Thursday, 8 February 2018

ಅಧಿಕಾರಿಗಳಿಂದ ಕೆಲಸವಾಗದಿದ್ದಲ್ಲಿ, ಲೋಕಾಯುಕ್ತ ತನ್ನ ಕೆಲಸ ನಿರ್ವಹಿಸಲಿದೆ- ಪಿ. ವಿಶ್ವನಾಥ ಶೆಟ್ಟಿಕೊಪ್ಪಳ ಫೆ. 08 (ಕರ್ನಾಟಕ ವಾರ್ತೆ):ಸರ್ಕಾರಿ ಕೆಲಸವನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸದಿದ್ದಲ್ಲಿ, ಅದನ್ನು ಸರಿಪಡಿಸಲು ಲೋಕಾಯುಕ್ತ ತನ್ನ ಕಾರ್ಯ ಮಾಡಬೇಕಾಗುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುವ ಯೋಜನೆಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಏರ್ಪಡಿಸಲಾದ  ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಲೋಕಾಯುಕ್ತ ತನ್ನ ಕಾರ್ಯವನ್ನು ಮಾಡುತ್ತಿದೆ.  ಜಿಲ್ಲೆಗಳಿಗೆ ಭೇಟಿ ನೀಡಿ, ಸರ್ಕಾರಿ ಯೋಜನೆಗಳ ತಲುಪುವಿಕೆಯ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ.  ಈಗಾಗಲೆ 27 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.  ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆಯಂತಹ ಸೇವೆಗಳಿಗೆ ಸರ್ಕಾರದ ಹೆಚ್ಚಿನ ಅನುದಾನ ಒದಗಿಸಲಾಗುತ್ತಿದೆ.  ಸರ್ಕಾರಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಳ್ಳೆಯ ಆಡಳಿತ ಜನರಿಗೆ ನೀಡುವಂತಾಗಲು ಲೋಕಾಯುಕ್ತ ಶ್ರಮಿಸುತ್ತಿದೆ.  ಶಿಕ್ಷೆ ಕೊಡುವುದಕ್ಕಿಂತ ಒಳ್ಳೆಯ ಕೆಲಸವನ್ನು ಅಧಿಕಾರಿಗಳಿಂದ ಪಡೆಯುವುದು ಮುಖ್ಯವಾಗಿದೆ.  ಒಳ್ಳೆಯ ಸಮಾಜ ಹುಟ್ಟು ಹಾಕಬೇಕು, ಸಾರ್ವಜನಿಕರ ಕುಂದುಕೊರತೆ ನಿವಾರಣೆಯಾಗಬೇಕು.  ಸರ್ಕಾರದ ಯೋಜನೆಗಳು ಜನರಿಗೆ, ಅರ್ಹ ಫಲಾನುಭವಿಗೆ ವೇಗವಾಗಿ ಸಮರ್ಪಕವಾಗಿ ತಲುಪುವಂತಾಗಬೇಕು.  ದುರಾಡಳಿತವನ್ನು ತಪ್ಪಿಸುವುದು ಲೋಕಾಯುಕ್ತದ ಉದ್ದೇಶವಾಗಿದೆ.  ಆಡಳಿತದಲ್ಲಿ ಸುಧಾರಣೆ ಆಗದಿದ್ದಲ್ಲಿ, ಅಥವಾ ಕಾನೂನಿನ ವಿರುದ್ಧ ನಡೆದುಕೊಂಡಲ್ಲಿ, ಕಾನೂನಿನನ್ವಯ ಶಿಕ್ಷೆ ಅನಿವಾರ್ಯವಾಗುತ್ತದೆ.  ಅಧಿಕಾರಿ, ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ, ಲೋಕಾಯುಕ್ತ ಅನಿವಾರ್ಯವಾಗಿ ತನ್ನ ಕೆಲಸವನ್ನು ಮಾಡಬೇಕಾಗುತ್ತದೆ.  ಸಮಾಜಕ್ಕೆ ತೊಂದರೆ ಮಾಡುವ ಅಧಿಕಾರಿಗಳು, ಆ ಹುದ್ದೆಯಲ್ಲಿ ಇರಲು ಅನರ್ಹರು.  ಕೊಪ್ಪಳ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿದ್ದು, ಇದರ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಅಧಿಕಾರಿಗಳಿಗೆ ಸೂಚ್ಯವಾಗಿ ಹೇಳಿದರು.
ರೈತರೆ ಕೃಷಿ ಹೊಂಡ ನಿರ್ಮಿಸಿಕೊಳ್ಳಲಿ :
************* ಮಳೆಯಾಶ್ರಿತ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯು ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಲು ಅನುದಾನ ನೀಡುತ್ತಿದೆ.  ಕೃಷಿ ಹೊಂಡ ನಿರ್ಮಾಣದ ಯೋಜನೆ ಒಳ್ಳೆಯ ಯೋಜನೆಗಳಲ್ಲೊಂದಾಗಿದೆ.  ಈ ಯೋಜನೆಯಲ್ಲಿ ಗುತ್ತಿಗೆದಾರರ ಮೂಲಕ ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಯೋಜನೆಯಲ್ಲಿ ಅವಕಾಶವಿದ್ದು, ರೈತರೆ, ಖುದ್ದಾಗಿ ತಾವೇ ಕೃಷಿ ಹೊಂಡ ನಿರ್ಮಿಸಿಕೊಂಡಲ್ಲಿ, ಸರ್ಕಾರದ ಅನುದಾನ ರೈತರಿಗೇ ವಿನಿಯೋಗ ಆಗಲಿದೆ ಎಂದು ನ್ಯಾ. ವಿಶ್ವನಾಥ ಶೆಟ್ಟಿ ಅವರು ಅಭಿಪ್ರಾಯಪಟ್ಟರು.  ಇದಕ್ಕೆ ಪ್ರತಿಕ್ರಿಯಿಸಿದ ಜಂಟಿಕೃಷಿ ನಿರ್ದೇಶಕ ವೀರೇಶ ಹುನಗುಂದ ಅವರು, ಕೃಷಿ ಹೊಂಡವನ್ನು ತಾವೇ ನಿರ್ಮಿಸಿಕೊಳ್ಳುವುದಾಗಿ ಮುಂದೆ ಬರುವ ರೈತರಿಗೆ, ಅವರಿಗೇ ಅವಕಾಶ ಕೊಡಲಾಗುತ್ತಿದೆ.  ಆಯ್ಕೆಯ ಅವಕಾಶವನ್ನು ರೈತರಿಗೇ ನೀಡಲಾಗಿದೆ ಎಂದರು.
ವೈದ್ಯರು ಸಮರ್ಪಕ ಸೇವೆ ನೀಡಲಿ :
********** ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಪೈಕಿ ಬಹುತೇಕರು ಬಡವರಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರು, ವೃತ್ತಿಗೆ ಬದ್ಧರಾಗಿ, ಉತ್ತಮ ಸೇವೆ ನೀಡಬೇಕು.  ಶಿಶು ಮರಣ, ತಾಯಿ ಮರಣ ಪ್ರಮಾಣಗಳನ್ನು ತಡೆಗಟ್ಟಲು ವೈದ್ಯರ ಕರ್ತವ್ಯ ನಿಷ್ಠೆ ಅಗತ್ಯವಾಗಿದೆ.  ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಕರಣಗಳನ್ನು ಹೆಚ್ಚು ಕೈಗೊಳ್ಳುವ ವೈದ್ಯರ ಕಾರ್ಯವೈಖರಿ ಪರಿಶೀಲಿಸಿ, ವಿವರ ಪಡೆದು, ಸೂಕ್ತ ತಿಳುವಳಿಕೆ ನೀಡಬೇಕು ಎಂದು ಪಿ. ವಿಶ್ವನಾಥ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ಸೂಚನೆ ನೀಡಿದರು.
ಶಿಕ್ಷಣದಿಂದ ಯಾರೂ ವಂಚಿತರಾಗಬಾರದು :
************* ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 257138 ವಿದ್ಯಾರ್ಥಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಓದುತ್ತಿದ್ದು, 341 ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದರು, ಆ ಪೈಕಿ 172 ಮಕ್ಕಳನ್ನು ಶಿಕ್ಷಣದ ವಾಹಿನಿಗೆ ತರಲಾಗಿದ್ದು, ಇನ್ನೂ 169 ವಿದ್ಯಾರ್ಥಿಗಳನ್ನು ಮುಖ್ಯ ವಾಹಿನಿಗೆ ತರಬೇಕಿದೆ.  ಕೆಲ ಕುಟುಂಬಗಳು ವಲಸೆ ಹೋಗುವುದು, ಬೇರೆ ಜಿಲ್ಲೆಗೆ ತೆರಳುವುದು ಸೇರಿದಂತೆ ವಿವಿಧ ಕಾರಣಗಳಿಂದ ಇವರನ್ನು ಮುಖ್ಯ ವಾಹಿನಿಗೆ ತರಲು ತೊಂದರೆಯಾಗಿದೆ ಎಂದು ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ ಅವರು ಹೇಳಿದರು.  ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ, ಲೋಕಾಯುಕ್ತ ನ್ಯಾಯಮೂರ್ತಿಗಳು, ಹಾಗಾದರೆ ಇವರ ಶಿಕ್ಷಣದ ಕಥೆ ಏನು?.  ಇವರು ಶಿಕ್ಷಣದಿಂದ ವಂಚಿತರಾಗಬೇಕೆ ಎಂದು ಪ್ರಶ್ನಿಸಿದರು.  ಇದಕ್ಕೆ ಉತ್ತರಿಸಿದ ಸರ್ವಶಿಕ್ಷಣ ಅಭಿಯಾನದ ಉಪಸಮನ್ವಯಾಧಿಕಾರಿ ಚನ್ನಬಸಪ್ಪ ಅವರು, ಶಾಲೆ ಬಿಟ್ಟು, 14 ವರ್ಷ ಮೇಲ್ಪಟ್ಟು ವಯಸ್ಸು ಆಗಿದ್ದರೂ, ಅಂತಹವರಿಗೆ ಅವರ ಸಾಮಥ್ರ್ಯಕ್ಕೆ ಅನುಗುಣವಾಗಿ ಸೇತು ಬಂಧ ಶಿಕ್ಷಣದ ಮೂಲಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುವುದು.  ಅವರಿಗೆ ವಸತಿ ಸಹಿತದ ಶಿಕ್ಷಣಕ್ಕೆ ಅವಕಾಶ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಬಯೋಮೆಟ್ರಿಕ್ ಹಾಜರಾತಿ :
*********** ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಶಿಕ್ಷಕರು ಬಯೋಮೆಟ್ರಿಕ್ ಮೂಲಕ ಹಾಜರಾತಿ ನೀಡುವುದನ್ನು ಕಡ್ಡಾಯಗೊಳಿಸಬೇಕು.  ಅಲ್ಲದೆ ಹಾಸ್ಟೆಲ್‍ಗಳ ಸಿಬ್ಬಂದಿಗಳು, ವಾರ್ಡನ್‍ಗಳು, ಮೇಲ್ವಿಚಾರಕರೂ ಕೂಡ ಬಯೋಮೆಟ್ರಿಕ್‍ನಲ್ಲಿಯೇ ಹಾಜರಾತಿಯನ್ನು ನಿರ್ವಹಿಸಬೇಕು.  ಶಾಲೆಗಳು ಹಾಗೂ ಹಾಸ್ಟೆಲ್‍ಗಳಲ್ಲಿ ನೀಡಲಾಗುವ ಊಟ, ಮೆನು ಕುರಿತು ಅಧಿಕಾರಿಗಳು ದೈನಂದಿನ ಮಾಹಿತಿ ಪಡೆಯುವ ವ್ಯವಸ್ಥೆ ಕೈಗೊಳ್ಳಬೇಕು.  ಖಾಸಗಿ ಕಟ್ಟಡಗಳಲ್ಲಿ ನಡೆಸಲಾಗುತ್ತಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು, ಕೂಡಲೆ ನಿವೇಶನ ಗುರುತಿಸಿ, ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೇಟ್ಟಿ ಅವರು ಸೂಚನೆ ನೀಡಿದರು.
     ಸಭೆಯಲ್ಲಿ ಲೋಕಾಯುಕ್ತ ಎಡಿಜಿಪಿ ಸಂಜಯ್ ಸಹಾಯ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಡಾ. ರವಿ ತಿರ್ಲಾಪುರ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.  ಸಭೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಯೋಜನೆಗಳ ಕುರಿತು ಪರಿಶೀಲನೆ ನಡೆಸಲಾಯಿತು.
Post a Comment