Saturday, 30 December 2017

ಸಶಕ್ತ ಮನ ವಿದ್ಯಾರ್ಥಿ ದೆಸೆಯಿಂದಲೇ ಬರಬೇಕು- ಎಂ. ಕನಗವಲ್ಲಿ


ಕೊಪ್ಪಳ ಡಿ. 30 (ಕರ್ನಾಟಕ ವಾರ್ತೆ): ಜೀವನದ ಕಷ್ಟ-ಸುಖಗಳನ್ನು ಸಮರ್ಥವಾಗಿ ಎದುರಿಸಬೇಕಾದಲ್ಲಿ, ಸಶಕ್ತ ಮನದ ನಿರ್ಮಾಣ ವಿದ್ಯಾರ್ಥಿ ದೆಸೆಯಿಂದಲೇ ಆಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಜಿಲ್ಲಾಡಳಿತ, ಗವಿಮಠ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗವಿಮಠದ ಆವರಣದಲ್ಲಿ ಶನಿವಾರದಂದು ಏರ್ಪಡಿಸಲಾಗಿದ್ದ ‘ಸಶಕ್ತ ಮನ-ಸಂತೃಪ್ತ ಜೀವನ’ ಕುರಿತ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಜಾತ್ರೆ ಎಂದರೆ, ಬರೀ ಇಷ್ಟದ ತಿಂಡಿ ತಿಂದು, ಸಾಮಗ್ರಿಗಳನ್ನು ಖರೀದಿಸಿ, ಆಟ ಆಡಿ,  ಸಂಭ್ರಮಪಡುವುದು, ಇದಷ್ಟೇ ಆಗಬಾರದು, ಸಮಾಜಕ್ಕೆ ಒಳ್ಳೆಯ ಸಂದೇಶ ಹೊತ್ತು ಮರಳುವಂತಾಗಬೇಕು.  ಈ ನಿಟ್ಟಿನಲ್ಲಿ ಕೊಪ್ಪಳದ ಗವಿಮಠ ಇಡೀ ದೇಶದಲ್ಲಿಯೇ ಗಮನ ಸೆಳೆಯುವಂತಹ ಚಟುವಟಿಕೆಗಳನ್ನು ಹಮ್ಮಿಕೊಂಡು, ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆಯುತ್ತಿದೆ.  ಸಾಮಾಜಿಕ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸಲು ಕೊಪ್ಪಳ ಗವಿಮಠ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.  ಇಂದಿನ ಸ್ಪರ್ಧಾತ್ಮಕ ಜೀವನ ಕಾಲದಲ್ಲಿ ಮಕ್ಕಳಿಂದ ಮೊದಲುಗೊಂಡು, ವಯಸ್ಕರೂ ಕೂಡ ಒತ್ತಡದ ನಡುವೆ ಬದುಕುತ್ತಿದ್ದಾರೆ.  ಒತ್ತಡದ ಬದುಕನ್ನು ಸಮರ್ಥವಾಗಿ ನಿಭಾಯಿಸಿ, ಜೀವನವನ್ನು ಸಾಗಿಸುವುದು ಯಶಸ್ವಿಯ ಮಾರ್ಗವಾಗಬೇಕು.  ಹಿಂದಿನ ಕಾಲದಲ್ಲಿ ಅವಿಭಜಿತ ಕುಟುಂಬಗಳ ನಡುವೆ ಮಕ್ಕಳು ಬೆಳೆಯುತ್ತಿದ್ದರು.  ಅವರಿಗೆ ಕಷ್ಟ-ಸುಖದ ಅನುಭವ ಹಾಗೂ ಅರಿವು ದೊರೆಯುತ್ತಿತ್ತು.  ಆದರೆ ಈಗೆಲ್ಲ ಸಣ್ಣ ಸಣ್ಣ ವಿಭಜಿತ ಕುಟುಂಬ ವ್ಯವಸ್ಥೆ ಹೆಚ್ಚಾಗಿರುವುದರಿಂದ, ಇಂತಹ ಕುಟುಂಬಗಳಲ್ಲಿ ಬೆಳೆಯುವ ಮಕ್ಕಳಿಗೆ ಕಷ್ಟದ ಅರಿವಾಗುವುದು ಕಡಿಮೆ.  ಬೇಕಾಗಿದ್ದು, ಬೇಡವಾಗಿದ್ದು, ಎಲ್ಲವನ್ನೂ ಪಾಲಕರು ಮಕ್ಕಳ ಮೇಲಿನ ಪ್ರೀತಿಗೆ ತಂದು ಕೊಡುತ್ತಾರೆ. ಇದರಿಂದ ಮಕ್ಕಳ ಮನಸ್ಸು ಕೇವಲ ಸುಖದ, ಪ್ರೀತಿಯ ಬಗ್ಗೆಯೇ ಅನುಭವ ಪಡೆಯುತ್ತದೆ.  ಮಕ್ಕಳಿಗೆ ಜೀವನದ ಮೌಲ್ಯ, ಕಷ್ಟ-ಸುಖಗಳ ಅರಿವು, ಅನುಭವದ ಪರಿಚಯವಾಗುವಂತಾಗಬೇಕು. ಇಲ್ಲದಿದ್ದಲ್ಲಿ ಭವಿಷ್ಯದ ಜೀವನದಲ್ಲಿ ಸಣ್ಣ-ಪುಟ್ಟ ಕಷ್ಟಗಳನ್ನು ಕೂಡ ಎದುರಿಸುವಷ್ಟು ಮನಸ್ಸು ಸಶಕ್ತವಾಗುವುದಿಲ್ಲ.  ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಣ್ಣ, ಸಣ್ಣ ವಿಚಾರಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ.  ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನಡೆಯದಿದ್ದರೆ, ಮನಸ್ಸು ನಿರಾಶೆಗೊಳಗಾಗಿ, ಖಿನ್ನತೆಯತ್ತ ಜಾರುವ ಸಾಧ್ಯತೆಗಳೇ ಹೆಚ್ಚು.  ಇತರರ ತಪ್ಪು ಮಾತ್ರ ಕಂಡುಹಿಡಿಯಲು ಯತ್ನಿಸುತ್ತೇವೆಯೇ ಹೊರತು, ತಾವು ಮಾಡುವ ತಪ್ಪುಗಳನ್ನು ಅರಿತು, ಅದನ್ನು ತಿದ್ದುಕೊಳ್ಳಲು ಯಾರೂ ಮನಸ್ಸು ಮಾಡುವುದಿಲ್ಲ.  ಒತ್ತಡ ರಹಿತ ಬದುಕು ಇಂದಿನ ಕಾಲದಲ್ಲಿ ಸಾಧ್ಯವಿಲ್ಲ.  ಆದರೆ ಅದನ್ನು ಸರಿಯಾಗಿ ನಿಭಾಯಿಸಿಕೊಂಡು ಜೀವನ ಕಂಡುಕೊಳ್ಳುವ ಕಲೆ ಕಲಿಯುವುದು ಈಗಿನ ಅಗತ್ಯಗಳಲ್ಲೊಂದಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.

     ಮಾನಸಿಕ ತಜ್ಞ ವೈದ್ಯ ಡಾ. ಅಜಯಕುಮಾರ ಅವರು ಮಾನಸಿಕ ಒತ್ತಡಗಳ ನಿವಾರಣೆ ಹಾಗೂ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ ನೀಡಿ, ಜಗತ್ತಿನಲ್ಲಿ ಒತ್ತಡ ಎದುರಿಸುತ್ತಿರುವ 40 ವ್ಯಕ್ತಿಗಳ ಪೈಕಿ ಪ್ರತಿ ನಿಮಿಷಕ್ಕೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಪ್ರತಿಯೊಬ್ಬರೂ ಒತ್ತಡದಲ್ಲಿಯೇ ಜೀವನ ನಡೆಸುತ್ತಿದ್ದಾರೆ.  ಜನರಿಗೆ ಬರುವ ರೋಗಗಳ ಪೈಕಿ ಶೇ. 90 ರಷ್ಟು ರೋಗಗಳು ಒತ್ತಡದ ಕಾರಣದಿಂದಲೇ ಬರುವುದು, ವೈದ್ಯಕೀಯವಾಗಿ ಸಾಬೀತಾಗಿದೆ.  ನೆಗಡಿ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮುಂತಾದ ರೋಗಗಳಿಗೂ ಮೂಲ ಕಾರಣ ಒತ್ತಡವೇ ಆಗಿದೆ.  ಇಂದಿನ ವಿದ್ಯಾರ್ಥಿಗಳಲ್ಲಿ ಶಿಕ್ಷಣ, ಕಲಿಕೆ, ಪರೀಕ್ಷೆ, ಉದ್ಯೋಗ, ಸೌಲಭ್ಯ ಹೀಗೆ ಬಹಳಷ್ಟು ಒತ್ತಡವನ್ನು ಎದುರಿಸುತ್ತಿದ್ದಾರೆ.  ಇದಕ್ಕೆ ಕೌಟುಂಬಿಕ ಕಾರಣಗಳು, ಮಹತ್ವಾಕಾಂಕ್ಷೆ, ಆರ್ಥಿಕ ತೊಂದರೆಗಳು ಬಹುಮುಖ್ಯ ಕಾರಣಗಳಾಗಿವೆ.  ಒತ್ತಡ ರಹಿತ ಬದುಕು ರೂಪಿಸಿಕೊಂಡು, ಸಂತೃಪ್ತ ಜೀವನ ನಡೆಸಲು ಎಲ್ಲರೂ ಪ್ರಮುಖ 10 ವಿಧಾನಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.  ಪ್ರಮುಖವಾಗಿ ಭಾವನೆಗಳನ್ನು ಹಂಚಿಕೊಳ್ಳಬೇಕು.  ಆದರೆ ಇತ್ತೀಚಿನ ದಿನಗಳಲ್ಲಿ ಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯವಾಗಿದ್ದು, ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ.  ಭಾವನೆಗಳನ್ನು ನಂಬಿಕೆಗೆ ಪಾತ್ರರಾದವರಲ್ಲಿ, ಆತ್ಮೀಯರಲ್ಲಿ ಮಾತ್ರ ಹಂಚಿಕೊಳ್ಳಬೇಕು.  ಸದಾ ಚಟುವಟಿಕೆಯಿಂದಿರಬೇಕು,  ದೇಹ ಮತ್ತು ಮನಸ್ಸು ಚಟುವಟಿಕೆಯಿಂದಿದ್ದರೆ, ಕೆಟ್ಟ ಆಲೋಚನೆಗಳಿಗೆ ಅವಕಾಶ ಸಾಧ್ಯತೆ ಕಡಿಮೆ.  ಯೋಗ, ಧ್ಯಾನ ಮಾಡುವುದರಿಂದ ಒತ್ತಡ ನಿವಾರಣೆಯಾಗುವುದಾಗಿ ವೈದ್ಯಕೀಯವಾಗಿ ಸಾಬೀತಾಗಿದ್ದು, ಇದನ್ನು ಅನುಸರಿಸುವುದು ಉತ್ತಮ.  ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಒಡನಾಟವನ್ನು ಹೆಚ್ಚು ಹೆಚ್ಚು ಬೆಳೆಸಿಕೊಂಡಲ್ಲಿ, ಬಾಂಧವ್ಯ ವೃದ್ಧಿಯ ಜೊತೆಗೆ ಭಾವನೆಯ ಹಂಚಿಕೆಗೂ ಅವಕಾಶ ದೊರೆಯುತ್ತದೆ.  ಅಗತ್ಯವೆನಿಸಿದಾಗ ಇತರರ ಸಹಾಯ ಪಡೆಯುವುದು ಕೂಡ ಉತ್ತಮ ವಿಚಾರವಾಗಿದೆ.  ದೈನಂದಿನ ನಮ್ಮ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು, ಸ್ವಲ್ಪ ವಿರಾಮ ತೆಗೆದುಕೊಳ್ಳುವುದು, ಒತ್ತಡದ ನಿವಾರಣೆಗೆ ಒಳ್ಳೆಯದು.  ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು, ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ಹಗುರಾಗುತ್ತದೆ.  ನಮ್ಮನ್ನು ನಾವಿರುವಂತೆಯೇ ಒಪ್ಪಿಕೊಳ್ಳುವುದು ಉತ್ತಮ.  ಸೇವಾ ಮನೋಭಾವ ಬೆಳೆಸಿಕೊಂಡು, ಇತರರಿಗೆ ನೆರವಾದಾಗ, ನಿಜಕ್ಕೂ ಮನಸ್ಸು ಹೆಮ್ಮೆ ಪಡುತ್ತದೆ.  ಜೀವನ ಶೈಲಿಯಲ್ಲಿ ಇಂತಹ ಚಟುವಟಿಕೆಗಳನ್ನು ರೂಪಿಸಿಕೊಂಡಲ್ಲಿ, ಮನಸ್ಸು ಶಕ್ತವಾಗುವುದರ ಜೊತಗೆ ಒತ್ತಡವನ್ನೂ ನಿಭಾಯಿಸಲು ಸಾಧ್ಯವಾಗಲಿದೆ ಎಂದರು.

     ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಜಾಗೃತಿಯ ನಡಿಗೆ ಹಾಗೂ ವಿಚಾರಗೋಷ್ಠಿಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ನೆರವಾದವರಿಗೆ ಕೃತಜ್ಞತೆ ಸಲ್ಲಿಸಿದರು.  ಅಲ್ಲದೆ ಇಂದಿನ ಕಾರ್ಯಕ್ರಮ ಇನ್ನೊಂದು ಜಾತ್ರೆಯನ್ನೇ ನೋಡಿದಂತಹ ಅನುಭವವಾಯಿತು.  ಇಂದಿನ ಕಾರ್ಯಕ್ರಮದ ಯಶಸ್ಸು ನಮಗೆ ಇನ್ನಷ್ಟು ಸ್ಫೂರ್ತಿ ನೀಡಲಿದೆ ಎಂದು ಬಣ್ಣಿಸಿದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಸೋಮರಡ್ಡಿ ಅಳವಂಡಿ ಅವರು, ಗವಿಮಠ ಜಾತ್ರೆ ಇಂದು ಕೇವಲ ಧಾರ್ಮಿಕ ಉತ್ಸವವಾಗಿ ಉಳಿದಿಲ್ಲ.  ಸಾಮಾಜಿಕ ಜಾಗೃತಿ ಮೂಡಿಸುವಂತಹ ಚೈತನ್ಯಕಾರಿ ಉತ್ಸವವಾಗಿ ರೂಪುಗೊಳ್ಳುತ್ತಿದೆ.  ಜಾತ್ರೆಯ ಅಂಗವಾಗಿ ಈ ಹಿಂದೆ ಕೈಗೊಂಡ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆಯಾಗಲು ಪರಿಣಾಮ ಬೀರಿರುವುದಂತೂ ಸತ್ಯ.  ಈ ಮೊದಲು ಬಾಲ್ಯ ವಿವಾಹ ವಿಷಯದಲ್ಲಿ ರಾಜ್ಯದಲ್ಲಿಯೇ ಅಗ್ರ ಸ್ಥಾನವನ್ನು ಕೊಪ್ಪಳ ಜಿಲ್ಲೆ ಪಡೆದಿತ್ತು.  ಜಾಗೃತಿ ಕಾರ್ಯಕ್ರಮಗಳು ಹಾಗೂ ವಿವಿಧ ಇಲಾಖೆಗಳ ಸಕ್ರಿಯ ಕ್ರಮ ಮತ್ತು ಜನರ ಸಹಕಾರದಿಂದಾಗಿ ಇದೀಗ 12 ನೇ ಸ್ಥಾನಕ್ಕೆ ಇಳಿದಿದೆ.  ಕಳೆದ ವರ್ಷ ನೀರಿನ ಮಹತ್ವವನ್ನು ಸಾರಲು ಕೈಗೊಂಡ ಜಲದೀಕ್ಷೆ ಜಾಗೃತಿ ಕಾರ್ಯಕ್ರಮವೂ ಕೂಡ ಸಾಕಷ್ಟು ಪರಿಣಾಮ ಬೀರಿದ್ದು, ಕೃಷಿ ಹೊಂಡದಂತಹ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಕೃಷಿ ಹೊಂಡಗಳು ನಿರ್ಮಾಣಗೊಂಡಿವೆ.  ಈ ಬಾರಿ ಸಶಕ್ತ ಮನ-ಸಂತೃಪ್ತ ಜೀವನ ಎನ್ನುವ ವಿಚಾರವನ್ನಿಟ್ಟುಕೊಂಡು ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
     ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಜಿಲ್ಲಾ ಮಾನಸಿಕ ಆರೋಗ್ಯ ಅನುಷ್ಠಾನಾಧಿಕಾರಿ ಡಾ. ಎಸ್.ಕೆ. ದೇಸಾಯಿ, ಮಾನಸಿಕ ತಜ್ಞ ಡಾ. ಕೃಷ್ಣ ಓಂಕಾರ, ಡಿಡಿಪಿಐ ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ದಾಸರ್, ಗವಿವ ಟ್ರಸ್ಟ್ ಕಾರ್ಯದರ್ಶಿ ಮಲ್ಲಿಕಾರ್ಜು ಸೋಮಲಾಪುರ ಅವರು ಪಾಲ್ಗೊಂಡಿದ್ದರು.  ವಿಚಾರಗೋಷ್ಠಿಯಲ್ಲಿ ಕೊಪ್ಪಳದ ವಿವಿಧ ಶಾಲಾ ಕಾಲೇಜುಗಳ ಸುಮಾರು 15 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.  ಜಾಗೃತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಸಿದ್ದಾರ್ಥ- ಪ್ರಥಮ, ಪ್ರಿಯಾಂಕಾ ಪಾಟೀಲ್- ದ್ವಿತೀಯ ಹಾಗೂ ಸ್ಫೂರ್ತಿ- ತೃತೀಯ ಬಹುಮಾನ ಪಡೆದುಕೊಂಡರು.  ಪ.ಪೂ. ಕಾಲೇಜು ವಿಭಾಗದಲ್ಲಿ ಶ್ರೀನಿವಾಸ ಶಿರೂರ- ಪ್ರಥಮ ಹಾಗೂ ಅಕ್ಕಮಹಾದೇವಿ- ದ್ವಿತೀಯ ಬಹುಮಾನ ಪಡೆದರು.  ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
Post a Comment