Saturday, 17 February 2018

ತೋಟಗಾರಿಕೆ ಇಲಾಖೆಯಿಂದ ಮಾವು ಬೆಳೆಗಾರರಿಗೆ ಸಲಹೆ


ಕೊಪ್ಪಳ ಫೆ. 17 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಮಾವು ತೋಟದ ನಿರ್ವಹಣೆ ಕುರಿತಂತೆ ಮಾವು ಬೆಳೆಗಾರರಿಗಾಗಿ ತೋಟಗಾರಿಕೆ ಇಲಾಖೆಯು ಸಲಹೆಗಳನ್ನು ನೀಡಿದೆ.
      ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಮಾವಿನಲ್ಲಿ ತಡವಾಗಿ ಹೂ ಕಚ್ಚಿಕೊಂಡಿದೆ. ಸದ್ಯ ಮಾವಿನ ಬೆಳೆಯಲ್ಲಿ ಉತ್ತಮ ಹೂ ಬಿಟ್ಟಿದ್ದು, ಇತ್ತೀಚೆಗೆ ತೋಟಗಾರಿಕೆ ಅಧಿಕಾರಿಗಳು ಮತ್ತು ವಿಷಯ ತಜ್ಞರು ಮಾವಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಮಾವಿನ ತೋಟದ ನಿರ್ವಹಣೆ ನಿಟ್ಟಿನಲ್ಲಿ ಅಗತ್ಯ ಸಲಹೆಗಳನ್ನು ರೈತರಿಗೆ ನೀಡಲಾಗಿದೆ.   ಬೇಸಿಗೆ ಪ್ರಾರಂಭವಾಗಿದ್ದು, ಮಾವಿನ ಗಿಡಗಳಿಗೆ ಇನ್ನು ಮೇಲೆ ನೀರು ಬಿಡುತ್ತಿರಬೇಕು.  ಬುಡದ ಸುತ್ತಲೂ ಗಿಡದ ವಯಸ್ಸಿಗೆ ತಕ್ಕಂತೆ 3-10 ಅಡಿ ಪಾತಿ ಮಾಡಿ ಅರ್ಧದಡಿಯಷ್ಟು ಅಗೆದು ನೀರು ಬಿಡಬೇಕು. ಹನಿ ನೀರಾವರಿ ವ್ಯವಸ್ಥೆ ಇದ್ದಲ್ಲಿ 4 ಡ್ರಿಪರ್ ಗಳನ್ನು ಅಳವಡಿಸಿ ನೀರುಣಿಸಬೇಕು.  ಸಾವಯವ ಹೊದಿಕೆ ಮಾಡಬೇಕು.  ಬುಡದಿಂದ 3 ಅಡಿ ಎತ್ತರದವರೆಗೂ ಬೋರ್ಡೋ ಮುಲಾಮನ್ನು ಲೇಪಿಸಬೇಕು.  ಬೂದಿರೋಗ ಮತ್ತು ಜಿಗಿ ಹುಳದ ಹುಳುವಿನ ಹತೋಟಿಗಾಗಿ ಮುಂಜಾಗೃತ ಕ್ರಮವಾಗಿ ನೀರಿನಲ್ಲಿ ಕರಗುವ ಗಂಧಕ 3 ಗ್ರಾಂ/ ಹೆಕ್ಸಾಕೋನಾಜೊಲ 1 ಮೀ.ಲೀ ಜೊತೆಗೆ ಇಮಿಡಾಕ್ಲೋಪ್ರಿಡ್ 0.30 ಮೀ.ಲೀ /ಲಾಂಬ್ಡಾ ನೆಯಾಲೋಥ್ರಿನ್ – 1 ಮೀ.ಲೀ 1 ಮೀ.ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.  ಕಾಯಿಗಳು ಕಡಲೆಕಾಯಿಯ ಗಾತ್ರದಷ್ಟಿದ್ದಾಗ, ಮತ್ತು 30 ದಿನಗಳ ನಂತರ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ರವರ ಉತ್ಪನ್ನವಾದ ಮಾವು ಸ್ಪೇಷಲ್ 1 ಲೀ ನೀರಿಗೆ 5 ಗ್ರಾಂ. ಬೆರೆಸಿ ಸಿಂಪಡಿಸಬೇಕು. ಈ ಸಿಂಪರಣೆಯನ್ನು ಬೆಳಿಗ್ಗೆ10 ಗಂಟೆ ಒಳಗಾಗಿ ಮಾಡಿ ಮುಗಿಸಬೇಕು. 20 ಲೀ, ನೀರಿಗೆ 100 ಗ್ರಾಂ ಬೆರೆಸಬೇಕು.
      ಇತ್ತೀಚೆಗೆ ಅಕಾಲಿಕ ಮಳೆ ಆಗಿದ್ದು ಮಾವಿನ ಹೂವು ಉದುರಿದೆ. ಅಲ್ಲಲ್ಲಿ ಚುಕ್ಕೆ ರೋಗ ಕಾಣುತ್ತಿದೆ. ಇದಕ್ಕೆ ಕಾರ್ಬೆಂಡೇಜಿಮ್ 50 ಡಬ್ಲ್ಯು.ಪಿ 1 ಗ್ರಾಂ. 1 ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹೂವು ಉದುರುತಿದ್ದರೆ ಪ್ಲಾನೊಫಿಕ್ಸ್ 0.40 ಮೀ.ಲೀ 1 ಲೀ. ನೀರಿಗೆ ಬೆರೆಸಿ ಸಿಂಪರಿಸಬೇಕು.
    ಹೆಚ್ಚಿನ ಮಾಹಿತಿಗಾಗಿ ವಾಮನಮೂರ್ತಿ, ವಿಷಯ ತಜ್ಞರು, ಮೊ.ಸಂ-9482672039 ಮತ್ತು ಆಯಾ ತಾಲ್ಲೂಕು ಅಧಿಕಾರಿಗಳು ಹಾಗೂ ತೋಟಗಾರಿಕೆ ಉಪ ನಿರ್ದೆಶಕರು (ಜಿ.ಪಂ) ಕೊಪ್ಪಳ ರವರನ್ನು  ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.
Post a Comment