Tuesday, 6 February 2018

ಜನ ಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಲು ಶ್ರಮಿಸಿ : ಆರ್.ಜಿ ಜೋಶಿ


ಕೊಪ್ಪಳ ಫೆ. 06 (ಕರ್ನಾಟಕ ವಾರ್ತೆ): ಕಾನೂನಿನ ಕುರಿತು ಜನ ಸಾಮಾನ್ಯರಿಗೂ ಅರಿವು ಮೂಡಿಸಲು ಶ್ರಮಿಸಿ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಆರ್.ಜಿ ಜೋಶಿ ಅವರು ಜಿಲ್ಲೆಯ ವಕೀಲರಿಗೆ ಸೂಚನೆ ನೀಡಿದರು.  
    ಕೊಪ್ಪಳ ಜಿಲ್ಲಾ ಕಾನೂನೂ ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾದ ಪ್ಯಾನಲ್ ವಕೀಲರುಗಳಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಜನರು ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.  ಆದರೆ ಪ್ಯಾನಲ್ ವಕೀಲರ ನೆರವಿನಿಂದ ಕಾನೂನು ಸಹಾಯವನ್ನು ಇನ್ನೂ ಸುಲಭವಾವಾಗಿ ದೊರಕಿಸಿಕೊಡಬಹುದು.  ಕಾನೂನು ಸೇವೆಗಳ ಕುರಿತು ಅರಿವು ಹಾಗೂ ಸಹಾಯ ಒದಗಿಸಲು ವಿವಿಧ ಕಛೇರಿಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಇದರ ಜೊತೆ-ಜೊತೆಯಲ್ಲಿಯೇ ನೇರವಾಗಿ ಪ್ಯಾನಲ್ ವಕೀಲರುಗಳಿಂದಲೂ ಸಹ ಪರಿಹಾರ ಕಂಡುಕೊಳ್ಳಬಹುದಾಗಿದೆ.  ಈ ನಿಟ್ಟಿನಲ್ಲಿ ಪ್ಯಾನಲ್ ವಕೀಲರನ್ನು ನೇಮಿಸಲಾಗಿದೆ.  ಸಾಮಾನ್ಯವಾಗಿ ಕಾನೂನು ಅರಿವು ಎಲ್ಲ ವಕೀಲರಲ್ಲಿ ಇರುತ್ತದೆ ಆದರೂ ಸಹ ಈ ಕಾರ್ಯಗಾರದಲ್ಲಿ ಒಂದು ವಿಶಿಷ್ಟವಾದ ಕಾನೂನು ತರಬೇತಿಯನ್ನು ನೀಡಲಾಗುತ್ತಿದ್ದು, ನ್ಯಾಯ ಕೇಳಲು ಬಂದಂತಹ ಜನರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಆರ್.ಜಿ. ಜೋಶಿ ಅವರು ಹೇಳಿದರು. 
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಹೆಚ್. ಇಂಗಳದಾಳ ಅವರು ವಹಿಸಿದ್ದರು.  ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ, ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಎಸ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮನು ಶರ್ಮಾ ಪಾಲ್ಗೊಂಡಿದ್ದರು.  ಬೆಂಗಳೂರಿನ ತರಬೇತುದಾರರಾದ ರಮಾದೇವಿ, ಭೂಸನೂರಮಠ ಹಾಗೂ ಸೊಪ್ಪಿಮಠ ಅವರು ಉಪಸ್ಥಿತರಿದ್ದು, ಜಿಲ್ಲೆಯ ಪ್ಯಾನಲ್ ವಕೀಲರುಗಳಿಗೆ ತರಬೇತಿ ನೀಡಿದರು. 
Post a Comment