Tuesday, 30 January 2018

ಕುಷ್ಠರೋಗ ಅರಿವು ಆಂದೋಲನ : ಪ್ರತಿಜ್ಞಾ ವಿಧಿ ಸ್ವೀಕಾರಕೊಪ್ಪಳ ಜ. 30 (ಕರ್ನಾಟಕ ವಾರ್ತೆ): ಕುಷ್ಠರೋಗ ನಿರ್ಮೂಲನೆಗಾಗಿ ಇದೇ ಜ. 30 ರಿಂದ ಫೆ. 13 ರವರೆಗೆ ‘ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ’ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಕುಷ್ಠರೋಗ ನಿರ್ಮೂಲನೆಗೆ ಹಾಗೂ ರೋಗ ಪೀಡಿತ ವ್ಯಕ್ತಿಗಳ ತಾರತಮ್ಯ ನಿವಾರಿಸಲು ಬದ್ಧರಿರುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಮಂಗಳವಾರದಂದು ಕೊಪ್ಪಳದಲ್ಲಿ ಜರುಗಿತು.

     ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಈ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು, ಜಿಲ್ಲೆಯನ್ನು ಕುಷ್ಠರೋಗ ಮುಕ್ತವಾಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು, ಸಾಧ್ಯವಾದಷ್ಟು ಮುಂಚಿತವಾಗಿ ಕುಷ್ಠರೋಗ ಪ್ರಕರಣಗಳನ್ನು ಕಂಡು ಹಿಡಿಯಲು ಕ್ರಮ ಕೈಗೊಳ್ಳಲಾಗುವುದು.  ಕುಷ್ಠರೋಗದಿಂದ ಬಳಲುತ್ತಿರುವ ವ್ಯಕ್ತಿಗಳ ಜೊತೆ ಯಾವುದೇ ರೀತಿಯ ತಾರತಮ್ಯ ಮಾಡಬಾರದು, ಮತ್ತು ಇತರರು ಕೂಡ ತಾರತಮ್ಯ ಮಾಡಲು ಅವಕಾಶ ನೀಡಬಾರದು.  ವಯಕ್ತಿಕವಾಗಿ ಹಾಗೂ ಒಟ್ಟಾಗಿ ಕುಷ್ಠ ರೋಗ ಪೀಡಿತ ವ್ಯಕ್ತಿಗಳ ವಿರುದ್ಧದ ಕಳಂಕ ಮತ್ತು ತಾರತಮ್ಯ ಕೊನೆಗೊಳಿಸಲು ಕೆಲಸ ಮಾಡಿ, ಅವರನ್ನು ಮುಖ್ಯ ವಾಹಿನಿಗೆ ತರಲು ಸಹಕಾರ ನೀಡಬೇಕು ಎಂಬ ಪ್ರತಿಜ್ಞಾ ವಿಧಿ ಬೋಧಿಸಿದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ಎಸ್.ಕೆ. ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದು,  ಕುಷ್ಠರೋಗ ನಿರ್ಮೂಲನೆಗಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
Post a Comment