Monday, 12 February 2018

ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಡಿಹೆಚ್‍ಒ ರಾಮಕೃಷ್ಣ ಚಾಲನೆ


ಕೊಪ್ಪಳ ಫೆ. 12 (ಕರ್ನಾಟಕ ವಾರ್ತೆ) : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಎಸ್.ಎಫ್.ಎಸ್ ಪ್ರೌಢ ಶಾಲೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಕ ಮಾತ್ರೆಯನ್ನು ನೀಡುವುದರ ಮೂಲಕ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮಕ್ಕೆ ಡಿಹೆಚ್‍ಒ ಡಾ. ರಾಮಕೃಷ್ಣ ಅವರು ನಗರದ ಎಸ್‍ಎಫ್‍ಎಸ್ ಪ್ರೌಢಶಾಲೆಯಲ್ಲಿ ಚಾಲನೆ ನೀಡಿದರು.
      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮಗುವಿಗೆ ಅಲ್ಬೆಂಡಜೋಲ್ ಮಾತ್ರೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಂತುಹುಳು ಸೋಂಕುವಿನಂದಾಗಿ ಮಕ್ಕಳು ರಕ್ತಹೀನತೆ, ಅಪೌಷ್ಠಿಕತೆ, ಹಸಿವು ಆಗಾದೆ ಇರುವದು, ನಿಶಕ್ತಿ, ಹೊಟ್ಟೆನೋವು ಇಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಇದರ ನಿವಾರಣೆಗಾಗಿ, ಪ್ರತಿ 06 ತಿಂಗಳಿಗೆಗೊಮ್ಮೆ ಈ ಮಾತ್ರೆಗಳನ್ನು ಅಂಗನಾವಾಡಿ ಕೇಂದ್ರ, ಅನುದಾನಿತ / ಅನುದಾನ ರಹಿತ, ವಸತಿ ಶಾಲೆಯಲ್ಲಿ ಓದುತ್ತಿರುವ 01 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಈ ಮಾತ್ರೆಯನ್ನು ನೀಡಲಾಗುತ್ತದೆ. ಎಲ್ಲಾ ಸಾರ್ವಜನಿಕರು ತಮ್ಮ ಸಮೀಪದ ಅಂಗನವಾಡಿ ಕೇಂದ್ರ, ಶಾಲೆಗಳಲ್ಲಿ ಈ ಮಾತ್ರೆಯನ್ನು ಮಕ್ಕಳಿಗೆ ಕೊಡಿಸಿ ಆರೋಗ್ಯವಂತರನ್ನಾಗಿ ಮಾಡಿ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
    ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅಲಕನಂದಾ ಮಳಗಿ ಮಾತನಾಡಿ ಫೆಬ್ರುವರಿ 12 ರಂದು ‘’ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ’’ ನಮ್ಮ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದು, 01 ರಿಂದ 05 ವರ್ಷದ ವಯಸ್ಸಿನ ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆಯನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ. 06 ರಿಂದ 19 ವರ್ಷದ ವಯಸ್ಸಿನ ಮಕ್ಕಳಿಗೆ ಈ ಮಾತ್ರೆಯನ್ನು ಶಾಲೆಗಳಲ್ಲಿ ನೀಡಲಾಗುತ್ತದೆ. ದಾಖಲಾಗದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ ಎಂದರು.
      ತಾಲೂಕಾ ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ, ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ, ಪ್ರಾಂಶುಪಾಲ ಫಾದರ್ ಜೇಸ್ ಮೆಚರಲ್, ಶಿವಾನಂದ ಪೂಜಾರ ಆರೋಗ್ಯ ಶಿಕ್ಷಣಾಧಿಕಾರಿ, ಎಸ್.ಬಿ. ಚಿಕ್ಕನರಗುಂದು, ಗುರುರಾಜ ದೇಸಾಯಿ,  ವಿಶ್ವನಾಥರೆಡ್ಡಿ  ಸೇರಿದಂತೆ ಹಲವು ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
Post a Comment