Saturday, 24 February 2018

ಕುಷ್ಟಗಿಯಲ್ಲಿ ಮಕ್ಕಳ ರಕ್ಷಣೆ ಮತ್ತು ಪರವಾದ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ


ಕೊಪ್ಪಳ ಫೆ. 24 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿಯ ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ರಕ್ಷಣೆ ಮತ್ತು ಪರವಾದ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. 
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ “ಮಕ್ಕಳ ರಕ್ಷಣೆ ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮ”ವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀರೇಂದ್ರ ನವಾದಗಿ ಅವರು ಮಾತನಾಡಿ, ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಮಕ್ಕಳ ರಕ್ಷಣಾ ಘಟವು ಈಗಾಗಲೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಹಕ್ಕುಗಳ ಕುರಿತು ಈಗಾಗಲೇ ಸಾಕಷ್ಟು ಅರಿವು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಆದಾಗ್ಯೂ ಸಹ, ಇನ್ನೂ ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ, ಬಾಲಕಾರ್ಮಿಕತೆ ಕಂಡುಬರುತ್ತಿದೆ.  ಮತ್ತು ಇತ್ತೀಚೆಗೆ ನವಜಾತ ಶಿಶುಗಳನ್ನು ಎಲ್ಲಂದರಲ್ಲಿ ಬಿಸಾಕುತ್ತಿರುವುದು ಕಂಡುಬರುತ್ತಿದೆ.  ಈ ಕುರಿತು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ತೊಟ್ಟಿಲು ಯೋಜನೆಯನ್ನು ಜಾರಿಗೊಳಿಸಿದ್ದು, ಮಗುವನ್ನು ಎಲ್ಲಂದರಲ್ಲಿ ಬಿಸಾಡದೇ ತೊಟ್ಟಿಲಿನಲ್ಲಿ ಹಾಕಿದರೆ ಮಗುವಿನ್ನು ಸರ್ಕಾರ ಪೋಷಿಸುತ್ತದೆ ಹಾಗೂ ಮಗುವಿನ ಭವಿಷ್ಯ ಉಜ್ವಲಗೊಳ್ಳುತ್ತದೆ.  ಜಿಲ್ಲೆಯಲ್ಲಿ ಗುರುತಿಸಿದ ತೀವ್ರ ಸಂಕಷ್ಠದಲ್ಲಿರುವ ಎಚ್.ಐ.ವಿ ಭಾದಿತ ಹಾಗೂ ಸೋಂಕಿತ ಮಕ್ಕಳ ಆರೈಕೆ ಮತ್ತು ಪೋಷಣೆಗಾಗಿ ಅನುದಾವನ್ನು ಬಿಡುಗಡೆ ಮಾಡಲಾಗಿದೆ ಅಂತಹ ಮಕ್ಕಳು ಕಂಡುಬಂದಲ್ಲಿ ಕಛೇರಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ಮಕ್ಕಳ ವಿಶೇಷ ಪೊಲೀಸ್ ಘಟಕದ ಬಸಪ್ಪ ಹಾದಿಮನಿ ಅವರು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌಜನ್ಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಲೈಂಗಿಕ ದೌಜನ್ಯದಿಂದ ಮಕ್ಕಳ ಸಂರಕ್ಷಣೆ ಕಾಯ್ದೆ- 2012 (ಪಿ.ಓ.ಸಿ.ಎಸ್.ಓ) ರ ಕುರಿತು ಮಾಹಿತಿ ನೀಡಿದರು. ಹಾಗೂ ಮಹಾಲಿಂಗಪ್ಪ ದೋಟಿಹಾಳ ಅವರು ಮಕ್ಕಳ ಕಲ್ಯಾಣ ಸಮಿತಿಯ ಕುರಿತು ಮಾಹಿತಿ ನೀಡಿದರು. 
ಅಂಗನವಾಡಿ ಮೇಲ್ವಿಚಾರಕರಾದ ಸರಸ್ವತಿ ಅವರು ಕೌಟಂಬಿಕ ದೌರ್ಜನ್ಯ ಕಾಯ್ದೆಯಡಿ ನೊಂದಮಹಿಳೆಯರಿಗೆ ಆಪ್ತಸಮಾಲೋಚನೆ, ಉಚಿತ ಕಾನೂನು ನೆರವು, ತಾತ್ಕಾಲಿಕ ಆಶ್ರಯ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನಗೊಳಿಸಿದ್ದು ಅಲ್ಲದೇ ಸಂಕಷ್ಠಕೊಳಗಾದ ಮಹಿಳೆಯರ ರಕ್ಷಣೆಗಾಗಿ ಮಹಿಳಾ ಸಾಹಯವಾಣಿ ಕೇಂದ್ರವನ್ನು ಸ್ಥಾಪಿಸಿದ್ದು, 1091ಗೆ ಕರೆ ಮಾಡಿ ಸಂಕಷ್ಠಕೊಳಗಾದ ಮಹಿಳೆಯ ಬಗ್ಗೆ ಮಾಹಿತಿಯನ್ನು ನೀಡಿದಲ್ಲಿ ಆದಷ್ಟು ಶೀಘ್ರದಲ್ಲಿ ಆ ಮಹಿಳೆಯನ್ನು ರಕ್ಷಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Post a Comment