Friday, 29 December 2017

ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು - ಹೆಚ್.ಎಸ್. ಪಾಟೀಲ್


ಕೊಪ್ಪಳ ಡಿ. 29 (ಕರ್ನಾಟಕ ವಾರ್ತೆ)  ರಾಷ್ಟ್ರ ಕವಿ ಕುವೆಂಪು ಅವರು ಜಗತ್ತಿನ ಶ್ರೇಷ್ಠ ಕವಿಗಳಲ್ಲೊಬ್ಬರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೊಪ್ಪಳದ ಹಿರಿಯ ಸಾಹಿತಿ ಹೆಚ್.ಎಸ್. ಪಾಟೀಲ್ ಅವರು ಬಣ್ಣಿಸಿದರು.

     ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಶುಕ್ರವಾರದಂದು ಏರ್ಪಡಿಸಲಾದ ವಿಶ್ವ ಮಾನವ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

     ಕುವೆಂಪು ಮತ್ತು ಬೇಂದ್ರೆ ಅವರನ್ನು ಕರ್ನಾಟಕ ಸರಸ್ವತಿಯ ಎರಡು ಕಣ್ಣುಗಳು ಎಂದೇ ಬಿಂಬಿಸಲಾಗುತ್ತದೆ.  ಈ ನಾಡಿನಲ್ಲಿ ಮತ್ತೆ ಮತ್ತೆ ಜ್ಞಾಪಿಸಿಕೊಳ್ಳಬಹುದಾದ ಶ್ರೇಷ್ಠ ಸಾಹಿತಿಗಳಲ್ಲಿ ಪ್ರಮುಖರು.  ಕುವೆಂಪು ಅವರನ್ನು ಬರೀ ಗದ್ಯ, ಸಾಹಿತ್ಯಕ್ಕಷ್ಟೇ ಲೇಖಕರೆಂದು ಅವರನ್ನು ಗುರುತಿಸಲು ಸಾಧ್ಯವಿಲ್ಲ.  ಏಕೆಂದರೆ, ಇವರು ರಚಿಸಿದ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ, ಆಧುನಿಕ ಕಾಲದ ಶ್ರೇಷ್ಠ ಕಾವ್ಯಗಳಲ್ಲೊಂದಾಗಿದ್ದು, ಕುವೆಂಪು ಅವರ ಭಾಷಾ ಸಾಮಥ್ರ್ಯ ಏನೆಂಬುದನ್ನು ಸಾಬೀತುಪಡಿಸಿದೆ.  ಛಂದಸ್ಸು, ಷಟ್ಪದಿ ಇತ್ಯಾದಿ ಪ್ರಕಾರಗಳು ಓದುಗರಿಗೆ ಕಷ್ಟಕರ, ಆದರೆ ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ಕುವೆಂಪು ಅವರು ರಚಿಸಿರುವ ಕವನ, ಕಾವ್ಯ, ಕಾದಂಬರಿಗಳು, ಕುವೆಂಪು ಅವರಿಗೆ ಭಾಷೆಯ ಮೇಲಿದ್ದ ಹಿಡಿತ, ಅವರ ಪಾಂಡಿತ್ಯ, ಜ್ಞಾನಾರ್ಜನೆಯ ಪರಿಚಯ ಮಾಡಿಸುತ್ತದೆ.  ಆಧುನಿಕ ಕವಿಗಳಿಗೆ ಉತ್ತೇಜನ ದೊರೆಯುವಂತೆ ಮಾಡಿದ ಕುವೆಂಪು ಅವರು, ನವ ಕವಿಗಳಿಗೆ ರಾಜಮಾರ್ಗ ಹಾಕಿಕೊಟ್ಟರು.  ನಿಸರ್ಗದ ಬಗ್ಗೆ ಕುವೆಂಪು ಅವರು ಅತಿ ಹೆಚ್ಚು ಮನಸೋತಿದ್ದರು. ಹುಟ್ಟುವ ಎಲ್ಲರೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ.  ಆದರೆ ಬೆಳೆದಂತೆಲ್ಲ ಅಲ್ಪ ಮಾನವರಾಗುತ್ತಾರೆ.  ಅಂತಹವರನ್ನು ವಿಶ್ವ ಮಾನವರನ್ನಾಗಿ ಮಾಡುವುದೇ ಸಾಹಿತ್ಯದ ಕರ್ತವ್ಯವಾಗಬೇಕು ಎಂಬುದು ಕುವೆಂಪು ಅವರ ಶ್ರೇಷ್ಠ ನುಡಿಯಾಗಿತ್ತು.   ಅವರು ಹೇಳಿದರು.
      ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಕೊಪ್ಪಳದ ಡಾ. ರಾಜಶೇಖರ ಜಮದಂಡಿ ಅವರು, ಕುವೆಂಪು ಅವರು ರಾಮಕೃಷ್ಣ ಪರಮಹಂಸರು, ಶಾರದಾ ಮಾತೆ, ಸ್ವಾಮಿ ವಿವೇಕಾನಂದರಂತಹ ಮಹನೀಯರಿಂದ ಪ್ರಭಾವಿತರಾಗಿದ್ದರು.  ಪ್ರೀತಿ, ವಾತ್ಸಲ್ಯ, ಕರುಣೆ, ಮಾನವ ಗುಣ ದೋಷಗಳು, ಶೋಷಣೆ, ಮೂಢನಂಬಿಕೆ ಹೀಗೆ ಕುವೆಂಪು ಅವರು ಬರೆಯದ ವಸ್ತು ಹಾಗೂ ವಿಷಯಗಳೇ ಇಲ್ಲ.  10 ನೇ ಶತಮಾನದಲ್ಲಿ ಆದಿಕವಿ ಪಂಪ ಅವರು ಮಹಾಕಾವ್ಯ ರಚಿಸಿದರೆ, 20 ನೇ ಶತಮಾನದಲ್ಲಿ ಕುವೆಂಪು ಅವರು ರಾಮಾಯಣ ದರ್ಶನಂ ಮಹಾಕಾವ್ಯ ರಚಿಸಿದ್ದು, ಮಹಾಕಾವ್ಯ ರಚನೆಯ ಪರಂಪರೆಯನ್ನು ಈ ರೀತಿ ಮುಂದುವರೆಸಿದರು.  ಪ್ರಕೃತಿ ಸೌಂದರ್ಯವನ್ನು, ಕರ್ನಾಟಕದ ಸೊಬಗನ್ನು ಕಟ್ಟಿಗೆ ಕಟ್ಟುವಂತೆ ಕುವೆಂಪು ಅವರು ರಚಿಸಿರುವ ಅನೇಕ ಕವಿತೆಗಳು ಜನರ ನಾಲಿಗೆಯ ಮೇಲೆ ಇಂದಿಗೂ ಹರಿದಾಡುತ್ತಿವೆ.  ಕುವೆಂಪು ಅವರು ಪ್ರತಿ ವಸ್ತುವಿನಲ್ಲಿಯೂ ಚೈತನ್ಯ ಕಾಣುತ್ತಿದ್ದರು.  ಕುವೆಂಪು ಅವರು ಪ್ರಾರಂಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿಯೇ ಕವಿತೆಗಳನ್ನು ರಚಿಸುತ್ತಿದ್ದರು.  ಒಮ್ಮೆ ಕುವೆಂಪು ಅವರು ನಮ್ಮ ನಾಡಿನ ಸಂಸ್ಕøತಿ ಬಿಂಬಿಸುವ ಉಡುಪನ್ನು ಧರಿಸಿಕೊಂಡು  ಐರಿಷ್ ಕವಿಯ ಬಳಿ ತೆರಳಿ, ಇಂಗ್ಲೀಷ್ ಭಾಷೆಯಲ್ಲಿ ರಚಿಸಿದ ಕವಿತೆ ತೋರಿಸಿದಾಗ, ‘ಉಡುಪು ದೇಶೀಯದು, ಆದರೆ ಕವಿತೆ ಮಾತ್ರ ವಿದೇಶದ್ದು’ ಎಂದು ಹೇಳಿ, ಮಾತೃಭಾಷೆಯಲ್ಲಿಯೇ ಹೆಚ್ಚಿನ ಕವಿತೆಗಳನ್ನು ರಚಿಸುವಂತೆ ಆ ಐರಿಷ್ ಕವಿ ಸಲಹೆ ನೀಡಿದರು.  ಇದರ ನಂತರ ಕುವೆಂಪು ಅವರು ಕನ್ನಡ ಭಾಷೆಯಲ್ಲಿಯೇ ಹೆಚ್ಚಿನ ಕವನಗಳ ರಚನೆಯನ್ನು ಪ್ರಾರಂಭಿಸಿದರು.  ಕವಿತೆ, ವಿಮರ್ಶೆ, ಜೀವನಚರಿತ್ರೆ, ಆತ್ಮಕಥೆ, ಕಾದಂಬರಿ, ಮಕ್ಕಳ ಗೀತೆ ಹೀಗೆ ಕುವೆಂಪು ಅವರು ಅನೇಕ ಪ್ರಕಾರಗಳ ಸಾಹಿತ್ಯ ಕೃಷಿ ಕೈಗೊಂಡಿದ್ದಾರೆ ಎಂದರು.
     ಕಾರ್ಯಕ್ರಮದ ಅಂಗವಾಗಿ ಕೊಪ್ಪಳದ ದೀಕ್ಷಾ ನಾಟ್ಯ ಕಲಾ ಸಂಘದವರು ನಡೆಸಿಕೊಟ್ಟ ನೃತ್ಯ  ರೂಪಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಬಿ. ಚಲುವಾದಿ, ಜಿಲ್ಲಾ ಖಜಾನಾಧಿಕಾರಿ ಹರಿನಾಥಬಾಬು, ತಹಸಿಲ್ದಾರ್ ಗುರುಬಸವರಾಜ, ಮಹಾಂತೇಶ್ ಮಲ್ಲನಗೌಡರ, ಶಿವಾನಂದ ಹೊದ್ಲೂರ, ಮಹಾಂತೇಶ್ ಮಲ್ಲನಗೌಡರ, ವಾರ್ತಾಧಿಕಾರಿ ತುಕಾರಾಂರಾವ್, ಜಿಲ್ಲಾ ಬಿಸಿಎಂ ಅಧಿಕಾರಿ ಚಿದಾನಂದ ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಸ್ವಾಗತಿಸಿ, ವಂದಿಸಿದರು.  ಸಿ.ವಿ. ಜಡಿಯವರ್ ನಿರೂಪಿಸಿದರು. ಬಾಷಾ ಹಿರೇಮನಿ ತಂಡದವರು ನಾಡಗೀತೆ ಮತ್ತು ರೈತಗೀತೆ ಪ್ರಸ್ತುತಪಡಿಸಿದರು.    
  
Post a Comment