Monday, 12 February 2018

ದಡಾರ ಮತ್ತು ರುಬೆಲ್ಲಾ ಲಸಿಕೆ : ಕೊಪ್ಪಳ ಜಿಲ್ಲೆಗೆ ಅಗ್ರಸ್ಥಾನ- ಎಂ. ಕನಗವಲ್ಲಿ


ಕೊಪ್ಪಳ ಫೆ. 12 (ಕರ್ನಾಟಕ ವಾರ್ತೆ):  ದಡಾರ ಮತ್ತು ರುಬೆಲ್ಲಾ ಲಸಿಕಾ ಕಾರ್ಯಕ್ರಮ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ% 102 ರಷ್ಟು ಸಾಧನೆ ಮಾಡಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಹೇಳಿದರು.
    ರಾಷ್ಟ್ರೀಯ ಆರೋಗ್ಯ ಅಭಿಯಾನದ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನವಾಗಿದೆ.  ಜಿಲ್ಲೆಯಲ್ಲಿ ಶೇ. 102 ರಷ್ಟು ಸಾಧನೆಯಾಗಿದ್ದು, ಈ ಕುರಿತು ಆರೋಗ್ಯ ಇಲಾಖೆ ಕೊಪ್ಪಳ ಜಿಲ್ಲೆಗೆ ಪ್ರಶಂಸಾ ಪತ್ರವನ್ನು ಪ್ರದಾನ ಮಾಡಿದೆ.   ಇದಕ್ಕಾಗಿ ಶ್ರಮಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಅಭಿನಂದನಾರ್ಹರು ಎಂದರು.
    ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕಾನಂದ ಮಳಗಿ ಮಾತನಾಡಿ, ಜಿಲ್ಲೆಯಲ್ಲಿ 24 ಆರೋಗ್ಯ ಕೇಂದ್ರಗಳಲ್ಲಿ 10ಕ್ಕೂ ಮೇಲ್ಪಟ್ಟು ಹೆರಿಗೆಗಳಾಗುತ್ತಿವೆ,  10ಕ್ಕೂ ಕಡಿಮೆ ಹೆರಿಗೆಗಳು ಇನ್ನುಳಿದ 24 ಆರೋಗ್ಯ ಕೇಂದ್ರಗಳಲ್ಲಿ ಆಗುತ್ತಿವೆ.  ಜಿಲ್ಲೆಯಲ್ಲಿ 03 ಸಾರ್ವಜನಿಕ ಆಸ್ಪತ್ರೆಗಳಲ್ಲಿ 02ರಲ್ಲಿ ಮಾತ್ರ 50ಕ್ಕಿಂತ ಹೆಚ್ಚು ಹೆರಿಗೆಗಳಾಗುತ್ತಿವೆ ಮತ್ತು ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಯಲ್ಲಿ 50ಕ್ಕಿಂತ ಕಡಿಮೆ ಹೆರಿಗೆಗಳಾಗುತ್ತಿವೆ, ಜಿಲ್ಲೆಯ 02 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಹೆರಿಗೆಗಳಾಗುತ್ತಿವೆ ಮತ್ತು ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆಗಳು ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು.  ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಮಾತನಾಡಿ, ಅರವಳಿಕೆ ತಜ್ಞರು, ಮಕ್ಕಳ ತಜ್ಞರ ಅಲಭ್ಯತೆಯೇ ಇದಕ್ಕೆ ಕಾರಣ ಎಂದರು.  ಆರ್.ಸಿ.ಹೆಚ್ ಅಧಿಕಾರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ರಮವಾಗಿ ಹೆರಿಗೆಗಳ ಬಗ್ಗೆ ಮಾಹಿತಿ ನೀಡಿದರು. 
    ಜಿಲ್ಲೆಯಲ್ಲಿ ಗರ್ಭಿಣಿಯರ ಒಟ್ಟು ನೋದಣಿಯು ಶೇ.92 ರಷ್ಟಿದೆ, ಶೇ.51 ರಷ್ಟು 360 ಕ್ಯಾಲ್ಸಿಯಂ ಗುಳಿಗೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ.  ಬರ್ಥ್ ಡೋಸ್ ಲಸಿಕೆ ಬಗ್ಗೆ ಮಾಹಿತಿ ನೀಡಿದರು.  ಹೆಪ್ ಬಿ.ಓ ಡೋಸ್ ಲಸಿಕೆ ಶೇ. 83 ರಷ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಆದ ಹೆರಿಗೆಗಳಿಗೆ  ಲಸಿಕೆಯನ್ನು ಹಾಕಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ಹೆಚ್., ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಅಲಕನಂದಾ ಮಳಗಿ, ಜಿಲ್ಲಾ ಲಸಿಕಾ ಮೇಲ್ವಿಚಾರಕ ಜೈಹಿಂದ್,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಮಂಜುನಾಥ, ಇವರುಗಳಿಗೆ ಪ್ರಶಂಶನಾ ಪತ್ರವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.  ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಂಬಯ್ಯ,  ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಕೆ. ದೇಸಾಯಿ,  ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರೆಡ್ಡಿ, ಸೇರಿದಂತೆ ತಾಲೂಕಾ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Post a Comment