Saturday, 24 February 2018

ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಎಲ್ಲರೂ ಸಹಕರಿಸಿ : ಎನ್.ಎಸ್. ಕುಲಕರ್ಣಿ


ಕೊಪ್ಪಳ ಫೆ. 24 (ಕರ್ನಾಟಕ ವಾರ್ತೆ): ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಕುಷ್ಟಗಿ ತಾಲೂಕ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾದೀಶರಾದ ಎನ್.ಎಸ್. ಕುಲಕರ್ಣಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು. 
ಕುಷ್ಟಗಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯಾವಾದಿಗಳ ಸಂಘ, ತಾಲೂಕ ಆಡಳಿತ, ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋದಲ್ಲಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಕಂದಕೂರದ ಗ್ರಾಮದ ಸರ್ದಾರ್ ವಲ್ಲಭಾಯಿ ಪಟೇಲ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಜನಜಾಗೃತಿ ಕಾರ್ಯಕ್ರಮ ಮತ್ತು “ಸಾಮಾಜಿಕ ನ್ಯಾಯದ ವಿಶ್ವ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ಪದ್ದತಿಯನ್ನು ಹೋಗಲಾಡಿಸಬೇಕಾದರೆ ಇದರಲ್ಲಿ ಸಮಾಜದ ಪಾತ್ರ ಮಹತ್ವದಾಗಿದ್ದು, ಎಲ್ಲಾ ನಾಗರೀಕರು ಬಾಲಕಾರ್ಮಿಕ ಪದ್ದತಿಯ ನಿರ್ಮೂಲನೆಗಾಗಿ ಸಹಕರಿಸಬೇಕು.  ಬಾಲಕಾರ್ಮಿಕರು ಕಂಡು ಬಂದಲ್ಲಿ ಬಾಲಕಾರ್ಮಿಕ ಇಲಾಖೆ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು.  ಮಕ್ಕಳಿಗೆ ಮೂಲಭೂತ ಹಕ್ಕುಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.  ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು.  ಕಾನೂನು ದುಬಾರಿ ವಸ್ತು ಅದು ಶ್ರೀಮಂತರ ಕೈಯಲ್ಲಿದೆ ಎಂದು ತಪ್ಪು ಕಲ್ಪನೆ ಜನರಲ್ಲಿ ಮನೆ ಮಾಡಿದೆ.  ಆದರೆ ನ್ಯಾಯದ ಮುಂದೆ ಎಲ್ಲರೂ ಸರಿಸಮಾನರು ಹಾಗೂ ಎಲ್ಲರೂ ಕಾನೂನು ಜ್ಞಾನವನ್ನು ಪಡೆದುಕೊಳ್ಳಬೇಕು.  ಎಲ್ಲರಿಗೂ ನ್ಯಾಯ ಒದಗಿಸಲು ಕಾನೂನು ಸೇವಾ ಸಮಿತಿ ಸಿದ್ಧವಿದೆ.  ಕಾನೂನಿನ ರಕ್ಷಣೆ ಹಾಗೂ ಅರಿವಿನ ಅಗತ್ಯವಿರುವ ಯಾವುದೇ ವ್ಯಕ್ತಿ ಬಂದು ತಮಗೆ ಬೇಕಾದ ಕಾನೂನು ಸಲಹೆ ಪಡೆಯಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಷ್ಟಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಪರಸಪ್ಪ ಎನ್. ಗುಜಮಾಗಡಿ ಅವರು ಮಾತನಾಡಿ, ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘವು ಜನಸಾಮಾನ್ಯರ ಅನುಕೂಲಕ್ಕೆ ಯಾವಾಗಲು ಬದ್ಧವಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು.  ಇಂದು ಕಾನೂನು ಎಲ್ಲರ ಮನೆಬಾಗಿಲಿಗೆ ಬಂದು ಸಹಾಯ ಮಾಡುತ್ತಿದ್ದು ಅದರ ಪ್ರಯೋಜನ ಪಡೆದುಕೊಳ್ಳಬೇಕು ಮತ್ತು  ಬಾಲಕಾರ್ಮಿಕತೆಯಂತಹ ಅನಿಷ್ಠ ಪದ್ದತಿಯನ್ನು ಎಲ್ಲರೂ ಕೂಡಿ ತೊಡೆದು ಹಾಕಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ ಅವರು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿರ್ಮೂಲನೆ ಕುರಿತು, ಕುಷ್ಟಗಿಯ ವಕೀಲರಾದ ಎಂ.ಬಿ. ಕೋನಸಾಗರ ಅವರು ಬಾಲನ್ಯಾಯ ಕಾಯ್ದೆಯ ಕುರಿತು, ಹಾಗೂ ಇನ್ನೋರ್ವ ವಕೀಲರಾದ ಬಿ.ಆರ್. ಪಾಟೀಲ್ ಅವರು ಅಪರಾಧ ಕೃತ್ಯಕ್ಕೊಳಗಾದ ವ್ಯಕ್ತಿಗೆ ಪರಿಹಾರ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.  ತಾಲೂಕ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಬಿ. ಕೇಶವಮೂರ್ತಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಫೀಕ್ ಅಹ್ಮದ್, ಕಂದಕೂರು ಗ್ರಾ.ಪಂ. ಅಧ್ಯಕ್ಷ ಬಸವರಾಜ ತುಮ್ಮರಗುದ್ದಿ, ಸ್ಪಂದನಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಪತ್ತಾರ, ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು, ಸರ್ದಾರ್ ವಲ್ಲಭಾಯಿ ಪಟೇಲ್ ಶಾಲೆಯ ವಿದ್ಯಾರ್ಥಿಗಳು, ಕಂದಕೂರ ಗ್ರಾಮಸ್ಥರು, ಗ್ರಾ.ಪಂ. ಸದಸ್ಯರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Post a Comment