Thursday, 15 February 2018

ಮತದಾರರ ಪಟ್ಟಿಗಳ ಪರಿಷ್ಕಣೆ ಕಾರ್ಯಕ್ರಮ ತೃಪ್ತಿಕರ- ಅಮ್ಲನ್ ಆದಿತ್ಯ ಬಿಸ್ವಾಸ್


ಕೊಪ್ಪಳ ಫೆ. 15 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ತೃಪ್ತಿಕರವಾಗಿ ಜರುಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 39700 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.  ಅಂತಿಮ ಮತದಾರರ ಪಟ್ಟಿ ಫೆ. 28 ರಂದು ಪ್ರಕಟಗೊಳ್ಳಲಿದೆ ಎಂದು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಜಿಲ್ಲಾ ವೀಕ್ಷಕರು ಹಾಗೂ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಅಮ್ಲನ್ ಆದ್ಯತ್ಯ ಬಿಸ್ವಾಸ್ ಅವರು ಹೇಳಿದರು.
      ಕೊಪ್ಪಳ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
     ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯ ಎಲ್ಲ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ತೃಪ್ತಿಕರವಾಗಿ ಜರುಗಿದೆ.  ಮತದಾರರ ಜಾಗೃತಿಗಾಗಿ ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳ ಪರಿಣಾಮವಾಗಿ ಜಿಲ್ಲೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಒಟ್ಟು 40822 ಅರ್ಜಿಗಳು ಸಲ್ಲಿಕೆಯಾಗಿದ್ದವು.  ಫೆ. 12 ರೊಳಗಾಗಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಸಲ್ಲಿಸಿರುವ ಅರ್ಜಿ, ಹೆಸರು ತೆಗೆದುಹಾಕುವುದು, ತಿದ್ದುಪಡಿ ಹಾಗೂ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಗೊಳಿಸಲು ಗಡುವು ನೀಡಲಾಗಿತ್ತು.  ಜಿಲ್ಲೆಯಲ್ಲಿ ಈ ಕಾರ್ಯ ಸಮರ್ಪಕವಾಗಿ ಆಗಿದೆ.  ಹೊಸದಾಗಿ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಜಿಲ್ಲೆಯಲ್ಲಿ 40822 ಅರ್ಜಿಗಳು ಸಲ್ಲಿಕೆಯಾಗಿದ್ದವು.  ಈ ಪೈಕಿ 511 ಅರ್ಜಿಗಳು ಆನ್‍ಲೈನ್ ಮೂಲಕ ಸಲ್ಲಿಕೆಯಾಗಿವೆ.  ಸಲ್ಲಿಸಲಾದ ಅರ್ಜಿಗಳಲ್ಲಿ ಒಟ್ಟಾರೆ 39700 ಅರ್ಜಿಗಳು ಹೆಸರು ಸೇರ್ಪಡೆಗೆ ಅನುಮೋದಿತಗೊಂಡಿವೆ.  ಕುಷ್ಟಗಿ ಕ್ಷೇತ್ರದಲ್ಲಿ-7465, ಕನಕಗಿರಿ-9761, ಗಂಗಾವತಿ-7649, ಯಲಬುರ್ಗಾ-6498 ಹಾಗೂ ಕೊಪ್ಪಳ ಕ್ಷೇತ್ರದಲ್ಲಿ 8327 ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದರು.  ಅಲ್ಲದೆ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿರುವ ಕ್ರಮಕ್ಕೆ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
     ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಸರನ್ನು ತೆಗೆದುಹಾಕುವ ಕುರಿತಂತೆ 21891 ಅರ್ಜಿಗಳು, ತಿದ್ದುಪಡಿಗೆ  12869 ಅರ್ಜಿಗಳು ಹಾಗೂ ವರ್ಗಾವಣೆಗಾಗಿ ಸಲ್ಲಿಸಲಾದ 1254 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.
     ಸಭೆಯಲ್ಲಿ  ಕೊಪ್ಪಳ ತಹಶೀಲ್ದಾರ ಗುರುಬಸವರಾಜ, ಯಲಬುರ್ಗಾ ತಹಶೀಲ್ದಾರ ರಮೇಶ ಅಳವಂಡಿಕರ, ಹಾಗೂ ಕುಷ್ಟಗಿ ತಹಶೀಲ್ದಾರ ಗಂಗಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
Post a Comment