Monday, 19 February 2018

ರಾಷ್ಟ್ರಾಭಿಮಾನಕ್ಕೆ ಶಿವಾಜಿ ಹೆಸರೇ ಪ್ರೇರಣೆ : ಕರಡಿ ಸಂಗಣ್ಣ


ಕೊಪ್ಪಳ ಫೆ. 19 (ಕರ್ನಾಟಕ ವಾರ್ತೆ): ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತರಾಗಿದ್ದು, ರಾಷ್ಟ್ರಾಭಿಮಾನಕ್ಕೆ ಶಿವಾಜಿ ಎನ್ನುವ ಹೆಸರೇ ಪ್ರೇರಣೆಯಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

       ಭಾರತದ ಇತಿಹಾಸದಲ್ಲಿ ಸುಪ್ರಸಿದ್ಧ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿ, ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ ಬೆಳೆಸಿಕೊಂಡಿದ್ದರು.  ಬಾಲ್ಯದಲ್ಲಿಯೇ ಸೈನ್ಯವನ್ನು ಕಟ್ಟಿದಂತಹ ಕೀರ್ತಿ ಶಿವಾಜಿಯದ್ದು.  ಸ್ವರಾಜ್ಯ ಕಲ್ಪನೆಯ ರೂವಾರಿಯಾಗಿದ್ದ ಶಿವಾಜಿಗೆ, ಅವರ ತಾಯಿಯೇ ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದರು.  ಶಿವಾಜಿ ರಾಷ್ಟ್ರಕ್ಕಾಗಿ ತನ್ನ ಜೀವನವನ್ನು ಅರ್ಪಿಸಿದ್ದಾರೆ.  ತಂದೆ-ತಾಯಿಯ ಆಶ್ರಯದಲ್ಲಿ ಬೆಳೆದು ಗುರು ರಾಮದಾಸ್ ಅವರ ಮಾರ್ಗದರ್ಶನವನ್ನು ಪಡೆದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಅಪ್ರತಿಮ ದೇಶಭಕ್ತರಾಗಿ ಮೆರೆದಿದ್ದಾರೆ.  ಎಲ್ಲರೂ ಶಿವಾಜಿ ಮಹಾರಾಜರಂತೆ ಸ್ವಭಾವ ಬೆಳಸಿಕೊಳ್ಳಬೇಕು.  ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಶಿಕ್ಷಣವಂತರಾಗಿ ಸಂಘಟಿತರಾಗಬೇಕು ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.


         ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಬಾಲ್ಯದಿಂದಲೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಉತ್ತಮ ಸೈನ್ಯವನ್ನು ಕಟ್ಟಿ ಅನೇಕ ರಾಜ್ಯಗಳನ್ನು ವಶಪಡಿಸಿಕೊಂಡಿದ್ದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ.  ಮಹಾನ್ ರಾಜರಾಗಿ ದೇಶಕ್ಕಾಗಿ ನೀಡಿದ ಶಿವಾಜಿ ಮಹಾರಾಜರ ಕೊಡುಗೆಗಳ ಅಪಾರವಾಗಿವೆ.  ಇಂತಹ ದೇಶಪ್ರೇಮಿ ಹಾಗೂ ಅಪ್ರತಿಮ ಹೋರಾಟಗಾರರ ವ್ಯಕ್ತಿತ್ವವನ್ನು ಇಂದಿನ ಯುವಕರು  ಮೈಗೂಡಿಸಿಕೊಳ್ಳಬೇಕು.  ಮರಾಠ ಸಮುದಾಯ ಭವನಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ದೊರಕಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. 
          ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದ ಭಾಗ್ಯನಗರದ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗೋವಿಂದಪ್ಪ ವ್ಹಿ. ಬಡಿಗೇರ ಅವರು, ಶಿವಾಜಿ ದೇಶ ಪ್ರೇಮ, ಧಾರ್ಮಿಕ, ಸಾಮಾಜಿಕ, ಸಮಾನತೆ, ಪರಂಪರೆಯನ್ನು ಬೆಳಸಿದ್ದಾರೆ.  ಜಗತ್ತಿನಲ್ಲಿಯೇ ಮೊದಲ ಬಾರಿಗೆ ಎಲ್ಲ ಬಗೆಯ ಯುದ್ಧ ತಂತ್ರಗಳನ್ನು ಅಳವಡಿಸಿಕೊಂಡ ಕೀರ್ತಿ ಶಿವಾಜಿ ಮಹಾರಾಜರದ್ದು.  ಅಷ್ಠ ಪ್ರಧಾನ ಪದ್ದತಿ ಎಂಬ ವ್ಯವಸ್ಥೆಯನ್ನು ರೂಪಿಸಿ ಆಡಳಿತ ನಡೆಸಿದವರು ಶಿವಾಜಿ.  ಶಿವಾಜಿಯು ರಾಷ್ಟ್ರದ ಪ್ರತಿಯೊಬ್ಬ ಯುವಕರಿಗೂ ದೇಶಪ್ರೇಮ ಬಿಂಬಿಸುವ ಪ್ರತೀಕ.  ತನ್ನ ಜೀವಿತಾವಧಿಯ 53 ವರ್ಷಗಳಲ್ಲಿ ಸುಮಾರು ನಾಲ್ಕು ದಶಕಗಳಿಗೂ ಅಧಿಕ ಆಡಳಿತವನ್ನೇ ನಡೆಸಿದ್ದಾರೆ.  ಶಿವಾಜಿ ತಮ್ಮ ಆಡಳಿತದಲ್ಲಿ ಎಲ್ಲರಿಗೂ ಸಮಾನ ನ್ಯಾಯ ಒದಗಿಸಿದ್ದಾರೆ.  ಮಾತೆ ಜೀಜಾಬಾಯಿ ಅವರು ಶಿವಾಜಿಗೆ ನೀಡಿದ  ಆದರ್ಶಗಳನ್ನು ಎಲ್ಲಾ ತಾಯಂದಿರು ತಮ್ಮ ಮಕ್ಕಳಿಗೆ ನೀಡಿ, ಶಿವಾಜಿ ಮಹಾರಾಜರಂತಹ ತಮ್ಮ ಮಕ್ಕಳ ವ್ಯಕ್ತಿತ್ವ ರೂಪಿಸಿ ಎಂದರು. 
ಸಮಾರಂಭದಲ್ಲಿ ಕೊಪ್ಪಳ ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಬಾಳಪ್ಪ ಬಾರಕೇರ, ರಾಮಣ್ಣ ಹದ್ದಿನ, ತಹಶೀಲ್ದಾರ ಗುರುಬಸವರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಯು. ನಾಗರಾಜ, ನಾಗೇಶ ಬಡಿಗೇರ, ಮಾರುತಿ ಕಾರಟಗಿ ಸೇರಿದಂತೆ ಅನೇಕ ಗಣ್ಯರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.  ಕಾರ್ಯಕ್ರಮದ ನಂತರ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಭ ಮಾರ್ಗವಾಗಿ ತುಳಜಾಭವಾನಿ ದೇವಸ್ಥಾನದವರೆಗೆ ವಿಜೃಂಭಣೆಯಿಂದ ನೆರವೇರಿತು.  
Post a Comment