Tuesday, 26 December 2017

ಯಲಬುರ್ಗಾ-ಕುಷ್ಟಗಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು : 763 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ 02 ವರ್ಷದೊಳಗೆ ಪೂರ್ಣ- ಬಸವರಾಜ ರಾಯರಡ್ಡಿ


ಕೊಪ್ಪಳ ಡಿ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ಎಲ್ಲ ಜನವಸತಿ ಪ್ರದೇಶಗಳಿಗೆ ಕೃಷ್ಣಾ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ 763 ಕೋಟಿ ರೂ. ವೆಚ್ಚದ ಯೋಜನೆ ಎರಡು ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ಸ್ವಯಂಚಾಲಿತ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿರುವ ಅತ್ಯುತ್ತಮ ಯೋಜನೆ ಇದಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

     ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸುವ ಗುತ್ತಿಗೆ ಪಡೆದಿರುವ ಎಲ್ & ಟಿ ಕಂಪನಿಯ ದ್ಯಾಂಪುರ ಗ್ರಾಮ ಬಳಿಯ ಸೈಟ್ ಕಚೇರಿ ಹಾಗೂ ಸ್ಟಾಕ್ ಯಾರ್ಡ್ ಸ್ಥಳಕ್ಕೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.  

     ಯಲಬುರ್ಗಾ-ಕುಷ್ಟಗಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ 763 ಕೋಟಿ ರೂ. ವೆಚ್ಚದ ಈ ಯೋಜನೆಯು ರಾಜ್ಯದಲ್ಲಿಯೇ ಅತ್ಯಂತ ಬೃಹತ್ ಯೋಜನೆಯಾಗಿದ್ದು, ಪ್ರತಿಷ್ಠಿತ ಕಂಪನಿಯಾಗಿರುವ ಎಲ್ & ಟಿ ಕಂಪನಿಯು ಯೋಜನೆ ಕಾರ್ಯರೂಪಕ್ಕೆ ತರುವ ಗುತ್ತಿಗೆಯನ್ನು ಪಡೆದುಕೊಂಡಿದೆ.  ಕಂಪನಿಯೇ ಯೋಜನೆಯ ವಿನ್ಯಾಸ ರೂಪಿಸಿ, ನಿರ್ಮಿಸಿ ನಂತರ ನಿರ್ವಹಣೆ ಮಾಡುವಂತಹ ರೀತಿಯಲ್ಲಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದ್ದು, 2048 ನೇ ಇಸವಿಯ ವೇಳೆಗೆ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನಲ್ಲಿ ಇರಬಹುದಾದ 6. 60 ಲಕ್ಷ ಜನಸಂಖ್ಯೆಯನ್ನು ಆಧಾರವಾಗಿರಿಸಿಕೊಂಡು, ದೂರದೃಷ್ಟಿಯ ಯೋಜನೆಯನ್ನು ರೂಪಿಸಲಾಗಿದೆ.  ಎರಡು ವರ್ಷಗಳ ಒಳಗೆ ಈ ಯೋಜನೆ ಪೂರ್ಣಗೊಂಡು, ಜನರಿಗೆ ನೀರು ಪೂರೈಕೆಯಾಗಲಿದೆ.  ಕೃಷ್ಣಾ ನದಿಯಿಂದ ನೀರನ್ನು ಪಡೆದು, ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಎಲ್ಲ 331 ಜನವಸತಿ ಪ್ರದೇಶಗಳಿಗೆ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 85 ಲೀ. ನೀರು ಲಭ್ಯವಾಗುವ ರೀತಿಯಲ್ಲಿ ಯೋಜನೆ ಕೈಗೊಳ್ಳಲಾಗುತ್ತಿದೆ.  ಕಳೆದ ಸೆ. 22 ರಂದು ಮುಖ್ಯಮಂತ್ರಿಗಳು ಈ ಯೋಜನೆಗೆ ಕೊಪ್ಪಳದಲ್ಲಿ ಜರುಗಿದ ಸಮಾರಂಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದು, ಇದೀಗ ಕಾಮಗಾರಿಯ ಗುತ್ತಿಗೆ ಪಡೆದಿರುವ, ಗುಣಮಟ್ಟದ ಕಾಮಗಾರಿಗೆ ಹೆಸರಾಗಿರುವ ಎಲ್ & ಟಿ ಕಂಪನಿಯು ಕಾಮಗಾರಿಯನ್ನು ಪ್ರಾರಂಭಿಸಲಿದೆ.  ಯೋಜನೆಯ ಜಾರಿಯಿಂದ ಈ ಎರಡೂ ತಾಲೂಕುಗಳ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.  ಸೈಟ್ ಕಚೇರಿ ಹಾಗೂ ಸ್ಟಾಕ್ ಯಾರ್ಡ್ ಸ್ಥಳದಲ್ಲಿ ಮಂತ್ರಿಗಳು ಇದೇ ಸಂದರ್ಭದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
     ಕಾಮಗಾರಿಯ ಗುತ್ತಿಗೆ ಪಡೆದಿರುವ ಎಲ್ & ಟಿ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಪಿ. ಜಗವೀರ ಪಾಂಡ್ಯನ್ ಅವರು ಮಾತನಾಡಿ ಯೋಜನೆ ಜಾರಿಗಾಗಿ ಈಗಾಗಲೆ ಕಂಪನಿಯು ಸರ್ವೆ ಕಾರ್ಯ ಪೂರ್ಣಗೊಳಿಸಿದ್ದು, ಡಿಸೈನ್ ರೂಪಿಸಲಾಗಿದೆ.  ಸರ್ಕಾರದಿಂದ ಡಿಸೈನ್‍ಗೆ ಅನುಮೋದನೆ ದೊರಕಿದ ಕೂಡಲೆ ಭೌತಿಕ ಕಾಮಗಾರಿಯನ್ನು ಫೆಬ್ರವರಿ ಒಳಗಾಗಿ ಪ್ರಾರಂಭಿಸಲಾಗುವುದು.  ಯೋಜನೆಯಲ್ಲಿ ನೀರು ಎತ್ತುವುದು, ಪೈಪ್‍ಲೈನ್‍ನಲ್ಲಿ ಸರಬರಾಜು ಮಾಡುವುದು, ನೀರಿನ ಮೇಲ್ತೊಟ್ಟಿಗಳಿಗೆ ಪೂರೈಕೆ ಮಾಡುವುದು ಹೀಗೆ ಎಲ್ಲ ಕಾರ್ಯವೂ ಸ್ವಯಂಚಾಲಿತವಾಗಿ ನಡೆಯಲಿದ್ದು, ಇದರಲ್ಲಿ ಹೆಚ್ಚು ಮಾನವ ಸಂಪನ್ಮೂಲ ಬಳಕೆಯ ಕಾರ್ಯ ಇರುವುದಿಲ್ಲ.  ಕಂಪನಿಯು ಈಗಾಗಲೆ ತಮಿಳುನಾಡಿನಲ್ಲಿ 1500 ಕೋಟಿ ರೂ. ವೆಚ್ಚದ ನೀರು ಪೂರೈಕೆ ಯೋಜನೆ, ಆಂಧ್ರಪ್ರದೇಶದ ಅನಂತಪುರ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಯಾಗಿ ಕೈಗೊಂಡು, ನೀರು ಪೂರೈಕೆ ಮಾಡಲಾಗುತ್ತಿದೆ.  ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 1200 ಕಿ.ಮೀ. ಪೈಪ್‍ಲೈನ್ ಕೈಗೊಳ್ಳಲಾಗುವುದು ಎಂದರು.
     ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾಂತಲಾ ಚಲುವಾದಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮಾವತಿ ದೇಸಾಯಿ, ಜಿ.ಪಂ. ಸದಸ್ಯ ಹನುಮಂತಗೌಡ ಚಂಡೂರ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
Post a Comment