Wednesday, 28 February 2018

ಕೊಪ್ಪಳ ಜಿಲ್ಲಾ ಆಸ್ಪತ್ರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಲಿದೆ : ರಾಜಶೇಖರ ಹಿಟ್ನಾಳ


ಕೊಪ್ಪಳ ಫೆ. 28 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ 100 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರವು ಮಂಜೂರಾತಿ ನೀಡಿದ್ದು, ಬರುವ ದಿನಗಳಲ್ಲಿ ಜಿಲ್ಲಾ ಆಸ್ಪತ್ರೆಯು ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಹೊರಹೊಮ್ಮಲಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೆಳಿದರು.   

    ಎಸ್.ಡಿ.ಪಿ ಮತ್ತು ಎನ್.ಹೆಚ್.ಎಂ ಯೋಜನೆಯಡಿಯಲ್ಲಿ ರೂ. 25 ಕೋಟಿಯ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ 100 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಕಂಪೌಡ ಗೋಡೆ, ಸಿ.ಸಿ ರಸ್ತೆ, ವಿದ್ಯುದ್ದೀಕರಣ ಹಾಗೂ ವಾಹನ ನಿಲುಗಡೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.    

    ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಾಗೂ ಆಧುನಿಕ ಉಪಕರಣಗಳ ಕೊರತೆ ಇದ್ದ ಕಾರಣ ಜಿಲ್ಲೆಯ ಜನರು ಚಿಕಿತ್ಸೆಗಾಗಿ ನೆರೆಹೊರೆಯ ಜಿಲ್ಲೆಗಳಿಗೆ ಹೋಗುತ್ತಿದ್ದರು.  ರಾಜ್ಯ ಸರ್ಕಾರವು ನಮ್ಮ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜನ್ನು ನೀಡಿದ್ದು,  ಕಾಲೇಜು ಪ್ರಾರಂಭವಾದಾಗಿನಿಂದಲೂ ಜಿಲ್ಲಾ ಆಸ್ಪತ್ರೆಯಲ್ಲೇ ಅನೇಕ ಚಿಕಿತ್ಸೆಗಳು ನಡೆಯುತ್ತಿವೆ.  ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಲು ಸರ್ಕಾರವು ಅತೀ ಹೆಚ್ಚು ಅನುದಾನವನ್ನು ಜಿಲ್ಲೆಗೆ ನೀಡಿದೆ.  ಜಿಲ್ಲಾ ಆಸ್ಪತ್ರೆಗೆ 100 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲು 25 ಕೋಟಿ ರೂ. ಅನುದಾನವನ್ನು ನೀಡಿದ್ದು, ಜಿಲ್ಲೆಯ ಜನರಿಗೆ ತುಂಬಾ ಅನುಕೂಲವಾಗಲಿದೆ.  ಮುಂದಿನ ದಿನಮಾನಗಳಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯು ಮಾದರಿ ಆಸ್ಪತ್ರೆಯಾಗಲಿದೆ ಎಂದು ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.

ಜಿಲ್ಲಾ ಆಸ್ಪತ್ರೆಗೆ 100 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಕಂಪೌಡ ಗೋಡೆ, ಸಿ.ಸಿ ರಸ್ತೆ, ವಿದ್ಯುದ್ದೀಕರಣ ಹಾಗೂ ವಾಹನ ನಿಲುಗಡೆ ಕಾಮಗಾರಿಯ ಭೂಮಿ ಪೂಜೆ ನೆರೆವೇರಿಸಿ ಮತ್ತು ಸಮಾರಂಭದ ಅಧ್ಯಕ್ಷತೆ ವಹಿಸಿದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಮರಣ ಪ್ರಮಾಣ ಹೆಚ್ಚಾಗುತ್ತಿದೆ ಎಂದು ವರದಿಯಾಗಿತ್ತು.  ಇದನ್ನು ನಿಯಂತ್ರಿಸಲು ಕೊಪ್ಪಳದಲ್ಲಿ ಹೆಚ್ಚುವರಿಯಾಗಿ ಮಕ್ಕಳ ಆಸ್ಪತ್ರೆ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು.  ಇದೀಗ ಜಿಲ್ಲಾ ಕೇಂದ್ರದಲ್ಲಿ 100 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮತ್ತು ಇದರ ಜೊತೆಯಲ್ಲಿ ಜಿಲ್ಲಾ ಆಸ್ಪತ್ರೆಯ ಕಂಪೌಡ, ಸಿ.ಸಿ ರಸ್ತೆ, ವಿದ್ಯುದ್ದೀಕರಣ ಹಾಗೂ ವಾಹನ ನಿಲುಗಡೆ ಕಾಮಗಾರಿಗಳಿಗೆ ರೂ. 25 ಕೋಟಿ ಅನುದಾನವನ್ನು ಸರ್ಕಾರವು ನೀಡಿದೆ.  ಜಿಲ್ಲಾ ಆಸ್ಪತ್ರೆಗೆ ಹೆಚ್.ಕೆ.ಆರ್.ಡಿ.ಬಿ ನಲ್ಲಿ ಅನೇಕ ಉಪಕರಣಗಳನ್ನು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.  ಜಿಲ್ಲಾ ಆಸ್ಪತ್ರೆಗೆ ಸರ್ಕಾರವು ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಇಲ್ಲಿ ಸುಸಜ್ಜಿತವಾದ ಮತ್ತು ಯಶಸ್ವಿ ಚಿಕಿತ್ಸೆ ನಡೆಯಬೇಕಿದೆ.  ಮುಂದಿನ ದಿನಮಾನಗಳಲ್ಲಿ ಜಿಲ್ಲಾ ಆಡಳಿತ ಭವನದಲ್ಲಿ ಮತ್ತು ಮೆಡಿಕಲ್ ಕಾಲೇಜಿನಲ್ಲಿ ಕೂಡ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.   ಕೊಪ್ಪಳ ಜಿಲ್ಲೆಯು ಅತೀ ಹಿಂದುಳಿದ ಪ್ರದೇಶವಾಗಿದ್ದು, ಸರ್ಕಾರವು 135 ಕೋಟಿ ರೂ. ಅನುದಾನದಲ್ಲಿ ಕೊಪ್ಪಳಕ್ಕೆ ಮೇಡಿಕಲ್ ಕಾಲೇಜುನ್ನು ನೀಡಿದ್ದಲ್ಲದೇ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪೈಕಿ ಹೈದ್ರಾಬಾದ ಕರ್ನಾಟಕ ಭಾಗಕ್ಕೆ ಶೇ. 75 ರಷ್ಟು ಸ್ಥಾನಗಳನ್ನು ಮೀಸಲಿಟ್ಟಿದೆ.  ಜಿಲ್ಲೆಯ ತಳಕಲ್ ಹಾಗೂ ಗಂಗಾವತಿಯಲ್ಲಿ ಇಂಜಿನಿಯರಿಂಗ್ ಕಾಲೇಜುಗಳ ನಿರ್ಮಾಣ ಹೀಗೆ ಅನೇಕ ಯೋಜನೆಗಳನ್ನು ನಮ್ಮ ಜಿಲ್ಲೆಗೆ ನೀಡಿ, ಜಿಲ್ಲೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದೆ.  ಜಿಲ್ಲೆಯನ್ನು ಆರೋಗ್ಯ ಕ್ಷೇತ್ರದಲ್ಲಿ ಮಾದರಿ ಜಿಲ್ಲೆಯನ್ನಾಗಿಸಲು ಶ್ರಮಿಸಲಾಗುವುದು.  ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯ ದೊರಕಬೇಕು.  ಮುಂದಿನ ದಿನಮಾನಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ರೋಗಿಗಳ ಜೊತೆ ಬರುವ ಜನರಿಗೆ ಕೊಠಡಿಯ ವ್ಯವಸ್ಥೆಯನ್ನು ಸಹ ಮಾಡಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.  

    ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ರಾಮಣ್ಣ ಹದ್ದಿನ, ಮುತ್ತುರಾಜ ಕುಷ್ಟಗಿ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್., ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್.ಕೆ ದಾನರಡ್ಡಿ ಜಿಲ್ಲಾ ಆಸ್ಪತ್ರೆಯ ಸಲಹಾ ಸಮಿತಿಯ ಸದಸ್ಯರಾದ ಮಾನ್ವಿ ಪಾಶಾ, ಮಲ್ಲಿಕಾರ್ಜುನ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
Post a Comment