ್ಲಿ ವಿಕಲಚೇತನ ಮತದಾರರಿಗಾಗಿ ವೀಲ್ ಚೇರ್‍ಗಳ ವ್ಯವಸ್ಥೆ ಮಾಡಲಾಗುತ್ತಿದೆ ಹಾಗೂ ಅಂಧ ಮತದಾರರಿಗಾಗಿ ಅಗತ್ಯವಿರುವೆಡೆ ಬ್ಯಾಲಟ್ ಪೇಪರ್‍ಗಳನ್ನು ಬ್ರೈಲ್ ಲಿಪಿಯಲ್ಲಿ ತಯಾರಿಸಲು ಕ್ರಮ ವಹಿಸಲಾಗಿದೆ.  ಅನಕ್ಷರಸ್ಥ ಮತದಾರರು ಕೂಡ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಗುರುತಿಸಿ, ಮತ ಚಲಾಯಿಸಲು ಅನುಕೂಲವಾಗುವಂತೆ ಈ ಬಾರಿಯ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಮುದ್ರಿಸಿ, ಬ್ಯಾಲೆಟ್ ಯುನಿಟ್‍ಗಳಲ್ಲಿ ಅಳವಡಿಸಲಾಗುತ್ತದೆ.  ಜಿಲ್ಲೆಗೆ 1963 ಬ್ಯಾಲಟ್ ಯುನಿಟ್, 1635- ಕಂಟ್ರೋಲ್ ಯುನಿಟ್ ಹಾಗೂ 1554- ವಿವಿಪ್ಯಾಟ್ ಗಳು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾಹಿತಿ ನೀಡಿದರು.
     ವಿವಿಪ್ಯಾಟ್‍ಗಳ ಬಳಕೆ, ಕಾರ್ಯನಿರ್ವಹಣೆ, ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್‍ಗಳ ಸಂಪರ್ಕ ಕುರಿತಂತೆ ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ವಿಜಯಕುಮಾರ್  ಅವರು ವಿವಿಧ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿತೆ ನೀಡಿದರು. ಈ ಸಂದರ್ಭದಲ್ಲಿ ಅಣುಕು ಮತದಾನ ನಡೆಸಿ ವಿವಿಪ್ಯಾಟ್‍ನಲ್ಲಿ ಮತದಾನದ ಖಾತ್ರಿ ಕುರಿತಂತೆ ಮನವರಿಕೆ ಮಾಡಿಕೊಡಲಾಯಿತು. 
     ಜಿಲ್ಲಾ ಪಂಚಾಯತಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾವ್ ಬಿ.ವಿ. ಉಪಸ್ಥಿತರಿದ್ದರು.

Monday, 26 March 2018

ಕುಡಿಯುವ ನೀರಿನ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ- ರಾಜಶೇಖರ ಹಿಟ್ನಾಳ

ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಸದ್ಯ ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ನೀರು ಒದಗಿಸಲು ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಅವರು ಸೂಚನೆ ನೀಡಿದರು.

     ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕಳೆದ ವರ್ಷ ತೀವ್ರ ಬರ ಪರಿಸ್ಥಿತಿಯ ನಡುವೆಯೂ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆ ಬಾಧಿಸದಂತೆ, ಹೊಸ ಬೋರ್‍ವೆಲ್‍ಗಳು, ಖಾಸಗಿ ಬೋರ್‍ವೆಲ್ ಹಾಗೂ ಟ್ಯಾಂಕರ್ ಮೂಲಕ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಿ, ಯಶಸ್ವಿಯಾಗಿ ಬೇಸಿಗೆಯ ಕಾಲವನ್ನು ನಿರ್ವಹಿಸಲಾಗಿದೆ.  ಈ ವರ್ಷವೂ ಕೂಡ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಟ್ಟುಕೊಳ್ಳಬೇಕು.  ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಿ, ಅಂತಹ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾದ ವರದಿಯನ್ನು ತಯಾರಿಸಬೇಕು.  ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದಲ್ಲಿ, ಸರ್ಕಾರದಿಂದ ವಿಶೇಷ ಅನುದಾನ ಪಡೆಯಲು ಸಹಕಾರಿಯಾಗುತ್ತದೆ ಎಂದು ಜಿ.ಪಂ. ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ದನಿಗೂಡಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು, ಸಮಸ್ಯಾತ್ಮಕ ಗ್ರಾಮಗಳಿಗೆ ಸಂಬಂಧಪಟ್ಟ ವರದಿಯನ್ನು ಮುಂದಿನ ಮೂರು ತಿಂಗಳುಗಳನ್ನು ಗಮನದಲ್ಲಿಟ್ಟುಕೊಂಡು, ಸಮಸ್ಯೆ ತಲೆದೋರುವ ಗ್ರಾಮಗಳ ಪಟ್ಟಿಯನ್ನು ತಯಾರಿಸಿ, ಕ್ರಿಯಾಯೋಜನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಸ ಬೋರ್‍ವೆಲ್ ಕೊರೆಯಿಸಿ :
***********ಜಿಲ್ಲೆಯಲ್ಲಿ ಸದ್ಯ ಕುಡಿಯುವ ನೀರಿನ ತೀವ್ರ ತೊಂದರೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಬೋರ್‍ವೆಲ್‍ಗಳು ಕೆಟ್ಟಿದ್ದಲ್ಲಿ, ಅಥವಾ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದಿದ್ದಲ್ಲಿ, ಕೂಡಲೆ ಅಂತಹವುಗಳನ್ನು ದುರಸ್ತಿಗೊಳಿಸಿ, ನೀರು ಪೂರೈಕೆ ಪ್ರಾರಂಭಿಸಬೇಕು.  ಇಂತಹ ಸಮಸ್ಯೆಗಳ ಬಗ್ಗೆ ಬರುವ ದೂರುಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ, ದುರಸ್ತಿಪಡಿಸಬೇಕು.  ತುರ್ತು ಸಂದರ್ಭ ಒದಗಿಬಂದಲ್ಲಿ, ಹಾಗೂ ಅತ್ಯಂತ ಸಮಸ್ಯಾತ್ಮಕವಿದ್ದಲ್ಲಿ, ಹೊಸ ಬೋರ್‍ವೆಲ್ ಕೊರೆಯಿಸಲು ಕ್ರಮ ವಹಿಸಬೇಕು.  ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ಇಂತಹ ಕಾರ್ಯಗಳಿಗೆ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು.  ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇದ್ದ ಪಕ್ಷದಲ್ಲಿ, ಸಂಬಂಧಪಟ್ಟ ಕಂಪನಿಗೆ ನೋಟಿಸ್ ನೀಡಿ, ಕೂಡಲೆ ದುರಸ್ತಿ ಮಾಡಿಸಲು ಕ್ರಮ ವಹಿಸಬೇಕು.  ಕುಷ್ಟಗಿ ತಾಲೂಕಿನ ಹನುಮಸಾಗರ, ಹನಮನಾಳ ಮುಂತಾದ ಗ್ರಾಮಗಳಲ್ಲಿ ಆರ್.ಓ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಾಗಿ ದೂರುಗಳು ಕೇಳಿ ಬಂದಿದ್ದು, ಸಂಬಂಧಪಟ್ಟ ಕಂಪನಿಗೆ ನೋಟಿಸ್ ನೀಡಿ, ಕೂಡಲೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.
ಫಾಗಿಂಗ್ ಯಂತ್ರ ಖರೀದಿಗೆ ಸೂಚನೆ :
*********** ಬೇಸಿಗೆಯಲ್ಲಿ ಸೊಳ್ಳೆಗಳ ಹಾವಳಿ ತೀವ್ರವಾಗಿ ಕಾಡುವ ಗ್ರಾಮಗಳಲ್ಲಿ ಫಾಗಿಂಗ್ ಮಾಡಲು ಅಗತ್ಯ ಯಂತ್ರಗಳು ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿಲ್ಲ.  ಹೀಗಾಗಿ ತೊಂದರೆಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೆ, ರೋಗಗಳು ಹರಡುವಿಕೆಗೆ ಕಾರಣವಾಗುತ್ತದೆ.  ಪ್ರತಿ ತಾಲೂಕಾ ಪಂಚಾಯತಿಯಿಂದ ತಲಾ 05 ಫಾಗಿಂಗ್ ಯಂತ್ರಗಳನ್ನು ಖರೀದಿಸಿ, ಅಗತ್ಯವಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಫಾಗಿಂಗ್ ಕಾರ್ಯ ಕೈಗೊಂಡು, ಪುನಃ ತಾ.ಪಂ. ಕಚೇರಿಗೆ ಹಿಂದಿರುಗಿಸುವಂತಾಗಬೇಕು.  ಅಧಿಕಾರಿಗಳು ಕೂಡಲೆ ಫಾಗಿಂಗ್ ಯಂತ್ರ ಖರೀದಿಸಲು ಕ್ರಮ ಕೈಗೊಳ್ಳುವಂತೆ ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದರು.
ವಿದ್ಯಾರ್ಥಿಗಳ ಸಂಖ್ಯಾನುಸಾರ ಶೌಚಾಲಯ :
************ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಶಾಲೆಗಳಲ್ಲಿನ ಶೌಚಾಲಯದ ಸ್ಥಿತಿ-ಗತಿ ಕುರಿತು ಅತೃಪ್ತಿ ವ್ಯಕ್ತಪಡಿಸಿ, ಶಾಲೆಗಳಲ್ಲಿ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.  60 ರಿಂದ 80 ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿಯೂ ಶೌಚಾಲಯ ಒಂದೇ ಇದೆ.  ಅದೇ ರೀತಿ 300 ರಿಂದ 500 ವಿದ್ಯಾರ್ಥಿಗಳ ಸಂಖ್ಯೆ ಇರುವ ಶಾಲೆಗಳಲ್ಲಿಯೂ ಶೌಚಾಲಯ ಒಂದೇ ಇದೆ.  ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇರಬೇಕು.  ಹೀಗಾಗಿ ಹೆಚ್ಚಿನ ಶೌಚಾಲಯದ ಅಗತ್ಯವಿದ್ದಲ್ಲಿ, ಸಂಬಂಧಪಟ್ಟ ಶಾಲೆಗಳಿಂದ ಪ್ರಸ್ತಾವನೆ ಸಲ್ಲಿಸಿದಲ್ಲಿ, ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಹನುಮಂತಪ್ಪ ಅವರಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ಮುಖ್ಯ ಯೋಜನಾಧಿಕಾರಿ ವೈ. ಛಲವಾದಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಸದಸ್ಯರುಗಳು, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಎಸ್.ಎಸ್.ಎಲ್.ಸಿ. ಗಣಿತ ಪರೀಕ್ಷೆ : 18864 ವಿದ್ಯಾರ್ಥಿಗಳು ಹಾಜರು


ಕೊಪ್ಪಳ ಮಾ. 26 (ಕ.ವಾ): ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸೋಮವಾರದಂದು ನಡೆದ ಗಣಿತ ವಿಷಯದ ಪರೀಕ್ಷೆಗೆ ಜಿಲ್ಲೆಯ 18864 ವಿದ್ಯಾರ್ಥಿಗಳು ಹಾಜರಾಗಿದ್ದು, 435 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
     ಎಸ್.ಎಸ್.ಎಲ್.ಸಿ. ಪರೀಕ್ಷೆಯ ಗಣಿತ ವಿಷಯಕ್ಕೆ ಬಾಲಕರು- 9938, ಬಾಲಕಿಯರು- 9361 ಸೇರಿದಂತೆ ಒಟ್ಟು 19299 ವಿದ್ಯಾರ್ಥಿಗಳು ದಾಖಲಾಗಿದ್ದರು.  ಇದರಲ್ಲಿ ಬಾಲಕರು- 9659, ಬಾಲಕಿಯರು-9205 ಸೇರಿದಂತೆ ಒಟ್ಟು  18864 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,   279-ಬಾಲಕರು, 156- ಬಾಲಕಿಯರು, ಒಟ್ಟು 435 ಗೈರು ಹಾಜರಾಗಿದ್ದಾರೆ.   ಗಂಗಾವತಿ ತಾಲೂಕಿನಲ್ಲಿ - 162, ಕೊಪ್ಪಳ-105, , ಕುಷ್ಟಗಿ-71 ಮತ್ತು ಯಲಬುರ್ಗಾ ತಾಲೂಕಿನಲ್ಲಿ 97 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಯಲು ಬಹಿರ್ದೆಸೆ ಮುಕ್ತವಾಗಿಸಲು ಶೌಚಾಲಯಗಳ ಬಳಕೆಯಾಗಬೇಕು- ಬಾಲಚಂದ್ರನ್



ಕೊಪ್ಪಳ ಮಾ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಈಗಾಗಲೆ ಘೋಷಣೆ ಮಾಡಲಾಗಿದ್ದು, ಬಯಲು ಬಹಿರ್ದೆಸೆ ಮುಕ್ತವಾಗಿಸಲು ಶೌಚಾಲಯಗಳ ಬಳಕೆ ಆಗಬೇಕು, ಅಂದಾಗ ಮಾತ್ರ ಈ ಘೋಷಣೆ ಅರ್ಥಪೂರ್ಣವಾಗಲಿದೆ ಎಂದು ಕೊಪ್ಪಳ ತಾಲೂಕಾ ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್ ಅವರು ಹೇಳಿದರು.

     ಕೊಪ್ಪಳ ತಾಲೂಕು ಬಯಲು ಬಹಿರ್ದೆಸೆ ಮುಕ್ತಗೊಳ್ಳಲು ಶ್ರಮಿಸಿದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಪ್ರೇರಣೆದಾರರಿಗೆ ಅಭಿನಂದನೆ ಸಲ್ಲಿಸಲು ತಾ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಕೊಪ್ಪಳ ತಾಲೂಕನ್ನು (ಗ್ರಾಮೀಣ) ಬಯಲು ಬಹಿರ್ದೆಸೆ ಮುಕ್ತ ತಾಲೂಕಾಗಿಸಲು, ಅಧಿಕಾರಿಗಳು, ಗ್ರಾಮ ಪಂಚಾಯತಿಗಳು, ಪ್ರೇರಣೆದಾರರು ಕೈಗೊಂಡ ಶ್ರಮ ನಿಜಕ್ಕೂ ಶ್ಲಾಘನೀಯವಾಗಿದೆ.  ಈ ಸಾಧನೆ ಮಾಡಲು ಕೈಗೊಂಡ ಜಾಗೃತಿ ಕಾರ್ಯಕ್ರಮಗಳೂ ಸಹ ವೈವಿಧ್ಯತೆಗಳಿಂದ ಕೂಡಿತ್ತು.  ವಿಷಲ್ ಅಭಿಯಾನ, ವಿದ್ಯಾರ್ಥಿಗಳಿಂದ ಜಾಗೃತಿ ಪತ್ರ ಚಳುವಳಿ, ಮಿಷನ್ 200 ಹೀಗೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೈಗೊಂಡ ಪರಿಣಾಮವಾಗಿ ತಾಲೂಕು ಬಯಲು ಬಹಿರ್ದೆಸೆ ಮುಕ್ತ ತಾಲೂಕಾಗಿದೆ.  ಆದರೆ ಈ ಘೋಷಣೆ ಸಾಕಾರಗೊಳ್ಳಬೇಕಾದರೆ, ಇವುಗಳ ಬಳಕೆ ಸಮರ್ಪಕವಾಗಿ ಆಗಬೇಕು.  ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ತಾ.ಪಂ. ಅಧ್ಯಕ್ಷ ಬಾಲಚಂದ್ರನ್ ಅವರು ಹೇಳಿದರು.
     ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಬೇಸ್‍ಲೈನ್ ಸರ್ವೆ 2012 ರ ಪ್ರಕಾರ ಕೊಪ್ಪಳ ತಾಲೂಕಿನಲ್ಲಿ (ಗ್ರಾಮೀಣ) 49445 ಕುಟುಂಬಗಳಿದ್ದು, ಇದರಲ್ಲಿ 5679 ಕುಟುಂಬಗಳು ವಯಕ್ತಿಕ ಶೌಚಾಲಯ ಹೊಂದಿದ್ದವು.  43766 ಕುಟುಂಬಗಳು ಶೌಚಾಲಯ ಕಟ್ಟಿಸಿಕೊಳ್ಳಬೇಕಾಗಿತ್ತು.  ಕಳೆದ 2013-14 ರಿಂದ ಈವರೆಗೆ ತಾಲೂಕಿನಲ್ಲಿ ಎಲ್ಲ 49445 ಕುಟುಂಬಗಳು ಶೌಚಾಲಯವನ್ನು ಕಟ್ಟಿಸಿಕೊಂಡಿದ್ದು, ಬೇಸ್‍ಲೈನ್ ಸರ್ವೆ ಪ್ರಕಾರ ಬಯಲು ಬಹಿರ್ದೆಸೆ ಮುಕ್ತ ತಾಲೂಕಾಗಿ ಕೊಪ್ಪಳ ಘೋಷಣೆಯಾಗಿದೆ. ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಬೆಳಗಿನ ಜಾವ ಗ್ರಾಮಗಳಿಗೆ ಭೇಟಿ ನೀಡಿ, ಜನರಲ್ಲಿ ಶೌಚಾಲಯದ ಮಹತ್ವ ಕುರಿತು ಅರಿವು ಮೂಡಿಸುವುದು, ಕಡಿಮೆ ವೆಚ್ಚದಲ್ಲಿ ಮೂತ್ರಾಲಯಗಳ ತಯಾರಿಕೆ, ಮಿಷನ್ 200 ಅಭಿಯಾನದ ಯಶಸ್ವಿ, ವಿದ್ಯಾರ್ಥಿಗಳ ಸಹಕಾರ, ಅನೇಕ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಶೌಚಾಲಯ ನಿರ್ಮಾಣ ಆಂದೋಲನ ರೂಪದಲ್ಲಿ ಯಶಸ್ವಿಗೊಂಡಿದೆ.  ಹುಲಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನುರಮಟ್ಟಿ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕವು ಇಡೀ ರಾಜ್ಯಕ್ಕೆ ಮಾದರಿ ಘಟಕವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳ ಜನಪ್ರತಿನಿಧಿಗಳು ಈ ಘಟಕಕ್ಕೆ ಭೇಟಿ ನೀಡಿ, ಪ್ರಶಂಸೆ ವ್ಯಕ್ತಪಡಿಸಿವೆ.  ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
     ತಾಲೂಕಾ ಯೋಜನಾಧಿಕಾರಿ ಶರಣಯ್ಯ ಸಸಿಮಠ ಕಾರ್ಯಕ್ರಮ ಕುರಿತು ಮಾತನಾಡಿದರು.  ಕೊಪ್ಪಳ ತಾಲೂಕನ್ನು ಬಯಲು ಬಹಿರ್ದೆಸೆ ಮುಕ್ತ ತಾಲೂಕನ್ನಾಗಿಸಲು ಶ್ರಮಿಸಿದ ತಾಲೂಕಿನ ಎಲ್ಲ 38 ಗ್ರಾ.ಪಂ. ಗಳ ಅಧ್ಯಕ್ಷರು, ಪಿಡಿಒಗಳು, ಕಾರ್ಯದರ್ಶಿಗಳು, ತಾಂತ್ರಿಕ ಸಹಾಯಕರು, ಕರವಸೂಲಿಗಾರರು, ಪ್ರೇರಣೆದಾರರಿಗೆ ಇದೇ ಸಂದರ್ಭದಲ್ಲಿ ಅಭಿನಂದಿಸಿ, ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Saturday, 24 March 2018

ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 6ನೇ ತರಗತಿಯ ಪ್ರವೇಶ ಪರೀಕ್ಷೆಯು ಏಪ್ರಿಲ್. 15 ರಂದು ನಡೆಯಲಿದೆ.  ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ರವರ ಸುತ್ತೋಲೆಯನ್ವಯ ಶಿಕ್ಷಣ ಇಲಾಖೆಯಿಂದ ವರ್ಗಾವಣೆಗೊಂಡ 24 ಸಾಮಾನ್ಯ ಹಾಗೂ 4 ಹಿಂದುಳಿದ ವರ್ಗದ ಹುತಾತ್ಮರ ವಸತಿ ಶಾಲೆಗಳು ಸೇರಿದಂತೆ ರಾಜ್ಯದ ಒಟ್ಟು 28 ವಸತಿ ಶಾಲೆಗಳಿಗೆ ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಶೇ.25., ಓಬಿಸಿ ಶೇ.25 ರಷ್ಟು ದಾಖಲಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ.  ಅದರನ್ವಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿಡಶೇಸಿ ಶಾಲೆಗೆ ಪುನಃ ಅರ್ಜಿ ಆಹ್ವಾನಿಸಲಾಗಿದ್ದು, ಈ ಹಿಂದೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. 
ಅರ್ಜಿ ಸಲ್ಲಿಸಲು ಮಾ. 31 ಕೊನೆಯ ದಿನವಾಗಿದ್ದು, ಆಸಕ್ತರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯಾ ವಸತಿ ಶಾಲೆಗಳಲ್ಲಿ ಅರ್ಜಿ ಸಲ್ಲಿಸಬಹುದು.  ಹೆಚ್ಚಿನ ವಿವರಗಳಿಗಾಗಿ ಆಯಾ ವಸತಿ ಶಾಲೆಗಳ ಪ್ರಾಚಾರ್ಯರನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಪಡೆಯಲು ಸೂಚನೆ


ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ): ಜಗಜ್ಯೋತಿ ಶ್ರೀ ಬಸವೇಶ್ವರರ ಭಾವಚಿತ್ರವನ್ನು ಕಡ್ಡಾಯವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವಂತೆ ಈಗಾಗಲೆ ಸರ್ಕಾರ ನಿರ್ದೇಶನ ನೀಡಿದ್ದು,  ಇದುವರೆಗೂ ಭಾವಚಿತ್ರವನ್ನು ಪಡೆಯದೇ ಇರುವ ಸರ್ಕಾರಿ ಕಚೇರಿಗಳು ಸರ್ಕಾರ ಅನುಮೋದಿಸಿರುವ ಬಸವೇಶ್ವರರ ಭಾವಚಿತ್ರದ ಪ್ರತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಿಂದ ಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
     ಜಗಜ್ಯೋತಿ ಬಸವೇಶ್ವರರ ಭಾವಚಿತ್ರದ ಪ್ರತಿಗಳನ್ನು ಈಗಾಗಲೆ ಸರ್ಕಾರಿ ಕಚೇರಿಗಳಿಗೆ ವಿತರಿಸಲಾಗಿದ್ದು, ಇದುವರೆಗೂ ಭಾವಚಿತ್ರವನ್ನು ಪಡೆಯದೆ ಇರುವ ಸರ್ಕಾರಿ ಕಚೇರಿಗಳು ಕೂಡಲೆ ಭಾವಚಿತ್ರವನ್ನು ಪಡೆದು, ಕಚೇರಿಯಲ್ಲಿ ಅಳವಡಿಸಬೇಕು.  ಸರ್ಕಾರ ಅನುಮೋದಿಸಿರುವ ಬಸವೇಶ್ವರರ ಭಾವಚಿತ್ರದ ಪ್ರತಿಗಳು ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದ್ದು, ಸಂಬಂಧಪಟ್ಟ ಸರ್ಕಾರಿ ಇಲಾಖೆ ಅಧಿಕಾರಿಗಳು, ಕೋರಿಕೆ ಪತ್ರವನ್ನು ಕಚೇರಿಗೆ ಸಲ್ಲಿಸಿ, ಬಸವೇಶ್ವರರ ಭಾವಚಿತ್ರದ ಪ್ರತಿಯನ್ನು ಪಡೆದುಕೊಂಡು, ತಮ್ಮ ಕಚೇರಿಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ಕುಷ್ಟಗಿ : ಟ್ಯಾಕ್ಸಿ ಡ್ರೈವರ್ ತರಬೇತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆ ವತಿಯಿಂದ ಪ್ರಸಕ್ತ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆ-ನಲ್ಮ್ ಅಭಿಯಾನ ಯೋಜನೆಯ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ನಿಯುಕ್ತಿ ಉಪ ಘಟಕದಡಿ ಟ್ಯಾಕ್ಸಿ ಡ್ರೈವರ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
      ದೀನದಯಾಳ್ ಅಂತ್ಯೋದಯ ಯೋಜನೆ-ನಲ್ಮ್ ಅಭಿಯಾನ ಯೋಜನೆಯ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ನಿಯುಕ್ತಿ ಉಪ ಘಟಕದಡಿ ಟ್ಯಾಕ್ಸಿ ಡ್ರೈವರ್ ತರಬೇತಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ, ಹಿಂದುಳಿದ ವರ್ಗ, ವಿಕಲಚೇತನ ಮತ್ತು ಮಹಿಳೆಯರು ಹಾಗೂ ಇತರ, 20 ಜನರಿಗೆ ಒಂದು ತಿಂಗಳ ಟ್ಯಾಕ್ಸಿ ತರಬೇತಿಗಾಗಿ ಭೌತಿಕ ಗುರಿ ನಿಗದಿಪಡಿಸಿದ್ದು, ಈ ಹಿಂದೆಯೂ ಅರ್ಜಿ ಆಹ್ವಾನಿಸಲಾಗಿತ್ತು, ಆದರೆ ತರಬೇತಿಗೆ ಎಲ್.ಎಂ.ವಿ ಸಲ್ಲಿಸದ ಕಾರಣ, ಇದೀಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.  ಆಸಕ್ತರು ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು.  10 ತರಗತಿ ವಿದ್ಯಾರ್ಹತೆ ಹೊಂದಿರಬೇಕು.  ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಶನ ಕಾರ್ಡ ಮತ್ತು ಓಟಿಂಗ್ ಕಾರ್ಡ, ಆಧಾರ್ ಕಾರ್ಡ, ಎಲ್.ಎಂ.ವಿ ಪರವಾನಿಗೆ (ಎಲ್.ಎಂ.ವಿ ಲೈಸನ್ಸ) ಹಾಗೂ ವಿದ್ಯಾರ್ಹತೆ ದಾಖಲಾತಿಗಳೊಂದಿಗೆ ಮಾ. 31 ರೊಳಗಾಗಿ ಕುಷ್ಟಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಮಂದಿರದ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ- ಎಂ. ಕನಗವಲ್ಲಿ


ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ) : ವಿವಿಧ ಕಾರಣಗಳಿಂದ ಬಾಲಮಂದಿರಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಬಾಲಮಂದಿರದ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಶನಿವಾರದಂದು ಕೊಪ್ಪಳದ ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಬಾಲಕರಿಗೆ ಹಾಗೂ ಬಾಲಕಿಯರಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಮಕ್ಕಳು ವಿವಿಧ ಕಾರಣಗಳಿಂದ ಬಾಲಮಂದಿರಗಳ ಆಶ್ರಯ ಪಡೆದಿದ್ದು, ಅವರ ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ, ಮಕ್ಕಳ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಶ್ರಮ ವಹಿಸಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಮಕ್ಕಳನ್ನುದ್ದೇಶಿಸಿ ಮಾತನಾಡಿ, ಮಕ್ಕಳು ಕಲಿಕಾ ಸಾಮಗ್ರಿಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು.  ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಸಹಾಯ, ಸಹಕಾರ ನೀಡಲು ಜಿಲ್ಲಾಡಳಿತ ಸದಾ ಸಿದ್ಧವಿದೆ.  ಯಾವುದೇ ಬಗೆಯ ಸಮಸ್ಯೆಗಳಿದ್ದಲ್ಲಿ ಮುಕ್ತವಾಗಿ ತಿಳಿಸಬೇಕು.  ಮಕ್ಕಳು ಅಧ್ಯಯನಶೀಲರಾಗಿ, ಪುಸ್ತಕಗಳು ಇತರೆ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.  ಮಕ್ಕಳಿಗೆ ಶಾಲಾ ಬ್ಯಾಗ್, ಸಾಮಾನ್ಯ ಜ್ಞಾನ, ವ್ಯಾಕರಣ, ಸ್ಪೋಕನ್ ಇಂಗ್ಲೀಷ್ ಸೇರಿದಂತೆ ಉಪಯುಕ್ತ ಪುಸ್ತಕಗಳನ್ನು ವಿತರಿಸಲಾಯಿತು.
     ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲಕಾರ್ಮಿಕ ನಿರ್ಮೂಲನೆಗಾಗಿ ಕೈಗೊಂಡಿರುವ ಕ್ರಮಗಳು ಹಾಗೂ ಯೋಜನೆಯಡಿ ಲಭ್ಯವಿರುವ ಸೌಲಭ್ಯಗಳ ಕುರಿತು ವಿವರಣೆ ನೀಡಿದರು.
     ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರೇಣುಕಾನಂದ, ಬಾಲಮಂದಿರದ ಅಧೀಕ್ಷಕಿ ರೋಹಿಣಿ ಕೊಟಗಾರ, ಯುನಿಸೆಫ್ ಸಂಯೋಜಕ ಹರೀಶ್ ಜೋಗಿ ಉಪಸ್ಥಿತರಿದ್ದರು.  ಬಾಲಕಾರ್ಮಿಕ ಯೋಜನಾ ಸಂಘದ ಸಿಬ್ಬಂದಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಬಾಲಕಿಯರ ಬಾಲಮಂದಿರದ ಮಕ್ಕಳು ಪಾಲ್ಗೊಂಡಿದ್ದರು.

ಜಾತಿಯ ಬಗ್ಗೆ ನಿಖರ ಮಾಹಿತಿ ನೀಡಲು ಅಲೆಮಾರಿ/ ಅರೆ ಅಲೆಮಾರಿ ಜನಾಂಗಕ್ಕೆ ಸೂಚನೆ


ಕೊಪ್ಪಳ ಮಾ. 24 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಪ್ರಸ್ತುತ ಸ್ಥಿತಿಗಳ ಬಗ್ಗೆ ಸಾರ್ವಜನಿಕರಿಗೆ ಪ್ರಮುಖ ಹಾಗೂ ನಿಖರ ಮಾಹಿತಿಯನ್ನು ನೀಡಲು ಒಂದು ಹೊತ್ತಿಗೆಯನ್ನು ರೂಪಿಸಲು ಉದ್ದೇಶಿಸಲಾಗಿದ್ದು, ಅಲೆಮಾರಿ, ಅರೆ ಅಲೆಮಾರಿ ಜನಾಂಗದವರು, ತಮ್ಮ ಜಾತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸೂಚನೆ ನೀಡಿದೆ.
ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಬೈರಾಗಿ (ಬಾವ), ಬಾಲಸಂತೋಷಿ-ಜೋಷಿ, ಬಾಜಿಗರ್, ಭರಡಿ, ಬುಡಬುಡಕಿ-ಜೋಷಿ-ಗೊಂಧಳಿ, ಚಾರ, ಚಿತ್ರಕಥಿ-ಜೋಷಿ, ಧೋಲಿ, ಡವೇರಿ, ದೊಂಬರಿ, ಘಿಸಾಡಿ, ಗಾರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲ್ಕರಿ, ಕೋಲ್ಹಟಿ, ನಂದಿವಾಲ-ಜೋಷಿ-ಗೊಂದಳಿ, ಪುಲ್‍ಮಾಲಿ, ನಾಥಪಂಥಿ ಡೌರಿಗೋಸಾವಿ, ನಿರ್ಶಿಕಾರಿ, ಪಾಂಗ್ಯುಯಲ್, ಜೋಷಿ (ಸಾದಾ ಜೋಷಿ), ಸಾನ್ಸಿಯ, ಸರಾನಿಯ, ತಿರುಮಲಿ, ವಾಯ್ಡು, ವಾಸುದೇವ, ವಾಡಿ, ವಾಗ್ರಿ, ವೀರ್, ಬಜನಿಯ, ಶಿಕ್ಕಲಿಗರ್, ಗೊಲ್ಲ, ಕಿಲ್ಲಿಕ್ಯಾತ, ಸರೋಡಿ, ದುರ್ಗ-ಮುರ್ಗ (ಬುರ್‍ಬುರ್‍ಚ), ಹಾವ್‍ಗಾರ್ (ಹಾವಾಡಿಗಾರ್), ಪಿಚಿಗುಂಟಲ, ಮಸಣಿಯ ಯೋಗಿ, (ಬೆಸ್ತರ್) ಬುಂಡಬೆಸ್ತ, ಕಟಬು, ದರ್ವೆಶ್, ಕಾಶಿಕಪಾಡಿ, ದೊಂಬಿದಾಸ, ಬೈಲಪತರ್, ಈ 46 ಜಾತಿಗಳನ್ನು ಅಧಿಕೃತವಾಗಿ ಹಿಂದುಳಿದ ವರ್ಗಗಳಲ್ಲಿ ಅಲೆಮಾರಿ/ ಅರೆ ಅಲೆಮಾರಿ ಜನಾಂಗಗಳೆಂದು ಗುರುತಿಸಲಾಗಿದೆ.  ಈ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಪ್ರಸ್ತುತ ಸ್ಥಿತಿಗಳ ಬಗ್ಗೆ ಸಾರ್ವಜನಿಕರಿಗೆ ಪ್ರಮುಖ ಹಾಗೂ ನಿಖರ ಮಾಹಿತಿಯನ್ನು ನೀಡಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಒಂದು ಹೊತ್ತಿಗೆಯನ್ನು ರೂಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.  ಆದ್ದರಿಂದ ಈ ಅಲೆಮಾರಿ, ಅರೆ ಅಲೆಮಾರಿ ಜಾತಿಗಳ/ ಸಮುದಾಯಗಳ ಪ್ರತಿನಿಧಿಗಳು ಅಥವಾ ಆ ಸಮುದಾಯದ ಸಂಘಗಳಿದ್ದಲ್ಲಿ, ಅವುಗಳ ಮುಖ್ಯಸ್ಥರು ಆಯೋಗದ ಕಛೇರಿಗೆ ಬಂದು ತಮ್ಮ ಜಾತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕಾಗಿದೆ.   
    ತಮ್ಮ ಜಾತಿಯ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬಯಸುವ ಅಲೆಮಾರಿ, ಅರೆ ಅಲೆಮಾರಿ ಜಾತಿಗಳ/ ಸಮುದಾಯಗಳ ಪ್ರತಿನಿಧಿಗಳು ಅಥವಾ ಆ ಸಮುದಾಯದ ಸಂಘಗಳ ಮುಖ್ಯಸ್ಥರು 15 ದಿನಗಳ ಒಳಗಾಗಿ ಲಿಖಿತವಾಗಿ ಅಥವಾ ಮುದ್ದಾಂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಡಿ. ದೇವರಾಜ ಅರಸು ಭವನ ವಸಂತನಗರ, ಬೆಂಗಳೂರು, ಇಲ್ಲಿಗೆ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, 23 March 2018

ನಗರ ಸ್ಥಳಿಯ ಸಂಸ್ಥೆಗಳ ವಾರ್ಡವಾರು ಮೀಸಲಾತಿ ನಿಗದಿ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 2011 ರ ಜನಗಣತಿಯನ್ನಾಧರಿಸಿ ವಾರ್ಡವಾರು ಮೀಸಲಾತಿ ನಿಗದಿಪಡಿಸಿರುವ ಕರಡು ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯದಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ.  
2011ರ ಜನಗಣತಿಯನ್ವಯ ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ ಮತ್ತು ಯಲಬುರ್ಗಾ ನಗರ ಸ್ಥಳೀಯ ಸಂಸ್ಥೆಗಳಿಗೆ 2018ನೇ ಹಾಗೂ 2019ನೇ ಸಾಲಿನಲ್ಲಿ ಚುನಾವಣೆ ನಡೆಸಲು ವಾರ್ಡವಾರು ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯದಲ್ಲಿ ಪ್ರಕಟಿಸಲಾಗಿದೆ.  ಪ್ರಕಟಿತ ಪ್ರತಿಗಳನ್ನು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳ ಸೂಚನಾ ಫಲಕ, ಆಯಾ ತಹಶೀಲ್ದಾರ್ ಕಛೇರಿ ಸೂಚನಾ ಫಲಕದಲ್ಲಿ ಮತ್ತು ಆಯಾ ಸ್ಥಳೀಯ ಸಂಸ್ಥೆಗಳ ವೆಬ್‍ಸೈಟ್‍ಗಳಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ಏಳು ದಿನಗಳ ಕಾಲಾವಕಾಶ ನೀಡಿ, ಪ್ರಚುರಪಡಿಸಲಾಗಿದೆ.  ಈ ಅಧಿಸೂಚನೆಗೆ ಬಾಧಿತ ವ್ಯಕ್ತಿಗಳಿಂದ ಯಾವುದೇ ಸಲಹೆ/ ಆಕ್ಷೇಪಣೆಗಳು ಇದ್ದಲ್ಲಿ ಏಳು ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳ ಕಛೇರಿ (ಜಿಲ್ಲಾ ನಗರಾಭಿವೃದ್ಧಿಕೋಶದಲ್ಲಿ) ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅವಧಿ ಮೀರಿ ಬಂದ ಆಕ್ಷೇಪಣೆ/ ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ತ್ರಿಚಕ್ರ ಮೋಟಾರು ವಾಹನ ಸೌಲಭ್ಯಕ್ಕೆ ಚೌಡಮ್ಮ ಈಡಿಗೇರ ಆಯ್ಕೆ


ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಕೊಪ್ಪಳ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯಿಂದ ನೀಡುವ ಯಂತ್ರಚಾಲಿತ ತ್ರಿಚಕ್ರ ವಾಹನಕ್ಕೆ ಜಿಲ್ಲೆಯ ಗಂಗಾವತಿ ತಾಲೂಕಿನ ಹುಳ್ಕಿಹಾಳ ಗ್ರಾಮದ ಚೌಡಮ್ಮ ತಂದೆ ಯಂಕೋಬ ಈಡಿಗೇರ ಎಂಬ ಫಲಾನುಭವಿಯನ್ನು ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. 
    ಗಂಗಾವತಿ ತಾಲೂಕಿನ ವಿಕಲಚೇತನ ವಿದ್ಯಾರ್ಥಿನಿ ಚೌಡಮ್ಮ ಕೊಪ್ಪಳ ನಗರದ ಹಾಸ್ಟೆಲ್‍ನಲ್ಲಿದ್ದುಕೊಂಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇವರಿಗೆ ಕಾಲೇಜಿನ ಗೆಳತಿಯರು ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ, ತ್ರಿಚಕ್ರ ಮೋಟಾರು ವಾಹನ ಕೊಡಿಸಲು ಮುಂದಾಗಿರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಇದೀಗ ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ವತಿಯಿಂದ   2017-18ನೇ ಸಾಲಿನ ಇಲಾಖೆಯಿಂದ ನೀಡುವ ತ್ರಿಚಕ್ರ ಮೋಟಾರು ವಾಹನ ಸೌಲಭ್ಯಕ್ಕೆ ಚೌಡಮ್ಮ ಇವರನ್ನು ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಆಯ್ಕೆಮಾಡಲಾಗಿದ್ದು, ವಾಹನ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ಜಗಜೀವನರಾಮ್, ಅಂಬೇಡ್ಕರ್ ಜಯಂತಿ : ಮಾ. 28 ರಂದು ಪೂರ್ವಾಭಾವಿ ಸಭೆ


ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ರವರ 111ನೇ ಜಯಂತಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 127ನೇ ಜನ್ಮ ದಿನಾಚರಣೆಯನ್ನು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಆಚರಿಸುವ ಕುರಿತು ಸಿದ್ಧತೆ ಕೈಗೊಳ್ಳಲು ಪೂರ್ವಭಾವಿ ಸಭೆ ಮಾ. 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸುವರು.  ಜಿಲ್ಲಾ ಮಟ್ಟದ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಅಲ್ಲದೆ ಎಲ್ಲ ಸಮಾಜದ ಗಣ್ಯರು ಸಭೆಗೆ ಹಾಜರಾಗಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಲು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಮುಕ್ತ ದೇವದಾಸಿ ಮಹಿಳೆಯರಿಂದ ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ



ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನಲ್ಲಿ ಸಮೀಕ್ಷೆಯಲ್ಲಿ ಗುರುತಿಸಿದ ವಿಮುಕ್ತ ದೇವದಾಸಿ ಮಹಿಳೆಯರಿಗೆ ಚುನಾವಣಾ ಗುರುತಿನ ಚೀಟಿ ಹೊಂದಿರುವ ಬಗ್ಗೆ ಅಥವಾ ಇಲ್ಲದೇ ಇರುವ ಬಗ್ಗೆ ಪರಿಶೀಲಿಸಲು ಹೋಬಳಿವಾರು ವಿಮುಕ್ತ ದೇವದಾಸಿಯರನ್ನು ಸೇರಿಸಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋದಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನಾ ಅನುಷ್ಠಾನಾಧಿಕಾರಿ ದಾದೇಸಾಬ ಹಿರೇಮನಿ ಹೇಳಿದರು.

      ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ ಕೊಪ್ಪಳ ವತಿಯಿಂದ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿದರು.
     ತಾಲೂಕಿನ ಸಮೀಕ್ಷೆಯಲ್ಲಿ ಗುರುತಿಸಿರುವ ವಿಮುಕ್ತ ದೇವದಾಸಿ ಮಹಿಳೆಯರಿಗೆ ಚುನಾವಣಾ ಗುರುತಿನ ಚೀಟಿ ಮಾಡಲು ನಿಗಮದಿಂದ ಸಹಕಾರ ಪಡೆಯಲು ತಿಳಿಸಿದರು ಮತ್ತು ಎಲ್ಲರೂ ಚುನಾವಣೆಯ ದಿನದಂದು ತಪ್ಪದೇ ಮತ ಚಲಾಯಿಸಲು ಮತದಾನವು ನಮ್ಮ ಹಕ್ಕು ನಮ್ಮ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣಾ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಮತ್ತು ಕುಟುಂಬದ ಸದಸ್ಯರೆಲ್ಲ್ಲರೂ ಮತ ಚಲಾಯಿಸುತ್ತೇವೆಂಬ ಪ್ರತಿಜ್ಞೆಯನ್ನು ಮಾಡಿಸಲಾಯಿತು.
      ಈ ಕಾರ್ಯಕ್ರಮದಲ್ಲಿ ನೂರಕ್ಕಿಂತ ಹೆಚ್ಚು ವಿಮುಕ್ತ ದೇವದಾಸಿ ಮಹಿಳೆಯರು ಪಾಲ್ಗೊಂಡು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.  ವೈದ್ಯಾಧಿಕಾರಿ ಶಫಿವುಲ್ಲಾ   ನಿಗಮದ ಯೋಜನಾ ಅನುಷ್ಠಾನಾಧಿಕಾರಿ ರೇಣುಕಾ.ಎಂ. ಹುಲಗಿ ಗ್ರಾಮ ಪಂಚಾಯತಿ ಸದಸ್ಯೆ ರೇಣುಕಮ್ಮ ಹಾಗೂ ಆಸ್ಪತ್ರೆಯ ಸಿಬ್ಬಂದಿಯವರು ಮತ್ತಿತರರು ಭಾಗವಹಿಸಿದ್ದರು.

ಕೊಪ್ಪಳದಲ್ಲಿ ಆಟೋ ಚಾಲಕರಿಗೆ ಮತದಾನ ಜಾಗೃತಿ


ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಕಾರ್ಮಿಕ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಆಟೋ ಚಾಲಕರಿಗೆ ಮತದಾರರ ಜಾಗೃತಿ ಮೂಡಿಸಲಾಯಿತು.
     ಜಿಲ್ಲಾಡಳಿತ ಭವನದ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕೊಪ್ಪಳ ನಗರದ ಆಟೋ ಚಾಲಕರಿಗೆ ಮತದಾರರ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಯಿತು.  ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ಯಾಮರಾವ್ ಅವರು, ನೈತಿಕ ಮತದಾನ ಕುರಿತು ಆಟೋ ಚಾಲಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಚುನಾವಣೆಯ ದಿನದಂದು ತಪ್ಪದೇ ಮತ ಚಲಾಯಿಸಲು ಮತದಾನವು ನಮ್ಮ ಹಕ್ಕು ನಮ್ಮ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣಾ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂಬುದಾಗಿ ಪ್ರಮಾಣ ಸ್ವೀಕರಿಸಲಾಯಿತು.  ನಗರದ ಆಟೋ ಚಾಲಕರು, ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದು, ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಫೋಟೋ ಕಳುಹಿಸಿದೆ.

ವಿಶ್ವ ಕ್ಷಯರೋಗ ನಿಯಂತ್ರಣ ದಿನಾಚರಣೆ : ಮಾ. 24 ರಂದು ಕೊಪ್ಪಳದಲ್ಲಿ ಜನಜಾಗೃತಿ ಜಾಥಾ


ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಕ್ಷಯರೋಗ ನಿಯಂತ್ರಣ ದಿನಾಚರಣೆ” ಅಂಗವಾಗಿ ಮಾ. 24 ರಂದು ಬೆಳಿಗ್ಗೆ 7:30 ಗಂಟೆಗೆ ನಗರದ ಗವಿಸಿದ್ದೇಶ್ವರ ಮಠ ಆವರಣದಲ್ಲಿ ಕಾರ್ಯಕ್ರಮ ಹಾಗೂ ‘ಜನಜಾಗೃತಿ ಜಾಥಾ’ ಹಮ್ಮಿಕೊಳ್ಳಲಾಗಿದೆ.
       ಕ್ಷಯರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಕಟಿಸಲಾಗಿರುವ ಕ್ಯಾಲೇಂಡರ್‍ನ್ನು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬಿಡುಗಡೆ ಮಾಡುವರು. ನಂತರ ನಗರದಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಜಾಥಾ ಕಾರ್ಯಕ್ರಮವನ್ನು “ನಾಯಕರು ಬೇಕಾಗಿದ್ದಾರೆ.... “ಕ್ಷಯರೋಗ ಮುಕ್ತ ವಿಶ್ವ ನಿರ್ಮಾಣಕ್ಕೆ ಕ್ಷಯರೋಗವನ್ನು ನಿರ್ಮೂಲನೆಗೊಳಿಸಿ ಇತಿಹಾಸ ನಿರ್ಮಿಸಿ” ಎಂಬ ಘೋಷವಾಕ್ಯದೊಂದಿಗೆ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ.  
ಕ್ಷಯರೋಗದ ಲಕ್ಷಣಗಳು ಹಾಗೂ ಪ್ರಮುಖ ಅಂಶಗಳು :
************** ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕೆಲವು ವೇಳೆ ಕಫದ ಜೊತೆಗೆ ರಕ್ತ ಕಾಣಿಸುವುದು.  ಜ್ವರ, ವಿಶೇಷವಾಗಿ ರಾತ್ರಿ ವೇಳೆ.  ತೂಕದ ಇಳಿಕೆ.  ರಾತ್ರಿ ವೇಳೆ ಬೆವರುವುದು.  ಹಸಿವಾಗದಿರುವುದು ಕ್ಷಯರೋಗದ ಸಾಮಾನ್ಯ ಲಕ್ಷಣಗಳಾಗಿವೆ.  ನಿರಂತರ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಗುಣಪಡಿಸಬಹುದು.  ಟಿಬಿಯು ಶ್ವಾಸಕೋಶಗಳಿಗಷ್ಟೇ ಅಲ್ಲದೇ ದೇಹದ ಇನ್ನಿತರ ಭಾಗಗಳಿಗೂ ಹರಡಬಹುದು.  ರೋಗ ನಿರ್ಣಯಿಸಿದ ಎಲ್ಲಾ ಪ್ರಕರಣಗಳಿಗೆ ಉಚಿತ ಚಿಕಿತ್ಸೆ.  ಕಫವನ್ನು ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಿ.  ಅಪೂರ್ಣ ಚಿಕಿತ್ಸೆಯು ಹೆಚ್ಚಿನ ತೊಂದರೆಗಳಿಗೆ ಕಾರಣವಾಗಬಹುದು.  ವಿಶೇಷವಾಗಿ ಕೊಳಚೆ ಪ್ರದೇಶ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬೀಡಿ ಕಾರ್ಮಿಕರು, ನೇಕಾರರ ಸಮುದಾಯ, ಹೆಚ್‍ಐವಿ ಸೋಂಕಿತರು, ಮಧುಮೇಹ, ತಂಬಾಕು ಸೇವನೆ ಮಾಡುವವರಿಗೆ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಕ್ಷಯರೋಗದ ಪ್ರಮುಖ ಅಂಶಗಳಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ಸಾಕ್ಷರ ಭಾರತ್ : ಹೈ-ಕ ಜಿಲ್ಲೆಗಳಲ್ಲಿ ಮಾ. 25 ರಂದು ಮೌಲ್ಯಮಾಪನ/ ಪರೀಕ್ಷೆ


ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಕಲಿತವರು ಹಾಗೂ ಶಾಲೆಯಿಂದ ಹೊರಗುಳಿದವರು ರಾಷ್ಟ್ರೀಯ ಪ್ರಮಾಣ ಪತ್ರ ಪಡೆಯಲು ಸುವರ್ಣ ಅವಕಾಶ ಕಲ್ಪಿಸಲಾಗಿದ್ದು, ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ 999 ಗ್ರಾಮ ಪಂಚಾಯತಿಗಳಲ್ಲಿ ಮಾ. 25 ರಂದು ಮೌಲ್ಯಮಾಪನ/ ಪರೀಕ್ಷೆ ನಡೆಯಲಿವೆ.
    ರಾಜ್ಯದ ಹೈದರಬಾದ್ ಕರ್ನಾಟಕ ಪ್ರದೇಶದ, ಸಾಕ್ಷರ ಭಾರತ್ ಕಾರ್ಯಕ್ರಮ ಅನುಷ್ಠಾನದಲ್ಲಿರುವ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 31 ತಾಲೂಕುಗಳ, 999 ಗ್ರಾಮ ಪಂಚಾಯತಿಗಳ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಾ. 25 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಪರೀಕ್ಷೆ/ ಮೌಲ್ಯಮಾಪನ ನಡೆಯಲಿದ್ದು, ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಕಲಿತವರು ಹಾಗೂ ಶಾಲೆಯಿಂದ ಹೊರಗುಳಿದವರು ರಾಷ್ಟ್ರೀಯ ಪ್ರಮಾಣ ಪತ್ರ ಪಡೆಯಲು ಸುವರ್ಣ ಅವಕಾಶ ಇದಾಗಿದೆ. 
ಓದು, ಬರಹ ಮತ್ತು ಸರಳ ಲೆಕ್ಕಾಚಾರದ ಕಲಿಕೆ ಮಟ್ಟವನ್ನು ಒರೆಗೆ ಹಚ್ಚುವುದು.  ನವಸಾಕ್ಷರರ ಅಕ್ಷರ ಜ್ಞಾನವನ್ನು ಪ್ರಮಾಣೀಕರಿಸುವುದು ಹಾಗೂ ನವಸಾಕ್ಷರರ ಶಿಕ್ಷಣದ ಮುಂದುವರಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.  ಪರೀಕ್ಷಾ ಸಮಯವು ಮೂರು ಗಂಟೆಯಾಗಿದ್ದು, ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯೊಳಗೆ ಕಲಿಕಾರ್ಥಿಗಳು ತಮಗೆ ಅನುಕೂಲವಾದ ಸಮಯಕ್ಕೆ ಹೋಗಿ ಪರೀಕ್ಷೆ ಬರೆಯಬಹುದಾಗಿದೆ.  ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ, ನವದೆಹಲಿ ಇವರ ಸಹಯೋಗದೊಂದಿಗೆ ಮೌಲ್ಯಮಾಪನ/ ಪರೀಕ್ಷೆಯನ್ನು ಆಯೋಜಿಸಲಾಗಿದೆ.
ಹೈದರಬಾದ್ ಕರ್ನಾಟಕ ಪ್ರದೇಶದ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಸಾಕ್ಷರ ಭಾರತ್ ಕಾರ್ಯಕ್ರಮದಲ್ಲಿ ಮತ್ತು ಸಂಸದರ ಆದರ್ಶ ಗ್ರಾಮ ಪಂಚಾಯಿತಿಯಲ್ಲಿ ಕಲಿತು, ಈವರೆಗೆ ರಾಷ್ಟ್ರೀಯ ಪ್ರಮಾಣ ಪತ್ರ ಪಡೆಯದೆ ಇರುವವರು ಹಾಗೂ ಶಾಲೆಯಿಂದ ಹೊರಗುಳಿದವರು ಮಾ. 24 ರೊಳಗಾಗಿ ಗ್ರಾಮ ಲೋಕ ಶಿಕ್ಷಣ ಕೇಂದ್ರದ ಪ್ರೇರಕರಲ್ಲಿ ಪರೀಕ್ಷೆಗೆ ನೊಂದಾಯಿಸಿಕೊಳ್ಳಬುದು.  ಹೆಚ್ಚಿನ ಮಾಹಿತಿಗಾಗಿ ಲೋಕ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಬೆಂಗಳೂರು, ದೂ.ಸಂ 08023444870/71, ಇಮೇಲ್  cmekar@gmail.com ವೆಬ್‍ಸೈಟ್  saaksharbharat.nic.in, karmassedn.gov.in  ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

 

Thursday, 22 March 2018

ಕೊಪ್ಪಳ ಜಿಲ್ಲೆಯಲ್ಲಿ 22 ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆ : ಜಿಲ್ಲಾಧಿಕಾರಿ ಎಂ. ಕನಗವಲ್ಲಿ


ಕೊಪ್ಪಳ ಮಾ. 22 (ಕರ್ನಾಟಕ ವಾರ್ತೆ): ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಹಾಗೂ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಯಲ್ಲಿ 22 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಕೊಪ್ಪಳ ಜಿಲ್ಲೆಯ ಮತದಾನ ಕೇಂದ್ರಗಳ ಸ್ಥಾಪನೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಚುನಾವಣಾ ಆಯೋಗದ ಸೂಚನೆಯಂತೆ ಗ್ರಾಮೀಣ ಪ್ರದೇಶದಲ್ಲಿ ಗರಿಷ್ಠ 1250 ಮತದಾರರು ಹಾಗೂ ನಗರ/ಪಟ್ಟಣ ಪ್ರದೇಶದಲ್ಲಿ 1350 ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಬೇಕಿರುತ್ತದೆ.  ಈ ಮೊದಲು ಜಿಲ್ಲೆಯಲ್ಲಿ 1286 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.  ಆದರೆ ಚುನಾವಣಾ ಆಯೋಗದ ನಿರ್ದೇಶನದನ್ವಯ ಮತಗಟ್ಟೆಗಳ ಸಂಖ್ಯೆಯನ್ನು ಪರಿಷ್ಕರಿಸಲಾಗುತ್ತಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 02 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಚುನಾವಣಾ ಆಯೋಗದ ಸೂಚನೆಯಂತೆ ಹೆಚ್ಚುವರಿ ಮತಗಟ್ಟೆಗಳನ್ನು ಕೂಡ ಸ್ಥಾಪಿಸಲಾಗುತ್ತಿದ್ದು, ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 03 ಹೆಚ್ಚುವರಿ ಮತಗಟ್ಟೆಗಳು, ಗಂಗಾವತಿ-05, ಯಲಬುರ್ಗಾ-02 ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 12 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾಹಿತಿ ನೀಡಿದರು.
    ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ಮತದಾನ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು.  ಮತದಾರರಿಗೆ ಅನುಕೂಲವಾಗುವಂತೆ ಮನೆಗಳ ಸಂಖ್ಯೆಗೆ ಅನುಗುಣವಾಗಿ ಯಾವ ಕೇಂದ್ರದಲ್ಲಿ ಏರಿಯಾ ವಾರು ಯಾವ ಮನೆಗಳು ಬರುತ್ತವೆ ಎಂಬ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸಲ್ಲಿಸಬೇಕು.  
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ, ಕೊಪ್ಪಳ ತಹಶೀಲ್ದಾರ ಗುರುಬಸವರಾಜ, ಯಲಬುರ್ಗಾ ತಹಶೀಲ್ದಾರ ರಮೇಶ ಅಳವಂಡಿಕರ್ ಸೇರಿದಂತೆ ವಿವಿಧ ತಾಲೂಕಿನ ಶಿರಸ್ಥೆದಾರರು ಹಾಗೂ ಚುನಾವಣಾ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ  ಪ್ರತಿನಿಧಿಗಳು ಉಪಸ್ಥಿತರಿದ್ದರು. 

ಸಾಹಿತ್ಯಿಕ ಕ್ರಾಂತಿಗೆ ಮೂಲ ಪುರುಷ ದೇವರ ದಾಸಿಮಯ್ಯನವರು : ಡಾ. ವಾಸುದೇವ ಬಡಿಗೇರ


ಕೊಪ್ಪಳ ಮಾ. 22 (ಕರ್ನಾಟಕ ವಾರ್ತೆ): ಹನ್ನೆರಡನೆ ಶತಮಾನಕ್ಕೂ ಪೂರ್ವದಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಸಾಹಿತ್ಯಿಕ ಕ್ರಾಂತಿಗೆ ಮೂಲ ಪುರುಷ ದೇವರ ದಾಸಿಮಯ್ಯನವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಾಸುದೇವ ಬಡಿಗೇರ ಅವರು ಹೇಳಿದರು. 
 
    ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ, ದೇವರ ದಾಸಿಮಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ದೇವರ ದಾಸಿಮಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
 
ಶೋಷಣೆಗೊಳಗಾಗಿದ್ದ ತಳಸಮುದಾಯಗಳಿಗೆ ಧ್ವನಿಯಾಗಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದಂತಹ ಮಹಾನ ಶರಣರಲ್ಲಿ ದೇವರ ದಾಸಿಮಯ್ಯನವರು ಒಬ್ಬರು.  ಸರಳ ಸಾಹಿತ್ಯದೊಂದಿಗೆ ವಚನಗಳ ಮೂಲಕ ಆಧ್ಯಾತ್ಮಿಕ ಮತ್ತು ಬೌದ್ಧಿಕ ವಿಚಾರಗಳಿಗೆ ಶಕ್ತಿಯನ್ನು ತುಂಬಿದವರು ದೇವರದಾಸಿಮಯ್ಯನವರು.  12 ನೇ ಶತಮಾನದಲ್ಲಿ ಬಸವಣ್ಣನವರ ಹಾದಿಯಲ್ಲಿ ಅನೇಕ ಮಹಾನ್ ಶರಣರು ವಚನಗಳನ್ನು ರಚಿಸುವುದರ ಮೂಲಕ ವಚನ ಸಾಹಿತ್ಯದ ಕ್ರಾಂತಿಯನ್ನೇ ಮಾಡಿದ್ದಾರೆ.  ಆದರೆ ಇದಕ್ಕೂ ಮುನ್ನ 1014 ರಲ್ಲಿ 10 ನೇ ಶತಮಾನದಲ್ಲಿಯೇ ಕನ್ನಡದಲ್ಲಿ ವಚನಗಳನ್ನು ರಚಿಸಿ, ಆದ್ಯ ವಚನಕಾರರೆನಿಸಿಕೊಂಡವರು ಹಾಗೂ ವಚನ ರಚನೆಯ ಮುಂಚೂಣಿಕಾರರು ದೇವರದಾಸಿಮಯ್ಯನವರು.  ತಮ್ಮ ವಚನಗಳಲ್ಲಿ ವೇದ, ಉಪನಿಷತ್ತುಗಳನ್ನು ಅಳವಡಿಸಿಕೊಂಡಿರುವ ದೇವರ ದಾಸಿಮಯ್ಯನವರು ರಾಮನಾಥರ ಭಕ್ತರಾಗಿದ್ದರು.  ತಮ್ಮ ಅಂಕಿತನಾಮವನ್ನು ರಾಮನಾಥ ಎಂದು ವಚನಗಳನ್ನು ರಚಿಸಿದ್ದಾರೆ.  ನೇಕಾರ ವೃತ್ತಿಯನ್ನು ಮಾಡುತ್ತಿದ್ದರು.  ನೇಕಾರರ ಬಗ್ಗೆ ಹಾಗೂ ನೇಕಾರಿಕೆಯ ಬಗ್ಗೆ ತಮ್ಮ ವಚನಗಳಲ್ಲಿಯೂ ಸಹ ಬಣ್ಣಿಸಿದ್ದಾರೆ.    ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರು ಬೇರೆ-ಬೇರೆ ಅಥವಾ ಒಂದೆಯೇ ಎಂಬ ಅನೇಕ ಗೊಂದಲಗಳಿವೆ.  ಜೇಡರ ದಾಸಿಮಯ್ಯ ಹಾಗೂ ದೇವರ ದಾಸಿಮಯ್ಯ ಈ ಎರಡು ಹೆಸರುಗಳು ಒಬ್ಬನೇ ವ್ಯಕ್ತಿಯದ್ದಾಗಿವೆ ಎಂಬುವುದು ಸಂಶೋಧನೆಗಳಿಂದ ತಿಳಿದುಬರುತ್ತದೆ.  ರಾಜ್ಯ ಸರ್ಕಾರವು ಸಹ  ಸಂಶೋದನೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದೇವರ ದಾಸಿಮಯ್ಯನವರ ಹೆಸರಿನ ಅಧ್ಯಾಯನ ಪೀಠವನ್ನು ಸ್ಥಾಪಿಸಿದೆ ಎಂದರು.
 
ಕಾರ್ಯಕ್ರಮದ ಉದ್ಘಾಟನೆಯನ್ನು ವೇದಿಕೆ ಮೇಲಿನ ಎಲ್ಲಾ ಗಣ್ಯರು ಸೇರಿ ನೆರವೇರಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ವೈ.ಬಿ. ಚಲವಾದಿ ಅವರು ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನರಾವ್, ಸ್ವಾತಂತ್ರ್ಯ ಹೋರಾಟಗಾರರಾದ ಸುಮಂತರಾವ್ ಪಟವಾರಿ, ಗಣ್ಯರಾದ ವಿಠ್ಠಪ್ಪ ಗೋರಂಟ್ಲಿ, ಶಿವಾನಂದ ಹೊದ್ಲೂರ, ಕೆ. ಕಾಳಪ್ಪ, ನಾಗರಾಜ ಬಳ್ಳಾರಿ, ಹನುಮಂತಗೌಡ ಘಾಳಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.  ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಾಸುದೇವ ಬಡಿಗೇರ ಅವರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
     ಸಮಾರಂಭಕ್ಕೂ ಪೂರ್ವದಲ್ಲಿ ದೇವರದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ನಗರದ ಗೌರಿಶಂಕರ ದೇವಸ್ಥಾನ ಆವರಣದಲ್ಲಿ ಚಾಲನೆ ನೀಡಲಾಯಿತು.  ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.  ಮೆರವಣಿಗೆಯು ಕೇಂದ್ರೀಯ ಬಸ್ ನಿಲ್ದಾಣ ಮಾರ್ಗವಾಗಿ ಸಾಹಿತ್ಯಭವನದವರೆಗೂ ಸಾಗಿ ಬಂದಿತು.

ಕಾರ್ಮಿಕರ ಹಿತಕಾಯಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಲವು ಯೋಜನೆಗಳು


ಕೊಪ್ಪಳ. ಮಾ.22 (ಕರ್ನಾಟಕ ವಾರ್ತೆ) ಕಟ್ಟಡ  ಕಾರ್ಮಿಕರು ಹಾಗೂ ಇನ್ನಿತರ ಕಾರ್ಮಿಕರ ಕಲ್ಯಾಣಕ್ಕೆ ಸರಕಾರ ಹೆಚ್ಚು ಒತ್ತು ನೀಡಿದ್ದು. ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಸಾಮಾಜಿಕ ಹಾಗೂ ಆರ್ಥಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. 
     ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಯೋಜನೆಗಳಡಿ ಲಭ್ಯವಿರುವ ಸೌಲಭ್ಯಗಳು ಅಸಂಘಟಿತ ಕಾರ್ಮಿಕರಿಗೆ ಸರಿಯಾಗಿ ತಲುಪದಿರುವುದರಿಂದ ಕಾರ್ಮಿಕ ಇಲಾಖೆಯು ಅಂತಹ ಕಾರ್ಮಿಕರಿಗೆ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಹಲವಾರು ಕಾನೂನು ಅರಿವು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇದೆ.  ಇನ್ನೂ ಹಲವಾರು ರೀತಿಯಿಂದ ಯೋಜನೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಕಾರ್ಮಿಕ ಇಲಾಖೆಯೂ ಇಂದು ತನ್ನ ವೈವಿಧ್ಯಮಯ ಕಾರ್ಯಚಟುವಟಿಕೆ ಹಾಗೂ ತನ್ನದೆ ಆದ ಪಾತ್ರ ನಿರ್ವಹಣೆಯಿಂದ ಪ್ರಮುಖಪಾತ್ರ ವಹಿಸಿದೆ.   ಕಾರ್ಮಿಕ ವರ್ಗದ ಹಿತರಕ್ಷಣೆ ಮತ್ತು ಕಲ್ಯಾಣ ಸಾಧನೆಯ ಉದ್ದೇಶದಿಂದ ಸ್ಥಾಪಿತವಾದ ಸರ್ಕಾರಿ ಇಲಾಖೆ ಕಾರ್ಮಿಕರ ಕಲ್ಯಾಣಾಭಿವೃದ್ದಿ, ಅವರ ಕೆಲಸದ ಸ್ಥಿತಿಗತಿಗಳ ಸುಧಾರಣೆ, ದುಡಿಯಬಲ್ಲವರಿಗೆಲ್ಲ ಲಾಭದಾಯಕವಾದ ಉದ್ಯೋಗಾವಕಾಶಗಳ ಕಲ್ಪನೆ, ಮುಂತಾದ ಉದ್ದೇಶಗಳಿಗಾಗಿ 1913 ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಮಿಕ ಇಲಾಖೆಯನ್ನು ಸ್ಥಾಪಿಸಲಾಯಿತು. ಅದೇ ದೃಷ್ಟಿಯನ್ನು ಇಟ್ಟುಕೊಂಡು ಭಾರತ ದೇಶವು ಕೂಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ.
    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟಡ ಹಾಗೂ ಇತರೆ ನಿರ್ಮಾಣ ಕೆಲಸದಲ್ಲಿ ಕೆಲಸ ಮಾಡುವ ಕಾರ್ಮಿಕರ ರಕ್ಷಣೆ, ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮವನ್ನು ನೀಡುವ ಮೂಲಕ ಅವರ ಜೀವನ ಮಟ್ಟ ಸುಧಾರಿಸಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996 ಮತ್ತು ನಿಯಮ 2006 ರಲ್ಲಿ ಜಾರಿಗೆ ತಂದಿದೆ. ಈ ಕಾಯ್ದೆ ಮೇರೆಗೆ ಕರ್ನಾಟಕ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸಿದೆ. ಕಲ್ಯಾಣ ಮಂಡಳಿಯು ಕಾರ್ಮಿಕರಿಗೆ ಕೆಳಗೆ ಕಾಣಿಸಿದ ಸೌಲಭ್ಯಗಳನ್ನು ರೂಪಿಸಿದೆ. ಈ ಸೌಲಭ್ಯಗಳನ್ನು ಪಡೆಯಬೇಕಾದರೆ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ ಗುರುತಿನ ಚೀಟಿಯನ್ನು ಪಡೆಯಬೇಕಾಗಿರುತ್ತದೆ.
ಲಭ್ಯವಿರುವ ಸೌಲಭ್ಯಗಳು :
******** ನೊಂದಾಯಿಸಲ್ಪಟ್ಟ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ದೊರಕುವ ಸೌಲಭ್ಯಗಳ ಇಂತಿವೆ.  ಗುರುತಿನ ಚೀಟಿ ಹೊಂದಿದ ಕಾರ್ಮಿಕ ಫಲಾನುಭವಿ ಮರಣ ಹೊಂದಿದರೆ ಅವನ ಅಂತ್ಯಕ್ರಿಯೆಗಾಗಿ ಮತ್ತು ಮೃತನ ಕುಟುಂಬಕ್ಕಾಗಿ ರೂ. 54 ಸಾವಿರ ಧನ ಸಹಾಯ ನೀಡುವುದು. ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುವಂತ ಕಾರ್ಮಿಕನಿಗೆ ರೂ.400 ರಿಂದ 6 ಸಾವಿರ ವರೆಗೆ ಒಳರೋಗಿ ಧನಸಹಾಯ. ಕಾರ್ಮಿಕ ಫಲಾನುಭವಿ ಕೆಲಸ ಮಾಡುತ್ತಿರುವಾಗ ಮತ್ತು ಕೆಲಸದ ಸ್ಥಳದಿಂದ ಮನೆಗೆ ಹೋಗುವಾಗ ಅಥವಾ ಮನೆಯಿಂದ ಕೆಲಸಕ್ಕೆ ತೆರಳುವಾಗ ಮಾರ್ಗದ ಮಧ್ಯದಲ್ಲಿ ಅಪಘಾತವಾಗಿ ಸಾವನ್ನಪ್ಪಿದಲ್ಲಿ, ಆತನ ನಾಮನಿರ್ದೇಶಕರಿಗೆ ಅಥವಾ ಆತನ ಅವಲಂಬಿತರಿಗೆ ರೂ. 2 ಲಕ್ಷ ಧನಸಹಾಯ ನೀಡಲಾಗುವುದು. 50 ಸಾವಿರ ರೂ. ಹಣ ನೀಡಿದರೆ ಇನ್ನುಳಿದ 1,50 ಲಕ್ಷ ರೂ. ಗಳನ್ನು ಮಂಡಳಿಯಿಂದ ನೇರವಾಗಿ ಅಂಚೆ ಕಛೇರಿಯಲ್ಲಿ ಮಾಸಿಕ ವರಮಾನ ಯೋಜನೆಯಡಿಯಲ್ಲಿ ಹೂಡಿಕೆ ಮಾಡಲಾಗುವುದು. ಒಂದು ವೇಳೆ ಕಟ್ಟಡ ಕೆಲಸ ಮಾಡುವಾಗಲೋ ಅಥವಾ ಕೆಲಸಕ್ಕೆ ಹೋಗುವಾಗ ಅಪಘಾತವಾಗಿ ಅಂಗಾಂಗ ಕಳೆದುಕೊಂಡು ಶಾಶ್ವತ ಅಂಗವಿಕಲನಾದರೆ ಸರ್ಕಾರಿ ವೈಧ್ಯಕೀಯ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರಗಳಲ್ಲಿ ಅಥವಾ ಆರ್.ಎಸ್.ಬಿ. ವಾಯ್ ಯೋಜನೆಯಲ್ಲಿ ನೊಂದಣಿಗೊಂಡ ಆಸ್ಪತ್ರೆಗಳು ನೀಡುವ ಶೇಕಡಾವಾರು ಅಂಗವಿಕಲ ಪ್ರಮಾಣ ಪತ್ರಕ್ಕೆ ಅನುಗುಣವಾಗಿ ಗರಿಷ್ಠ ರೂ. 2 ಲಕ್ಷ ಉಳಿದಂತೆ ಅಂಗವಿಕಲತೆಯ ಪ್ರಮಾಣ ಪತ್ರಕ್ಕನುಗುಣವಾಗಿ ಪರಿಹಾರ ಮೊತ್ತ ನೀಡುತ್ತದೆ. ಪ್ರಮುಖ ಕಾಯಿಲೆಗಳಾದ ಹೃದ್ರೋಗ ಅಪರೇಶನ್, ಕಣ್ಣಿನ ಅಪರೇಶನ್, ಮೂಳೆ ಅಪರೇಶನ್, ಗರ್ಭಕೋಶದ ಅಪರೇಶನ್, ಮತ್ತು ಗರ್ಭಪಾತದ ಪ್ರಕರಣಗಳು, ಪಿತ್ತಕೋಶದ ತೊಂದರೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವುದು, ಮೆದುಳಿನ ರಕ್ತಸ್ರಾವ, ಅಸ್ತಮಾ, ಅಲ್ಸರ್, ಡಯಾಬಿಟಿಸ್, ಕಿಡ್ನಿ, ಇಎನ್‍ಟಿ, ನರರೋಗ, ವ್ಯಾಸ್ಕುಲರ್, ಅನ್ನನಾಳ, ಕರುಳು, ಸ್ತನ, ಹರ್ನಿಯ, ಅಪೆಂಡಿಕ್ಸ್, ಮೂಳೆ ಮುರಿತ, ಡಿಸ್ ಲೊಕೇಶನ್, ಕಿಡ್ನಿಜೋಡಣೆ, ಕ್ಯಾನ್ಸರ್, ಪಾಶ್ರ್ವವಾಯು ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಗೆ ರೂ. 2 ಲಕ್ಷ ಧನಸಹಾಯ ದೊರೆಯಲಿದೆ. ಕುಷ್ಟರೋಗ, ಕ್ಯಾನ್ಸರ್, ಪಾಶ್ರ್ವವಾಯು, ಕ್ಷಯರೋಗದಂತಹ ಮಾರಕ ಕಾಯಿಲೆಗಳಿಂದ ಶಾಶ್ವತ ಅಂಗವಿಕಲರಾದಲ್ಲಿ ಮಾಸಿಕ ರೂ. 1 ಸಾವಿರ ಪಿಂಚಣಿ ಭತ್ಯ ನೀಡಲಾಗುತ್ತದೆ. ನೊಂದಾಯಿತರಲ್ಲದ ಕಟ್ಟಡ ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಕಟ್ಟದ ಕುಸಿದು ಮತ್ತು ರಸ್ತೆ ಅಪಘಾತವಾಗಿ ಮೃತಪಟ್ಟಲ್ಲಿ ಅಂತವರ ಕುಟುಂಬಕ್ಕೆ ಎಕ್ಸ್‍ಗ್ರೇಷಿಯಾ ಪರಿಹಾರಧನ ರೂ. 50 ಸಾವಿರ ನೀಡಲಾಗುತ್ತದೆ. ಗಾಯಗೊಂಡವರಿಗೆ ರೂ. 20 ಸಾವಿರ ನೀಡಲಾಗುವುದು.
ಒಂದು ವರ್ಷ ಸದಸ್ಯತ್ವ ಪೂರ್ಣಗೊಂಡ ಫಲಾನುಭವಿಗಳಿಗೆ ದೊರಕುವ ಸೌಲಭ್ಯಗಳು :    
******************ಮಹಿಳಾ ಕಾರ್ಮಿಕ ಫಲಾನುಭವಿಗಳಿಗೆ ಎರಡು ಬಾರಿ ರೂ. 15 ಸಾವಿರ ಹೆರಿಗೆ ಸೌಲಭ್ಯವನ್ನು ನೀಡಲಾಗುತ್ತದೆ. ಎರಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 5, 6, 7ನೇ ತರಗತಿ ಓದುತ್ತಿರುವವರಿಗೆ ರೂ. 3 ಸಾವಿರ, ಮತ್ತು 8, 9ನೇ ತರಗತಿ ಓದುತ್ತಿರುವವರಿಗೆ ರೂ. 4 ಸಾವಿರ, 10 ನೇ ತರಗತಿ ಓದುತ್ತಿರುವವರಿಗೆ ರೂ. 6 ಸಾವಿರ, ಪ್ರಥಮ ಪಿಯುಸಿ ಪಾಸಾದವರಿಗೆ ರೂ. 5000, ದ್ವೀತಿಯ ಪಿಯುಸಿ ಪಾಸಾದವರಿಗೆ ರೂ. 8 ಸಾವಿರ, ಐಟಿಐ ಓದುತ್ತಿರುವವರಿಗೆ ರೂ. 5 ಸಾವಿರ, ಡಿಪ್ಲೋಮಾ ಓದುತ್ತಿರುವವರಿಗೆ ರೂ. 6 ಸಾವಿರ ಪದವಿ ಓದುತ್ತಿರುವವರಿಗೆ ಪ್ರತಿ ವರ್ಷಕ್ಕೆ ರೂ. 5 ಸಾವಿರ ಸ್ನಾತಕೊತ್ತರ ಪದವಿ ಓದುತ್ತಿರುವವರಿಗೆ ರೂ. 20 ಸಾವಿರ, ಪಿಹೆಚ್‍ಡಿ ವ್ಯಾಸಂಗಕ್ಕೆ ರೂ. 20 ಸಾವಿರ. ವೈದ್ಯಕೀಯ, ಇಂಜೀನಿಯರಿಂಗ್ ಮುಂತಾದ ಕೋರ್ಸ್‍ಗಳಿಗೆ  ಸರ್ಕಾರ ನಿಗದಿಪಡಿಸಿರುವ ಶುಲ್ಕ ಮತ್ತು ಹಾಜರಾತಿ ಭತ್ಯ ಪ್ರತಿ ತಿಂಗಳಿಗೆ ರೂ. 2 ಸಾವಿರ ಶೈಕ್ಷಣಿಕ ಧನಸಹಾಯ ನೀಡಲಾಗುವುದು. ಮತ್ತು ಫಲಾನುಭವಿಗಳ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ ರೂ. 50 ಸಾವಿರ ಮದುವೆ ಧನಸಹಾಯ ಸಿಗಲಿದೆ. ಎರಡು ವರ್ಷ ಸದಸ್ಯತ್ವ ಪೂರ್ಣಗೊಳಿಸದ ಫಲಾನುಭವಿಗಳಿಗೆ ಮಂಡಳಿಯಿಂದ ಅನುಮೋದಿತವಾದ ಶಾಲೆಯಲ್ಲಿ ತರಬೇತಿ ಪಡೆದವರಿಗೆ ಉಪಕರಣಗಳ ಖರೀದಿಗೆ ರೂ. 5 ಸಾವಿರ ಧನಸಹಾಯ ನೀಡಲಾಗುವುದು.
ಐದು ವರ್ಷ ಸದಸ್ಯತ್ವ ಪೂರ್ಣಗೊಂಡ ಫಲಾನುಭವಿಗಳಿಗೆ ದೊರಕುವ ಸೌಲಭ್ಯಗಳು :    
****************60 ವರ್ಷ ಪೂರೈಸಿದ ಮಹಿಳೆ ಹಾಗೂ ಪುರುಷ ಫಲಾನುಭವಿಗಳಿಗೆ ರೂ. 1 ಸಾವಿರ ಪಿಂಚಣಿ ಧನಸಹಾಯ ನೀಡಲಾಗುವುದು. ಮನೆ ಕಟ್ಟುವುದಕ್ಕೆ ಅಥವಾ ಖರೀದಿಸುವುದಕ್ಕೆ ವಾರ್ಷಿಕ ಶೇ. 5 ರ ಬಡ್ಡಿದರದಲ್ಲಿ, ಬ್ಯಾಂಕ್, ಹಣಕಾಸು ಸಂಸ್ಥೆಗಳ ಮೂಲಕ ರೂ. 2 ಲಕ್ಷಗಳವರೆಗೆ ಸಾಲ ನೀಡಲಾಗುವುದು. ಅದರಲ್ಲಿ 1.50 ಲಕ್ಷ ಸಾಲ ಹಾಗೂ ರೂ. 50 ಸಾವಿರ ಸಬ್ಸಿಡಿ ನೀಡಲಾಗುತ್ತದೆ.
ಧನಸಹಾಯ ಪಡೆದ ಫಲಾನುಭವಿಗಳ ವಿವರ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾಯ್ದೆ ಅಡಿ 2007 ರಿಂದ 2018 ರ ವರೆಗೆ ಜಿಲ್ಲೆಯಲ್ಲಿ ವಿವಿಧ ಸೌಲಭ್ಯಗಳಿಂದ ಸಹಾಯ ಧನ ಪಡೆದ ಒಟ್ಟು ಫಲಾನುಭವಿಗಳ ವಿವರ ಇಂತಿದೆ.
ಶೈಕ್ಷಣಿಕ ಸಹಾಯಧನದ ಅಡಿ 2548 ಫಲಾನುಭವಿಗಳಿಗೆ ರೂ. 1,16,73,950 ಹಣ ಖರ್ಚುಮಾಡಲಾಗಿದೆ. ಅಂತ್ಯಸಂಸ್ಕಾರದ ಸಹಾಯಧನದ ಅಡಿ 158 ಫಲಾನುಭವಿಗಳಿಗೆ ರೂ. 63,82,000 ಹಣ ನೀಡಲಾಗಿದೆ. ಮದುವೆ ಸಹಾಯಧನದ ಅಡಿ  564 ಫಲಾನುಭವಿಗಳಿಗೆ ರೂ. 2,25,65,000 ಹಣ ಒದಗಿಸಲಾಗಿದೆ. ಹೆರಿಗೆ ಸಹಾಯಧನದ ಅಡಿಯಲ್ಲಿ 107 ಫಲಾನುಭವಿಗಳು ರೂ 11,80,000 ಅನುದಾನವನ್ನು ಪಡೆದುಕೊಂಡಿದ್ದಾರೆ.  ಅಪಘಾತ ಪರಿಹಾರ ಸಹಾಯಧನದ ಅಡಿ 15 ಫಲಾನುಭವಿಗಳಿಗೆ  ರೂ. 11,74,000 ಹಣವನ್ನು ಖರ್ಚುಮಾಡಲಾಗಿದೆ. ಪ್ರಮುಖ ವೈಧ್ಯಕೀಯ ಸಹಾಯಧನದ ಅಡಿ 37 ಫಲಾನುಭವಿಗಳಿಗೆ ರೂ. 3,44,344 ಸೌಲಭ್ಯ ನೀಡಲಾಗಿದೆ. ಸಾಮಾನ್ಯ ವೈದ್ಯಕೀಯ ಸಹಾಯಧನದ ಅಡಿ 59 ಫಲಾನುಭವಿಗಳು ರೂ. 46,851 ಹಣ ಪಡೆದುಕೊಂಡಿದ್ದಾರೆ. ನೊಂದಣಿ ಅಲ್ಲದ ಅಪಘಾತ ಮರಣದ ಸಹಾಯಧನವನ್ನು 05  ಫಲಾನುಭವಿಗಳಿಗೆ ರೂ. 2,50,000 ಹಣ ಒದಗಿಸಲಾಗಿದೆ. ನೊಂದಣಿ ಅಲ್ಲದ ಎಕ್ಸ್ ಗ್ರೇಷಿಯಾ ಧನಸಹಾಯದ ಅಡಿ 04 ಫಲಾನುಭವಿಗಳಿಗೆ ರೂ. 40,000 ಹಣವನ್ನು ಖರ್ಚುಮಾಡಲಾಗಿದೆ. ನಿವೃತ್ತಿ ವೇತನ, ಪಿಂಚಣಿ ಧನಸಹಾಯದ ಅಡಿ 42 ಫಲಾನುಭವಿಗಳಿಗೆ ರೂ. 4,20,000 ಹಣವನ್ನು ನೀಡಲಾಗಿದೆ. ಒಟ್ಟಾರೆಯಾಗಿ 2275 ಪುರುಷರು, 1265 ಮಹಿಳೆಯರು, ಒಟ್ಟು 3559 ಫಲಾನುಭವಿಗಳು ವಿವಿಧ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು 4.40 ಕೋಟಿ ರೂ. ವೆಚ್ಚವಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.

                                          -ಬಸವರಾಜ ಬೋದೂರು
                                             ಕೊಪ್ಪಳ

Wednesday, 21 March 2018

ಮತದಾರರಲ್ಲಿ ಜಾಗೃತಿ ಮೂಡಿಸಲು ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ- ವೆಂಕಟ್‍ರಾಜಾ


ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ): ಮತದಾರರಲ್ಲಿ ನೈತಿಕ ಮತದಾನ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ತಪ್ಪದೆ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಕೊಪ್ಪಳ ಜಿಲ್ಲೆಯಲ್ಲಿ ಸ್ವೀಪ್ ಯೋಜನೆಯಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಸೂಚನೆ ನೀಡಿದರು.

     ಸ್ವೀಪ್ ಕಾರ್ಯಕ್ರಮಗಳ ಸಂಬಂಧ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಚುನಾವಣಾ ಆಯೋಗವು ಮತದಾರರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು, ಮತದಾರರ ಜಾಗೃತಿಗೆ ಸ್ವೀಪ್ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.  ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಮ್ಮ ಸಂವಿಧಾನ ಒದಗಿಸಿರುವ ಮತದಾನದ ಹಕ್ಕನ್ನು ಚಲಾಯಿಸಲು, ಪ್ರತಿಯೊಬ್ಬ ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು, ಯಾವುದೇ ಆಮಿಷಗಳಿಗೆ ಒಳಗಾಗದೆ, ನೈತಿಕ ಮತದಾನ ಮಾಡುವುದು ಮತದಾರರ ಕರ್ತವ್ಯವಾಗಿದೆ.  ಮತದಾರರ ಜಾಗೃತಿ ಕಾರ್ಯಕ್ರಮಗಳಿಂದಾಗಿ 2008 ರ ವಿಧಾನಸಭಾ ಚುನಾವಣೆಗೂ 2013 ರಲ್ಲಿ ಜರುಗಿದ ಚುನಾವಣೆಗೂ ಶೇ. 11 ರಷ್ಟು ಮತದಾನ ಪ್ರಮಾಣದಲ್ಲಿ ಏರಿಕೆಯಾಗಿತ್ತು.  ಮತದಾರರು ತಪ್ಪದೆ ಮತದಾನದಲ್ಲಿ ಪಾಲ್ಗೊಳ್ಳುವಂತಾಗಲು, ಕಳೆದ ಬಾರಿಯ ಚುನಾವಣೆಯಲ್ಲಿ ನೋಟ (ಓಔಖಿಂ) ವನ್ನು ಬ್ಯಾಲೆಟ್ ಯುನಿಟ್‍ಗೆ ಅಳವಡಿಸಲಾಗಿತ್ತು.  ಹೀಗಾಗಿ ಮತದಾರರ ಜಾಗೃತಿ ಕಾರ್ಯಕ್ರಮಗಳಿಗೆ ಚುನಾವಣಾ ಆಯೋಗ ಮಹತ್ವವನ್ನು ನೀಡುತ್ತಿದೆ.  ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಾವು ಯಾರಿಗೆ ಮತ ಚಲಾಯಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ವಿವಿ ಪ್ಯಾಟ್ ಅನ್ನು ಬಳಸಲಾಗುತ್ತಿದೆ.  ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿದ್ದ ವಿಕಲಚೇತನರನ್ನು ಮತದಾನದ ಮುಖ್ಯವಾಹಿನಿಗೆ ಸೆಳೆಯಲು, ಮತಗಟ್ಟೆಗಳನ್ನು ವಿಕಲಚೇತನ ಸ್ನೇಹಿಯನ್ನಾಗಿಸುವುದು, ಕಾರ್ಖಾನೆಗಳ ಕಾರ್ಮಿಕರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಾದ ಆಇಔ ಏಔPPಂಐ  ಹೆಸರಿನಲ್ಲಿ ಫೇಸ್‍ಬುಕ್, ಟ್ವಿಟರ್ ಖಾತೆಗಳನ್ನು ತೆರೆದು ಮತದಾರರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.  ಮತದಾನದ ದಿನದವರೆಗೂ ಮತದಾರರ ಜಾಗೃತಿ ಕಾರ್ಯಕ್ರಮಗಳು ಜರುಗಲಿವೆ.  ಮ್ಯಾರಥಾನ್ ರ್ಯಾಲಿ, ಸೈಕಲ್ ರ್ಯಾಲಿ, ಪ್ರದರ್ಶನ ಫಲಕಗಳು, ಯುವ ಮತದಾರರಿಗೆ ಸ್ಪರ್ಧೆಗಳ ಆಯೋಜನೆ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ ಹೀಗೆ ವಿವಿಧ ಇಲಾಖೆಗಳ ಸಹಯೋಗ ಪಡೆಯಲಾಗುವುದು.  ಸ್ವೀಪ್ ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ವಿವಿಧ ಇಲಾಖೆಗಳಿಗೆ ವಹಿಸಲಾಗುವ ಜವಾಬ್ದಾರಿಯನ್ನು ಅಧಿಕಾರಿಗಳು ಸಮರ್ಪಕವಾಗಿ ನಿಭಾಯಿಸಿ, ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಅವರು ಸೂಚನೆ ನೀಡಿದರು.
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಪ್ರಶಾಂತ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಬುರಾವ್, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಡಿಡಿಪಿಐ ಹನುಮಂತಪ್ಪ, ಎನ್‍ಐಸಿ ಜಿಲ್ಲಾ ಅಧಿಕಾರಿ ವೀರಣ್ಣ ಏಳುಬಾವಿ ಸೇರಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಯಲಬುರ್ಗಾ ತಾಲೂಕಿನ 2 ಸಹಕಾರ ಸಂಘಗಳ ಸಮಾಪನೆ : ಆಕ್ಷೇಪಣೆಗೆ ಆಹ್ವಾನ


ಕೊಪ್ಪಳ ಮಾ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಕಡಿಮೆ ಕಾರ್ಯವ್ಯಾಪ್ತಿಯನ್ನು ಹೊಂದಿದ ಎರಡು ಸಹಕಾರ ಸಂಘಗಳನ್ನು ಜಿಲ್ಲಾ ಸಹಕಾರ ಇಲಾಖೆಯು ಸಮಾಪನೆಗೊಳಿಸಲು ಕ್ರಮ ಕೈಗೊಳ್ಳಲಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ. 
    ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸರಕಾರಿ ಮಾದರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಗ್ರಾಹಕರ ಸಹಕಾರ ಸಂಘ ನಿ. ಸಂಗನಾಳ ಹಾಗೂ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ನಿ. ಇಟಗಿ, ಈ ಎರಡು  ಸಹಕಾರ ಸಂಘಗಳು ತಾಲೂಕು ಮಟ್ಟಕ್ಕಿಂತ ಕಡಿಮೆ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, ಸುಮಾರು ವರ್ಷಗಳಿಂದ ತಮ್ಮ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸದೇ ಸ್ಥಗಿತಗೊಂಡಿರುತ್ತವೆ.  ಈ ಸಹಕಾರ ಸಂಘಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 72 ರಡಿಯಲ್ಲಿ ಸಮಾಪನೆಗೊಳಿಸಲು ಸಹಕಾರ ಇಲಾಖೆ ಕ್ರಮ ಕೈಗೊಳ್ಳಲಿದ್ದು, ಈ ಕುರಿತು ಯಾವುದೇ ಆಕ್ಷೇಪಣೆಗಳಿದ್ದಲ್ಲಿ 7 ದಿನಗಳೊಳಗಾಗಿ ಸಹಕಾರ ಇಲಾಖೆ, ಜಿಲ್ಲಾಡಳಿತ ಭವನ ಕೊಪ್ಪಳ, ಕಛೇರಿಗೆ ಸಲ್ಲಿಸಬೇಕು ಎಂದು ಕೊಪ್ಪಳ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 31 ರಂದು ಕೊಪ್ಪಳ ತಾ.ಪಂ ಸಾಮಾನ್ಯ ಸಭೆ


ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕ ಪಂಚಾಯತಿಯ ಸಾಮಾನ್ಯ ಸಭೆ ಮಾ. 31 ರಂದು ಬೆಳಿಗ್ಗೆ 10-30 ಗಂಟೆಗೆ ತಾ.ಪಂ. ಸಭಾಂಗಣದಲ್ಲಿ ನಡೆಯಲಿದೆ.
    ಕೊಪ್ಪಳ ತಾಲೂಕ ಪಂಚಾಯತಿಯ ಸಾಮಾನ್ಯ ಸಭೆ ಮಾ. 13 ರಂದು ಏರ್ಪಡಿಸಲಾಗಿದ್ದು, ಅನಿವಾರ್ಯ ಕಾರಣಗಳಿಂದ ಸಭೆಯನ್ನು ಮುಂದೂಡಿ ಮಾ. 31 ರಂದು ಬೆಳಿಗ್ಗೆ 10-30 ಗಂಟೆಗೆ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದೆ.  ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷ ಬಾಲಚಂದ್ರನ್ ಅವರು ವಹಿಸಲಿದ್ದಾರೆ.  ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಗೆ ತಪ್ಪದೇ ಹಾಜರಾಗಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಗಾವತಿ : ನಿರ್ಗತಿಕ ವಸತಿ ರಹಿತರಿಗಾಗಿ ಆಶ್ರಯ ಕೇಂದ್ರ ಪ್ರಾರಂಭ


ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ ಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯ ಉಪಯೋಜನೆಯಡಿ ನಿರ್ಗತಿಕ ವಸತಿ ರಹಿತರಿಗಾಗಿ ಆಶ್ರಯ ಕೇಂದ್ರವನ್ನು ಗಂಗಾವತಿ ನಗರದ ತಹಶೀಲ್ದಾರರ ಹಳೇ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ.
ಸರ್ವೋಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 196/2001 ರ ಅನುಸಾರ ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಇವರ ಆದೇಶದನ್ವಯ 2017-18 ನೇ ಸಾಲಿನಲ್ಲಿ ಗಂಗಾವತಿ ನಗರ ಸ್ಥಳೀಯ ಸಂಸ್ಥೆಯ ಹಾಲಿಯಿರುವ ನಗರ ವಸತಿ ರಹಿತರ ಆಶ್ರಯಗಳು ನಿರ್ಮಾಣ ಮಾಡಿ ನಿರ್ವಹಿಸುವುದು, ಈ ಕುರಿತು ನಗರದ ರಾತ್ರಿ ವಸತಿ ರಹಿತರನ್ನು ರ್ಯಾಪಿಡ್ ಸಮೀಕ್ಷೆಯ ಮೂಲಕ ಗುರುತಿಸಲು ಸೂಚಿಸಲಾಗಿದೆ.  ಗುರುತಿಸಿರುವ ವಸತಿ ರಹಿತರಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾದ ಕೇಂದ್ರವನ್ನು ಸ್ಥಾಪಿಸಿ ಮೂಲಭೂತ ಸೌಕರ್ಯದೊಂದಿಗೆ ನಿಯಮಾನುಸಾರ ಅವಶ್ಯ ಸೌಲಭ್ಯದೊಂದಿಗೆ ಖಾಯಂ ಪುನರ್ವಸತಿ ಕಲ್ಪಿಸುವ ಉದ್ದೇಶವಿರುತ್ತದೆ.  ತಂಗುದಾಣಗಳಲ್ಲಿ ವಾಸಿಸುವ ನಾಗರೀಕರಿಗೆ ವಿವಿಧ ಇಲಾಖೆಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವನ್ನು ಒದಗಿಸಿ, ಪುನರ್ವಸತಿ ಕಲ್ಪಿಸಿ, ಸಮಾಜದ ಮುಖ್ಯ ವಾಹಿನಿಗೆ ತರುವುದು ಹಾಗೂ ಲಿವಿಂಗ್ ವಿತ್ ಡಿಗ್ನಿಟಿ ಹಂತದವರೆಗೆ ಹ್ಯಾಂಡ್ ಹೋಲ್ಡಿಂಗ್ ಸಪೋರ್ಟ್ ಮಾಡುವದಲ್ಲದೇ ಮನುಷ್ಯನು ಮನುಷ್ಯನಂತೆ ಬದುಕುವ ನಿಟ್ಟಿನಲ್ಲಿ ಕ್ರಮ ವಹಿಸುವ ಉದ್ದೇಶವಿರುತ್ತದೆ.  
ಗಂಗಾವತಿ ನಗರ ವಸತಿ ರಹಿತರಿಗೆ ಆಶ್ರಯ ಕೇಂದ್ರವನ್ನು ಫೆಬ್ರವರಿ. 23 ರಂದು ನಗರದ ತಹಶೀಲ್ದಾರರ ಹಳೇ ಕಟ್ಟಡದಲ್ಲಿ, ಹಳೆ ಐ.ಬಿ ಹತ್ತಿರ ಗಂಗಾವತಿಯಲ್ಲಿ ಸ್ಥಾಪಿಸಲಾಗಿದೆ.  ಈ ಆಶ್ರಯ ಕೇಂದ್ರದಲ್ಲಿ ವಾಸಕ್ಕೆ ಯೋಗ್ಯವಾದ ಮೂಲಭೂತ ಸೌಕರ್ಯಗಳೊಂದಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೆಕವಾದ ವ್ಯವಸ್ಥೆ ಕಲ್ಪಿಸಲಾಗಿದೆ.  ಗಂಗಾವತಿ ನಗರ ವ್ಯಾಪ್ತಿಯಲ್ಲಿ ನಿರ್ಗತಿಕ/ ವಸತಿ ರಹಿತರು ಬೀದಿ ಬದಿಯಲ್ಲಿ/ ಜಗುಲಿಯಲ್ಲಿ/ ಸಾರ್ವಜನಿಕ ಸ್ಥಳಗಳಲ್ಲಿ ಮುಂತಾದ ಸ್ಥಳಗಳಲ್ಲಿ ಕಂಡುಬಂದಲ್ಲಿ 24*7 ಸಹಾಯವಾಣಿ ಸಂಖ್ಯೆ 08533-230011 ಕ್ಕೆ ಕರೆ ಮಾಡಬಹುದಾಗಿದೆ ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಗ್ಯ ಶಿಕ್ಷಣ ವಾಹನ ಹಾಗೂ ಅಂಬ್ಯುಲೈನ್ಸ್ ವಾಹನಕ್ಕೆ ಸಿಇಓ ಚಾಲನೆ



ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಶಿಕ್ಷಣ ವಾಹನ ಹಾಗೂ ಅಂಬ್ಯುಲೈನ್ಸ್ ವಾಹನಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.   

ಆರೋಗ್ಯ ಶಿಕ್ಷಣ ವಾಹನ ಹಾಗೂ ಅಂಬ್ಯುಲೈನ್ಸ್ ವಾಹನಕ್ಕೆ ಚಾಲನೆ ನೀಡಿದ ಕೊಪ್ಪಳ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಲವು ಯೋಜನೆಗಳ ಮಾಹಿತಿಯನ್ನು ಹಾಗೂ ಸಾಂಕ್ರಾಮಿಕ ರೋಗ , ಅಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಉಪಯೋಗಿಸಿಕೊಂಡು ಜಿಲ್ಲೆಯ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವಂತೆ ಕ್ರಮ ಕೈಗೊಳ್ಳಿ.  ಕುಷ್ಠಗಿ ತಾಲೂಕಿನ ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂಬ್ಯುಲೈನ್ಸ್ ನೀಡಿದ್ದು ಆ ಭಾಗದ ಜನರಿಗೆ ತುರ್ತು ಚಿಕಿತ್ಸೆಗಾಗಿ ಮೇಲ್ಮಟ್ಟದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಹಳಷ್ಟು ಅನುಕೂಲವಾಗಲಿದೆ ಎಂದರು.  

ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ಹೆಚ್., ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಜಂಬಯ್ಯ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ಕಛೇರಿ ಅಧೀಕ್ಷ ಚಂದ್ರಶೇಖರ ಅಣ್ಣಿಗೇರಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಇದೇ ಸಂದರ್ಭದಲ್ಲಿ ಹಾಜರಿದ್ದರು.

ಮಾ. 22 ರಂದು ಕೊಪ್ಪಳದಲ್ಲಿ ದೇವರ ದಾಸಿಮಯ್ಯ ಜಯಂತಿ


ಕೊಪ್ಪಳ ಮಾ. 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ಮಾ. 22 ರಂದು ಬೆಳ್ಳಿಗ್ಗೆ 10-30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
    ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್ ಪಾಲ್ಗೊಳ್ಳುವರು.  ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವಾಸುದೇವ ಬಡಿಗೇರ ಅವರು ದೇವರ ದಾಸಿಮಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 8-30 ಗಂಟೆಗೆ ದೇವರ ದಾಸಿಮಯ್ಯನವರ ಭಾವಚಿತ್ರದ ಮೆರವಣಿಗೆ ಗದಗ ರಸ್ತೆಯ ಗೌರಿ ಶಂಕರ ದೇವಸ್ಥಾನದಿಂದ ಪ್ರಾರಂಭಗೊಂಡು, ಕೊಪ್ಪಳದ ಬಸ್ ನಿಲ್ದಾಣದ ಮಾರ್ಗವಾಗಿ ನಗರದ ಮುಖ್ಯ ರಸ್ತೆಯ ಮೂಲಕ ಸಾಹಿತ್ಯ ಭವನದ ವರೆಗೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.  

Tuesday, 20 March 2018

ವಚನಗಳು, ದಾಸ ಸಾಹಿತ್ಯ, ಜಾನಪದ ಕನ್ನಡವನ್ನು ಉಳಿಸಿ ಬೆಳೆಸಿವೆ- ಬಸವರಾಜ ರಾಯರಡ್ಡಿ



ಕೊಪ್ಪಳ ಮಾ. 20 (ಕರ್ನಾಟಕ ವಾರ್ತೆ): ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಶರಣರ ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯಗಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ಅಳವಂಡಿ ಗ್ರಾಮದ ಸಿದ್ದೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಮಂಗಳವಾರದಂದು ಏರ್ಪಡಿಸಲಾದ ಎರಡು ದಿನಗಳ ಕೊಪ್ಪಳ ಜಿಲ್ಲಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಕನ್ನಡ ಭಾಷೆ, ಆಚಾರ-ವಿಚಾರಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.  ಇದಕ್ಕಾಗಿಯೇ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ.  ಕನ್ನಡದಲ್ಲಿ ಶಬ್ಧ ಭಂಡಾರವೇ ತುಂಬಿದ್ದು, ಸಾಹಿತ್ಯ, ವಿಜ್ಞಾನ, ವೈದ್ಯಕೀಯ ಹೀಗೆ ಅನೇಕ ಕ್ಷೇತ್ರಗಳಲ್ಲಿ ಕನ್ನಡ ಭಾಷೆ ಶ್ರೀಮಂತವಾಗಿದೆ.  ಇಂಗ್ಲೀಷ್ ಭಾಷೆ ಕನ್ನಡ ಭಾಷೆಯಷ್ಟು ಹಳೆಯದಲ್ಲವಾದರೂ, ಜಾಗತಿಕವಾಗಿ ಅದರ ಚಿಂತಕರು, ಸಾಹಿತಿಗಳು ಭಾಷೆಯನ್ನು ದೊಡ್ಡಮಟ್ಟದಲ್ಲಿ ಬೆಳೆಸಲು ಕೈಗೊಂಡ ಕ್ರಮದಿಂದಾಗಿ ವ್ಯಾಪಕವಾಗಿದೆ.  ಕದಂಬದಿಂದ ಪ್ರಾರಂಭಗೊಂಡ ಕನ್ನಡ ರಾಜಮನೆತನಗಳು, ಹೊಯ್ಸಳರು, ರಾಷ್ಟ್ರಕೂಟರು ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ.  ಇತಿಹಾಸ ಹೇಳುವಂತೆ ಗೋದಾವರಿಯಿಂದ ಕಾವೇರಿಯವರೆಗೂ ಕನ್ನಡ ಭಾಷೆ ವ್ಯಾಪಿಸಿತ್ತು.  ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಶರಣ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹೆಚ್ಚು ಪರಿಣಾಮಕಾರಿಯಾಗಿ ಪಾತ್ರ ವಹಿಸಿವೆ.  ಶರಣ ಸಾಹಿತ್ಯ, ವಚನ ಸಾಹಿತ್ಯ ಮೂಢನಂಬಿಕೆ, ಅಸ್ಪøಷ್ಯತೆ, ಮೌಢ್ಯತೆ ಜಾತಿ-ಭೇದವನ್ನು ತೊಡೆದುಹಾಕುವಲ್ಲಿ ಪ್ರಮುಖ ಕಾಣಿಕೆ ನೀಡಿವೆ.  ರಾಜಮನೆತನಗಳ ಕಾಲದಲ್ಲಿ ಶ್ರೀಮಂತವಾಗಿದ್ದ ಕನ್ನಡ ಭಾಷೆ ಹಾಗೂ ಇತರೆ ಸ್ಥಳೀಯ ಭಾಷೆಗಳು, ನಂತರದ ದಿನಗಳಲ್ಲಿ ಭಾರತದಲ್ಲಿ ವಿದೇಶಿಗರ ಆಡಳಿತ, ಮುಸ್ಲಿಂ ದೊರೆಗಳ ಆಳ್ವಿಕೆಯ ಪ್ರಭಾವಕ್ಕೆ ಒಳಗಾಗಿ, ಬೆಳವಣಿಗೆಯಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಯಿತು.  ನಗರೀಕರಣ, ಪಾಶ್ಚಾತ್ಯ ಸಂಸ್ಕøತಿಯತ್ತ ಆಕರ್ಷಣೆಯಿಂದಾಗಿ ಇಂಗ್ಲೀಷ್ ವ್ಯಾಮೋಹಕ್ಕೆ ಇಂದಿನ ಜನರು ಹಾಗೂ ಯುವ ಪೀಳಿಗೆ ಒಳಗಾಗಿದೆ.  ಹೀಗಾಗಿ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಕುತ್ತು ಬಂದಿದೆ.  ಕನ್ನಡ ಭಾಷೆಯ ಬಗ್ಗೆ ಕೀಳರಿಮೆಯನ್ನು ಕನ್ನಡಿಗರು ಮೊದಲು ತೊರೆಯಬೇಕು.  ಆದರೆ ಇದರ ಅರ್ಥ ಬೇರೆ ಭಾಷೆಯನ್ನು ಕಲಿಯಬೇಡಿ ಎಂದಲ್ಲ, ಕನ್ನಡದ ಬಗ್ಗೆ ಅಭಿಮಾನ ಹಾಗೂ ಒಲವು ಬೇಕು, ಜೊತೆಗೆ ಜ್ಞಾನಾರ್ಜನೆಯೂ ಬೇಕು.  ಇದಕ್ಕಾಗಿ ಕೀಳರಿಮೆಯ ಅಗತ್ಯವಿಲ್ಲ.  ಮನುಕುಲದ ಸುಧಾರಣೆಗೆ ಅನೇಕ ಸಾಹಿತಿಗಳು ಶ್ರಮಿಸಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿರುವ ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ.  1920 ರ ನಂತರದ ವರ್ಷಗಳಲ್ಲಿ ಕನ್ನಡ ಭಾಷೆಯ ಕುರಿತು ಅನೇಕ ಸಾಹಿತಿಗಳು ಆಳವಾದ ಅಧ್ಯಯನ ಕೈಗೊಂಡ ಪರಿಣಾಮವಾಗಿ ಕನ್ನಡ ಭಾಷೆಯ ಸಾಹಿತಿ, ಲೇಖಕರಿಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರೆಯಲು ಕಾರಣವಾಯಿತು.  ಈಗಲೂ ಅನೇಕ ಸಾಹಿತಿಗಳು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವಲ್ಲಿ ನಿರತರಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕನ್ನಡ ಭಾಷೆಯಲ್ಲಿರುವ ಮಾನವ ಬಾಂಧವ್ಯಗಳು ಹೆಚ್ಚು ಅರ್ಥಗರ್ಭಿತವಾಗಿವೆ.  ಕನ್ನಡ ಭಾಷೆಯ ಬೆಳವಣಿಗೆಗೆ ಸಾಹಿತ್ಯ ಸಮ್ಮೇಳನಗಳು ತಮ್ಮದೇ ಆದ ಕೊಡುಗೆಯನ್ನು ನೀಡಿವೆ ಎಂದರಲ್ಲದೆ,  ಜಿಲ್ಲಾ ಮಟ್ಟದ ಕನ್ನಡ ಸಮ್ಮೇಳನವನ್ನು ಅಳವಂಡಿ ಗ್ರಾಮದಲ್ಲಿ ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
     ಕೊಪ್ಪಳ ಜಿಲ್ಲಾ ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯದ(ಅಮರಕಂಟಕ, ಮಧ್ಯಪ್ರದೇಶ) ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ, ಸಂಸ್ಥಾನ ಕಟ್ಟಿಮನಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ತಾಲೂಕಾ ಪಂಚಾಯತಿ ಅಧ್ಯಕ್ಷ ಬಾಲಚಂದ್ರನ್, ಸೇರಿದಂತೆ ಕಸಾಪ ತಾಲೂಕು ಘಟಕಗಳ ಅಧ್ಯಕ್ಷರು, ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು, ಅಳವಂಡಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು ಉಪಸ್ಥಿತರಿದ್ದರು. 
     ಕೇಂದ್ರ ಸಂಘ ಸಂಸ್ಥೆಯ ಪ್ರತಿನಿಧಿ ಶೇಖರಗೌಡ ಮಾಲಿಪಾಟೀಲ ಸ್ವಾಗತಿಸಿದರು.  ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ ಪ್ರಾಸ್ತಾವಿಕ ಭಾಷಣ ಮಾಡಿದರು.  ಲಿಂಗಾರೆಡ್ಡಿ ಆಲೂರ ಅವರು ನಿರೂಪಿಸಿದರು.  ಸದಾಶಿವಪಾಟೀಲ್ ತಂಡ ನಾಡಗೀತೆ ಮತ್ತು ರೈತಗೀತೆಯನ್ನು ಪ್ರಸ್ತುತಪಡಿಸಿದರು.  ಸಮಾರಂಭಕ್ಕೂ ಪೂರ್ವದಲ್ಲಿ ವಿವಿಧ ಕಲಾತಂಡಗಳನ್ನು ಒಳಗೊಂಡ ಅದ್ಧೂರಿ ಮೆರವಣಿಗೆ ಗ್ರಾಮದ ಬನ್ನಿಕಟ್ಟೆಯಿಂದ ಆರಂಭಗೊಂಡು, ರಥ ಬೀದಿಯ ಮೂಲಕ ಸಮ್ಮೇಳನದ ಆವರಣವರೆಗೆ ಸಾಗಿ ಬಂದಿತು.

ಮಹಿಳೆಯರು ಶಿಕ್ಷಣ ಪಡೆಯಲು ಮುಂದಾಗಬೇಕು : ರಾಜಶೇಖರ್ ಹಿಟ್ನಾಳ



ಕೊಪ್ಪಳ. ಮಾ.20. (ಕರ್ನಾಟಕ ವಾರ್ತೆ) ಮಹಿಳೆಯರು ಶಿಕ್ಷಣವಂತರಾದರೆ ಮಾತ್ರ ಮುಖ್ಯವಾಹಿನಿಗೆ ಬರಲು ಮತ್ತು ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಮಹಿಳಾ ಸಂಘ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಸಂವಿಧಾನದ ಎಲ್ಲಾ ರೀತಿಯ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಮಹಿಳೆಯರು ಹೆಚ್ಚು ಸಫಲತೆಯನ್ನು ಕಂಡಿಲ್ಲ. ಏಕೆಂದರೆ ಮಹಿಳೆಯರು   ಶಿಕ್ಷಣದಿಂದ ವಂಚಿತರಾಗುತ್ತಿರುವುದು, ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ.   ಒಂದು ಹೆಣ್ಣು ಒಂದು ಗಂಡು ಹೀಗೆ ಎರಡು ಮಕ್ಕಳಿದ್ದರೆ, ಗಂಡು ಮಗುವನ್ನು ಡಾಕ್ಟರ್, ಇಂಜಿನೀಯರಿಂಗ್ ಓದಿಸುತ್ತೇವೆ, ಆದರೆ ಹೆಣ್ಣು ಮಗುವನ್ನು ಕೇವಲ ಎಸ್‍ಎಸ್‍ಎಲ್‍ಸಿ, ಪಿಯುಸಿಗೆ ಶಿಕ್ಷಣವನ್ನು ಮೊಟಕುಗೊಳಿಸಿಬಿಡುತ್ತೇವೆ ಹೀಗಾಗಿ ಹೆಣ್ಣುಮಕ್ಕಳು ಶಿಕ್ಷಣವಂತರಾಗದೆ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ರಾಜ್ಯ ಸರಕಾರ ಇದನ್ನೆಲ್ಲ ಮನಗಂಡು ಇನ್ನು ಮುಂದೆ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅವರಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ಮಹಿಳೆಯರಿಗೆ ಶೇ, 50 ರಷ್ಟು ಮೀಸಲಾತಿ ಹೆಚ್ಚಿಸಿ ಮಹಿಳೆಯರಿಗೆ ಹೆಚ್ಚಿನ ಆಧ್ಯತೆಯನ್ನು ನೀಡಿದೆ.   ಹೀಗಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸಿ ತಮಗೆ ಸಿಗುವಂತಹ ಸವಲತ್ತುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಾಜಶೇಖರ ಹಿಟ್ನಾಳ ಹೇಳಿದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಪ್ರಾಸ್ತಾವಿಕವಾಗಿ ಮಾತನಾಡಿ. ಮಹಿಳೆಯರು ಔದ್ಯೋಗಿಕರಣದ ಈ ಯುಗದಲ್ಲಿ ಉದ್ಯೋಗ ಮಾಡಲು ಅವಕಾಶ ಇರಲಾರದಂತಹ ಕಾಲದಲ್ಲಿ ಅನಿವಾರ್ಯವಾಗಿ ಹೋರಾಟಕ್ಕಿಳಿಯ ಬೇಕಾಯಿತು. ಆ ಹೋರಾಟದ ಫಲವಾಗಿ 1910 ಮಾರ್ಚ್ 8 ರಂದು ಸ್ತ್ರೀಯರಿಗೆ ಉದ್ಯೋಗ ಮಾಡಲು ಅವಕಾಶ ಸಿಕ್ಕಿತು ಆ ಕಾರಣದಿಂದಲೇ ವಿಶ್ವ ಮಹಿಳೆಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೆ, ಎಲ್ಲಾ ರಂಗದಲ್ಲೂ ಸೇವೆ ಸಲ್ಲಿಸಲು ಪಣ ತೋಡಬೇಕಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿರಬೇಕು ಎಂದರು.
  ವಕೀಲರಾದ ಗೌರಮ್ಮ ದೇಸಾಯಿ ಮತ್ತು ಕಾಳಮ್ಮ ಪತ್ತಾರ ಇವರು ಮಹಿಳೆಯರ ಹಕ್ಕುಗಳು ಮತ್ತು ಕಾನೂನು ಹಾಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕುರಿತು ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ಚುಟುಕು ಕವನ ವಾಚನ ಮತ್ತು ವಿಚಾರ ಸಂಕೀರಣ, ನೃತ್ಯ, ಗಾಯನ ಸ್ಪರ್ಧೆ ನಡೆಯಿತು.
ಅತಿಥಿಗಳಾಗಿ ಹೇಮಲತ, ಜಯಶ್ರೀ, ಕೋಮಲ ಕುದುರಿಮೋತಿ, ಮಂಜುನಾಥ ಹಡಪದ, ವಿಠ್ಠಪ್ಪ ಗೋರಂಟ್ಲಿ, ಅನ್ನಪೂರ್ಣಮ್ಮ, ಶಿವಶಂಕರ್ ಹಾಲಕುರ್ಕಿ, ಪ್ರೇಮಾ, ಕಲಾವತಿ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
  ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಅಂಗನವಾಡಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಕಾರ್ಯಕರ್ತೆಯರಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕೊಪ್ಪಳದಲ್ಲಿ ಮುಖ್ಯಮಂತ್ರಿಗಳಿಂದ ಬಸವೇಶ್ವರರ ಪುತ್ಥಳಿ ಅನಾವರಣ ಪ್ರಜಾತಂತ್ರದ ಕಲ್ಪನೆ ಹುಟ್ಟುಹಾಕಿದವರು ಬಸವಣ್ಣನವರು - ಸಿ.ಎಂ. ಸಿದ್ದರಾಮಯ್ಯ


 ಕೊಪ್ಪಳ ಮಾ. 20 (ಕರ್ನಾಟಕ ವಾರ್ತೆ): ನಮ್ಮ ನಾಡಿನಲ್ಲಿ 850 ವರ್ಷಗಳ ಹಿಂದೆಯೇ ಬಸವಾದಿ ಶರಣರು, ಸಾಮಾಜಿಕ ಅವ್ಯವಸ್ಥೆ, ಸಾಮಾಜಿಕ, ಆರ್ಥಿಕ ಅಸಮಾನತೆ, ಕಂದಾಚಾರಗಳ ಬದಲಾವಣೆಗಾಗಿ 12ನೇ ಶತಮಾನದಲ್ಲಿ ದೊಡ್ಡ ಕ್ರಾಂತಿ ಮಾಡಿದರು. ಪ್ರಜಾತಂತ್ರದ ಕಲ್ಪನೆಯನ್ನು ಹುಟ್ಟುಹಾಕಿದವರು ಬಸವಣ್ಣನವರು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರ
 
     ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
 
     ಹನ್ನೆರಡನೆ ಶತಮಾನದಲ್ಲಿ ಬಸವಾದಿ ಶರಣರು ನಮ್ಮ ಸಾಮಾಜಿಕ ಅವ್ಯವಸ್ಥೆ, ಅಸಮಾನತೆ, ಆರ್ಥಿಕ ಅಸಮಾನತೆ, ಮೌಢ್ಯ ಕಂದಾಚಾರಗಳನ್ನು ತೊಡೆದುಹಾಕಿ ವ್ಯವಸ್ಥೆಯ ಬದಲಾವಣೆ ಸಲುವಾಗಿ ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದರು.   
ಶ್ರೀಮಂತ, ಬಡವ, ಮೇಲ್ಜಾತಿ, ಕೆಳಜಾತಿ, ಪುರುಷ ಮಹಿಳೆ ಎಂಬ ದೊಡ್ಡ ಕಂದಕ ಏರ್ಪಟ್ಟಿತ್ತು.  ಈ ಕಂದಕ ತೊಡೆದುಹಾಕಿ, ಸಾಮಾಜಿಕ ಸಮಾನತೆ ನಿರ್ಮಾಣಗೊಂಡರೆ ಮನುಕುಲ ಉದ್ಧಾರವಾದೀತು.  ಧರ್ಮ, ಜಾತಿ ಹೆಸರಿನಲ್ಲಿ ಮನುಷ್ಯರನ್ನು ವಿಭಜನೆ ಮಾಡಬಾರದು.  ಮನುಕುಲ ಎಂದರೆ ಎಲ್ಲರೂ ಒಂದೆ ಎಂಬುದಾಗಿದೆ.  ಮೊದಲು ನಾವೆಲ್ಲರೂ ಮಾನವರು.  ನಂತರ ಬರುವುದು ನಾವು ನಂಬಿಕೊಂಡಿರುವ ಜಾತಿ.  ಬಸವಣ್ಣನವರು ಶ್ರೇಣಿಕೃತ ವ್ಯವಸ್ಥೆಯನ್ನು ಖಂಡಿಸಿ ಅನುಭವ ಮಂಟಪ ರಚಿಸಿದರು. ಎಲ್ಲ ವರ್ಗದವರು ಸಮಾನರಾಗಿ ಕುಳಿತುಕೊಳ್ಳಬೇಕೆ ಹೊರತು, ಒಬ್ಬರು ಇನ್ನೊಬ್ಬರ ಮೇಲೆ ಕುಳಿತುಕೊಳ್ಳಲು ಬಯಸುವುದಲ್ಲ.   ಸಮಾಜದಲ್ಲಿ ಶ್ರಮವಹಿಸಿ ದುಡಿಯುವುದು ಒಂದು ವರ್ಗವಾದರೆ,  ಬೆವರು ಸುರಿಸದೆ ಕುಳಿತು ತಿನ್ನುವುದು ಇನ್ನೊಂದು ವರ್ಗ. ಇದನ್ನ ಹೋಗಲಾಡಿಸಲು ಬಸವೇಶ್ವರರು ಶ್ರಮಿಸಿದರು.  ಪ್ರತಿಭೆ ಆಧಾರದಲ್ಲಿ ಮನುಷ್ಯನನ್ನು ಅಳೆಯಬೇಕೇ ಹೊರತು ಜಾತಿಯಿಂದಲ್ಲ. ಪ್ರತಿಯೊಬ್ಬರು ದುಡಿಯಬೇಕು. ಬಳಿಕ ಸಮನಾಗಿ ಹಂಚಿಕೊಳ್ಳಬೇಕು. ಇದೇ ಕಾಯಕ ಹಾಗೂ ದಾಸೋಹ ಕಲ್ಪನೆ.    ಶೋಷಣೆಗೆ ಒಳಗಾದ, ಅವಕಾಶದಿಂದ ವಂಚಿತರಾದ ಜನ ಸದಾ ಈ ಸಂದೇಶವನ್ನು ಜೀವಂತವಾಗಿಡಬೇಕು.   ಅದಕ್ಕಾಗಿ ಇಂತಹ ಮೂರ್ತಿ ಪ್ರೇರಣೆ ನೀಡಲಿ ಎಂಬ ಕಾರಣಕ್ಕೆ ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

     ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳನ್ನು ಚಾಲನೆಗೊಳಿಸಲಾಗಿದ್ದು, ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಲಾಗಿದೆ.  ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಇಚ್ಛಾಶಕ್ತಿಯ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಯೋಜನೆಗಳು ಕ್ಷೇತ್ರದಲ್ಲಿ ಜಾರಿಗೆ ಬಂದಿವೆ.  ಬಹದ್ದೂರಬಂಡಿ ಏತ ನೀರಾವರಿ ಯೋಜನೆಗೆ ಮೊದಲ ಹಂತದಲ್ಲಿ 80 ಕೋಟಿ ರೂ. ಗಳ ಅನುದಾನವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

     ಇದೇ ಸಂದರ್ಭದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಮೊದಲನೆ ಹಂತದಲ್ಲಿ ಬಹದ್ದೂರ ಬಂಡಿ ಏತ ನೀರಾವರಿ ಯೋಜನೆ, 35 ಕೋಟಿ ರೂ. ವೆಚ್ಚದಲ್ಲಿ ಬಸಾಪುರ ಬಳಿ ಕೈಗಾರಿಕಾ ಪ್ರದೇಶ ಸ್ಥಾಪನೆ, ಕೊಪ್ಪಳ ನಗರದಲ್ಲಿ 29. 75 ಕೋಟಿ ರೂ. ವೆಚ್ಚದಲ್ಲಿ ನಗರೋತ್ಥಾನ ಯೋಜನೆಯ 3 ನೇ ಹಂತದ ಕಾಮಗಾರಿಗಳು, ಭೂ ಒಡೆತನ ಯೋಜನೆಯಡಿ 8. 89 ಕೋಟಿ ರೂ. ವೆಚ್ಚದಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಪಹಣಿ ಪತ್ರ ವಿತರಣೆ, ಭಾಗ್ಯನಗರದಲ್ಲಿ 4. 25 ಕೋಟಿ ರೂ. ವೆಚ್ಚದಲ್ಲಿ ನಗರೋತ್ಥಾನ 3 ನೇ ಹಂತದ ಕಾಮಗಾರಿಗಳು,  ಕೊಪ್ಪಳ ನಗರದಲ್ಲಿ 4. 11 ಕೋಟಿ ರೂ. ವೆಚ್ಚದಲ್ಲಿ ನಗರೋತ್ಥಾನ 2 ನೇ ಹಂತದ ಡಿಸ್ಕೋಪ್ ಕಾಮಗಾರಿಗಳು, 3 ಕೋಟಿ ರೂ. ವೆಚ್ಚದಲ್ಲಿ ಕೊಪ್ಪಳ ನಗರದಲ್ಲಿ ಗಾಂಧಿಭವನ ನಿರ್ಮಾಣ ಕಾಮಗಾರಿ, ಕೊಪ್ಪಳ ನಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಗರೋತ್ಥಾನ (ಗುಲಬರ್ಗಾ ಕ್ಯಾಬಿನೆಟ್) ಕಾಮಗಾರಿಗಳು, 2 ಕೋಟಿ ರೂ. ವೆಚ್ಚದಲ್ಲಿ ಕೊಪ್ಪಳದಲ್ಲಿ ಹಜರತ್ ಮರ್ದಾನೆಗೈಬ್ ದರ್ಗಾ ಬಳಿ ಶಾದಿಮಹಲ್, 1. 50 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನ, 1 ಕೋಟಿ ರೂ. ವೆಚ್ಚದಲ್ಲಿ ಕೊಪ್ಪಳ ನಗರದಲ್ಲಿ ಮೌಲಾನಾ ಆಝಾದ್ ಭವನ, 20 ಲಕ್ಷ ರೂ. ವೆಚ್ಚದಲ್ಲಿ ಕೊಪ್ಪಳದಲ್ಲಿ ಜಿಲ್ಲಾ ಗಾಣಿಗೇರ ಸಮುದಾಯ ಭವನ, 50 ಲಕ್ಷ ರೂ. ವೆಚ್ಚದಲ್ಲಿ ಕೊಪ್ಪಳದಲ್ಲಿ ಕನಕ ಭವನ, 25 ಲಕ್ಷ ರೂ. ವೆಚ್ಚದಲ್ಲಿ ಕೊಪ್ಪಳ ಕಾಳಿದಾಸ ಶಿಕ್ಷಣ ಸಂಸ್ಥೆ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದರು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳದಲ್ಲಿ 36 ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಕನಕದಾಸರ ಪುತ್ಥಳಿಯನ್ನು ಕೂಡ ಪ್ರತಿಷ್ಠಾಪಿಸಲಾಗುವುದು.  ಕೊಪ್ಪಳ ಕ್ಷೇತ್ರದಲ್ಲಿ ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆ ಜಾರಿಗೊಳಿಸಿರುವ ನಮ್ಮ ಸರ್ಕಾರ ಇದೀಗ ಬಹದ್ದೂರಬಂಡಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದಿ, ಒಟ್ಟಾರೆ ಸುಮಾರು 24 ಸಾವಿರ ಎಕರೆ ಭೂಮಿಗೆ ನೀರಾವರಿ ಕಲ್ಪಿಸಲಾಗುತ್ತಿದೆ ಎಂದರು.
     ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಬಳಗಾನೂರು ಶಿವಶಾಂತವೀರ ಮಹಾಸ್ವಾಮಿಗಳು, ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿ ಬಸವರಾಜ ರಾಯರಡ್ಡಿ, ಕನಕಗಿರಿ ಶಾಸಕ ಶಿವರಾಜ ತಂಗಡಗಿ, ವಿಧಾನಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ, ಮಾಜಿ ಶಾಸಕರುಗಳಾದ ಅಮರೇಗೌಡ ಬಯ್ಯಾಪುರ, ಬಸವರಾಜ ಹಿಟ್ನಾಳ ಮುಂತಾದ ಗಣ್ಯರು ಉಪಸ್ಥಿತರಿದ್ದರು. 
ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವೆಂಕಟ್‍ ರಾಜಾ ಸಮಾರಂಭದಲ್ಲಿ ಭಾಗವಹಿಸಿದ್ದರು.