Saturday, 24 February 2018

ವಿಶೇಷ ಚೇತನರಿಗೆ ಮತ ಚಲಾಯಿಸಲು ಈ ಬಾರಿ ವಿಶೇಷ ವ್ಯವಸ್ಥೆ : ವೆಂಕಟರಾಜಾಕೊಪ್ಪಳ ಫೆ. 23 (ಕರ್ನಾಟಕ ವಾರ್ತೆ): ವಿಶೇಷ ಚೇತನರಿಗೆ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗ ವಿಶೇಷ ವ್ಯವಸ್ಥೆ ಕೈಗೊಳ್ಳಲಿದ್ದು, ಜಿಲ್ಲೆಯ 18 ವರ್ಷ ಮೇಲ್ಪಟ್ಟ ವಿಶೇಷ ಚೇತನರು ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಹೇಳಿದರು.  

    ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಸಾಮಥ್ರ್ಯ ಸಂಸ್ಥೆ ಇವರ ಸಹಯೋಗದಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ವಿ.ಆರ್.ಡಬ್ಲ್ಯೂ ಮತ್ತು ಎಂ.ಆರ್.ಡಬ್ಲ್ಯೂ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ, ಒಂದು ದಿನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 


ಸಂವಿಧಾನ ಬದ್ಧವಾಗಿ ದೊರೆತಿರುವ ಮತದಾನದ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.  ಸರ್ಕಾರವು ವಿಶೇಷ ಚೇತನರಿಗೆ ಅದರಲ್ಲೂ ತೀವ್ರತರ ವಿಶೇಷ ಚೇತನರಿಗೆ ಈ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕೆ ನೆರವಾಗಲು ಸ್ವಯಂ ಕಾರ್ಯಕರ್ತರನ್ನು ನೇಮಿಸುತ್ತಿದೆ.  ಮತ್ತು ವಿಶೇಷ ಚೇತನರಿಗೆ ಮತದಾನ ಕೇಂದ್ರಗಳಲ್ಲಿ ಅಡೆತಡೆ ರಹಿತ ಮಾರ್ಪಾಡುಗಳನ್ನು ಮಾಡುತ್ತಿದ್ದು, ಈಗಾಗಲೇ ಶೇ. 80% ರಷ್ಟು ಕಾರ್ಯ ಮುಕ್ತಾಯವಾಗಿದೆ.  ಜಿಲ್ಲೆಯ 18 ವರ್ಷ ಮೇಲ್ಪಟ್ಟ ವಿಶೇಷ ಚೇತನರು ಶೇ 100 ರಷ್ಟು ಮತ ಚಲಾಯಿಸಬೇಕು ಮತ್ತು ಮತದಾನ ಗುರುತಿನ ಚೀಟಿ ಇಲ್ಲದವರು ಕೂಡಲೇ ಅರ್ಜಿ ಸಲ್ಲಿಸಿ, ಮತದಾನ ಗುರುತಿನ ಚೀಟಿ  ಪಡೆದುಕೊಳ್ಳಬೇಕು ಎಂದು ಜಿ.ಪಂ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದರು.
ಸಾಮಥ್ರ್ಯ ಸಂಸ್ಥೆಯ ನಿರ್ದೇಶಕರಾದ ಬಿ. ಹಂಪಣ್ಣ ಅವರು ಮಾತನಾಡಿ, ವಿಶೇಷ ಚೇತನರು ಮತದಾನದಿಂದ ದೂರ ಉಳಿಯಬಾರದು.  ಸಮುದಾಯದಲ್ಲಿ ಗ್ರಾಮ ಪಂಚಾಯಿತಿಯ ವಿ.ಆರ್.ಡಬ್ಲ್ಯೂ ಕಾರ್ಯಕರ್ತರು ಮತ್ತು ಪ್ರತಿ ತಾಲ್ಲೂಕಿನ ಎಂ.ಆರ್.ಡಬ್ಲ್ಯೂ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ವಿಶೇಷ ಚೇತನರು ಮತದಾನ ಮಾಡುವಂತೆ ಜಾಗೃತಿ ಮೂಡಿಸಿ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಲು ನೆರವಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ-ನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ವಹಿಸಿದ್ದರು.  ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ, ಜಿಲ್ಲಾ ವಿಕಲಚೇತನರ ಒಕ್ಕೂಟದ ಅಧ್ಯಕ್ಷ ಶಿವಯೋಗೆಪ್ಪ ಉಪಸ್ಥಿತರಿದ್ದರು.  ಹಾಗೂ ತರಬೇತಿ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ವಿ.ಆರ್.ಡಬ್ಲ್ಯೂ ಮತ್ತು ಎಂ.ಆರ್.ಡಬ್ಲ್ಯೂ ಕಾರ್ಯಕರ್ತರು ಭಾಗವಹಿಸಿದ್ದರು. 
Post a Comment