Saturday, 24 February 2018

ಕ್ರೀಡಾಸಕ್ತಿ ಹೆಚ್ಚಿಸಲು “ಯುವ ಚೈತನ್ಯ” ಯೋಜನೆ ಪೂರಕವಾಗಿದೆ : ರಾಜಶೇಖರ ಹಿಟ್ನಾಳ


ಕೊಪ್ಪಳ ಫೆ. 23 (ಕರ್ನಾಟಕ ವಾರ್ತೆ): ಕ್ರೀಡಾಸಕ್ತಿ ಹೆಚ್ಚಿಸಿ ಯುವಕರನ್ನು ಸದೃಡ ಹಾಗೂ ಆರೋಗ್ಯವಂತರನ್ನಾಗಿಸಲು ರಾಜ್ಯ ಸರ್ಕಾರವು ಇದೇ ಮೊದಲಬಾರಿಗೆ ಜಾರಿಗೊಳಿಸಿರುವ “ಯುವ ಚೈತನ್ಯ” ಯೋಜನೆಯು ಅತ್ಯಂತ ಪೂರಕ ಯೋಜನೆಯಾಗಿದೆ  ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.   

    ಕೊಪ್ಪಳ ತಾಲೂಕಿನ ನೊಂದಾಯಿತ ಯವ ಸಂಘಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ “ಯುವ ಚೈತನ್ಯ” ಕಾರ್ಯಕ್ರಮದಡಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಏರ್ಪಡಿಸಲಾದ ಕ್ರೀಡಾ ಸಾಮಾಗ್ರಿಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

    ಭಾರತವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಹೊಂದಿದ ದೇಶವಾಗಿದೆ.  ಯುವಕರು ದುಶ್ಚಟಗಳಿಗೆ ಒಳಗಾಗದೆ, ಕ್ರೀಡೆಗಳು, ಸಾಂಸ್ಕøತಿಕ ಚಟುವಟಿಕೆಗಳಂತಹ ಸೃಜನಶೀಲ ಹವ್ಯಾಸವನ್ನು ಬೆಳಿಸಿಕೊಳ್ಳಬೇಕು.  ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಖಾಂತರವಾಗಿ ಯುವ ಜನರನ್ನು ಕ್ರೀಡೆಗಳತ್ತ ಪ್ರೋತ್ಸಾಹಿಸಲು “ಯುವ ಚೈತನ್ಯ” ಎಂಬ  ಮಹತ್ತರವಾದ ಯೋಜನೆಯೊಂದನ್ನು ಪ್ರಥಮಬಾರಿಗೆ ಜಾರಿಗೆ ತಂದಿದೆ.  ಈ ಯೋಜನೆಯಲ್ಲಿ ರಾಜ್ಯದ ನೊಂದಾಯಿತ ಯುವ ಸಂಘಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ನೀಡಲು ಉದ್ದೇಶಿಸಿದ್ದು, ಇದರಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ 129 ಸಂಸ್ಥೆಗಳು ಒಳಗೊಂಡಿವೆ.  ಯೋಜನೆಯ ಸದುಪಯೋಗ ಪಡೆದು, ಯುವಕರು ಕ್ರೀಡಾ ಚಟುವಟಿಕೆಗಳನ್ನು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಮುಂದಿನ ದಿನಮಾನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆಯ, ರಾಜ್ಯದ ಹಾಗೂ ಈ ದೇಶಕ್ಕೆ ಕೀರ್ತಿ ತರುವಂತಹ ಪ್ರಯತ್ನ ಮಾಡಬೇಕಾಗಿದೆ.  ಸರ್ಕಾರವು ಶಿಕ್ಷಣಕ್ಕಾಗಿ ಅತಿ ಹೆಚ್ಚಿನ ಒತ್ತು ನೀಡುತ್ತಿದ್ದು, ವಿದ್ಯಾಸಿರಿ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಜಾರಿಗೆ ತಂದಿದೆ.  ಪ್ರಸಕ್ತ ಸಾಲಿನಲ್ಲಿ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ಹಾಗೂ ಲ್ಯಾಪ್‍ಟ್ಯಾಪ್ ನೀಡುವ ಕಾರ್ಯದಿಂದ ಇಡೀ ದೇಶದ ಗಮನವನ್ನು ನಮ್ಮ ಸರ್ಕಾರ ಸೆಳೆದಿದೆ ಎಂದು ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಯುವ ಚೈತನ್ಯ ಕಾರ್ಯಕ್ರಮವು ಯುವಕರಿಗೆ ಅತ್ಯದ್ಬುತವಾದ ಕೊಡುಗೆಯಾಗಿದೆ.  ಹಾಗೂ ಯುವಕರಲ್ಲಿ ಅಡಗಿದ ಪ್ರತಿಭೆಯನ್ನು ಗುರುತಿಸಲು ಮೊಟ್ಟ ಮೊದಲಿಗೆ ಜಾರಿಯಾದಂತಹ ಒಂದು ಹೊಸ ಕಾರ್ಯಕ್ರಮ ಇದಾಗಿದೆ.  ಇಂದಿನ ದಿನಮಾನಗಳಲ್ಲಿ ಯುವಕರಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತಿದ್ದು, ಈ ದಿಸೆಯಲ್ಲಿ ಸರ್ಕಾರವು ಕ್ರಿಕೆಟ್ ಬ್ಯಾಟ್-ಬಾಲ್, ವಾಲಿಬಾಲ್, ಫುಟ್‍ಬಾಲ, ಥ್ರೋಬಾಲ್, ಶಟಲ್ ಬ್ಯಾಟ್‍ಮಿಂಟನ್, ಹೀಗೆ ಅನೇಕ ಕ್ರೀಡಾ ಸಾಮಾಗ್ರಿಗಳ ಕಿಟ್ ನೀಡುವುದರ ಮೂಲಕ ಕ್ರೀಡೆಯತ್ತ ಯುವಕರನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಿದೆ.  ಯುವಕರು ‘ಯುವ ಚೈತನ್ಯ’ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿದೆ.  ದೈಹಿಕ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಈಜುಗೋಳವನ್ನು ಸಹ ಸ್ಥಾಪಿಸಲಾಗಿದೆ.  ತಾಲೂಕು ಕ್ರೀಡಾಂಗಣಕ್ಕೆ 2.5 ಕೋಟಿ, ಭಾಗ್ಯನಗರದಲ್ಲಿ ಸೆಂಟ್ರಲ್ ಲೈಬ್ರರಿ ಸ್ಥಾಪನೆಗೆ ಒಂದು ಕೋಟಿ ಅನುದಾನವನ್ನು ನೀಡಲಾಗಿದೆ.  ಯುವಕರಿಗೆ ಅನುಕೂಲವಾಗುವಂತೆ ಮುಂದಿನ ದಿನಮಾನಗಳಲ್ಲಿ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ “ಮಲ್ಟಿ ಜಿಮ್” ಗಳನ್ನು ಸಹ ನಿರ್ಮಿಸಲಾಗುವುದು ಎಂದರು.     
    ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಸದಸ್ಯರಾದ ಮಹೇಶ ಭಜಂತ್ರಿ, ಮುತ್ತುರಾಜ ಕುಷ್ಟಗಿ, ಮಾರುತಿ ಕಾರಟಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೈ. ಸುದರ್ಶನರಾವ್ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿ ಪುರಸ್ಕøತರು, ಹಾಗೂ ಗಣ್ಯರು ಉಪಸ್ಥಿತರಿದ್ದರು.  ತಾಲೂಕಿನ ನೊಂದಾಯಿತ ಯುವ ಸಂಘಗಳಿಗೆ ಇದೇ ಸಂದರ್ಭದಲ್ಲಿ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು. 
Post a Comment