Thursday, 30 November 2017

ಐ.ಆರ್.ಬಿ ಮುನಿರಾಬಾದ್‍ನಲ್ಲಿ “ಜಿಎಸ್‍ಎಸ್ ಭಾವಯಾನ”ಕೊಪ್ಪಳ ನ. 30 (ಕರ್ನಾಟಕ ವಾರ್ತೆ): ಇಂಡಿಯಾ ರಿಸರ್ವ್ ಬಟಾಲಿಯನ್ ಮತ್ತು ಕೆ.ಎಸ್.ಆರ್.ಪಿ ತರಬೇತಿ ಶಾಲೆ ಮುನಿರಾಬಾದ್‍ನಲ್ಲಿ ಕನ್ನಡ ರಾಜ್ಯೋತ್ಸವ, ಕರುನಾಡ ಪರ್ವ-2017ರ ಅಂಗವಾಗಿ “ಜಿಎಸ್‍ಎಸ್ ಭಾವಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ದಿ|| ಡಾ.ಜಿ.ಎಸ್. ಶಿವರುದ್ರಪ್ಪನವರಿಗೆ ನುಡಿನಮನವನ್ನು ಸಲ್ಲಿಸಲಾಯಿತು.

    ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ವಿಠ್ಠಪ್ಪ ಗೋರಂಟ್ಲಿ ಅವರನ್ನು ಸನ್ಮಾನಿಸಲಾಯಿತು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೆ.ಎಸ್.ಆರ್.ಪಿ.  ಎ.ಡಿ.ಜಿ.ಪಿ ಭಾಸ್ಕರ ರಾವ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆಯಲ್ಲಿ ಕರುನಾಡ ಹಬ್ಬವನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದು ಹೇಳಿದರು.
     ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಹಾಗೂ ಕಮಾಂಡೆಂಟ್ ಇಂಡಿಯಾ ರಿಸರ್ವ್ ಬಟಾಲಿಯನ್, ಡಾ. ರಾಮಕೃಷ್ಣ ಮುದ್ದೇಪಾಲ ಅವರು ಕರುನಾಡ ಪರ್ವವನ್ನು ಕೆ.ಎಸ್.ಆರ್.ಪಿಯ ಎಲ್ಲ ಪಡೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
     ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಪಿ.ಎಂ. ಗಂಗಾಧರಪ್ಪ, ಗುರುಪ್ರಸಾದ್, ಸ್ಪೇ.ಆರ್.ಎಸ್.ಐ ಮೋಹನಮುರಳಿ,  ಪಿ.ಎಸ್.ಐ ಈಶಪ್ಪ, ಸ್ಪೇ.ಆರ್.ಪಿ.ಐ ರಾಧಾಕೃಷ್ಣ ಹರಾವತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.   ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಜಿ.ಎಸ್.ಎಸ್ ವಿರಚಿತ ಭಾವಗೀತೆಗಳನ್ನಾಧರಿಸಿದ ಸುಗಮ ಸಂಗೀತ ಕಾರ್ಯಕ್ರಮವನ್ನು ಶೃತಿ ನಡೆಸಿಕೊಟ್ಟರು.
Post a Comment