Friday, 16 February 2018

ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಿ - ರಾಜಶೇಖರ ಹಿಟ್ನಾಳ


ಕೊಪ್ಪಳ ಫೆ. 16 (ಕರ್ನಾಟಕ ವಾರ್ತೆ): ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಜಿಲ್ಲೆಯಾದ್ಯಂತ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಹಾಗೂ ಮುಂಬರುವ ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೆ ಕೈಗೊಳ್ಳಬೇಕು ಎಂದು ಜಿ.ಪಂ ಅಧ್ಯಕ್ಷ ರಾಜಶೇಖ ಹಿಟ್ನಾಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ.  ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಯಂತ್ರಗಳನ್ನು ಬಳಸಿ ಸೊಳ್ಳೆಗಳನ್ನು ನಿಯಂತ್ರಿಸಬೇಕು.  ಗ್ರಾಮ ಪಂಚಾಯಿತಿಗಳಲ್ಲಿ ಇರುವ ಫಾಗಿಂಗ್ ಮಷೀನ್‍ಗಳು ಎಷ್ಟು ಇವೆ ಇನ್ನೂ ಎಷ್ಟು ಬೇಕಾಗಬಹುದು ಎಂದು ವರದಿ ನೀಡಬೇಕು.  ಬರುವ ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೆ ಕೈಗೊಳ್ಳಬೇಕು.  ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು. 
ಅಂಧತ್ವ ನಿವಾರಣೆಗೆ ಕೈಗೊಂಡ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದ ಡಿ.ಹೆಚ್.ಒ ಡಾ. ರಾಮಕೃಷ್ಣ ಅವರು, ಯಲಬುರ್ಗಾ ತಾಲೂಕಿನಲ್ಲಿ ಅಂಧತ್ವ ನಿವಾರಣೆಗೆ ವಿಶೇಷ ಕ್ರಮ ಕೈಗೊಂಡಿದ್ದು ಅಂಧತ್ವ ನಿವಾರಣೆಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲು ಸುಸಜ್ಜಿತ ಹಾಗೂ ಆಧುನಿಕ ಶಸ್ತ್ರ ಚಿಕಿತ್ಸೆಯ ಸಾಧನೆಗಳ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.  ಈ ಕುರಿತು ಪ್ರತಿಕ್ರಿಯಿಸಿದ ಜಿ.ಪಂ ಅಧ್ಯಕ್ಷರು ವಾರದಲ್ಲಿ ಎರಡು ದಿನ ಅಂಧತ್ವ ನಿವಾರಣೆಗೆ ವಿಶೇಷ ಕ್ಯಾಂಪ್ ಮಾಡುವಂತೆ ತಿಳಿಸಿದರು.  ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಅಂಧತ್ವ ನಿವಾರಣೆಗಾಗಿ ವಾರ್ಷಿಕ 9209 ಗುರಿ ನಿಗದಿ ಪಡಿಸಲಾಗಿದ್ದು, ಇದರಲ್ಲಿ ಜನೆವರಿ ಅಂತ್ಯದವರೆಗೆ 4455 ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.
ಶಾಲಾ ಕಟ್ಟಡಗಳ ದುರಸ್ಥಿಕರಣ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕು. ಶಾಲಾ ಮಕ್ಕಳ  ಸಮವಸ್ತ್ರದ ಗುಣ ಮಟ್ಟಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸಮವಸ್ತ್ರಗಳ ಮಾದರಿಯನ್ನು ಗುಣಮಟ್ಟದ ಪರೀಕ್ಷೆಗೆ ಜವಳಿ ಇಲಾಖೆಗೆ ತೋರಿಸಿ ವರದಿ ಬಂದ ನಂತರವೆ ಶಾಲಾ ಸಮವಸ್ತ್ರಗಳನ್ನು ವಿತರಣೆ ಮಾಡಬೇಕು.  ಸಮವಸ್ತ್ರಗಳ ಗುಣಮಟ್ಟದ ಮಾದರಿಯೊಂದನ್ನು ಸರ್ಕಾರವು ಈಗಾಗಲೇ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೀಡಿದ್ದು, ಅಂತಹ ಗುಣಮಟ್ಟದ ಸಮವಸ್ತ್ರಗಳನ್ನೇ ಕಡ್ಡಾಯವಾಗಿ ನೀಡಬೇಕು ಎಂದು ಜಿ.ಪಂ ಅಧ್ಯಕ್ಷರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವು ಇನ್ನೂ ಪ್ರಾರಂಭವಾರುವುದಿಲ್ಲ ಎಂಬ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಆರ್.ಒ ಘಟಕಗಳನ್ನು ಪ್ರಾರಂಭಿಸಲು ಅಗತ್ಯ ಕ್ರಮವಹಿಸಬೇಕು.  ಅಲ್ಲದೇ ಆರ್.ಒ ಘಟಕಗಳ ಗುತ್ತಿಗೆ ಪಡೆದಿರುವ ಏಜನ್ಸಿಯು ಅನಗತ್ಯ ವಿಳಂಬ ಮಾಡಿದರೆ ಬೇರೆ ಏಜನ್ಸಿಗೆ ಕಾಮಗಾರಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ ಅಧ್ಯಕ್ಷರು ಸಿ.ಇ.ಒ ಅರಿಗೆ ಸೂಚನೆ ನೀಡಿದರು.
  ವಿವಿಧ ಇಲಾಖೆಯ ಅಧಿಕಾರಿಗಳು ಆಯಾ ಇಲಾಖೆಗಳ ಪ್ರಗತಿಯ ವರದಿ ಸಲ್ಲಿಸಿದರು. ಜಿ.ಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಸಿದ್ದಪ್ಪ ನೀರಲೂಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Post a Comment