Friday, 23 February 2018

ಪ್ರಕರಣಗಳ ವಿಲೇವಾರಿಗೆ ಮಧ್ಯಸ್ಥಿಕಾ ವಕೀಲರ ಸಹಕಾರ ಅವಶ್ಯಕ : ಆರ್.ಜಿ ಜೋಶಿಕೊಪ್ಪಳ ಫೆ. 23 (ಕರ್ನಾಟಕ ವಾರ್ತೆ): ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ವಿಲೇವಾರಿಗೊಳಿಸಲು ಮಧ್ಯಸ್ಥಿಕಾ ವಕೀಲರ ಸಹಕಾರ ತುಂಬಾ ಅವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಆರ್.ಜಿ ಜೋಶಿ ಅವರು ಹೇಳಿದರು. 

    ಬೆಂಗಳೂರು ಮಧ್ಯಸ್ಥಿಕಾ ಕೇಂದ್ರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಹಯೋಗದಲ್ಲಿ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಮಧ್ಯಸ್ಥಿಕಾ ನ್ಯಾಯವಾದಿಗಳಿಗಾಗಿ ಕೊಪ್ಪಳ ಜಿಲ್ಲಾ ಪಂಚಾಯತಿಯ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಶುಕ್ರವಾರದಂದು ಆಯೋಜಿಸಲಾದ ಅಂತರ ಜಿಲ್ಲಾ ಮೂರು ದಿನಗಳ ಮಧ್ಯಸ್ಥಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯಾರ್ಥ ಪಡಿಸಲು ಲೋಕ ಅದಾಲತ್, ರಾಜಿ ಸಂದಾನ ಹೀಗೆ ಇತರೆ ಕಾರ್ಯಕ್ರಮಗಳನ್ನು ಕಾನೂನು ಇಲಾಖೆಯು ಹಮ್ಮಿಕೊಳ್ಳುತ್ತಿದೆ.  ಇದರ ಜೊತೆ ಮಧ್ಯಸ್ಥಿಕಾ ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು,  ಮಧ್ಯಸ್ಥಿಕಾ ವಕೀಲರ ಮೂಲಕ ಇನ್ನೂ ತ್ವರಿತ ಹಾಗೂ ಸುಲಭವಾಗಿ ಪ್ರಕರಣಗಳು ವಿಲೇಗೊಳ್ಳಲು ಅವಕಾಶಗಳಿವೆ.  ವೈವಾಹಿಕ, ಜೀವನಾಂಶ ಪ್ರಕರಣಗಳು ಹಾಗೂ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಇನ್ನೂ ಹಲವಾರು ಬಗೆಯ ಪ್ರಕರಣಗಳನ್ನು ಮಧ್ಯಸ್ಥಿಕಾ ವಕೀಲರುಗಳ ಮೂಲಕ ಪರ್ಯಾಯವಾಗಿ ವಿಲೇವಾರಿಗೊಳಿಸಲು ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ಆದೇಶದ ಪ್ರಕಾರ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಯ ತಲಾ 15 ವಕೀಲರುಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ.  ಈ ತರಬೇತಿಯ ಸದುಪಯೋಗ ಪಡೆದುಕೊಂಡು ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಿ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಆರ್.ಜಿ. ಜೋಶಿ ಅವರು ಮಧ್ಯಸ್ಥಿಕಾ ವಕೀಲರಿಗೆ ಕರೆ ನೀಡಿದರು.   
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಬಸಪ್ಪ ಎಸ್. ಕಂಪ್ಲಿ ಅವರು ಮಾತನಾಡಿ, ಮಧ್ಯಸ್ಥಿಕಾ ವ್ಯವಸ್ಥೆಯು ಅಮೇರಿಕಾದಲ್ಲಿ ಜಾರಿಯಲ್ಲಿತ್ತು,  ನಂತರ ಅದು ಅಲ್ಲಿ ಯಶಸ್ವಿಯಾಗಿದೆ.  ಆದ್ದರಿಂದ ಬಾಕಿ ಉಳಿದ ಪ್ರಕರಣಗಳನ್ನು ವಿಲೇವಾರಿಗೊಳಿಸುವ ಉದ್ದೇಶದಿಂದ ನಮ್ಮ ದೇಶದಲ್ಲಿಯೂ ಸಹ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.  ತರಬೇತಿಗೆ ಆಯ್ಕೆಯಾದ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಮಧ್ಯಸ್ಥಿಕಾ ನ್ಯಾಯವಾದಿಗಳು ಕಾರ್ಯಾಗಾರವನ್ನು ಯಶಸ್ವಿಗೊಳಿಸಿ, ಬಾಕಿ ಪ್ರಕರಣಗಳನ್ನು ತ್ವರಿತಗತಿಯಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು. 
    ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ, ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಎಸ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮನು ಶರ್ಮಾ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಕೊಟ್ರೇಶ ಯು. ಪೆÇೀಚಗುಂಡಿ ಪಾಲ್ಗೊಂಡಿದ್ದರು.  ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ತರಬೇತಿದಾರರುಗಳಾದ ಆರ್. ವಿಜಯ ಕುಮಾರ, ಲತಾ ಪ್ರಸಾದ ಹಾಗೂ ಲಕ್ಷ್ಮೀಶರಾವ್ ಅವರು ಉಪಸ್ಥಿತರಿದ್ದು, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಮಧ್ಯಸ್ಥಿಕಾ ವಕೀಲರುಗಳಿಗೆ ತರಬೇತಿ ನೀಡಿದರು.  
Post a Comment