Friday, 16 February 2018

ಪರಿಸರ ರಕ್ಷಿಸದಿದ್ದಲ್ಲಿ ಜೀವ ಸಂಕುಲಕ್ಕೆ ಉಳಿವಿಲ್ಲ- ಡಾ. ಭಾಗ್ಯಜ್ಯೋತಿಕೊಪ್ಪಳ, ಫೆ.16 (ಕರ್ನಾಟಕ ವಾರ್ತೆ): ಪರಿಸರ ಮಾಲಿನ್ಯದಿಂದಾಗಿ ಹಲವು ಬಗೆಯ ವೈಪರಿತ್ಯಗಳು ಜರುಗುತ್ತಿದ್ದು, ಪರಿಸರವನ್ನು ಸಂರಕ್ಷಿಸಿಸದಿದ್ದಲ್ಲಿ, ಜೀವ ಸಂಕುಲಕ್ಕೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಭಾಗ್ಯಜ್ಯೋತಿ ಅವರು ಹೇಳಿದರು.

     ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಬೇವೂರಿನ ಕೂಡಲಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ರಾಜ್ಯ ಸರ್ಕಾರಿ ನೌಕರರ ಸಾಂಸ್ಕøತಿಕ ಭವನದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಜಿಲ್ಲಾ ಪರಿಸರ ಮಿತ್ರ ಶಾಲೆ 2017-18 ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ, ಅವರು ಮಾತನಾಡಿದರು.

     ನಾವು ವಾಸಿಸುತ್ತಿರುವ ಭೂಮಿ ಸೃಷ್ಟಿಯಾದ ನಂತರ, ಈ ಗ್ರಹದಲ್ಲಿ ಪರಿಸರ ಸೃಷ್ಟಿಗೊಳ್ಳಲು ಸುಮಾರು 450 ರಿಂದ 500 ವರ್ಷಗಳ ಸುದೀರ್ಘ ಅವಧಿ ಬೇಕಾಯಿತು.  ಪರಿಸರ ಸೃಷ್ಟಿಯ ಜೊತೆಗೆ, ಜೀವ ಸಂಕುಲವು ವಿಕಸನಗೊಂಡಿದೆ.  ಪ್ರಾಣಿ, ಪಕ್ಷಿಗಳು ಹಾಗೂ ಮಾನವನಿಗೆ ನೆಲೆಯಾಗಿರುವ ಭೂಮಿಯಲ್ಲಿ, ಜನಸಂಖ್ಯೆಯ ಹೆಚ್ಚಳ ಹಾಗೂ ಪರಿಸರದ ನಾಶದ ದುಷ್ಪರಿಣಾಮ ಗೋಚರಿಸಲು ಆರಂಭವಾಗಿದೆ.  ಜಾಗತೀಕರಣ, ಕೈಗಾರಿಕೆಗಳ ಹೆಚ್ಚಳ, ಅರಣ್ಯ ನಾಶ, ಕೃಷಿ ಭೂಮಿಯ ಪರಿವರ್ತನೆ ಹೀಗೆ ಅನೇಕ ಕಾರಣಗಳಿಂದ ಪರಿಸರ ಹಾಳಾಗುತ್ತಿದೆ.  ಜನಸಂಖ್ಯಾ ಹೆಚ್ಚಳದ ಪ್ರಮಾಣವನ್ನು ಕಡಿಮೆಗೊಳಿಸುವುದರಿಂದ ಪರಿಸರ ರಕ್ಷಣೆಗೆ ಸಹಕಾರಿಯಾಗಲಿದೆ.  ಹೆಚ್ಚು, ಹೆಚ್ಚು ಗಿಡಗಳನ್ನು ಬೆಳೆಸುವುದು ಹಾಗೂ ನಮ್ಮ ಸುತ್ತ ಮುತ್ತಲ ಪರಿಸರವನ್ನು ನೈರ್ಮಲ್ಯವಾಗಿಸಿಕೊಳ್ಳುವುದು ಎಲ್ಲ ಸಾರ್ವಜನಿಕರ ಕರ್ತವ್ಯವಾಗಬೇಕು.  ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಹಾಗೂ ಪರಿಸರ ರಕ್ಷಣೆ ವಿಷಯದ ಕುರಿತು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡುವಂತಾಗಬೇಕು ಎಂದು ಡಾ. ಭಾಗ್ಯಜ್ಯೋತಿ ಅವರು ಹೇಳಿದರು.
     ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಮಾತನಾಡಿ,  ಪರಿಸರ ಹಾಗೂ ಪೃಕೃತಿ ಎರಡೂ ಒಂದಕ್ಕೊಂದು ಅವಲಂಬಿತವಾಗಿವೆ.  ಪರಿಸರ ರಕ್ಷಿಸಿದಲ್ಲಿ, ಪ್ರಕೃತಿಯೂ ಒಲಿಯಲು ಸಾಧ್ಯ,  ಪರಿಸರ ಹಾಳಾದಲ್ಲಿ, ಪೃಕೃತಿಯೂ ಮುನಿದು, ಜನರ ಮೇಲೆ ದುಷ್ಪರಿಣಾಮ ಬೀರಲು ಕಾರಣವಾಗುತ್ತದೆ.  ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ‘ಇದು ನಮ್ಮ ಶಾಲೆ ಎನ್ನುವ’ ಪ್ರೀತಿಯ ಜೊತೆಗೆ ಅಭಿಮಾನವೂ ಮೂಡಬೇಕು.  ಪರಿಸರದ ರಕ್ಷಣೆ ಕುರಿತು ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಲು ಶಿಕ್ಷಕರು ಮುಂದಾಗಬೇಕು.  ಕಲೆ, ಸಾಹಿತ್ಯ, ನೃತ್ಯ, ಸಂಗೀತದಂತಹ ಸೃಜನಶೀಲ ಚಟುವಟಿಕೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ಪರಿಸರ ಸ್ವಚ್ಛಗೊಳಿಸುವಂತಹ ಚಟುವಟಿಕೆಗಳನ್ನು ಶಾಲಾ ಹಂತದಲ್ಲಿ ಹೆಚ್ಚು ಹಮ್ಮಿಕೊಳ್ಳಬೇಕು. ಶಾಲೆಯಲ್ಲಿ ಹೆಚ್ಚು, ಹೆಚ್ಚು ಗಿಡಗಳನ್ನು ನೆಟ್ಟು, ಶಾಲೆಯ ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡಿರುವ ಶಾಲೆಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಶಾಲೆ, ಪರಿಸರ ಮಿತ್ರ ಶಾಲೆ, ಹಳದಿ ಶಾಲೆ ಎನ್ನುವ ಪ್ರಶಸ್ತಿಯನ್ನು ನೀಡಿ ಪ್ರೊತ್ಸಾಹ ನೀಡುತ್ತಿರುವುದು ಸ್ವಾಗತಾರ್ಹವಾಗಿದೆ.  ಪರಿಸರ ಸಂರಕ್ಷಣೆ ವಿಚಾರದಲ್ಲಿ ಶಾಲೆಗಳ ನಡುವೆ ಆರೋಗ್ಯಯುತ ಸ್ಪರ್ಧೆ ಏರ್ಪಟ್ಟು, ಇಂತಹ ಪ್ರಶಸ್ತಿಯನ್ನು ಎಲ್ಲ ಶಾಲೆಗಳೂ ಪಡೆಯುವಂತಾಗಬೇಕು  ಎಂದರು.
      ಬಳ್ಳಾರಿಯ ಹಿರಿಯ ಪರಿಸರ ಅಧಿಕಾರಿ ಕೆ.ಎಂ. ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು.  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೆ.ಎಸ್. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಹಾಯಕ ಪರಿಸರ ಅಧಿಕಾರಿ ಹನುಮಂತಪ್ಪ ಸ್ವಾಗತಿಸಿದರು. 
     ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ ಗಂಗಾವತಿ ತಾಲೂಕು ಗುಡ್ಡದ ಕ್ಯಾಂಪ್‍ನ ಸರ್ಕಾರಿ ಕಿ.ಪ್ರಾ.ಶಾಲೆ ಪ್ರಸಕ್ತ ಸಾಲಿನ “ಜಿಲ್ಲಾ ಪರಿಸರ ಮಿತ್ರ ಶಾಲೆ” ಪ್ರಶಸ್ತಿಯ ಜೊತೆಗೆ ಒಟ್ಟು 35 ಸಾವಿರ ರೂ. ಬಹುಮಾನವನ್ನು ಸಮನಾಗಿ ಹಂಚಿಕೊಂಡವು. 
     ಹಸಿರು ಶಾಲೆ ಪ್ರಶಸ್ತಿ ಹಾಗೂ ತಲಾ 5 ಸಾವಿರ ರೂ. ಬಹುಮಾನ ಪಡೆದ ಶಾಲೆಗಳ ವಿವರ ಇಂತಿದೆ.  ಸರಸ್ವತಿ ವಿದ್ಯಾಮಂದಿರ ಹಿ.ಪ್ರಾ.ಶಾಲೆ, ಬಹದ್ದೂರಬಂಡಿ ರಸ್ತೆ, ಕೊಪ್ಪಳ.  ನ್ಯೂ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್, ಕೊಪ್ಪಳ, ಸರ್ಕಾರಿ ಹಿರಿಯ ಮಾದರಿ ಶಾಲೆ, ಹನುಮನಾಳ, ತಾ: ಕುಷ್ಟಗಿ.  ಕೂಡಲಸಂಗಮೇಶ್ವರ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ, ಬೇವೂರು, ತಾ: ಯಲಬುರ್ಗಾ.  ಸರ್ಕಾರಿ ಕಿ.ಪ್ರಾ.ಶಾಲೆ, ಉಪಲಾಪುರ, ತಾ: ಕೊಪ್ಪಳ.  ಸರ್ಕಾರಿ ಹಿ.ಪ್ರಾ.ಶಾಲೆ ಮಲ್ಲಿಗೆವಾಡ, ಕನಕಗಿರಿ.  ಸರ್ಕಾರಿ ಕಿ.ಪ್ರಾ.ಶಾಲೆ, ಹೊಸಮುದ್ಲಾಪುರ, ತಾ: ಕೊಪ್ಪಳ.  ಈಶ್ವರ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆ, ಇರಕಲ್ಲಗಡ, ತಾ: ಕೊಪ್ಪಳ.  ಮತ್ತು ಸರ್ಕಾರಿ ಹಿ.ಪ್ರಾ.ಶಾಲೆ, ಮುರಡಿ, ತಾ: ಯಲಬುರ್ಗಾ.
     ಹಳದಿ ಶಾಲೆ ಹಾಗೂ ತಲಾ 04 ಸಾವಿರ ರೂ. ಬಹುಮಾನ ಪಡೆದ ಶಾಲೆಗಳ ವಿವರ ಇಂತಿದೆ.  ಸರ್ಕಾರಿ ಹಿ.ಪ್ರಾ.ಶಾಲೆ, ಅಲ್ಲಾನಗರ, ತಾ: ಕೊಪ್ಪಳ.  ಸರ್ಕಾರಿ ಕಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ, ಬೆಣಕಲ್, ತಾ: ಯಲಬುರ್ಗಾ.  ಸರ್ಕಾರಿ ಕಿ.ಪ್ರಾ.ಶಾಲೆ, ಗುದ್ನೆಪ್ಪನಮಠ, ತಾ: ಯಲಬುರ್ಗಾ.  ಸರ್ಕಾರಿ ಕಿ.ಪ್ರಾ.ಶಾಲೆ, ಹೊಸಳ್ಳಿ, ತಾ: ಕೊಪ್ಪಳ.  ಸರ್ಕಾರಿ ಕಿ.ಪ್ರಾ.ಶಾಲೆ, ಮುರಡಿ, ತಾ: ಯಲಬುರ್ಗಾ.  ಸರ್ಕಾರಿ ಕಿ.ಪ್ರಾ.ಶಾಲೆ, ಅಗಳಕೇರಾ, ತಾ: ಕೊಪ್ಪಳ.  ಸರ್ಕಾರಿ ಹಿ.ಪ್ರಾ.ಶಾಲೆ, ವಟಪರವಿ, ತಾ: ಯಲಬುರ್ಗಾ.  ಸರ್ಕಾರಿ ಹಿ.ಪ್ರಾ.ಶಾಲೆ, ಗೆದಿಗೇರಿ, ತಾ: ಯಲಬುರ್ಗಾ.  ಸರ್ಕಾರಿ ಹಿ.ಪ್ರಾ.ಶಾ, ಬೂದಗುಂಪಾ, ತಾ: ಯಲಬುರ್ಗಾ.  ಮತ್ತು ಸರ್ಕಾರಿ ಮಾದರಿ ಹಿ.ಪ್ರಾ.ಶಾಲೆ, ಬೇವೂರು, ತಾ: ಯಲಬುರ್ಗಾ.
      ಪರಿಸರ ಮಿತ್ರ ಶಾಲೆ, ಹಸಿರು ಶಾಲೆ ಹಾಗೂ ಹಳದಿ ಶಾಲೆ ಪ್ರಶಸ್ತಿ ಪಡೆದ ಶಾಲೆಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಲಾಯಿತು.
Post a Comment