Thursday, 22 February 2018

ಶರಣ ಚಳುವಳಿಯಲ್ಲಿ ದಲಿತ ವಚನಕಾರರ ಕೊಡುಗೆ ಅಪಾರ- ಡಾ. ಮಹಾಂತೇಶ ಮಲ್ಲನಗೌಡರಕೊಪ್ಪಳ. ಫೆ.22 (ಕರ್ನಾಟಕ ವಾರ್ತೆ) ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ವಚನ ಚಳುವಳಿ ಭಾರತ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದ ಐತಿಹಾಸಿಕ ಚಳುವಳಿಯಾಗಿದ್ದು, ಈ ಚಳುವಳಿಯಲ್ಲಿ ದಲಿತ ವಚನಕಾರರ ಕೊಡುಗೆ ಅಪಾರವಾಗಿದೆ ಎಂದು ಕೊಪ್ಪಳದ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ ಅವರು ಹೇಳಿದರು.

     ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಮ್ ಹಾಲ್ ನಲ್ಲಿ ಗುರುವಾರದಂದು ಏರ್ಪಡಿಸಿದ ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜಯಂತಿ ಆಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ, ಅವರು ಮಾತನಾಡಿದರು.

    ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ವಚನ ಚಳುವಳಿ ಜಗತ್ತಿನ ಇತಿಹಾಸದಲ್ಲಿ ಐತಿಹಾಸಿಕ ಚಳುವಳಿಯಾಗಿ ಯಶಸ್ಸು ಪಡೆದಿದೆ. ಈ ಚಳುವಳಿಯಲ್ಲಿ ದಲಿತ ವಚನಕಾರರ ಕೊಡುಗೆ ಅಪಾರವಾಗಿದೆ.  ಅಸ್ಪøಶ್ಯತೆಯ ಡೊಂಬರಾಟವನ್ನು ತಮ್ಮ ವಚನಗಳ ಮೂಲಕ ಸಮಾಜಕ್ಕೆ ತೀಕ್ಷ್ಣವಾಗಿ ತಿಳಿಸಿದ ಮಹನೀಯರು ದಲಿತ ವಚನಕಾರರು.  ಈವರೆಗೆ ದಲಿತ ವಚನಕಾರರಾದ ಮಾದಾರ ದೂಳಯ್ಯರ 106 ವಚನಗಳು, ಮಾದಾರ ಚನ್ನಯ್ಯರ 10 ವಚನಗಳು ಡೋಹರ ಕಕ್ಕಯ್ಯರ 6 ವಚನಗಳು, ಉರಿಲಿಂಗಪೆದ್ದಿ ಅವರ 366 ವಚನಗಳು ಲಭ್ಯವಾಗಿವೆ. ಸಮಗಾರ ಹರಳಯ್ಯನವರ ವಚನಗಳು ಲಭ್ಯವಾಗಿಲ್ಲ, ಆದರೆ ವಚನ ಚಳುವಳಿಯಲ್ಲಿ ಹರಳಯ್ಯ ಶರಣ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ.  ಕುದುರೆಗಳಿಗೆ ಹುಲ್ಲು ಕತ್ತರಿಸಿ ಪೂರೈಸುವ ಕಾಯಕದಲ್ಲಿದ್ದ ಮಾದಾರ ಚನ್ನಯ್ಯ ಅವರು ಗುಪ್ತ ಭಕ್ತಿಯ ಮೂಲಕ ಪರಶಿವನ ಕೃಪೆಗೆ ಪಾತ್ರರಾಗಿದ್ದರು.  ಸಾಕ್ಷಾತ್ ಶಿವನೇ ಆಗಮಿಸಿ, ಚನ್ನಯ್ಯರಿಂದ ಅಂಬಲಿ ಸ್ವೀಕರಿಸಿದ ಎನ್ನುವ ಐತಿಯ್ಯವೂ ಇದೆ.  ಮಾದಾರ ದೂಳಯ್ಯ ಪಾದರಕ್ಷೆ ತಯಾರಿಕೆಯ ಕಾಯಕ ಮಾಡುತ್ತ, ನಿಷ್ಠಾವಂತ ಶಿವಭಕ್ತನಾಗಿದ್ದರು.  ಡೋಹಾರ ಕಕ್ಕಯ್ಯ ಅವರು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನಗಳ ರಕ್ಷಣೆ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಉರಿಲಿಂಗ ಪೆದ್ದಿ ಅವರು ಆರಂಭದಲ್ಲಿ ಕಳ್ಳತನ ಮಾಡುತ್ತ ಜೀವನ ಸಾಗಿಸುತ್ತಿದ್ದರು.  ನಂತರ ಗುರುಗಳ ಸಾಂಗತ್ಯದಿಂದ ಮಹನೀಯರಾದರು.  ಭಾರತೀಯ ಸಿದ್ಧಾಂತದಲ್ಲಿ ವರ್ಣಾಶ್ರಮ, ಧರ್ಮ ತುಂಬಾ ಅಮಾನವಿಯ. ಮಿತಿಮೀರಿದ ಜಾತಿಯ ವೈಭವಿಕರಣ ನಡೆಯುವಂತಹ ಕಾಲಘಟ್ಟದಲ್ಲಿ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿಸಿದ್ದೆ ಕಲ್ಯಾಣ ಕ್ರಾಂತಿಗೆ ಪ್ರಮುಖ ಕಾರಣವಾಯಿತು.  ಬಸವಣ್ಣನವರ ಆಶಯದಂತೆ ಸಮಾನತೆ ತುಂಬಿದ ಮಾನವ ಸಮಾಜ ನಿರ್ಮಾಣವಾಗುವ ಅಗತ್ಯವಿದೆ ಎಂದು ಡಾ. ಮಹಾಂತೇಶ ಮಲ್ಲನಗೌಡರ ಅವರು ಹೇಳಿದರು.
    ಕೊಪ್ಪಳ ತಹಶೀಲ್ದಾರ ಗುರುಬಸವರಾಜ ಮಾತನಾಡಿ, ಜಾತಿಯ ಪ್ರಭಾವ ಮಿತಿಮೀರಿದ ಕಾಲಮಾನದಲ್ಲಿ ದಲಿತ ವಚನಕಾರರು 12 ನೇ ಶತಮಾನದಲ್ಲಿ ವಚನ ಕ್ರಾಂತಿಯನ್ನು ಮಾಡಿ ಇಡೀ ವಿಶ್ವವೇ ಬೇರಗಾಗುವಂತೆ ಮಾಡಿದರು.  ಪ್ರಪಂಚದ ವಿವಿಧ ಕಡೆಗಳಿಂದ ಜಾತಿ, ಮತ ಮರೆತು ಕಲ್ಯಾಣದ ಅನುಭವ ಮಂಟಪದಲ್ಲಿ ಭಾಗವಹಿಸಿ, ಸಮಾಜದ ಅಂಕು-ಡೋಂಕುಗಳಿಗೆ ಕಿವಿಯಾಗಲು, ತಿದ್ದಲು ವಚನ ಕ್ರಾಂತಿಯನ್ನು ಮಾಡಿದರು.  ಇಡೀ ವಿಶ್ವದಲ್ಲಿ ಸಮಾನತೆ ಮತ್ತು ಸ್ತ್ರೀ ಸ್ವಾತಂತ್ರ್ಯದ ಸಮಾನತೆಯನ್ನು ನೀಡಿದವರು ಬಸವಣ್ಣನವರು ಮತ್ತು ವಚನ ಚಳುವಳಿಯ ಶರಣರು. ಆದ್ದರಿಂದಲೇ ಇಂದಿನ ದಿನಮಾನಗಳಲ್ಲಿ ಸ್ತ್ರೀಯರು ಪುರುಷರ ಸರಿಸಮನಾಗಿ ದುಡಿಯುತ್ತಿದ್ದಾರೆ, ಬದುಕುತ್ತಿದ್ದಾರೆ ಮತ್ತು ಎಲ್ಲಾ ರಂಗದಲ್ಲೂ ಮುಂದಿದ್ದಾರೆ.  ವಚನ ಚಳುವಳಿಯ ಶರಣರು ಶಾಂತಿಯ ಮಾತನ್ನು ಹೇಳಿಕೊಟ್ಟಿದ್ದು, ಅವರು ಹಾಕಿದ ಮಾರ್ಗದಲ್ಲಿ ನಾವಿಂದು ನಡೆಯುತ್ತಿದ್ದೇವೆ. ಅವರ ಸಮಾನತೆಯ ತತ್ವದಡಿ ಬದುಕುತಿದ್ದೇವೆ ಎಂದರು.
    ಕಾರ್ಯಕ್ರಮದ ಉದ್ಘಾಟನೆಯನ್ನು ಅಪರ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ ಅವರು ನೆರೆವೇರಿಸಿದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಯು.ನಾಗರಾಜ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮ್ತತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಎಚ್, ಜಿಲ್ಲಾ ಸಂಖ್ಯಾ ಸಂಗ್ರಹಣ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ಗಾಯಕ ಸದಾಶೀವ ಪಾಟೀ¯ ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿದರು.  ನಿವೃತ್ತ ಪ್ರಾಚಾರ್ಯರಾದ ಸಿ.ವಿ.ಜಡಿಯವರ್ ನಿರೂಪಿಸಿ, ವಂದಿಸಿದರು.   
Post a Comment