Thursday, 1 February 2018

ಕಾಯಕ ನಿಷ್ಠೆಯಿಂದ ಜೀವನ ಸಾರ್ಥಕವಾಗಿಸಿಕೊಂಡವರು ಮಡಿವಾಳ ಮಾಚಿದೇವರು


ಕೊಪ್ಪಳ ಫೆ. 01 (ಕರ್ನಾಟಕ ವಾರ್ತೆ): ಕಾಯಕ ನಿಷ್ಠೆಯಿಂದಲೇ ಜೀವನ ಸಾರ್ಥಕವಾಗಿಸಿಕೊಂಡವರು ಮಡಿವಾಳ ಮಾಚಿದೇವರು.  ಇಂತಹ ಶರಣರ, ಮಹನೀಯರ ತತ್ವ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಎಲ್ಲರ ಜೀವನ ಸಾರ್ಥಕವಾಗುತ್ತದೆ ಎಂದು ಕೊಪ್ಪಳದ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟದೂರ ಅವರು ಹೇಳಿದರು.  

    ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಗುರುವಾರದಂದು ಆಯೋಜಿಸಲಾಗಿದ್ದ ವಚನಸಾಹಿತ್ಯ ರಕ್ಷಕ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.  

    12 ನೇ ಶತಮಾನ ಶರಣರ ಸಾಹಿತ್ಯದ ಶತಮಾನವಾಗಿತ್ತು.  ಜಾತಿ, ಮತ, ಧರ್ಮ, ಪಂಥ, ಬೇಧ-ಭಾವ ಇವುಗಳನ್ನು ನಿರಾಕರಿಸಿ ಮಾನವಿಯತೆಯ ಧರ್ಮವೇ ನಿಜವಾದ ಧರ್ಮವೆಂದು ಸಾರಿ ಅನೇಕ ಚಳುವಳಿಗಳನ್ನು ನಡೆಸಿ ಜನ ಸಾಮಾನ್ಯರಿಗೆ ಅರ್ಥವಾಗುವಂತಂಹ ಸರಳ ಪದಗಳಿಂದ ವಚನಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿಸಿದ್ದು ಶರಣರು.  ಇಂತಹ ಶರಣರಲ್ಲಿ ಮಡಿವಾಳ ಮಾಚಿದೇವರು ಕೂಡ ಒಬ್ಬರು.  ಈಗಿನ ವಿಜಯಪುರ ಜಿಲ್ಲೆಯ ಹಿಬ್ಬರಗಿಯಲ್ಲಿ ಮಾಚಿದೇವರು ಜನಿಸಿದರು.  ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದಂತೆ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿಕೊಂಡು, ಶಿವಶರಣರಾದವರಲ್ಲಿ ಮಾಚಿದೇವರು ಒಬ್ಬರಾಗಿದ್ದಾರೆ.  ಮನುಷ್ಯರ ನಡುವೆ ಇರುವ ಅಂತರವನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ಶರಣರು.  ಮಡಿವಾಳ ಮಾಚಿದೇವರು ಮುಖ್ಯವಾಗಿ ಎಲ್ಲಾ ಶರಣರಿಂದ ಗೌರವ ಪಡೆದುಕೊಂಡಂತಹ ಶರಣರು.  ಅರಿವೇ ಗುರು ಎಂಬ ವಾಕ್ಯದೊಂದಿಗೆ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ.  ಆದರೆ ಜ್ಞಾನವನ್ನು ಕ್ರಿಯಾತ್ಮಕವಾಗಿಸಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದು ಮಡಿವಾಳ ಮಾಚಿದೇವರು ಹೇಳಿದ್ದಾರೆ.  ಮಹನೀಯರ ಜಯಂತಿ ಆಚರಣೆಗಳಲ್ಲಿ ಭಾವಚಿತ್ರದ ಮೆರವಣಿಗೆ ಮಾಡಿ, ಡೊಳ್ಳು ವಾದ್ಯದೊಂದಿಗೆ ಕುಣಿದು ಸಂಭ್ರಮಿಸಿದ ಮಾತ್ರಕ್ಕೆ ಜಯಂತಿ ಆಚರಣೆಗೆ ಅರ್ಥ ಬರುವುದಿಲ್ಲ.  ಶರಣರ, ಮಹನೀಯರ ಜೀವನ ಚರಿತ್ರೆಯ ಬಗ್ಗೆ ಅರಿತು, ಅಂತಹವರ ತತ್ವಾದರ್ಶಗಳನ್ನು ಅರಿತು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಯಂತಿಗಳಿಗೆ ಮಹತ್ವ ದೊರೆಯುತ್ತದೆ.  ಎಲ್ಲರೂ ಮೇರವಣಿಗೆಗೆ ಮಾತ್ರ ಮಹತ್ವ ಕೊಡದೆ,  ಅವರ ವಿಚಾರಗಳನ್ನು ಅರಿಯುವ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ ಎಂದು ಕೊಪ್ಪಳದ ಹಿರಿಯ ಸಾತಿಗಳಾದ ಅಲ್ಲಮಪ್ರಭು ಬೆಟದೂರ ಅವರು ಹೇಳಿದರು.     
     
    ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ವಚನಸಾಹಿತ್ಯ ರಕ್ಷಕ ವೀರ ಗಣಾಚಾರಿ ಮಡಿವಾಳ ಮಾಚಿದೇವರು, ಭಕ್ತಿ ಮತ್ತು ನಿಷ್ಠೇಯಿಂದ ತಮ್ಮ ವೃತ್ತಿಯನ್ನು ಪೂಜಿಸಿ ಕಾಯಕವನ್ನು ಮಾಡಿ ಶರಣರಾದ ಮಹನಿಯರಲ್ಲಿ ಒಬ್ಬರಾಗಿದ್ದಾರೆ.  ಇಂತಹ ಮಹನಿಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವುದರಿಂದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ.  ಸಣ್ಣ, ಸಣ್ಣ ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ  ರಾಜ್ಯ ಸರ್ಕಾರ ಹಲವು ಜನಪರ ಯೋಜನೆಗಳ ಮೂಲಕ ಪ್ರಯತ್ನಿಸುತ್ತಿದೆ ಎಂದರು. 
    ಕಾರ್ಯಕ್ರಮದ ಉದ್ಘಾಟನೆಯನ್ನು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಅವರು ನೆರೆವೇರಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷ ಬಾಲಚಂದ್ರನ್ ವಹಿಸಿದ್ದರು.  ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್ ಹಾಗೂ ರಾಮಣ್ಣ ಹದ್ದಿನ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಯು. ನಾಗರಾಜ, ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ್, ಸಮಾಜದ ಮುಖಂಡರಾದ ಬಸವರಾಜ, ಕನಕಪ್ಪ ಮಡಿವಾಳರ, ಮಂಜುನಾಥ ಕುರಗೋಡ, ಗವಿಸಿದ್ದಪ್ಪ, ಶಂಕ್ರಪ್ಪ, ಉಂಕಪ್ಪ ಬಸಾಪುರ, ಮಂಜುನಾಥ ಕುಕನೂರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. 
     ಸಮಾರಂಭಕ್ಕೂ ಮುನ್ನ ನಗರದ ಗಡಿಯಾರ ಕಂಬ ಬಳಿಯ ಅಕ್ಕಮಹಾದೇವಿ ದೇವಸ್ಥಾನದ ಆವರಣದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಚಾಲನೆ ನೀಡಿದರು.  ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು.  ಮೆರವಣಿಗೆಯಲ್ಲಿ ಮಹಿಳಾ ವೀರಗಾಸೆ, ಹಾಗೂ ಇತರೆ ಕಲಾ ತಂಡಗಳು ಪಾಲ್ಗೊಂಡು, ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.
Post a Comment